ಪ್ರಧಾನಿ ಪಂಡಿತ ಜವಾಹರ್ ಲಾಲ್ ನೆಹರು (PM Jawahar Lal Nehru) ಕೈಗೊಂಡ ಎರಡು ತಪ್ಪು ನಿರ್ಧಾರಗಳಿಂದ ಕಾಶ್ಮೀರವು (Jammu and Kashmir) ದಶಕಗಳಿಂದ ಬಳಲುವಂತಾಗಿದೆ. ಅವರ ತಪ್ಪಿನಿಂದಾಗಿ ಪಾಕ್ ಆಕ್ರಮಿತ ಕಾಶ್ಮೀರ ಸೃಷ್ಟಿಯಾಯಿತು (POK). ಆದರೆ ಕಾಶ್ಮೀರ ಎಂದೆಂದಿಗೂ ನಮ್ಮದೇ ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಲೋಕಸಭೆಯಲ್ಲಿ ಬುಧವಾರ ಪ್ರತಿಪಾದಿಸಿದ್ದಾರೆ. 2023ರ ಜಮ್ಮು ಮತ್ತು ಕಾಶ್ಮೀರ ಮೀಸಲು (ತಿದ್ದುಪಡಿ) ವಿಧೇಯಕ ಮತ್ತು ಜಮ್ಮು ಮತ್ತು ಕಾಶ್ಮೀರ ಮರುಸಂಘಟನೆ (ತಿದ್ದುಪಡಿ) ವಿಧೇಯಕಗಳನ್ನು ಅವರು ಮಂಡಿಸಿದ್ದಾರೆ. ಪ್ರಧಾನಿ ಜವಾಹರಲಾಲ್ ನೆಹರು ಅವರ ಅಧಿಕಾರಾವಧಿಯಲ್ಲಿ ಆದ ಎರಡು ಪ್ರಮಾದಗಳಿಂದಾಗಿ ಕಾಶ್ಮೀರ ಸಂಕಷ್ಟ ಅನುಭವಿಸುತ್ತಾ ಬಂದಿದೆ. ನಮ್ಮ ಪಡೆಗಳು ಗೆಲ್ಲುತ್ತಿರುವಾಗಲೂ ಕದನ ವಿರಾಮ ಘೋಷಿಸಲಾಯಿತು ಮತ್ತು ಪಾಕಿಸ್ತಾನ ಆಕ್ರಮಿತ ಪ್ರದೇಶವು ಅಸ್ತಿತ್ವಕ್ಕೆ ಬಂದದ್ದು ದೊಡ್ಡ ತಪ್ಪು. ಕದನ ವಿರಾಮವನ್ನು ಮೂರು ದಿನಗಳ ಕಾಲ ವಿಳಂಬ ಮಾಡಿದ್ದರೆ, ಪಿಒಕೆ ಭಾರತದ ಭಾಗವಾಗುತ್ತಿತ್ತು. ಇದು ನೆಹರು ಅವರ ಮೊದಲನೇ ತಪ್ಪು. ನಮ್ಮ ಸಮಸ್ಯೆಯನ್ನು ವಿಶ್ವ ಸಂಸ್ಥೆಗೆ ತೆಗೆದುಕೊಂಡು ಹೋಗಿದ್ದು ಎರಡನೇ ತಪ್ಪು ಎಂದು ಅಮಿತ್ ಶಾ ಹೇಳಿದ್ದಾರೆ(Vistara Editorial).
ಅವರು ಹೇಳುತ್ತಿರುವುದರಲ್ಲಿ ಸುಳ್ಳೇನೂ ಇಲ್ಲ. ನಮ್ಮ ಹಿರಿಯರು ಮಾಡಿದ ಅನೇಕ ತಪ್ಪುಗಳಿಗೆ ನಾವು ಇಂದು ಬೆಲೆ ತೆರಬೇಕಾಗಿದೆ. ಜಮ್ಮು- ಕಾಶ್ಮೀರ ಹಿಂದೂ ಧರ್ಮಕ್ಕೆ ಅವಿನಾಭಾವವಾದ ಶೈವ ಪಂಥದ ಉಗಮ, ಬೆಳವಣಿಗೆ, ಅದು ಸಾಧಿಸಿದ ಎತ್ತರಗಳಿಗೆ ಸಾಕ್ಷಿಯಾದ ನೆಲ. ಭರತಖಂಡದ ದಕ್ಷಿಣೋತ್ತರಗಳನ್ನು ಒಂದು ಮಾಡಿದ ಶಂಕರಾಚಾರ್ಯರು ದಕ್ಷಿಣದ ಕೇರಳದ ಕಾಲ್ನಡಿಗೆಯಿಂದ ನಡೆದು ಉತ್ತರದ ತುತ್ತತುದಿಯಲ್ಲಿ ಶಕ್ತಿಪೀಠವನ್ನು ಸ್ಥಾಪಿಸುವ ಮೂಲಕ ಇಡೀ ಭರತಖಂಡವನ್ನು ಒಂದು ಎಂದು ಸಾರಿದ್ದು ಆಕಸ್ಮಿಕವಲ್ಲ, ಅದೊಂದು ಐತಿಹಾಸಿಕ ಸಂದೇಶ. ಇಂಥ ನೆಲ ಹತ್ತೊಂಬತ್ತನೇ ಶತಮಾನದಲ್ಲಿ ಕ್ರೂರಿಗಳ, ಮತಾಂಧರ ಆಡುಂಬೊಲವಾದದ್ದು ವಿಪರ್ಯಾಸ. ಇದನ್ನು ಆದ್ಯಂತವಾಗಿ ತಡೆಗಟ್ಟಬೇಕಾದುದು ನಮ್ಮನ್ನು ಆಳುವವರ ಆದ್ಯ ಕರ್ತವ್ಯವಾಗಿತ್ತು. ಆದರೆ ಈ ವಿಷಯದಲ್ಲಿ ದಿಟ್ಟ ನಿಲುವನ್ನು ಯಾರೂ ತೆಗೆದುಕೊಳ್ಳಲಿಲ್ಲ. ಭಾರತೀಯ ಸಂಸ್ಕೃತಿಗೆ ಅತ್ಯಪೂರ್ವ ಜೀವನಧಾರೆಯನ್ನು, ಸಾಂಸ್ಕೃತಿಕ ಕೊಡುಗೆಗಳನ್ನು ನೀಡಿದ ಕಾಶ್ಮೀರಿ ಪಂಡಿತರ ಸಮುದಾಯವೇ ಆಳುವವರ ಹೇಡಿತನ, ತಪ್ಪು ನಿರ್ಧಾರಗಳಿಂದಾಗಿ ಮತಾಂಧರ ದಾಳಿಗೆ ಸಿಲುಕಿ ನಲುಗಿ ಅಳಿವಿನಂಚಿಗೆ ಬಂದು ನಿಂತಿತು. ಹೀಗಾಗಿ ಕಾಶ್ಮೀರ ಪಂಡಿತರ ಹತ್ಯೆಗೆ ಕಾಂಗ್ರೆಸ್ ಕಾರಣ, ಮತ ರಾಜಕಾರಣವನ್ನು ಅದು ಕೈ ಬಿಟ್ಟಿದ್ದರೆ ಆ ಅಮಾನವೀಯ ಹತ್ಯೆಗಳನ್ನು ತಡೆಯಬಹುದಾಗಿತ್ತು ಎಂದು ಶಾ ಹೇಳಿದ್ದರಲ್ಲಿ ನಿಜಾಂಶವಿದೆ.
ಸದ್ಯ ಕಾಶ್ಮೀರದಲ್ಲಿದ್ದ ಆರ್ಟಿಕಲ್ 370 ಅನ್ನು 2019ರಲ್ಲಿ ಕೇಂದ್ರ ಸರ್ಕಾರ ರದ್ದುಪಡಿಸಿದಾಗ, ಅತಿ ಘೋರ ತಪ್ಪು ನಡೆಯಿತೆಂಬಂತೆ ಪಾಕ್ ಮತ್ತು ಪಾಕ್ ಪ್ರೇರಿತ ಮತಾಂಧರು ಬೊಬ್ಬೆ ಹಾಕಿದರು. ಅಲ್ಲಿ ಮಾನವ ಹಕ್ಕುಗಳ ಉಲ್ಲಂಘನೆಯಾಯಿತು ಎಂದು ದೂರಿದರು. ಚೀನಾ ಕೂಡ ಈ ವಿಚಾರದಲ್ಲಿ ಮೂಗು ತೂರಿಸಲು ಬಂದಿತು. ಆದರೆ ವಿಶ್ವಸಂಸ್ಥೆಯಲ್ಲಿ ಭಾರತ ತನ್ನ ನಿಲುಮೆಯನ್ನು ದೃಢವಾಗಿ ಪ್ರದರ್ಶಿಸಿದ್ದಲ್ಲದೆ, ಕಾಶ್ಮೀರದ ಬಗ್ಗೆ ಬೇರೆ ಯಾರೂ ಮಾತನಾಡುವ ಅಗತ್ಯವಿಲ್ಲ ಎಂದು ಪ್ರತಿಪಾದಿಸಿತು. ಆರ್ಟಿಕಲ್ 370ರ ರದ್ದತಿ ಹಾಗೂ ಜಮ್ಮು- ಕಾಶ್ಮೀರಗಳೆಂಬ ಕೇಂದ್ರಾಡಳಿತ ಪ್ರದೇಶಗಳಾಗಿ ವಿಭಜನೆ ಎಂಬ ದಿಟ್ಟ ಕ್ರಮಗಳು ಇಂದು ಅಲ್ಲಿನ ಶೈಕ್ಷಣಿಕ, ಔದ್ಯಮಿಕ, ಆರ್ಥಿಕ ಉನ್ನತಿಗಳ ಮೂಲ ಬೀಜಗಳಾಗಿ ಮೊಳಕೆಯೊಡೆದಿವೆ. ಅಲ್ಲಿ ಇತರ ದೇಶವಾಸಿಗಳೂ ಜಮೀನು ಖರೀದಿ, ಉದ್ಯಮ ಸ್ಥಾಪನೆ ಮಾಡಬಹುದಾಗಿದೆ. ಆಂತರಿಕ ಹಾಗೂ ವಿದೇಶಿ ಹೂಡಿಕೆಗಳು ದೊಡ್ಡ ಪ್ರಮಾಣದಲ್ಲಿ ಬರುತ್ತಿವೆ. ಇದೀಗ ಕೇಂದ್ರಾಡಳಿತ ಪ್ರದೇಶ ಮೀಸಲು ಕಾಯ್ದೆಗೆ ತಿದ್ದುಪಡಿಯನ್ನು ಬಯಸುವ 2023ರ ಜಮ್ಮು ಮತ್ತು ಕಾಶ್ಮೀರ ಮೀಸಲು ತಿದ್ದುಪಡಿ ವಿಧೇಯಕವನ್ನು ಕೇಂದ್ರ ಸರ್ಕಾರ ಮಂಡಿಸಿದೆ. 2023ರ ಜುಲೈ 26ರಂದು ಇದನ್ನು ಮಂಡಿಸಿದ್ದು, ಇದು ಈ ಪ್ರದೇಶದ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಮತ್ತು ಹಿಂದುಳಿದ ವರ್ಗಗಳಿಗೆ ಉದ್ಯೋಗ ಮತ್ತು ಶೈಕ್ಷಣಿಕ ಸಂಸ್ಥೆಗಳಲ್ಲಿ ಮೀಸಲು ಕಲ್ಪಿಸುತ್ತದೆ. ಜತೆಗೆ, ಜಮ್ಮು ಮತ್ತು ಕಾಶ್ಮೀರ ಮರು ಸಂಘಟನಾ ತಿದ್ದುಪಡಿ ವಿಧೇಯಕವು ರಾಜ್ಯಪಾಲರಿಗೆ, ಕಾಶ್ಮೀರ ವಲಸೆ ಸಮುದಾಯದ ಇಬ್ಬರನ್ನು ಅಸೆಂಬ್ಲಿಗೆ ನಾಮ ನಿರ್ದೇಶನ ಮಾಡುವ ಅಧಿಕಾರವನ್ನು ನೀಡುತ್ತದೆ. ನಿರ್ಗತಿಕರಾಗಿರುವ ಕಾಶ್ಮೀರಿ ಪಂಡಿತರಿಗೆ ತಮ್ಮ ಹಕ್ಕುಗಳನ್ನು ಪಡೆಯಲು ಬೇಕಾದ ಪ್ರಾತಿನಿಧ್ಯವನ್ನು ನೀಡುತ್ತದೆ. ಭಯೋತ್ಪಾದನೆಯ ಕಾರಣದಿಂದ ಕಾಶ್ಮೀರ ತೊರೆದವರಿಗೆ ಈ ವಿಧೇಯಕಗಳು ನ್ಯಾಯ ಒದಗಿಸಲಿವೆ. ಇನ್ನಾದರೂ ಕಾಶ್ಮೀರಿ ಪಂಡಿತರ ಮುಖದಲ್ಲಿ ನಗು ಅರಳಲಿ. ಮತ-ಬ್ಯಾಂಕ್ ರಾಜಕೀಯವನ್ನು ಪರಿಗಣಿಸದೆ, ಇದರ ಉಪಯುಕ್ತತೆಯನ್ನು ಮನಗಂಡು ಎಲ್ಲ ಪಕ್ಷಗಳೂ ಇದನ್ನು ಬೆಂಬಲಿಸಬೇಕಿದೆ.
ಈ ಸುದ್ದಿಯನ್ನೂ ಓದಿ: ವಿಸ್ತಾರ ಸಂಪಾದಕೀಯ: ಅಡಿಕೆ ಬೆಳೆಯ ಸಂಕಷ್ಟಗಳನ್ನು ನಿವಾರಿಸಿ