Site icon Vistara News

ವಿಸ್ತಾರ ಸಂಪಾದಕೀಯ: ಟೀಮ್ ಇಂಡಿಯಾದ ಸ್ಫೂರ್ತಿ ಹೆಚ್ಚಿಸಿದ ರೋಹಿತ್‌ ಶರ್ಮಾ ದಾಖಲೆ

Vistara Editorial: Rohit Sharma cricket record boosted inspiration of Team India

ಸಿಸಿ ವಿಶ್ವಕಪ್ 2023ರ ಪಂದ್ಯಾಟಗಳು ಆರಂಭವಾಗಿದ್ದು, ಅಫಘಾನಿಸ್ತಾನ ವಿರುದ್ಧದ ಪಂದ್ಯದ ವೇಳೆ ಭಾರತದ ಬ್ಯಾಟರ್​ ರೋಹಿತ್ ಶರ್ಮಾ (Rohit Sharma) ಹಲವು ದಾಖಲೆ ಸೃಷ್ಟಿಸಿದ್ದಾರೆ. ಅತಿ ಹೆಚ್ಚು ಅಂತಾರಾಷ್ಟ್ರೀಯ ಸಿಕ್ಸರ್​ಗಳು, ವಿಶ್ವಕಪ್‌ನಲ್ಲಿ ಭಾರತದ ಪರ ಅತಿ ವೇಗದ ಶತಕ, ವಿಶ್ವಕಪ್‌ನಲ್ಲಿ ಅತಿ ಹೆಚ್ಚು ಶತಕಗಳು, ವಿಶ್ವಕಪ್‌ನಲ್ಲಿ ಅತಿ ವೇಗವಾಗಿ 1000 ರನ್‌ ಪೂರೈಸಿದ ದಾಖಲೆಗಳನ್ನು ತಮ್ಮ ಹೆಸರಿಗೆ ಬರೆದುಕೊಂಡಿದ್ದಾರೆ. ವಿಶ್ವಕಪ್‌ನಲ್ಲಿ ಭಾರತದ ತಂಡವನ್ನು ಮುನ್ನಡೆಸುತ್ತಿರುವ ಕ್ಯಾಪ್ಟನ್‌ ರೋಹಿತ್‌ ಶರ್ಮಾ ಅವರು ಭಾರತ ಕಂಡ ಯಶಸ್ವಿ ಕ್ಯಾಪ್ಟನ್‌ ಅನಿಸುವ ಎಲ್ಲ ಅರ್ಹತೆಗಳನ್ನೂ ಪಡೆದಿದ್ದಾರೆ. ಜತೆಗೆ ಈ ಸಲದ ವಿಶ್ವಕಪ್‌ ತಮ್ಮದಾಗಿಸಿಕೊಳ್ಳುವ ಭರವಸೆಯನ್ನೂ ಭಾರತಕ್ಕೆ ನೀಡಿದ್ದಾರೆ.

ಎಲ್ಲಾ ಸ್ವರೂಪಗಳ ಕ್ರಿಕೆಟ್​ ಸೇರಿ ಅತಿ ಹೆಚ್ಚು ಅಂತಾರಾಷ್ಟ್ರೀಯ ಸಿಕ್ಸರ್​ಗಳನ್ನು ಬಾರಿಸಿದ ಹೆಗ್ಗಳಿಕೆಯನ್ನು ರೋಹಿತ್‌ ತಮ್ಮದಾಗಿಸಿಕೊಂಡಿದ್ದಾರೆ. ಈ ಹಿಂದೆ ವೆಸ್ಟ್ ಇಂಡೀಸ್​​ನ ಸ್ಫೋಟಕ ಬ್ಯಾಟರ್​ ಕ್ರಿಸ್ ಗೇಲ್ 553 ಸಿಕ್ಸರ್​ಗಳ (551 ಇನ್ನಿಂಗ್ಸ್) ದಾಖಲೆಯನ್ನು ಹೊಂದಿದ್ದರು. ರೋಹಿತ್​​ ಅಫಘಾನಿಸ್ತಾನ ವಿರುದ್ಧ ಮೂರನೇ ಸಿಕ್ಸರ್ ಬಾರಿಸುವ ಮೂಲಕ ಒಟ್ಟು 554 ಸಿಕ್ಸರ್​ಗಳೊಂದಿಗೆ ಅಗ್ರಸ್ಥಾನ ಪಡೆದರು. ರೋಹಿತ್ ಶರ್ಮಾ ಕೇವಲ 473 ಇನ್ನಿಂಗ್ಸ್​ಗಳಲ್ಲಿ ಈ ಸಾಧನೆ ಮಾಡಿ ಗೇಲ್​ ಅವರನ್ನು ಹಿಂದಿಕ್ಕಿದ್ದಾರೆ. ಏಕದಿನ ಪಂದ್ಯಗಳಲ್ಲಿ ಶಾಹಿದ್ ಅಫ್ರಿದಿ ಮತ್ತು ಗೇಲ್ ನಂತರ ರೋಹಿತ್ ಮೂರನೇ ಸ್ಥಾನದಲ್ಲಿದ್ದಾರೆ. ಆದರೆ ಟಿ20 ಪಂದ್ಯಗಳಲ್ಲಿ 140 ಇನಿಂಗ್ಸ್​​ಗಳಲ್ಲಿ 182 ಸಿಕ್ಸರ್​ಗಳನ್ನು ಬಾರಿಸಿ ರೋಹಿತ್ ಅಗ್ರಸ್ಥಾನದಲ್ಲಿದ್ದಾರೆ. ಟೆಸ್ಟ್ ಕ್ರಿಕೆಟ್‌ನಲ್ಲಿ 77 ಸಿಕ್ಸ್​ಗಳೊಂದಿಗೆ ರೋಹಿತ್ ಮೂರನೇ ಅತಿ ಹೆಚ್ಚು ಸಿಕ್ಸರ್ ಬಾರಿಸಿದ ಭಾರತೀಯರಾಗಿದ್ದು, ವೀರೇಂದ್ರ ಸೆಹ್ವಾಗ್ (91) ಮತ್ತು ಎಂಎಸ್ ಧೋನಿ ಅವರ (78) ನಂತರದ ಸ್ಥಾನದಲ್ಲಿದ್ದಾರೆ.

ವಿಶ್ವಕಪ್‌ನಲ್ಲಿ ಅತಿ ವೇಗವಾಗಿ 1000 ರನ್ ಪೂರೈಸಿದ ದಾಖಲೆಯನ್ನೂ ರೋಹಿತ್ ಶರ್ಮಾ ಮಾಡಿದ್ದಾರೆ. ಆಸ್ಟ್ರೇಲಿಯಾ ವಿರುದ್ಧ ಡಕ್ ಔಟ್ ಆದ ನಂತರ ಕೇವಲ 21 ರನ್​ಗಳ ಅಗತ್ಯವಿದ್ದ ರೋಹಿತ್, ಅಫಘಾನಿಸ್ತಾನ ವಿರುದ್ಧ 1,000 ರನ್ ಪೂರೈಸಿದರು. ಡೇವಿಡ್ ವಾರ್ನರ್ ಅವರೊಂದಿಗೆ 19 ಇನಿಂಗ್ಸ್​ಗಳಲ್ಲಿ ವೇಗವಾಗಿ ಈ ಸಾಧನೆ ಮಾಡಿದ ಬ್ಯಾಟರ್​ ಎಂಬ ಹೆಗ್ಗಳಿಕೆಗೆ ಪಾತ್ರರಾದರು. ಭಾರತ ತಂಡದ ದಿಗ್ಗಜ ಸಚಿನ್​ ತೆಂಡೂಲ್ಕರ್ ಅವರ ದಾಖಲೆಯೊಂದನ್ನೂ ಮುರಿದಿದ್ದಾರೆ ಶರ್ಮಾ. ಅಫಘಾನಿಸ್ತಾನ ವಿರುದ್ಧದ ಪಂದ್ಯದ ವೇಳೆ ಅವರು ಬಾರಿಸಿದ ಶತಕ ವಿಶ್ವಕಪ್​ನಲ್ಲಿ ಅವರ ಏಳನೇ ಶತಕವಾಗಿದ್ದು, ಈ ಮೂಲಕ ವಿಶ್ವಕಪ್​​ನಲ್ಲಿ ಅತಿ ಹೆಚ್ಚು ಶತಕ ಪಡೆದ ಆಟಗಾರ ಎಂಬ ಖ್ಯಾತಿಯನ್ನೂ ಪಡೆದುಕೊಂಡಿದ್ದಾರೆ. ಸಚಿನ್​ ಆರು ಶತಕ ಬಾರಿಸಿದ್ದರು. ರೋಹಿತ್ ಶರ್ಮಾ 2019ರ ಒಂದೇ ಆವೃತ್ತಿಯಲ್ಲಿ ಐದು ಶತಕ ಬಾರಿಸಿದ್ದರು. ಹಾಗೆಯೇ ವಿಶ್ವ ಕಪ್​ನಲ್ಲಿ ಭಾರತ ಪರ ಅತಿ ವೇಗದ ಶತಕ ಗಳಿಸಿದ ಹೆಗ್ಗಳಿಕೆಯನ್ನೂ ರೋಹಿತ್‌ ತಮ್ಮದಾಗಿಸಿಕೊಂಡಿದ್ದಾರೆ. ಕೇವಲ 63 ಎಸೆತಗಳಲ್ಲಿ ಶತಕ ಬಾರಿಸಿದ ಭಾರತೀಯ ಎಂಬ ಹೆಗ್ಗಳಿಕೆಗೆ ಪಾತ್ರರಾದರು. ಈ ಹಿಂದೆ ಕಪಿಲ್ ದೇವ್ 72 ಎಸೆತಗಳಲ್ಲಿ ಶತಕ ಬಾರಿಸಿದ್ದರು.

ರೋಹಿತ್‌ ಶರ್ಮಾ ಅವರ ದಾಖಲೆಗಳನ್ನು ನಾವು ತುಂಬು ಕಂಠದಿಂದ ಶ್ಲಾಘಿಸಬೇಕಿದೆ. ಕಪ್ತಾನನೊಬ್ಬ ಅದ್ಭುತ ಪ್ರತಿಭೆಯ ಆಟಗಾರನೂ ಆಗಿದ್ದಾಗ ತಂಡದ ಆಟಗಾರರೂ ಅದೇ ಮಟ್ಟದಲ್ಲಿ ಆಟವಾಡುವ ಹುಮ್ಮಸ್ಸನ್ನು ಹೊಂದಿರುತ್ತಾರೆ. ಈ ದೃಷ್ಟಿಯಿಂದ ರೋಹಿತ್‌ ಶರ್ಮಾ ಅವರನ್ನು ವಿಶ್ವಕಪ್‌ ತಂಡಕ್ಕೆ ಕ್ಯಾಪ್ಟನ್‌ ಆಗಿಸುವ ಮೂಲಕ ನಮ್ಮ ಆಯ್ಕೆ ತಂಡ ಉತ್ತಮ ಕಾರ್ಯವನ್ನೇ ಮಾಡಿದೆ. ರೋಹಿತ್‌ ಆಟ ನಮ್ಮ ಆಟಗಾರರಲ್ಲಿ ಇನ್ನಷ್ಟು ಹುಮ್ಮಸ್ಸು ತುಂಬಲಿ. ರೋಹಿತ್‌ ಕೂಡ ಇನ್ನಷ್ಟು ದಾಖಲೆಗಳನ್ನು ಸೃಷ್ಟಿಸಲಿ. ಕ್ರಿಕೆಟ್‌ ದಾಖಲೆಗಳು ನಮಗೆ ಸಂತೋಷ ಕೊಡುತ್ತವೆ. ಇದರಲ್ಲಿ ವೈಯಕ್ತಿಕ ದಾಖಲೆಗಳು, ತಂಡದ ದಾಖಲೆಗಳು ಎಂದು ಎರಡು ವಿಧ. ನಮ್ಮ ಆಟಗಾರರ ವೈಯಕ್ತಿಕ ದಾಖಲೆಗಳು ನಮ್ಮನ್ನು ಖುಷಿಪಡಿಸುತ್ತವೆ, ನಿಜ, ಆದರೆ ತಂಡ ಎಲ್ಲ ಪಂದ್ಯಗಳನ್ನು ಗೆದ್ದು ದಾಖಲೆ ನಿರ್ಮಿಸಿ ವಿಶ್ವಕಪ್‌ ಅನ್ನು ಗೆದ್ದರೆ ಇನ್ನಷ್ಟು ಸಂತೋಷವಾಗುತ್ತದೆ. ಇದಕ್ಕೆ ಮುಖ್ಯವಾಗಿ ತಂಡಸ್ಫೂರ್ತಿ ಬೇಕಾಗುತ್ತದೆ. ರೋಹಿತ್‌ ಅವರಲ್ಲಿ ವೈಯಕ್ತಿಕ ಪ್ರತಿಭೆಯ ಜತೆಗೆ ತಂಡವನ್ನು ಮುನ್ನಡೆಸುವ ಕೌಶಲ ಕೂಡ ಇದ್ದಂತಿದೆ.

ಈ ಸಂಪಾದಕೀಯವನ್ನೂ ಓದಿ: ವಿಸ್ತಾರ ಸಂಪಾದಕೀಯ: ಕ್ಷೇತ್ರಾಭಿವೃದ್ಧಿ ಅನುದಾನ ಹಂಚಿಕೆಯಲ್ಲಿ ಪಕ್ಷ ರಾಜಕೀಯ ಸರಿಯಲ್ಲ

ಭಾರತ ಅನೇಕ ದಂತಕಥೆ ಎನಿಸುವಂಥ ಕ್ಯಾಪ್ಟನ್‌ಗಳನ್ನು ಕಂಡಿದೆ. ದೇಶಕ್ಕೆ ಮೊದಲ ವಿಶ್ವಕಪ್‌ ಅನ್ನು ಗೆದ್ದು ತಂದು ಕೊಟ್ಟ ಕಪಿಲ್‌ ದೇವ್‌ ಹರಿಯಾಣದ ಪುಟ್ಟ ಹಳ್ಳಿಯೊಂದರಿಂದ ಬಂದ ಗ್ರಾಮೀಣ ಯುವಕ. ಅನೇಕ ಸಮಸ್ಯೆಗಳ ನಡುವೆಯೂ ತಂಡವನ್ನು ಮುನ್ನಡೆಸಿ ವಿಶ್ವಕಪ್‌ ಅನ್ನು ಮುಡಿಗೇರಿಸಿಕೊಂಡವರು. ಆಕ್ರಮಣಕಾರಿ ಆಟದ ಮೂಲಕ ವಿರಾಟ್‌ ಕೊಹ್ಲಿ ತಮ್ಮ ಛಾಪನ್ನು ಸ್ಥಾಪಿಸಿದ್ದಾರೆ. ಕ್ಯಾಪ್ಟನ್‌ ಕೂಲ್‌ ಎನಿಸಿಕೊಂಡಿದ್ದ ಎಂ.ಎಸ್ ಧೋನಿ, ತಮ್ಮ ತಂಡದ ಎಲ್ಲ ಆಟಗಾರರಿಂದ ಅತ್ಯುತ್ತಮ ಆಟವನ್ನು ಹೊರತೆಗೆಯಲು ಶ್ರಮಿಸಿ ಯಶಸ್ವಿಯಾದರು. ಎರಡನೇ ವಿಶ್ವಕಪ್‌ ಟಿ20 ವಿಶ್ವಕಪ್‌ ಕಿರೀಟವನ್ನು ದೇಶಕ್ಕೆ ತಂದರು. ಭಾರತ ತಂಡದ ಆತ್ಮಾಭಿಮಾನವನ್ನು ಮುಗಿಲಿನೆತ್ತರಕ್ಕೆ ಏರಿಸಿದ ʼರಾಜಕುಮಾರʼ ಸೌರವ್‌ ಗಂಗೂಲಿಯನ್ನೂ ಮರೆಯಲಾಗದು. ಇದಕ್ಕೂ ಮುನ್ನದ ಸಚಿನ್‌ ತೆಂಡುಲ್ಕರ್‌, ರಾಹುಲ್‌ ದ್ರಾವಿಡ್‌ ಮುಂತಾದವರ ಕೊಡುಗೆಯನ್ನೇ ನೆನೆಯಬೇಕು. ಇದು ಒಂದು ಪರಂಪರೆ. ಈ ಪರಂಪರೆಯನ್ನು ಮುನ್ನಡೆಸುವ ಕೌಶಲ್ಯ, ಪ್ರತಿಭೆ, ನಾಯಕತ್ವ ಗುಣ, ತಂಡಸ್ಫೂರ್ತಿಯನ್ನು ರೋಹಿತ್‌ ಶರ್ಮಾ ಹೊಂದಿದ್ದಾರೆ ಎಂಬುದನ್ನು ಕಾಣಬಹುದು. ಹಾಗಾಗಲಿ.

ಇನ್ನಷ್ಟು ಸಂಪಾದಕೀಯಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.

Exit mobile version