ಏಳನೇ ವೇತನ ಆಯೋಗದ (Seventh Pay Commission) ಅಂತಿಮ ವರದಿ ಬಂದ ನಂತರ ಸರ್ಕಾರಿ ನೌಕರರ ವೇತನ ಪರಿಷ್ಕರಣೆ ಬಗ್ಗೆ ತೀರ್ಮಾನ ಮಾಡಲಾಗುವುದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ (CM Siddaramaiah) ಭರವಸೆ ನೀಡಿದ್ದಾರೆ. ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಸಿ.ಎಸ್. ಷಡಾಕ್ಷರಿ (CS Shadakshari) ಅವರ ನೇತೃತ್ವದ ನಿಯೋಗವು ಮಂಗಳವಾರ ಮುಖ್ಯಮಂತ್ರಿಗಳನ್ನು ಭೇಟಿ ಮಾಡಿ ಮನವಿ ಸಲ್ಲಿಸಿದ ಸಂದರ್ಭದಲ್ಲಿ ಇದನ್ನವರು ಹೇಳಿದ್ದಾರೆ. ಏಳನೇ ವೇತನ ಆಯೋಗ ರಚನೆಯಾಗಿ 12 ತಿಂಗಳಾಗಿದೆ. ಮಾರ್ಚ್ ವರೆಗೆ ಕಾಲಾವಧಿ ವಿಸ್ತರಣೆಯಾಗಿದ್ದು, ಚುನಾವಣಾ ನೀತಿ ಸಂಹಿತೆ ಘೋಷಣೆಯಾಗುವ ಮೊದಲೇ ವೇತನ ಪರಿಷ್ಕರಣೆ ಮಾಡಿ ಘೋಷಣೆ ಮಾಡುವಂತೆ ನಿಯೋಗ ಮನವಿ ಮಾಡಿದೆ. ಹೊಸ ಪಿಂಚಣಿ ಯೋಜನೆಯ ವ್ಯಾಪ್ತಿಯಲ್ಲಿದ್ದ 11366 ಜನರನ್ನು ಹಳೆ ಪಿಂಚಣಿ ಯೋಜನೆಗೆ ಸೇರಿಸಲಾಗಿದೆ. ಉಳಿದವರನ್ನೂ ಹಳೆ ಪಿಂಚಣಿ ಯೋಜನೆ ವ್ಯಾಪ್ತಿಗೆ ಸೇರಿಸಿ, ಪಿಂಚಣಿಗೆ ನೀಡುತ್ತಿರುವ ಕೊಡುಗೆಯನ್ನು ನಿಲ್ಲಿಸಲು ಆದೇಶಿಸಲು ನಿಯೋಗ ಕೋರಿಕೆ ಸಲ್ಲಿಸಿದೆ. ಈ ಬೇಡಿಕೆಗಳು ಹೊಸದಲ್ಲ(Vistara Editorial).
ರಾಜ್ಯ ಸರ್ಕಾರ ಹಲವಾರು ಗ್ಯಾರಂಟಿ ಯೋಜನೆಗಳ ಜಾರಿಯಲ್ಲಿ ವ್ಯಸ್ತವಾಗಿರುವುದರಿಂದ ಏಳನೇ ವೇತನ ಆಯೋಗವು ವರದಿ ನೀಡಿದರೂ ಈ ಬಾರಿ ವೇತನ ಹೆಚ್ಚಳ ಆಗುವುದು ಖಚಿತವಿಲ್ಲ ಎಂಬ ಅಭಿಪ್ರಾಯವೂ ನೌಕರರ ವಲಯದಲ್ಲಿದೆ. ಆದರೆ ರಾಜ್ಯ ಸರ್ಕಾರವು ಸರ್ಕಾರಿ ನೌಕರರ ಹಿತರಕ್ಷಣೆಗೆ ಬದ್ಧವಾಗಿದೆ ಎಂದು ಸಿಎಂ ಭರವಸೆ ನೀಡಿದ್ದು, ಏಳನೇ ವೇತನ ಆಯೋಗದ ವರದಿ ಬಂದ ಬಳಿಕ ವೇತನ ಪರಿಷ್ಕರಣೆಯ ಬಗ್ಗೆ ಅಂತಿಮ ನಿರ್ಧಾರ ಮಾಡಲಾಗುವುದು ಎಂದಿದ್ದಾರೆ. ಕಳೆದ ವರ್ಷ ನೌಕರರು ತಮ್ಮ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ಮುಷ್ಕರ ಹೂಡಿದ್ದರು. ನಂತರ ಸರ್ಕಾರ ಹಾಗೂ ನೌಕರರ ನಡುವೆ ರಾಜಿ ಸಂಧಾನ ನಡೆದಿತ್ತು. ಈ ಮುಷ್ಕರದ ಪ್ರಭಾವ ಚುನಾವಣೆ ಫಲಿತಾಂಶದ ಮೇಲೂ ಆಗಿತ್ತು ಎಂದರೆ ತಪ್ಪಲ್ಲ. ಈ ಮುಷ್ಕರದ ಫಲಾನುಭವಿ ಪರೋಕ್ಷವಾಗಿ ಕಾಂಗ್ರೆಸ್ ಆಗಿದೆ. ಇದೀಗ ನೌಕರರ ಅಳಲು ಕೇಳಿಸಿಕೊಳ್ಳುವ ಹೊಣೆ ಕಾಂಗ್ರೆಸ್‌ನದಾಗಿದೆ.
ಆಗ ಸರ್ಕಾರಿ ನೌಕರರಿಂದ ಎರಡು ಮುಖ್ಯ ಬೇಡಿಕೆಗಳಿದ್ದವು. ಒಂದು- 7ನೇ ವೇತನ ಆಯೋಗದ ಶಿಫಾರಸುಗಳನ್ನು ಜಾರಿ ಮಾಡಬೇಕು. ಇನ್ನೊಂದು- ಎನ್‌ಪಿಎಸ್ ಪದ್ಧತಿ ರದ್ದುಪಡಿಸಿ ಹಳೇ ಪಿಂಚಣಿ ವ್ಯವಸ್ಥೆಯನ್ನು ಜಾರಿಗೆ ತರಬೇಕು. ಹಳೇ ಪಿಂಚಣಿ ಯೋಜನೆಗೆ ಬೇಡಿಕೆ ಹಾಗೇ ಇದೆ. ನೀತಿ ಸಂಹಿತೆ ಘೋಷಣೆಗೆ ಮುನ್ನ ಸಂಬಳ ಏರಿಕೆ ಹೊಸ ಬೇಡಿಕೆ. ರಾಜ್ಯದ ಎನ್‌ಪಿಎಸ್ ನೌಕರರ ಜೀವನ ನಿರ್ವಹಣೆ ಹಾಗೂ ಸಂಧ್ಯಾ ಕಾಲದ ಬದುಕು ಅತ್ಯಂತ ಕಷ್ಟಕರವಾಗಿರುವುದರಿಂದ ಎನ್‌ಪಿಎಸ್ ನೌಕರರನ್ನು ಓಪಿಎಸ್ ವ್ಯಾಪ್ತಿಗೆ ತರುವುದು ಸರ್ಕಾರದ ಜವಾಬ್ದಾರಿಯಾಗಿರುತ್ತದೆ. ಈಗಾಗಲೇ ಪಂಜಾಬ್, ರಾಜಸ್ಥಾನ, ಚತ್ತಿಸ್ ಗಢ, ಜಾರ್ಖಂಡ್, ಹಿಮಾಚಲ ಪ್ರದೇಶ ರಾಜ್ಯಗಳಲ್ಲಿ ಹಳೆ ಪಿಂಚಣಿ ಯೋಜನೆಯನ್ನು ಜಾರಿಗೆ ತಂದಿದ್ದು, ಅದೇ ಮಾದರಿಯಲ್ಲಿ ಕರ್ನಾಟಕದಲ್ಲೂ ಸಹ ಎನ್‌ಪಿಎಸ್ ಯೋಜನೆಯನ್ನು ರದ್ದುಪಡಿಸಿ ಹಳೆ ಪಿಂಚಣಿ ಯೋಜನೆಯನ್ನು ಜಾರಿಗೊಳಿಸಬೇಕು ಎಂಬುದು ನೌಕರರ ಬೇಡಿಕೆ. ಇದು 10 ಲಕ್ಷ ಸರ್ಕಾರಿ ನೌಕರರು ಮತ್ತು 5 ಲಕ್ಷ ನಿವೃತ್ತರ ಬದುಕಿನ ಪ್ರಶ್ನೆ.
ಜೊತೆಗೆ ನಮ್ಮ ರಾಜ್ಯದಲ್ಲಿ ಶೇ.39ರಷ್ಟು ಸರ್ಕಾರಿ ಸಿಬ್ಬಂದಿ ಹುದ್ದೆಗಳು ಖಾಲಿ ಇವೆ. ಅಂದರೆ ಇಷ್ಟು ಮಂದಿಯ ಕೆಲಸವನ್ನು ಶೇ.61ರಷ್ಟು ನೌಕರರು ಮಾಡುತ್ತಿದ್ದಾರೆ. ಒಬ್ಬ ಪಿಡಿಒ ನಾಲ್ಕು ಗ್ರಾ.ಪಂಗಳ ಹೊಣೆಗಾರಿಕೆ ನಿಭಾಯಿಸುತ್ತಿದ್ದಾರೆ. ಅಧಿಕಾರಿಗಳ ಮೇಲೂ ಕೆಲಸದ ಒತ್ತಡ ಇದೆ. ಇಷ್ಟೆಲ್ಲರ ನಡುವೆಯೂ ನಮ್ಮ ನೌಕರರು ಶ್ರಮ ವಹಿಸಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಎಲ್ಲ ನೌಕರರೂ ಭ್ರಷ್ಟರು, ಸೋಮಾರಿಗಳು ಎಂಬ ಭಾವನೆ ಮೂಡಿಸುವಂತೆ ಮಾತಾಡುವುದು ಸರಿಯಲ್ಲ. ಆತ್ಮಸಾಕ್ಷಿಯಂತೆ, ಪ್ರಾಮಾಣಿಕತೆಯಿಂದ ಕೆಲಸ ಮಾಡುವವರು ಸಾಕಷ್ಟು ಜನ ಇದ್ದಾರೆ. ಸಂಬಳ ಏರಿಸುವ ಭರವೆಯನ್ನು ಕಳೆದ ಬಜೆಟ್‌ನಲ್ಲಿ ಈಡೇರಿಸಿರಲ್ಲ. ಈ ಸಲವೂ, ಗ್ಯಾರಂಟಿಗಳಿಗೆ ಕೈ ಹಾಕಿದ್ದ ಸರ್ಕಾರ ಸಂಬಳ ಏರಿಕೆಯ ವಿಚಾರದಲ್ಲಿ ಕೈ ಬಿಗಿ ಮಾಡಿತ್ತು. ಹೀಗಾಗಿ ನೌಕರರ ನಿರೀಕ್ಷೆ ಹುಸಿಯಾಗಿದೆ. ಸರ್ಕಾರಿ ನೌಕರರ ಕುಟುಂಬದವರಿಗೆ ಉಚಿತ ಆರೋಗ್ಯ ಯೋಜನೆಯನ್ನು ಅನುಷ್ಠಾನ ಗೊಳಿಸಬೇಕು ಎಂಬುದು ಕೂಡ ಸರ್ಕಾರಿ ನೌಕರರ ಬೇಡಿಕೆಗಳಲ್ಲಿ ಒಂದು. ಸರ್ಕಾರ ನೌಕರರ ಬೇಡಿಕೆಗಳನ್ನು ಸಹಾನುಭೂತಿಯಿಂದ ಆಲಿಸುವುದು ಅಗತ್ಯ.
ಈ ಸುದ್ದಿಯನ್ನೂ ಓದಿ: ವಿಸ್ತಾರ ಸಂಪಾದಕೀಯ: ಅಯೋಧ್ಯೆಯ ರಾಮ ಮಂದಿರಕ್ಕೆ ಕರ್ನಾಟಕದ ತೇಜಸ್ಸು!