ಬೆಂಗಳೂರಿನಲ್ಲಿ ನೀರಿಗೆ ಹಾಹಾಕಾರ ಉಂಟಾಗಿದೆ. ಕಾವೇರಿ ನೀರು ಸರಬರಾಜು ಆಗುವ ಪ್ರದೇಶಗಳಿಗೆ ಮೊದಲು ಎರಡು ದಿನಕ್ಕೊಮ್ಮೆ ಬಿಡುತ್ತಿದ್ದ ನೀರನ್ನು ಈಗ ಮೂರು, ನಾಲ್ಕು, ಕೆಲವೆಡೆ ವಾರಕ್ಕೊಮ್ಮೆ ಬಿಡಲಾಗುತ್ತಿದೆ. ಕಾವೇರು ನೀರು ಸರಬರಾಜು ಇಲ್ಲದ ಪ್ರದೇಶಗಳಿಗೆ ಕಾವೇರಿ ಪೈಪ್‌ಲೈನ್ ಹಾಕುವ ಯೋಚನೆಯನ್ನೇ ಬೆಂಗಳೂರು ನೀರು ಸರಬರಾಜು ಮಂಡಳಿ ಬಿಟ್ಟುಕೊಟ್ಟಿದೆ. ʼನಗರದ ಹೊರಪ್ರದೇಶಗಳಿಗೆ ಕಾವೇರಿ ನೀರು ಪೂರೈಸಲು ಸಾಧ್ಯವಿಲ್ಲʼ ಎಂದು ಮಂಡಳಿಯು ಸರ್ಕಾರಕ್ಕೆ ತಿಳಿಸಿದೆ. ನೀರು ಸರಬರಾಜು ನಿಂತುಹೋಗಿರುವ ಪ್ರದೇಶಗಳಲ್ಲಿ ನೀರಿನ ಟ್ಯಾಂಕರ್‌ಗಳಿಗೆ ಸಾಮಾನ್ಯ ಬೆಲೆಗಿಂತ ದುಪ್ಪಟ್ಟು ದರ ಆಗಿದೆ. 12,000 ಲೀಟರ್ ಟ್ಯಾಂಕರ್‌ಗೆ 2,500 ರೂಪಾಯಿಗಳವರೆಗೆ ಬೆಲೆ ಏರಿಕೆಯಾಗಿದೆ. ಮಂಡಳಿಯ ಕಡೆಯಿಂದ ನೀರಿನ ಟ್ಯಾಂಕರ್‌ಗಳ ಆನ್‌ಲೈನ್ ನೋಂದಣಿ ನಡೆಯುತ್ತಿದೆ. ಖಾಸಗಿ ಟ್ಯಾಂಕರ್‌ಗಳ ಬೆಲೆ ಇನ್ನೂ ಹೆಚ್ಚು ಇದೆ. ಬೆಂಗಳೂರಿನಲ್ಲಿ 3,000ಕ್ಕೂ ಹೆಚ್ಚು ಟ್ಯಾಂಕರ್‌ಗಳಿವೆ. ಶೀಘ್ರವೇ ಟ್ಯಾಂಕರ್ ನೀರು ದರಕ್ಕೂ ಮಿತಿ ಹೇರುವುದಾಗಿ ಬಿಬಿಎಂಪಿ ಘೋಷಿಸಿದೆ. ಕೆಲವೆಡೆ ಅಪಾರ್ಟ್‌ಮೆಂಟ್‌ಗಳಲ್ಲಿ, ಅರ್ಧ ಬಕೆಟ್ ನೀರಿನಲ್ಲಿ ಸ್ನಾನ ಮುಗಿಸಿಕೊಳ್ಳುವಂತೆ ಸೂಚಿಸಲಾಗಿದೆ.
ಒಂದು ಕಾಲದಲ್ಲಿ ಕೆರೆಗಳ ನಗರ ಎಂದು ಹೆಸರಾಗಿದ್ದ ಬೆಂಗಳೂರು ಈಗ ಜಲ ಬಿಕ್ಕಟ್ಟು ಎದುರಿಸುತ್ತಿದೆ. ದುರ್ಬಲ ಮುಂಗಾರು ಮತ್ತು ಹಿಂಗಾರುಗಳ ಕಾರಣದಿಂದ ಜಲಾಶಯಗಳು ಭರ್ತಿಯಾಗಿಲ್ಲ. ಕೆರೆಗಳು ಒತ್ತುವರಿಯಾಗಿರುವುದರಿಂದ ಅವುಗಳಲ್ಲಿ ನೀರು ಇಂಗುತ್ತಿಲ್ಲ. ಹೀಗಾಗಿ ಅಂತರ್ಜಲ ಮಟ್ಟವೂ ಸುಧಾರಿಸಿಲ್ಲ. ಕಾವೇರಿ ನದಿ ಜಲಾನಯನ ಜಲಾಶಯಗಳಲ್ಲಿ ನೀರಿನ ಸಂಗ್ರಹ ಇಳಿಕೆಯಾಗಿದೆ. ಹೀಗಾಗಿ ಈ ವರ್ಷ ಫೆಬ್ರವರಿಯಲ್ಲೇ ಬೆಂಗಳೂರಿನಲ್ಲಿ ನೀರಿನ ಸಮಸ್ಯೆ ಉಲ್ಬಣಿಸಿದೆ. ಬೆಂಗಳೂರಿಗೆ ನೀರು ಒದಗಿಸುವ ಪ್ರಾಥಮಿಕ ನೀರಿನ ಮೂಲವಾದ ಕಾವೇರಿ ಜಲಾಶಯಗಳಲ್ಲಿ ನೀರಿನ ಸಂಗ್ರಹವು ಕಡಿಮೆಯಾಗಿದೆ. ಬೆಂಗಳೂರಿನ ಜನಸಂಖ್ಯೆ 1.4 ಕೋಟಿ ಇದೆ. ಕೆಆರ್‌ಎಸ್‍ನಲ್ಲಿ ಸಂಗ್ರಹವಾಗುವ ನೀರಿನಲ್ಲಿ ಬೆಂಗಳೂರು ನಗರವೊಂದಕ್ಕೆ ಪ್ರತಿ ತಿಂಗಳು 1.6 ಟಿಎಂಸಿ ನೀರು ಬೇಕು. ಮೈಸೂರು, ಮಂಡ್ಯ, ರಾಮನಗರ, ಚಾಮರಾಜನಗರಗಳಿಗೆ ಕಾವೇರಿ ನೀರೇ ಬೇಕು. ಪರಿಸ್ಥಿತಿ ಗಮನಿಸಿದರೆ ನೀರಿನ ಕೊರತೆ ತೀವ್ರವಾಗಿ ಕಾಡುವ ಎಲ್ಲಾ ಲಕ್ಷಣಗಳೂ ಎದ್ದು ಕಾಣುತ್ತಿವೆ. 2010ರಲ್ಲಿ ಮಳೆ ಕೊರತೆಯುಂಟಾಗಿ ಕೆಆರ್‌ಎಸ್ ನೀರಿನ ಪ್ರಮಾಣ ಕುಸಿದಿದ್ದಾಗಲೂ ಬೆಂಗಳೂರಿನಲ್ಲಿ ಜಲಮಂಡಳಿ ವಾರದಲ್ಲಿ ಎರಡು ಬಾರಿ ಮಾತ್ರ ನೀರು ಪೂರೈಸಿತ್ತು. ಈಗ ಮತ್ತೆ ಅದೇ ರೀತಿಯ ಪರಿಸ್ಥಿತಿ ಎದುರಾಗಲಿದೆ ಎಂಬ ಭೀತಿ ಎದುರಾಗಿದೆ.
ಇಂಥ ಹೊತ್ತಿನಲ್ಲಿ ಸರ್ಕಾರ ಏನು ಮಾಡಬಹುದು? ಗ್ಯಾರಂಟಿಗಳ ಜೊತೆಗೆ ಮೂಲಸೌಕರ್ಯಗಳನ್ನೂ ಬಲಿಷ್ಠಗೊಳಿಸಬೇಕಾದುದು ಅದರ ಜವಾಬ್ದಾರಿ. ಕಾವೇರಿ ನದಿಯ ನೀರಿನ ಕುರಿತ ವಿವಾದದಲ್ಲಿ ತಮಿಳುನಾಡಿನ ಪರ ಪ್ರಾಧಿಕಾರ ಈ ಬಾರಿ ತೀರ್ಪು ನೀಡಿದಾಗ, ಸರ್ಕಾರ ದಿಟ್ಟವಾಗಿ ಪ್ರತಿಭಟಿಸಲಿಲ್ಲ. ಬದಲಾಗಿ ಮಣಿದು ನೀರನ್ನು ಬಿಟ್ಟಿತು. ಇದು ಕೂಡ ಕೊರತೆಗೆ ಕಾರಣವಾಗಿದೆ. ಟ್ಯಾಂಕರ್‌ಗಳು ಬೇಕಾಬಿಟ್ಟಿ ದರ ಹೆಚ್ಚಳ ಮಾಡುವುದಕ್ಕೆ ರಾಜ್ಯ ಸರ್ಕಾರ ಕಡಿವಾಣ ಹಾಕಿ, ಖಾಸಗಿ ಟ್ಯಾಂಕರ್‌ಗಳಿಗೆ ಏಕರೂಪ ದರ ನಿಗದಿಪಡಿಸುವುದು ಈಗ ಅಗತ್ಯವಾಗಿದೆ. ಕುಡಿಯುವ ನೀರಿನ ಕೊರತೆ ನೀಗಿಸುವ ಇತರ ಸುಸ್ಥಿರ ಕ್ರಮಗಳನ್ನು ಕೈಗೊಳ್ಳುವುದು ಈಗ ಸರ್ಕಾರದಿಂದ ಆಗಬೇಕಿದೆ. ಶ್ರೀಮಂತರ ಏರಿಯಾಗಳಿಗೆ ಪ್ರತಿದಿನವೂ ನೀರು ಕೊಡುವುದು, ಬಡವರ ಪ್ರದೇಶಗಳಿಗೆ ನೀರಿಲ್ಲದಂತೆ ಮಾಡುವುದು- ಇಂಥ ತಾರತಮ್ಯ ಕೂಡದು. ಕಾವೇರಿ ನೀರೊಂದನ್ನೇ ಇನ್ನು ಮುಂದೆ ನೆಚ್ಚಲು ಸಾಧ್ಯವಿಲ್ಲ. ಪರ್ಯಾಯ ಮಾರ್ಗಗಳನ್ನೂ ಶೋಧಿಸಬೇಕಿದೆ. ಆದರೆ ಎತ್ತಿನಹೊಳೆಯಂಥ ವ್ಯರ್ಥ ಮೆಗಾ ಪ್ರಾಜೆಕ್ಟ್‌ಗಳಿಗೆ ಹಣ ಸುರಿಯಕೂಡದು. ಬೇಸಿಗೆಯಲ್ಲಿ ತಲೆದೋರಬಹುದಾದ ಪರಿಸ್ಥಿತಿಯನ್ನು ಮೊದಲೇ ಊಹಿಸಿ ಸಿದ್ಧತೆ ಮಾಡಿಕೊಳ್ಳಬೇಕಾದುದು ಜವಾಬ್ದಾರಿಯುತ ಸರ್ಕಾರದ ಜಾಣ್ಮೆ.
ಇದನ್ನೂ ಓದಿ: Yadgiri News: ಕುಡಿಯುವ ನೀರಿನ ಸಮಸ್ಯೆಗೆ ಸ್ಪಂದಿಸಲು ತಾಲೂಕು ಮಟ್ಟದಲ್ಲಿ ಕಂಟ್ರೋಲ್ ರೂಮ್ ತೆರೆಯಲು ಡಿಸಿ ಸೂಚನೆ
ಇಂಥ ಹೊತ್ತಿನಲ್ಲಿ ಜನಸಾಮಾನ್ಯರ ಹೊಣೆಯೂ ದೊಡ್ಡದಿದೆ. ತಮ್ಮ ನೀರಿನ ಸಂಪ್‌ನಲ್ಲಿ ಬೇಕಾದಷ್ಟಿದೆ ಎಂದುಕೊಂಡು ಕಾರನ್ನು ಉಜ್ಜಿ ಉಜ್ಜಿ ತೊಳೆಯುವುದು ಸಾಮಾಜಿಕವಾಗಿಯೂ ಅತ್ಯಂತ ದುಬಾರಿ ಹವ್ಯಾಸ. ಹಲವರಿಗೆ ಕುಡಿಯುವ ನೀರೂ ಲಭ್ಯವಿಲ್ಲದಿರುವಾಗ ತಮ್ಮ ಕೈತೋಟಗಳಲ್ಲಿ ಸದಾ ಕಾರಂಜಿ ಚಿಮ್ಮುತ್ತಿರಬೇಕು ಎಂದುಕೊಳ್ಳಬಾರದು. ನೀರಿನ ಸಮಯೋಚಿತ, ಸಾಕಾದಷ್ಟೇ ಬಳಕೆಯ ಬಗ್ಗೆ ಸಾಕ್ಷರತೆಯೇ ಇಲ್ಲ. ಕೈತೊಳೆದ ನೀರನ್ನು ಸಂಗ್ರಹಿಸಿ ಕೈತೋಟಕ್ಕೆ ಬಳಸುವುದು ಕೂಡ ಸರಳವಾದರೂ ನೀರುಳಿಸುವ ಪರಿಣಾಮಕಾರಿ ವಿಧಾನವೇ. ಇನ್ನು ಮಳೆ ನೀರು ಕೊಯ್ಲು. ಗಿಡಗಳಿಗೆ ಹನಿ ನೀರಾವರಿ ಮುಂತಾದ ಸುಸ್ಥಿರ ಕ್ರಮಗಳನ್ನು ಅಳವಡಿಸಿಕೊಳ್ಳುವುದು ಅತ್ಯಂತ ಮುಖ್ಯ. ʼನೀರು ಉಳಿಸಿದರೆ ಗಳಿಸಿದಂತೆʼ ಎನ್ನುವುದು ಹಣದ ವಿಚಾರದಂತೆ ನೀರಿನ ವಿಚಾರದಲ್ಲೂ ನಿಜ. ಇದನ್ನು ಅರಿತು ನಡೆದುಕೊಂಡು ಈ ಬಾರಿಯ ಬೇಸಿಗೆಯನ್ನು ನೀಗೋಣ.
ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ