Site icon Vistara News

ವಿಸ್ತಾರ ಸಂಪಾದಕೀಯ: ರಾಮಾಯಣ, ಮಹಾಭಾರತ ಕಲಿಕೆ ಶಿಫಾರಸು ಸ್ವಾಗತಾರ್ಹ

Vistara Editorial, Ramayana, Mahabharat must be history curriculum

ಭಾರತದ ಇತಿಹಾಸದ ಪಠ್ಯಕ್ರಮದ ಭಾಗವಾಗಿ ರಾಮಾಯಣ (Ramayana) ಮತ್ತು ಮಹಾಭಾರತ (Mahabharata) ಮಹಾಕಾವ್ಯಗಳನ್ನು ಶಾಲೆಗಳಲ್ಲಿ ಕಲಿಸಬೇಕು ಎಂದು ಉನ್ನತ ಮಟ್ಟದ ರಾಷ್ಟ್ರೀಯ ಶೈಕ್ಷಣಿಕ ಸಂಶೋಧನೆ ಮತ್ತು ತರಬೇತಿ ಮಂಡಳಿ(NCERT)ಗೆ ಸಮಾಜ ವಿಜ್ಞಾನ ಸಮಿತಿ ಶಿಫಾರಸು ಮಾಡಿದೆ. ಇತಿಹಾಸ ವಿಷಯದಲ್ಲಿ ‘ಶಾಸ್ತ್ರೀಯ ಅವಧಿ’ ಅಡಿಯಲ್ಲಿ ಇದನ್ನು ಕಲಿಸಬಹುದು. ಹಾಗೆಯೇ ಸಂವಿಧಾನದ ಪೀಠಿಕೆಯನ್ನು ಎಲ್ಲಾ ತರಗತಿಗಳ ಗೋಡೆಗಳ ಮೇಲೆ ಸ್ಥಳೀಯ ಭಾಷೆಗಳಲ್ಲಿ ಬರೆಯುವಂತೆಯೂ ಶಿಫಾರಸು ಮಾಡಲಾಗಿದೆ. ಪಠ್ಯಪುಸ್ತಕಗಳಲ್ಲಿ ಭಾರತೀಯ ಜ್ಞಾನ ವ್ಯವಸ್ಥೆ, ವೇದಗಳು ಮತ್ತು ಆಯುರ್ವೇದವನ್ನು ಪರಿಚಯಿಸುವುದು ಸೇರಿದಂತೆ ಹಲವಾರು ಪ್ರಸ್ತಾಪಗಳನ್ನು ಸಮಿತಿ ಮುಂದಿಟ್ಟಿದೆ. ಶಾಲೆಗಳ ಸಮಾಜ ವಿಜ್ಞಾನ ಪಠ್ಯಕ್ರಮವನ್ನು ಪರಿಷ್ಕರಿಸಲು ಎನ್‌ಸಿಇಆರ್‌ಟಿ ಸಮಾಜ ವಿಜ್ಞಾನ ಸಮಿತಿಯನ್ನು ರಚಿಸಿದೆ(vistara Editorial).

ಇದೊಂದು ಕುತೂಹಲಕಾರಿ ಹಾಗೂ ಮಾದರಿ ಸಲಹೆ. ಭಾರತದ ಆಧುನಿಕ ಶಿಕ್ಷಣ, ನಮ್ಮ ಸಂಪ್ರದಾಯ, ಪರಂಪರೆಗಳಿಂದ ಬಹು ದೂರ ಸರಿದಿದೆ ಎಂಬ ಆರೋಪ ಇಂದು ನಿನ್ನೆಯದಲ್ಲ. ಹೊಸದಾಗಿ ತರಲಾದ ಶಿಕ್ಷಣ ನೀತಿಯೂ ಇದಕ್ಕೆ ಸಮರ್ಪಕ ಪರಿಹಾರ ಒದಗಿಸಲು ಸಾಧ್ಯವಾಗಿಲ್ಲ. ಶಿಕ್ಷಣ ನೀತಿಯು ವೃತ್ತಿಪರತೆ, ಆಧುನಿಕತೆಗೇ ಹೆಚ್ಚು ಒತ್ತು ನೀಡಿದಂತಿದೆ. ಆಧುನಿಕ ಕಾಲದಲ್ಲಿ ಇದು ಸಹಜವೇ ಆಗಿದೆ. ಹಾಗಿದ್ದರೆ ಭಾರತದ ಪರಂಪರೆ, ಸಂಪ್ರದಾಯ, ಕಾವ್ಯ, ತತ್ವಶಾಸ್ತ್ರ, ಮೌಲ್ಯಗಳು ಇವುಗಳನ್ನೆಲ್ಲ ನಮ್ಮ ಮಕ್ಕಳು ಕಲಿಯುವುದು ಯಾವಾಗ ಮತ್ತು ಹೇಗೆ? ಇದಕ್ಕೆ ನಾವು ಪಠ್ಯಕ್ರಮ ಮೊರೆ ಹೋಗಬೇಕಾಗುತ್ತದೆ. ಈ ನಿಟ್ಟಿನಲ್ಲಿ ಎನ್‌ಸಿಇಆರ್‌ಟಿಯ ಪಾತ್ರ ಮಹತ್ವದ್ದಾಗುತ್ತದೆ. ಈ ಪ್ರಸ್ತಾವನೆಗೆ ಎನ್‌ಸಿಇಆರ್‌ಟಿಯಿಂದ ಅಂತಿಮ ಒಪ್ಪಿಗೆ ಸಿಗಬೇಕಿದೆ. ಇತಿಹಾಸವನ್ನು ನಾಲ್ಕು ಅವಧಿಗಳಾಗಿ ವರ್ಗೀಕರಿಸಲು ಸಮಿತಿ ಶಿಫಾರಸು ನೀಡಿದೆ. ಅವು ಶಾಸ್ತ್ರೀಯ ಅವಧಿ, ಮಧ್ಯಕಾಲೀನ ಅವಧಿ, ಬ್ರಿಟಿಷ್‌ ಯುಗ ಮತ್ತು ಆಧುನಿಕ ಭಾರತ. ಇಲ್ಲಿಯವರೆಗೆ, ಭಾರತೀಯ ಇತಿಹಾಸದಲ್ಲಿ ಕೇವಲ ಮೂರು ವರ್ಗೀಕರಣಗಳಿವೆ. ಪ್ರಾಚೀನ, ಮಧ್ಯಕಾಲೀನ ಮತ್ತು ಆಧುನಿಕ ಭಾರತ ಎಂದು ವರ್ಗೀಕರಿಸಲಾಗಿತ್ತು. ಶಾಸ್ತ್ರೀಯ ಅವಧಿಯಲ್ಲಿ ಭಾರತೀಯ ಮಹಾಕಾವ್ಯಗಳನ್ನು ಕಲಿಸಲು ಶಿಫಾರಸು ಮಾಡಲಾಗಿದೆ. ವಿದ್ಯಾರ್ಥಿಗಳಿಗೆ ಶ್ರೀರಾಮ ಹಾಗೂ ಆತ ಪ್ರತಿಪಾದಿಸುವ ಮೌಲ್ಯಗಳ ಸಂಪೂರ್ಣ ತಿಳಿವಳಿಕೆ ದೊರೆಯಬೇಕು. ಹಾಗೆಯೇ, ಪಠ್ಯಪುಸ್ತಕಗಳಲ್ಲಿ ಎಲ್ಲ ರಾಜಮನೆತನಗಳ ಬಗ್ಗೆ ಕಲಿಸಬೇಕು. ಕೇವಲ ಒಂದೆರಡು ರಾಜಮನೆತನಗಳ ಬಗ್ಗೆ ಮಾತ್ರ ಸಲ್ಲದು ಎಂದು ಸಮಿತಿ ಹೇಳಿದೆ.

ಜೊತೆಗೆ ಪಠ್ಯಗಳಲ್ಲಿ ʼಇಂಡಿಯಾʼ ಬದಲಿಗೆ ʼಭಾರತʼ ಪದ ಬಳಕೆಗೆ ಕೂಡ ಇದೇ ಸಮಿತಿ ಶಿಫಾರಸು ಮಾಡಿತ್ತು. ಇಂಡಿಯಾ ಜೊತೆಗೆ ಅಥವಾ ಅದರ ಬದಲಿಗೆ ಭಾರತ ಎಂದು ಬಳಸುವುದೇನೂ ತಪ್ಪಲ್ಲ. ಬ್ರಿಟಿಷರು ಇಲ್ಲಿಗೆ ಬಂದು ದೇಶದ ಹೆಸರನ್ನು ಇಂಡಿಯಾ ಎಂದು ಬಳಸುವ ಮುನ್ನ ಇದನ್ನು ಭಾರತ ಎಂದೇ ಗ್ರಹಿಸಲಾಗುತ್ತಿತ್ತು. ಭಾರತ ಎನ್ನುವಾಗ ಭರತನೆಂಬ ಚಕ್ರವರ್ತಿಯ ಮಹನೀಯ ವ್ಯಕ್ತಿತ್ವವೂ ನಮ್ಮ ಕಣ್ಣ ಮುಂದೆ ಬಂದು ನಿಲ್ಲುತ್ತದೆ. ಭಾರತದ ಪರಂಪರೆಯ ಭವ್ಯತೆಯ ಒಂದು ನೋಟ ಸಿಗುತ್ತದೆ. ರಾಮಾಯಣ, ಮಹಾಭಾರತಗಳು ಕೇವಲ ಕತೆ ಮಾತ್ರವಲ್ಲವೇ? ಅದನ್ನು ಕಲಿಸುವುದರಿಂದ ಪ್ರಯೋಜನವೇನು ಎಂದು ಕೆಲವರು ಕೇಳಬಹುದು. ಆದರೆ ಮಹಾಭಾರತವು ಇತಿಹಾಸವೂ ಹೌದು ಎಂದು ಇಂಡಾಲಜಿ ತಜ್ಞರು ಹೇಳುತ್ತಾರೆ. ಮಹಾಭಾರತ ಕಾಲದ ಕುರುಹುಗಳು ಇಂದಿಗೂ ದೊರೆಯತ್ತವೆ. ಸುಮಾರು ಎರಡೂವರೆ ಸಾವಿರ ವರ್ಷಗಳ ಹಿಂದೆ ಇದ್ದ ಮಹಾಭಾರತ ಕಾಲದ ಸಂಸ್ಕೃತಿ, ನಮ್ಮ ಚಿಂತನೆ ಎಷ್ಟು ಸಮಗ್ರವಾಗಿ, ಮೌಲ್ಯಯುತವಾಗಿತ್ತು ಎಂದು ತಿಳಿಸುವಲ್ಲಿ ಸಹಕಾರಿಯಾಗುತ್ತದೆ. ಇನ್ನು ಮರ್ಯಾದಾ ಪುರುಷೋತ್ತಮನಾದ ಶ್ರೀರಾಮನ ಕಥೆಯಂತೂ ಅನೇಕ ಮೌಲ್ಯಗಳ ಗಣಿಯಾಗಿದೆ. ಇಂದು ಮಕ್ಕಳಿಗೆ ಅಜ್ಜ- ಅಜ್ಜಿ ಕಥೆ ಹೇಳುವ ರೂಢಿಯೇ ಬಿಟ್ಟುಹೋಗಿದೆ. ಸಾಂಪ್ರದಾಯಿಕ ಕಥೆ ಪುರಾಣ ಪುಸ್ತಕಗಳ ಓದು ಕೂಡ ದೂರವಾಗುತ್ತಿದೆ. ಇಂಥ ಹೊತ್ತಿನಲ್ಲಿ ಪಠ್ಯದಲ್ಲಿ ಇದನ್ನು ಅಳವಡಿಸುವುದು ಹೆಚ್ಚು ಪ್ರಯೋಜನಕಾರಿಯಾದುದು.

ಸಮಾಜ ವಿಜ್ಞಾನ, ಮೂಲ ವಿಜ್ಞಾನ ಹಾಗೂ ಭಾಷಾ ವಿಷಯಗಳ ಪಾಠಗಳು ಹೆಚ್ಚು ಹೆಚ್ಚು ಮೂಲೆಗುಂಪಾಗುತ್ತಿವೆ. ಇಂದು ಇವುಗಳನ್ನು ಓದಬೇಕಲ್ಲಾ ಎಂದು ಓದುವವರೇ ಹೆಚ್ಚು ಎಂಬಂತೆ ಕಾಣುತ್ತಿದೆ. ಇವುಗಳಿಗಿಂತಲೂ ವೃತ್ತಿ ವಿಜ್ಞಾನದ ವಿಷಯಗಳಿಗೇ ಹೆಚ್ಚು ಬೇಡಿಕೆಯಿದೆ. ಹೀಗಾಗಿ ಭಾಷೆ ಹಾಗೂ ಕಲೆಯ ಪಠ್ಯಕ್ರಮಗಳನ್ನು ಇನ್ನಷ್ಟು ಆಕರ್ಷಕ, ಸಮಗ್ರವಾಗಿಸುವ ಹೊಣೆ ಇದೆ. ಆ ನಿಟ್ಟಿನಲ್ಲಿ ಕೂಡ ಇದು ಪ್ರಯೋಜನಕಾರಿಯಾಗಬಹುದು.

ಈ ಸಂಪಾದಕೀಯವನ್ನೂ ಓದಿ: ವಿಸ್ತಾರ ಸಂಪಾದಕೀಯ: ಆಧುನಿಕ ತಂತ್ರಜ್ಞಾನ ನೆರವಿನಿಂದ ವಿದ್ಯುತ್ ಅವಘಡಗಳನ್ನು ಶೂನ್ಯಕ್ಕಿಳಿಸಿ

Exit mobile version