ಭಾರತದಲ್ಲಿನ ಇಂಡೋ- ಗಂಗಾ (Indo Ganges) ಜಲಾನಯನ ಪ್ರಾಂತ್ಯದ ಕೆಲವು ಪ್ರದೇಶಗಳು ಅಂತರ್ಜಲ (Groundwater Level) ಕುಸಿತದ ಮಿತಿಯನ್ನು ದಾಟಿವೆ. ದೇಶದ ವಾಯವ್ಯ ಪ್ರದೇಶ ಸಂಪೂರ್ಣ 2025ರ ವೇಳೆಗೆ ತುಂಬಾ ಕಡಿಮೆ ಅಂತರ್ಜಲ ಲಭ್ಯತೆಯನ್ನು ಅನುಭವಿಸುತ್ತದೆ ಎಂದು ವಿಶ್ವಸಂಸ್ಥೆಯ ಹೊಸ ವರದಿ ಹೇಳಿದೆ. ಸೌದಿ ಅರೇಬಿಯಾದಂತಹ ಕೆಲವು ದೇಶಗಳು ಈಗಾಗಲೇ ಅಂತರ್ಜಲ ಕೊರತೆಯ ಅಪಾಯದ ಮಿತಿಯನ್ನು ಮೀರಿವೆ. ಭಾರತ ಸೇರಿದಂತೆ ಇತರ ದೇಶಗಳೂ ಈ ಅಪಾಯದಿಂದ ದೂರವಿಲ್ಲ. “ಇಂಟರ್‌ಕನೆಕ್ಟೆಡ್ ಡಿಸಾಸ್ಟರ್ ರಿಸ್ಕ್ ರಿಪೋರ್ಟ್ 2023” ಎಂಬ ಶೀರ್ಷಿಕೆಯಡಿ ವಿಶ್ವಸಂಸ್ಥೆಯ ಇನ್‌ಸ್ಟಿಟ್ಯೂಟ್ ಫಾರ್ ಎನ್ವಿರಾನ್‌ಮೆಂಟ್ ಅಂಡ್ ಹ್ಯೂಮನ್ ಸೆಕ್ಯುರಿಟಿ (ಯುಎನ್‌ಯು-ಇಹೆಚ್‌ಎಸ್) ಇದರಿಂದ ವರದಿ ಪ್ರಕಟವಾಗಿದೆ. ಇದು ನಮ್ಮ ಚಿಂತೆಗೆ- ಚಿಂತನೆಗೆ ಕಾರಣವಾಗಬೇಕಿದೆ(Vistara Editorial).
ವಿಶ್ವಸಂಸ್ಥೆ ವರದಿಯಲ್ಲಿ ಇದಲ್ಲದೇ ಇನ್ನೂ ಹಲವು ಅಂಶಗಳನ್ನು ಉಲ್ಲೇಖಿಸಲಾಗಿದೆ. ಅಂತರ್ಜಲದಲ್ಲಿ ಸುಮಾರು 70 ಪ್ರತಿಶತವನ್ನು ಕೃಷಿಗಾಗಿ, ನೆಲದ ಮೇಲಿನ ನೀರಿನ ಮೂಲಗಳು ಸಾಕಷ್ಟಿಲ್ಲದಿದ್ದಾಗ ಬಳಸಲಾಗುತ್ತಿದೆ. ಜಲಕ್ಷಾಮದಿಂದ ಉಂಟಾಗುವ ಕೃಷಿ ನಷ್ಟವನ್ನು ತಗ್ಗಿಸುವಲ್ಲಿ ಜಲಸೆಲೆಗಳು ನಿರ್ಣಾಯಕ ಪಾತ್ರವನ್ನು ವಹಿಸುತ್ತಿವೆ. ಹವಾಮಾನ ಬದಲಾವಣೆಯಿಂದಾಗಿ ಈ ಸವಾಲು ಉಲ್ಬಣಗೊಳ್ಳುವ ನಿರೀಕ್ಷೆಯಿದೆ. ಪ್ರಪಂಚದ ಅರ್ಧಕ್ಕಿಂತ ಹೆಚ್ಚು ಪ್ರಮುಖ ಜಲಸೆಲೆಗಳು ನೈಸರ್ಗಿಕವಾಗಿ ಮರುಪೂರಣಗೊಳ್ಳುವುದಕ್ಕಿಂತ ವೇಗವಾಗಿ ಕ್ಷೀಣಿಸುತ್ತಿವೆ. ಅಸ್ತಿತ್ವದಲ್ಲಿರುವ ಬಾವಿ ಕೆರೆಗಳಿಂದ ನೀರಿನ ಮಟ್ಟ ಮತ್ತೂ ಕಡಿಮೆಯಾದಾಗ ರೈತರು ನೀರಿನ ನೆಲೆಯನ್ನೇ ಕಳೆದುಕೊಳ್ಳಬಹುದು. ಇದು ಸಂಪೂರ್ಣ ಆಹಾರ ಉತ್ಪಾದನಾ ವ್ಯವಸ್ಥೆಗೆ ಅಪಾಯವನ್ನುಂಟುಮಾಡುತ್ತದೆ. ಭಾರತದ ವಾಯುವ್ಯ ಪ್ರದೇಶವು ರಾಷ್ಟ್ರದ ಬೆಳೆಯುತ್ತಿರುವ 140 ಕೋಟಿ ಜನರಿಗೆ ಆಹಾರಮೂಲವಾಗಿ ಕಾರ್ಯನಿರ್ವಹಿಸುತ್ತಿದೆ. ಪಂಜಾಬ್ ಮತ್ತು ಹರಿಯಾಣ ರಾಜ್ಯಗಳು ದೇಶದ ಅಕ್ಕಿ ಪೂರೈಕೆಯ 50 ಶೇಕಡಾ ಮತ್ತು ಶೇ.85 ಗೋಧಿ ಉತ್ಪಾದಿಸುತ್ತವೆ. ಇಲ್ಲೇ ಅಂತರ್ಜಲ ಅಪಾಯದಲ್ಲಿರುವುದು. ಪಂಜಾಬ್‌ನ ಶೇಕಡಾ 78ರಷ್ಟು ಬಾವಿಗಳನ್ನು ಅತಿಯಾಗಿ ಬಳಸಿಕೊಳ್ಳಲಾಗಿದೆ. ಒಟ್ಟಾರೆಯಾಗಿ ವಾಯವ್ಯ ಪ್ರದೇಶವು 2025ರ ವೇಳೆಗೆ ತೀರಾ ಕಡಿಮೆ ಅಂತರ್ಜಲ ಲಭ್ಯತೆಯನ್ನು ಅನುಭವಿಸುವ ನಿರೀಕ್ಷೆಯಿದೆ ಎಂದು ವರದಿ ಹೇಳಿದೆ.
ಇತ್ತೀಚೆಗೆ, ಸೆಂಟ್ರಲ್ ಗ್ರೌಂಡ್ ವಾಟರ್ ಬೋರ್ಡ್ (CGWB) ಮಾಡಿದ ನೀರಿನ ಮಟ್ಟದ ವಿಶ್ಲೇಷಣೆಯ ಪ್ರಕಾರ, ಸಮೀಕ್ಷಿಸಲಾದ ಬಾವಿಗಳಲ್ಲಿ 33%ದಷ್ಟು 2 ಮೀಟರ್‌ವರೆಗೆ ಅಂತರ್ಜಲ ಮಟ್ಟದಲ್ಲಿ ಕುಸಿತವನ್ನು ದಾಖಲಿಸಿದೆ. ಹೊಸದಿಲ್ಲಿ, ಚೆನ್ನೈ, ಇಂದೋರ್, ಮಧುರೈ, ವಿಜಯವಾಡ, ಗಾಜಿಯಾಬಾದ್, ಕಾನ್ಪುರ ಮತ್ತು ಲಕ್ನೋ ಮುಂತಾದ ಮೆಟ್ರೋ ನಗರಗಳಲ್ಲಿ 4 ಮೀಟರ್‌ಗಿಂತಲೂ ಹೆಚ್ಚು ಕುಸಿತವನ್ನು ಗಮನಿಸಲಾಗಿದೆ. UNESCO ವರ್ಲ್ಡ್ ವಾಟರ್ ಡೆವಲಪ್‌ಮೆಂಟ್ ರಿಪೋರ್ಟ್- 2018ರ ಪ್ರಕಾರ ಭಾರತವು ವಿಶ್ವದಲ್ಲೇ ಅತಿ ಹೆಚ್ಚು ಅಂತರ್ಜಲವನ್ನು ತೆಗೆಯುವ ದೇಶವಾಗಿದೆ. ಆದರೆ ರಾಷ್ಟ್ರೀಯ ಒಟ್ಟು ಆಂತರಿಕ ಉತ್ಪನ್ನಕ್ಕೆ (ಜಿಡಿಪಿ) ಅಂತರ್ಜಲದ ಕೊಡುಗೆ ಎಷ್ಟು ಎಂಬುದನ್ನು ಅಳೆಯುವ ಕ್ರಮವೇ ಇಲ್ಲ. CGWB ಪ್ರಕಾರ, ಭಾರತದಲ್ಲಿ ಕೃಷಿ ಭೂಮಿ ನೀರಾವರಿಗಾಗಿ ಪ್ರತಿ ವರ್ಷ 230 ಶತಕೋಟಿ ಕ್ಯೂಬಿಕ್ ಮೀಟರ್ ಅಂತರ್ಜಲವನ್ನು ಹೊರತೆಗೆಯಲಾಗುತ್ತದೆ. ಆದರೆ ಇದೇ ಪ್ರಮಾಣದಲ್ಲಿ ಮರುಪೂರಣ ಆಗುತ್ತಿಲ್ಲ.
ಇದಕ್ಕೆಲ್ಲ ಕಾರಣಗಳು ನಮಗೆ ಗೊತ್ತೇ ಇದೆ. ಹಸಿರು ಕ್ರಾಂತಿಯ ಹೆಸರಿನಲ್ಲಿ ಅತಿ ನೀರಾವರಿ ಬೆಳೆಗಳ ಬೆಳೆಯುವಿಕೆ ಮತ್ತು ಅದಕ್ಕಾಗಿ ಅಂತರ್ಜಲದ ಅತಿಯಾದ ಬಳಕೆ, ಕೈಗಾರಿಕೆಗಳ ಅವಶ್ಯಕತೆ, ಭೂಕುಸಿತಗಳು- ಸೆಪ್ಟಿಕ್ ಟ್ಯಾಂಕ್‌ಗಳು- ರಸಗೊಬ್ಬರಗಳ ಅತಿಯಾದ ಬಳಕೆಯಿಂದ ಮಾಲಿನ್ಯದ ಸಂದರ್ಭದಲ್ಲಿ ಅಂತರ್ಜಲ ಸಂಪನ್ಮೂಲಗಳ ಹಾನಿ, ಅಸಮರ್ಪಕ ನಿಯಂತ್ರಣ, ಕೊಳವೆ ಬಾವಿಗಳ ಕೊರೆಯುವಿಕೆಗೆ ನಿಯಂತ್ರಣವಿಲ್ಲದಿರುವುದು ಇತ್ಯಾದಿಗಳು ಕಾರಣವಾಗಿವೆ. ಸಂವಿಧಾನದಲ್ಲಿ ʼನೀರುʼ ರಾಜ್ಯದ ವಿಷಯ. ನೀರಿನ ಸಂರಕ್ಷಣೆ ಮತ್ತು ನೀರು ಕೊಯ್ಲು ಸೇರಿದಂತೆ ನೀರಿನ ನಿರ್ವಹಣೆಯ ಉಪಕ್ರಮಗಳು ಮತ್ತು ಪ್ರಜೆಗಳಿಗೆ ಸಾಕಷ್ಟು ಕುಡಿಯುವ ನೀರು ಲಭ್ಯವಾಗುವಂತೆ ಮಾಡುವುದು ಪ್ರಾಥಮಿಕವಾಗಿ ರಾಜ್ಯಗಳ ಜವಾಬ್ದಾರಿ. ಆದರೆ ಯೋಜನೆಗಳಿಗೆ ಹಣಕಾಸು ಸೇರಿದಂತೆ ಪ್ರಮುಖ ಕ್ರಮಗಳನ್ನು ಕೇಂದ್ರ ಸರ್ಕಾರ ತೆಗೆದುಕೊಳ್ಳುತ್ತದೆ. ಜಲಶಕ್ತಿ ಅಭಿಯಾನ, ಅಟಲ್ ಬಹುಜಲ ಯೋಜನೆ ಮುಂತಾದ ಯೋಜನೆಗಳು ಇವೆ. ಆದರೆ ಸಮರ್ಪಕ ಅನುಷ್ಠಾನದ ಕೊರತೆಯಿದೆ.
ಈ ಸಂಪಾದಕೀಯವನ್ನೂ ಓದಿ: ವಿಸ್ತಾರ ಸಂಪಾದಕೀಯ: ಜಗತ್ತಿನ ಮೂರನೇ ಬೃಹತ್ ಆರ್ಥಿಕತೆಯ ರಾಷ್ಟ್ರವಾಗುವತ್ತ ಭಾರತ
ಭವಿಷ್ಯದ ತಲೆಮಾರುಗಳಿಗಾಗಿ ನಾವು ಅಂತರ್ಜಲವನ್ನು ಉಳಿಸಿಕೊಳ್ಳಲೇಬೇಕಿದೆ. ʼಪಾನಿ ಪಂಚಾಯತಿʼಗಳ ಪರಿಕಲ್ಪನೆಯ ಮೂಲಕ ಪ್ರಧಾನ ಮಂತ್ರಿಗಳು ನೀರಿನ ಸಂರಕ್ಷಣೆಯ ಪ್ರಾಮುಖ್ಯತೆಯನ್ನು ಎತ್ತಿ ಹಿಡಿದಿದ್ದಾರೆ. ಜಲ ಸಂರಕ್ಷಣೆಯನ್ನು ಸಾಮೂಹಿಕ ಆಂದೋಲನವನ್ನಾಗಿ ಮಾಡಬೇಕು. ನೀರಿನ ಸಂರಕ್ಷಣೆಯನ್ನು ಗ್ರಾಮೀಣ ಮಟ್ಟಕ್ಕೆ ವಿಕೇಂದ್ರೀಕರಿಸುವುದು ತುಂಬಾ ಪರಿಣಾಮಕಾರಿ. ಜಲಮೂಲಗಳ ಅತಿಕ್ರಮಣವನ್ನು ನಿರ್ಬಂಧಿಸುವುದು, ಒಳಚರಂಡಿ ಕಾಲುವೆಗಳ ಅಕ್ರಮಕ್ಕೆ ಬಿಡದಿರುವುದು, ಜಲಮೂಲಗಳನ್ನು ಪುನಃಸ್ಥಾಪಿಸುವುದು ಮತ್ತು ಸರಿಯಾಗಿ ನಿರ್ವಹಿಸುವುದು, ಅಂತರ್ಜಲ ಬಳಕೆಗೆ ಶುಲ್ಕ, ಸ್ಪ್ರಿಂಕ್ಲರ್ ಅಥವಾ ಹನಿ ನೀರಾವರಿಯಂತಹ ಸೂಕ್ಷ್ಮ ನೀರಾವರಿ ತಂತ್ರಗಳಿಗೆ ಪ್ರೋತ್ಸಾಹ, ಅಂತರ್ಜಲದ ಕೃತಕ ಮರುಪೂರಣ, ಅಂತರ್ಜಲ ನಿರ್ವಹಣಾ ಸ್ಥಾವರಗಳ ನಿರ್ಮಾಣ, ಮಳೆಕೊಯ್ಲಿಗೆ ಪ್ರೋತ್ಸಾಹ ಮುಂತಾದ ಕ್ರಮಗಳನ್ನು ಕಟ್ಟುನಿಟ್ಟಾಗಿ ಅನುಷ್ಠಾನಿಸುವುದರ ಮೂಲಕ ಅಂತರ್ಜಲ ಕೊರತೆಯ ಕಂಟಕವನ್ನು ನೀಗಬಹುದು.