ತೃಣಮೂಲ ಕಾಂಗ್ರೆಸ್ ಸಂಸದೆ (Trinamool MP) ಮಹುವಾ ಮೊಯಿತ್ರಾ (Mahua Moitra) ಅವರನ್ನು ʼಪ್ರಶ್ನೆಗಾಗಿ ಲಂಚʼ (cash for query scam) ಪಡೆದ ಪ್ರಕರಣಕ್ಕೆ ಸಂಬಂಧಿಸಿ ಲೋಕಸಭೆಯಿಂದ ಉಚ್ಚಾಟಿಸಲಾಗಿದೆ. ಈ ಪ್ರಕರಣದ ಕುರಿತಾಗಿ ಸದನದ ನೈತಿಕ ಸಮಿತಿ ತನಿಖೆ ನಡೆಸಿ ವರದಿ ಮಂಡಿಸಿದ ಬಳಿಕ, ವರದಿಯ ಶಿಫಾರಸಿನಂತೆ ಈ ಕ್ರಮ ಕೈಗೊಳ್ಳಲಾಗಿದೆ. ವರದಿ ಮಂಡನೆ ಬಳಿಕ ಚರ್ಚೆ ಹಾಗೂ ಮತದಾನ ನಡೆದು, ವರದಿಯ ಶಿಫಾರಸಿನ ಪರವಾಗಿ ಹೆಚ್ಚಿನ ಮತಗಳು ಬಂದುದರಿಂದ ಮಹುವಾ ಮೊಯಿತ್ರಾ ಅವರ ಉಚ್ಚಾಟನೆ ನಡೆದಿದೆ. ʼಮಹುವಾ ಮೊಯಿತ್ರಾ ಅವರ ನಡೆ ಅತ್ಯಂತ ಆಕ್ಷೇಪಾರ್ಹ, ಅನೈತಿಕ, ಹೇಯ ಮತ್ತು ಕ್ರಿಮಿನಲ್ʼ ಎಂದು ಸಮಿತಿಯ ವರದಿ ಘೋಷಿಸಿದೆ(vistara Editorial).
49 ವರ್ಷದ ಮಹುವಾ ಮೊಯಿತ್ರಾ ಅವರು ನರೇಂದ್ರ ಮೋದಿ ಸರ್ಕಾರವನ್ನು ಟೀಕಿಸುವ ಪ್ರಶ್ನೆಗಳನ್ನು ಕೇಳಲು ₹2 ಕೋಟಿ ನಗದು ಸೇರಿದಂತೆ ಲಂಚ ಪಡೆದ ಆರೋಪ ಹೊತ್ತಿದ್ದಾರೆ. ಮೊಯಿತ್ರಾ ಅವರು ತಮ್ಮ ಸಂಸತ್ತಿನ ಲಾಗ್-ಇನ್ ವಿವರಗಳನ್ನು ಉದ್ಯಮಿ ದರ್ಶನ್ ಹಿರಾನಂದಾನಿಗೆ ಒಪ್ಪಿಸಿದ್ದಾರೆ. ಅವರು ಲಂಚವನ್ನು ನೀಡಿದ್ದಾರೆ ಎಂದು ಆರೋಪಿಸಲಾಗಿತ್ತು. ಮೊಯಿತ್ರಾ ಲಾಗಿನ್ ವಿವರ ನೀಡಿದ್ದನ್ನು ಮೋಯಿತ್ರಾ ಒಪ್ಪಿಕೊಂಡಿದ್ದಾರೆ. ಇದು ಸಂಸದರಲ್ಲಿ ಸಾಮಾನ್ಯ ಅಭ್ಯಾಸ ಎಂದು ವಾದಿಸಿದ್ದಾರೆ. ಬಂಗಾಳದ ನಾಯಕಿಯ ವಿರುದ್ಧದ ಆರೋಪಗಳ ತನಿಖೆಗೆ ಬಿಜೆಪಿ ಸಂಸದ ನಿಶಿಕಾಂತ್ ದುಬೆ ಲೋಕಸಭೆ ಸ್ಪೀಕರ್ ಓಂ ಬಿರ್ಲಾ ಅವರಿಗೆ ಪತ್ರ ಬರೆದಿದ್ದರು. ನೈತಿಕ ಸಮಿತಿಯು ವಿಚಾರಣೆ ನಡೆಸಿದ್ದು, 6:4 ಬಹುಮತದಲ್ಲಿ ಉಚ್ಚಾಟನೆ ನಿರ್ಧಾರ ತೆಗೆದುಕೊಂಡಿತ್ತು. ಪ್ರಕರಣಕ್ಕೆ ಸಂಬಂಧಿಸಿದ ಎಲ್ಲರೊಂದಿಗೆ ಮಾತನಾಡಿದ ಬಳಿಕ ಸಮಿತಿಯು ಮಹುವಾ ಮೊಯಿತ್ರಾ ಅವರು ʼಅನಧಿಕೃತ ವ್ಯಕ್ತಿಗಳೊಂದಿಗೆʼ ಯೂಸರ್ ಐಡಿಯನ್ನು ಹಂಚಿಕೊಂಡಿದ್ದಾರೆ ಎಂದು ತೀರ್ಮಾನಿಸಿದೆ. ಇದು ಮೋಯಿತ್ರಾ ಕಡೆಯಿಂದ ಸಂಭವಿಸಿದ ʼಗಂಭೀರ ದುಷ್ಕೃತ್ಯʼ ಎಂದು ಸಮಿತಿ ಕರೆದಿದೆ.
ಮೋಯಿತ್ರಾ ಕೃತ್ಯಕ್ಕೆ ಸಾಕಷ್ಟು ಸಾಕ್ಷ್ಯಗಳಿವೆ ಎಂಬುದನ್ನು ಸಮಿತಿ ಗಮನಿಸಿದೆ. ಪ್ರಧಾನಿ ನರೇಂದ್ರ ಮೋದಿ (PM Narendra Modi) ಮತ್ತು ಅದಾನಿ ಗ್ರೂಪ್ (Adani Group) ಗುರಿಯಾಗಿಸಿಕೊಂಡು ಪ್ರಶ್ನೆ ಕೇಳುವುದಕ್ಕಾಗಿ ಮಹುವಾ ಮೋಯಿತ್ರಾ ಅವರು ಉದ್ಯಮಿ ದರ್ಶನ್ ಹಿರಾನಂದಾನಿ (Darshan Hiranandani) ಅವರಿಂದ ಲಂಚ ಸ್ವೀಕರಿಸಿದ್ದಾರೆ ಎಂದು ದುಬೆ ಆರೋಪಿಸಿದ್ದರು. ಇಂಧನ ಮತ್ತು ಮೂಲಸೌಕರ್ಯಗಳ ಒಪ್ಪಂದವನ್ನು ಅದಾನಿ ಗ್ರೂಪ್ ಎದುರು ಪಡೆಯಲು ಹಿರಾನಂದಾನಿ ವಿಫಲವಾಗಿತ್ತು. ಹಾಗಾಗಿ, ಹಿರಾನಂದಾನಿಯವರ ವ್ಯಾಪಾರಿ ಹಿತಾಸಕ್ತಿಗೆ ಅನುಗುಣವಾಗಿ ಸಂಸದೆ ಮಹುವಾ ಮೋಯಿತ್ರಾ ಅವರು ಸಂಸತ್ತಿನಲ್ಲಿ ಪ್ರಶ್ನೆಗಳನ್ನು ಕೇಳಿದ್ದಾರೆ. ಅದಕ್ಕಾಗಿ, ಐಫೋನ್‌ನಂಥ ದುಬಾರಿ ಗಿಫ್ಟ್ ಮಾತ್ರವಲ್ಲದೇ, 2 ಕೋಟಿ ರೂಪಾಯಿ ಹಣವನ್ನು ಕಂಪನಿಯಿಂದ ಮಹುವಾ ಮೋಯಿತ್ರಾ ಪಡೆದುಕೊಂಡಿದ್ದಾರೆ. ಅಲ್ಲದೇ, ಚುನಾವಣೆಗೆ ಸ್ಪರ್ಧಿಸಲು ಹಿರಾನಂದಾನಿ ಕಂಪನಿ ಮೋಯಿತ್ರಾಗೆ 75 ಲಕ್ಷ ರೂಪಾಯಿ ನೀಡಿದೆ ಎಂದು ಆರೋಪಿಸಲಾಗಿದೆ. 2019ರಿಂದ 2023ರ ನಡುವೆ ಸಂಸದರು ಕೇಳಿದ 61 ಪ್ರಶ್ನೆಗಳಲ್ಲಿ ಐವತ್ತು ಪ್ರಶ್ನೆಗಳು ದರ್ಶನ್ ಹಿರಾನಂದಾನಿ ಅವರ ಆದೇಶದ ಮೇರೆಗೆ ಕೇಳಲಾಗಿದೆ. ಮೋಯಿತ್ರಾ ಅವರ ಲೋಕಸಭೆ ಖಾತೆಯ ಪ್ರವೇಶವನ್ನು ಉದ್ಯಮಿಗೆ ನೀಡಿದ್ದರು. ಅಲ್ಲಿ ಹಿರಾನಂದಾನಿ ಅವರು ನೇರವಾಗಿ ಅಥವಾ ಅವರ ಪರವಾಗಿ ಮೋಯಿತ್ರಾ ಅವರಿಗೆ ಪ್ರಶ್ನೆಗಳನ್ನು ಪೋಸ್ಟ್ ಮಾಡಿದ್ದಾರೆ. ಈ ಕುರಿತು ವಕೀಲ ಜೈ ಆನಂದ್ ದೇಹದ್ರಾಯ್ ಅವರು ಸಂಶೋಧನೆ ಮಾಡಿ, ಸಿಬಿಐಗೂ ದೂರು ನೀಡಿದ್ದರು. ಪಾರಾದೀಪ್, ಧಮ್ರಾ ಬಂದರಿನಿಂದ ತೈಲ ಮತ್ತು ಅನಿಲ ಪೂರೈಕೆ, ಯೂರಿಯಾ ಸಬ್ಸಿಡಿ, ರಿಯಲ್ ಎಸ್ಟೇಟ್ ಮೇಲೆ ಪರಿಣಾಮ ಬೀರುವ ಉಕ್ಕಿನ ಬೆಲೆಗಳು ಮತ್ತು ಆದಾಯ ತೆರಿಗೆ ಇಲಾಖೆಯ ಅಧಿಕಾರಗಳ ಬಗ್ಗೆ ಮೋಯಿತ್ರಾ ಪ್ರಶ್ನೆಗಳನ್ನು ಕೇಳಿದ್ದಾರೆ.
ಇವು ರುಜುವಾತಾದುದರಿಂದಲೇ ಸದನ ಸಮಿತಿ ಕಠಿಣ ಕ್ರಮ ಶಿಫಾರಸು ಮಾಡಿದ್ದು, ಅದಕ್ಕನುಗುಣವಾಗಿ ಸದನ ಮತಹಾಕಿದ್ದು, ಅದರಂತೆ ಸ್ಪೀಕರ್ ಕ್ರಮ ತೆಗೆದುಕೊಂಡಿದ್ದಾರೆ. ಹೀಗಾಗಿ ಮಹುವಾ ಮೋಯಿತ್ರಾ ಮೇಲಿನ ಕ್ರಮ ಅಸಾಂಸದಿಕವಾಗಲೀ, ಅಪ್ರಜಾಸತ್ತಾತ್ಮಕವಾಗಲೀ ಅಲ್ಲ. ಎಲ್ಲವೂ ಸಂಸದೀಯ ಕ್ರಮಗಳ ಮೂಲಕವಾಗಿಯೇ ನಡೆದಿದೆ. ಲೋಕಸಭೆಯು ಇರುವುದು ದೇಶದ ಹಿತದೃಷ್ಟಿಯಿಂದ ಸಂಸದರು ಪ್ರಶ್ನೆಗಳನ್ನು ಕೇಳಲು, ಚರ್ಚಿಸಲು, ವಿಧೇಯಕಗಳನ್ನು ಮಂಡಿಸಿ ಚರ್ಚಿಸಿ ಅಂಗೀಕರಿಸಿ ಕಾಯಿದೆಗಳನ್ನು ಮಾಡಲು. ಸರ್ಕಾರ ತಪ್ಪು ಮಾಡಿದಾಗ ಟೀಕಿಸಲು ವಿಪಕ್ಷ ಸಿದ್ಧವಾಗಿರಬೇಕು. ಆದರೆ ಯಾವುದೋ ಉದ್ಯಮಿಯ ಲಂಚ ಪಡೆದು ಸರ್ಕಾರವನ್ನು ಇಕ್ಕಟ್ಟಿಗೆ ಸಿಕ್ಕಿಸಲು ಮುಂದಾಗುವುದು ಹೀನ ಕೃತ್ಯ. ಇದಕ್ಕೆ ತಕ್ಕ ಶಿಕ್ಷೆಯಾಗಲೇಬೇಕು. ಅದರಂತೆ ಸದನದಿಂದ ಉಚ್ಚಾಟನೆಯಾಗಿದೆ. ಇದು ಇತರ ಸಂಸದರಿಗೆ, ಶಾಸಕರಿಗೂ ಪಾಠವಾಗಲಿ. ಸದನದ ನೈತಿಕತೆಯನ್ನು ಮೀರಿ ಯಾರೂ ವರ್ತಿಸದಿರಲಿ. ಸದನದ ಒಳಗೂ ಹೊರಗೂ ವೈಯಕ್ತಿಕ ಹಿತಾಸಕ್ತಿಗಳಿಗಿಂತ, ದೇಶದ ಹಿತಾಸಕ್ತಿಯೇ ಜನಪ್ರತಿನಿಧಿಗಳಿಗೆ ಮುಖ್ಯವಾಗಲಿ.
ಈ ಸಂಪಾದಕೀಯನ್ನೂ ಓದಿ: ವಿಸ್ತಾರ ಸಂಪಾದಕೀಯ: ನ್ಯುಮೋನಿಯಾ ಸೋಂಕಿನ ಬಗ್ಗೆ ಈಗಲೇ ಎಚ್ಚರ ವಹಿಸೋಣ