Site icon Vistara News

ವಿಸ್ತಾರ ಸಂಪಾದಕೀಯ: 3ನೇ ಬಾರಿಯ ‘ವಿಸ್ತೃತ’ ಸರ್ಕಾರವು ‘ವಿಕಸಿತ ಭಾರತ’ಕ್ಕೆ ಶ್ರಮಿಸಲಿ

pm narendra Modi Cabinet

ಲೋಕಸಭೆ ಚುನಾವಣೆಯಲ್ಲಿ ಎನ್‌ಡಿಎ ಮೈತ್ರಿಕೂಟವು ಬಹುಮತ ಸಾಧಿಸಿದ್ದು, ನರೇಂದ್ರ ಮೋದಿ (Narendra Modi) ಅವರು ಮೂರನೇ ಬಾರಿಗೆ ಪ್ರಧಾನಿಯಾಗಿ ಪ್ರಮಾಣವಚನ ಸ್ವೀಕರಿಸಿದ್ದಾರೆ. ಇವರ ಜತೆಗೆ ಅನುಭವಿಗಳು, ಮೈತ್ರಿ ಪಕ್ಷಗಳ ಸಂಸದರು, ಯುವ ಸಂಸದರು ಸೇರಿ ಹಲವು ಮಾನದಂಡಗಳನ್ನು ಆಧರಿಸಿ ಆಯ್ಕೆ ಮಾಡಿದ 72 ಸಂಸದರು ಸಚಿವರಾಗಿ (Modi 3.0 Cabinet) ಪ್ರತಿಜ್ಞಾವಿಧಿ ಸ್ವೀಕರಿಸಿದ್ದಾರೆ. ಸುಮಾರು 80 ದಿನಗಳಿಗೂ ಅಧಿಕ ಅವಧಿವರೆಗೆ 7 ಹಂತಗಳಲ್ಲಿ ಮತದಾನ ನಡೆದು, ಲೋಕಸಭೆ ಚುನಾವಣೆ ಫಲಿತಾಂಶ ಪ್ರಕಟವಾಗಿ, ಈಗ ನರೇಂದ್ರ ಮೋದಿ ಅವರ ನೇತೃತ್ವದಲ್ಲಿಯೇ ಸತತ ಮೂರನೇ ಬಾರಿಗೆ ಎನ್‌ಡಿಎ ಸರ್ಕಾರವೇ ಅಧಿಕಾರಕ್ಕೆ ಬಂದಿದೆ. ಹಾಗಾಗಿ, ಚುನಾವಣೆ ಸಮಯದ ರಾಜಕೀಯ ಮೇಲಾಟ, ಆರೋಪ, ಪ್ರತ್ಯಾರೋಪ, ಟೀಕೆ, ವ್ಯಂಗ್ಯ, ತಿರುಗೇಟುಗಳನ್ನು ಬಿಟ್ಟು, ಆಡಳಿತ ಪಕ್ಷದವರು ನರೇಂದ್ರ ಮೋದಿ ಅವರ ‘ವಿಕಸಿತ ಭಾರತ’ ನಿರ್ಮಾಣದ ಕನಸನ್ನು ನನಸಾಗಿಸಲು ಶ್ರಮಿಸಬೇಕಿದೆ. ಚುನಾವಣೆ ನೀತಿ ಸಂಹಿತೆ, ಫಲಿತಾಂಶದ ಹಿನ್ನೆಲೆಯಲ್ಲಿ ನಿಂತ ನೀರಾಗಿದ್ದ ಆಡಳಿತ ಯಂತ್ರಕ್ಕೆ ಈಗ ವೇಗ ನೀಡಬೇಕಿದೆ.

ಹಾಗೆ ನೋಡಿದರೆ, ವಿಕಸಿತ ಭಾರತದ ಕಲ್ಪನೆ ಸಾಕಾರಗೊಳಿಸಲು ದೇಶದಲ್ಲಿ ಸಕಾರಾತ್ಮಕ ವಾತಾವರಣವೇ ಇದೆ. ದೇಶದ ಜಿಡಿಪಿ ಬೆಳವಣಿಗೆಯ ಕುರಿತು ಅಂದಾಜಿಸಲಾಗಿದೆ. ಹಣದುಬ್ಬರವೂ ನಿಯಂತ್ರಣಕ್ಕೆ ಬರುತ್ತಿದೆ. ಕಳೆದ 10 ವರ್ಷಗಳಲ್ಲಿ ಕೇಂದ್ರ ಸರ್ಕಾರವು ಮೂಲ ಸೌಕರ್ಯ ಯೋಜನೆಗಳಿಗೆ ಒತ್ತು ನೀಡಿರುವುದು, ರೈಲು, ರೈಲು ನಿಲ್ದಾಣಗಳ ಆಧುನೀಕರಣ, ದಾಖಲೆ ವೇಗದಲ್ಲಿ ರಸ್ತೆ ನಿರ್ಮಾಣ, ಅತ್ಯಾಧುನಿಕ ವಿಮಾನ ನಿಲ್ದಾಣಗಳು ತಲೆ ಎತ್ತಿರುವುದು, ಇಸ್ರೋ ಬಾಹ್ಯಾಕಾಶ ಯೋಜನೆಗಳಿಗೆ ಉತ್ತೇಜನ ನೀಡಿರುವುದು ಸೇರಿ ಹಲವು ಕಾರ್ಯಕ್ರಮಗಳು ದೇಶದ ಅಭಿವೃದ್ದಿ ಮಾನದಂಡವನ್ನು ದುಪ್ಪಟ್ಟುಗೊಳಿಸಿವೆ. ಇದರಿಂದಾಗಿ ಸರ್ಕಾರದ ಸಚಿವರು, ಸಂಸದರು ವಿಕಸಿತ ಭಾರತದ ಕಲ್ಪನೆಯ ಸಾಕಾರಗೊಳಿಸಲು ಹೆಚ್ಚಿನ ಶ್ರಮ ವಹಿಸಬೇಕು. ಹೊಸ ಹೊಸ ಯೋಜನೆಗಳು, ಯೋಜನೆಗಳ ಸಮರ್ಪಕ ಜಾರಿ ಮೂಲಕ ದೇಶದ ಏಳಿಗೆಗೆ ಇನ್ನಷ್ಟು ಕೊಡುಗೆ ನೀಡಬೇಕು.

ಕೇಂದ್ರದಲ್ಲಿ 10 ವರ್ಷಗಳಿಂದ ಇದ್ದ ಬಹುಮತದ ಸರ್ಕಾರ ಈಗಿಲ್ಲ. ಬಿಜೆಪಿಯು 240 ಸೀಟುಗಳಿಗೆ ಸೀಮಿತವಾಗಿದ್ದು, ಸಮ್ಮಿಶ್ರ ಸರ್ಕಾರ ಅಸ್ತಿತ್ವಕ್ಕೆ ಬಂದಿದೆ. ಹಾಗಾಗಿ, ಮೋದಿ ಸರ್ಕಾರವು ಸುಸ್ಥಿರ ಆಡಳಿತ ನೀಡಬೇಕು ಎಂದರೆ ಮೈತ್ರಿಕೂಟದಲ್ಲಿ ಸ್ಥಿರತೆ ಕಾಪಾಡಬೇಕು, ಸಮನ್ವಯತೆ ಸಾಧಿಸಬೇಕು. ಪ್ರಾದೇಶಿಕ ಪಕ್ಷಗಳಿಗೆ, ಪ್ರಾದೇಶಿಕ ಪಕ್ಷಗಳ ರಾಜ್ಯಗಳಿಗೆ ಹೆಚ್ಚಿನ ಮನ್ನಣೆ ನೀಡಬೇಕು. ಧರ್ಮ, ಜಾತಿಯ ವಿಷಯಗಳಿಗೆ ಪ್ರಾಮುಖ್ಯತೆ ಕೊಡದೆ, ಎಲ್ಲ ಮೈತ್ರಿ ಪಕ್ಷಗಳನ್ನು ವಿಶ್ವಾಸಕ್ಕೆ ತೆಗೆದುಕೊಂಡು ಸರ್ಕಾರವನ್ನು ಮುನ್ನಡೆಸಬೇಕು. ಮೋದಿ ಸರ್ಕಾರವು ಉದ್ಯಮಿಗಳ ಪರವಾದ ಸರ್ಕಾರ ಎಂಬ ಕುಖ್ಯಾತಿ ಇತ್ತೀಚಿನ ವರ್ಷಗಳಲ್ಲಿ ಜಾಸ್ತಿಯಾಗಿದೆ. ಅಡುಗೆ ಅನಿಲ, ಪೆಟ್ರೋಲ್-ಡೀಸೆಲ್‌ ಸೇರಿ ಅಗತ್ಯ ವಸ್ತುಗಳ ಬೆಲೆಯೇರಿಕೆಯು ಬಡ ಹಾಗೂ ಮಧ್ಯಮ ವರ್ಗದವರನ್ನು ಹೈರಾಣಾಗಿಸಿದೆ. ಇಂತಹ ವಿಷಯಗಳ ಕುರಿತು ಮೋದಿ ಹಾಗೂ ಟೀಮ್‌ ಗಮನ ಹರಿಸಬೇಕು. ಬಜೆಟ್‌ನಲ್ಲಿ ಬಡವರು ಹಾಗೂ ಮಧ್ಯಮ ವರ್ಗದವರಿಗೆ ನೇರವಾಗಿ ಅನುಕೂಲವಾಗುವ (ಕಿಸಾನ್‌ ಸಮ್ಮಾನ್‌, ಅಡುಗೆ ಅನಿಲ ಸಿಲಿಂಡರ್‌ಗಳಿಗೆ ಸಬ್ಸಿಡಿ ಹೆಚ್ಚಳ ಇತ್ಯಾದಿ) ಯೋಜನೆಗಳನ್ನು ಘೋಷಿಸಬೇಕು.

ಕಳೆದ 10 ವರ್ಷಗಳಲ್ಲಿ ಲೋಕಸಭೆಯಲ್ಲಿ ಬಲಿಷ್ಠ ಪ್ರತಿಪಕ್ಷವೇ ಇರಲಿಲ್ಲ. ಕಾಂಗ್ರೆಸ್‌ ಸೇರಿ ಯಾವೊಂದು ಪಕ್ಷವೂ ಕೇಂದ್ರ ಸರ್ಕಾರಕ್ಕೆ ಸೆಡ್ಡು ಹೊಡೆಯುವಷ್ಟು ಸಮರ್ಥವಾಗಿರಲಿಲ್ಲ. ಇದು ಕೂಡ ಮೋದಿ ಸರ್ಕಾರಕ್ಕೆ ಅನುಕೂಲ ಮಾಡಿಕೊಟ್ಟಿತ್ತು. ಆದರೆ, ಫಲಿತಾಂಶದ ಬಳಿಕ ಚಿತ್ರಣ ಬದಲಾಗಿದೆ. ಕಾಂಗ್ರೆಸ್‌ 52 ಕ್ಷೇತ್ರಗಳಿಂದ 99 ಕ್ಷೇತ್ರಗಳಿಗೆ ತನ್ನ ಸದಸ್ಯ ಬಲವನ್ನು ಹೆಚ್ಚಿಸಿಕೊಂಡಿದೆ. ಇಂಡಿಯಾ ಒಕ್ಕೂಟವು ಒಗ್ಗಟ್ಟಾಗಿ 232 ಕ್ಷೇತ್ರಗಳಲ್ಲಿ ಗೆಲುವು ಸಾಧಿಸಿದೆ. ಹಾಗಾಗಿ, ಸಮ್ಮಿಶ್ರ ಸರ್ಕಾರಕ್ಕೆ ಆಡಳಿತ ನಡೆಸುವುದು ಹಗ್ಗದ ಮೇಲಿನ ನಡಿಗೆಯೇ ಆಗಿದೆ. ಇನ್ನು, ಕಳೆದ 10 ವರ್ಷಗಳಿಂದ ಬಲಿಷ್ಠವಾಗಿ, ಸಮರ್ಥವಾಗಿ ಕಾರ್ಯನಿರ್ವಹಿಸದ ಪ್ರತಿಪಕ್ಷಗಳು ಇನ್ನಾದರೂ ದಕ್ಷತೆಯಿಂದ ಕಾರ್ಯನಿರ್ವಹಿಸಬೇಕು. ಕೇಂದ್ರ ಸರ್ಕಾರದ ವೈಫಲ್ಯಗಳನ್ನು ಜನರ ಮುಂದಿಡಬೇಕು. ಸರ್ಕಾರ ಲಯ ತಪ್ಪಿದಾಗ ಸರಿದಾರಿಗೆ ತರಬೇಕು. ಸರ್ಕಾರಕ್ಕೆ ಆಗಾಗ ಎಚ್ಚರಿಕೆ ನೀಡುವ ಜತೆಗೆ ಚಾಟಿ ಬೀಸಬೇಕು. ಒಟ್ಟಿನಲ್ಲಿ, ಸಬಲ ಸಮ್ಮಿಶ್ರ ಸರ್ಕಾರ ಹಾಗೂ ಪ್ರಬಲ ಪ್ರತಿಪಕ್ಷಗಳು ಕೂಡಿ ದೇಶದ ಏಳಿಗೆಗೆ, ವಿಕಸಿತ ಭಾರತ ಕಲ್ಪನೆಯ ಸಾಕಾರಕ್ಕೆ ಶ್ರಮಿಸಬೇಕು ಎಂಬುದೇ ಎಲ್ಲರ ಆಶಯವಾಗಿದೆ.

ಇದನ್ನೂ ಓದಿ: Modi 3.0 Cabinet: ನಡ್ಡಾ To ಎಚ್‌ಡಿಕೆ ;‌ ಮೋದಿ ಸಂಪುಟದಲ್ಲಿ ಸ್ಥಾನ ಪಡೆದ ಹೊಸ ಮುಖಗಳಿವು

Exit mobile version