ಬೇಸಿಗೆ ಆರಂಭಕ್ಕೂ ಮುನ್ನವೇ ರಾಜಧಾನಿಯಲ್ಲಿ ಕುಡಿಯುವ ನೀರಿಗೆ ಹಾಹಾಕಾರ (Bengaluru Water Crisis) ಉಂಟಾಗಿದೆ. ಈ ಸಂದರ್ಭವನ್ನೇ ಬಂಡವಾಳ ಮಾಡಿಕೊಂಡ ಕೆಲವರು ಟ್ಯಾಂಕರ್ ನೀರಿನ ದರ ಹೆಚ್ಚಳ ಮಾಡಿರುವುದರಿಂದ ಜನ ಸಾಮಾನ್ಯರು ಪರದಾಡುವಂತಾಗಿದೆ. ನಗರದಲ್ಲಿ ಕೆಲವೆಡೆ 6000 ಲೀ. ಟ್ಯಾಂಕರ್ ನೀರನ್ನು 2500 ರೂ.ವರೆಗೆ ಕೊಟ್ಟು ಖರೀದಿಸುವ ಅನಿವಾರ್ಯತೆ ಸೃಷ್ಟಿಯಾಗಿದೆ. ಇದಕ್ಕೆ ಅಸಮಾಧಾನ ಹೊರಹಾಕಿರುವ ವಿಪಕ್ಷ ನಾಯಕ ಆರ್. ಅಶೋಕ್ ಅವರು, ಈ ವಾಟರ್ ಮಾಫಿಯಾಗೆ ರಾಜ್ಯ ಸರ್ಕಾರ ಕಡಿವಾಣ ಹಾಕಬೇಕು, ಜತೆಗೆ ಸಮರ್ಪಕ ನೀರು ಪೂರೈಸುವ ಮೂಲಕ ನೀರಿನ ಗ್ಯಾರಂಟಿ ನೀಡುವಂತೆ ಒತ್ತಾಯಿಸಿದ್ದಾರೆ
ಇನ್ನೂ ಈ ವರ್ಷದ ಬೇಸಿಗೆ ಆರಂಭಕ್ಕೆ ಮುನ್ನವೇ ಬೆಂಗಳೂರು ನಗರದಲ್ಲಿ ಕುಡಿಯುವ ನೀರಿಗೆ ಹಾಹಾಕಾರ ಶುರುವಾಗಿದೆ. ಬರ ಪರಿಸ್ಥಿತಿಯಿಂದ ಬೆಂಗಳೂರು ನಗರದಲ್ಲಿ ಉಂಟಾಗಬಹುದಾದ ನೀರಿನ ಸಮಸ್ಯೆ ಬಗ್ಗೆ ಮೊದಲೇ ಅಂದಾಜಿಸಿ ಹೆಚ್ಚುವರಿ ಕೊಳವೆ ಬಾವಿಗಳನ್ನು ಕೊರೆಸಲು, ಹಳೇ ಕೊಳವೆ ಬಾವಿಗಳ ಮರುಪೂರಣ ಮಾಡಲು, ನೀರಿಗಾಗಿ ಪರ್ಯಾಯ ವ್ಯವಸ್ಥೆ ಹುಡುಕಲು ಕ್ರಮ ಕೈಗೊಂಡಿದ್ದರೆ ಇವತ್ತು ಇಂತಹ ಪರಿಸ್ಥಿತಿ ಬರುತ್ತಿರಲಿಲ್ಲ. ಬ್ರ್ಯಾಂಡ್ ಬೆಂಗಳೂರು ಕಟ್ಟುತ್ತೇವೆ ಎಂದು ಬಾಯಿ ಮಾತಿಗೆ ಘೋಷಣೆ ಮಾಡಿದರೆ ಸಾಲದು. ಸಿಎಂ ಸಿದ್ದರಾಮಯ್ಯ ಹಾಗೂ ಬೆಂಗಳೂರು ಅಭಿವೃದ್ಧಿ ಸಚಿವರಾದ ಡಿಸಿಎಂ ಡಿ.ಕೆ.ಶಿವಕುಮಾರ್ ಅವರು ಈಗಲಾದರೂ ಎಚ್ಚೆತ್ತುಕೊಂಡು ಅಧಿಕಾರಿಗಳ ಸಭೆ ಕರೆದು ನೀರಿನ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಲು ಮುಂದಾಗಬೇಕು ಎಂದು ಅಶೋಕ್ ಆಗ್ರಹಿಸಿದ್ದಾರೆ.
ಬೆಂಗಳೂರಿಗೆ ಕಾವೇರಿ ನೀರು ಪೂರೈಕೆಯಲ್ಲಿ ಯಾವುದೇ ವ್ಯತ್ಯಯವಾಗಿಲ್ಲ ಎಂದು ಜಲಮಂಡಳಿ ಹೇಳುತ್ತಿದೆ. ಆದರೆ, ಇತ್ತೀಚೆಗೆ ನೀರಿನ ಪೂರೈಕೆ ಸಾಕಷ್ಟು ಕಡಿಮೆಯಾಗಿದೆ ಎಂದು ನಗರವಾಸಿಗಳು ಆರೋಪಿಸಿದ್ದಾರೆ. ಇದರಿಂದಲೇ ಖಾಸಗಿ ಟ್ಯಾಂಕರ್‌ಗಳ ಮಾಫಿಯಾ ಶುರುವಾಗಿದೆ. ಬೆಂಗಳೂರಿನ ಆರ್.ಆರ್.ನಗರದಲ್ಲಿ 6000 ಲೀ. ಟ್ಯಾಂಕರ್ 2500 ರೂ., ಕೆ.ಆರ್.ಪುರದಲ್ಲಿ 1500 ರೂ., ನಾರಾಯಣಪುರದಲ್ಲಿ 1500 ರೂ., ಹಾಗೂ ವರ್ತೂರಿನಲ್ಲಿ 4000 ಲೀ.ಟ್ಯಾಂಕರ್ 800 ರೂ. ಇದೆ. ಹೀಗೆ ಬೇಕಾಬಿಟ್ಟಿ ದರ ಹೆಚ್ಚಳ ಮಾಡುವುದಕ್ಕೆ ರಾಜ್ಯ ಸರ್ಕಾರ ಕಡಿವಾಣ ಹಾಕಿ, ಖಾಸಗಿ ಟ್ಯಾಂಕರ್‌ಗಳಿಗೆ ಏಕರೂಪ ದರ ನಿಗದಿಪಡಿಸಬೇಕು ಎಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ.
ಇತ್ತೀಚೆಗೆ, ಬೆಂಗಳೂರಿನ ಒಳಭಾಗಕ್ಕೇ ಹೆಚ್ಚಿನ ಕಾವೇರಿ ನೀರು ಬೇಕಾಗುವುದರಿಂದ ಹೊರಭಾಗಗಳಿಗೆ ಕಾವೇರಿ ನೀರು ಪೂರೈಸಲು ಸಾಧ್ಯವಿಲ್ಲ ಎಂದು ಜಲಮಂಡಳಿ ಹೇಳಿದೆ. ಕೆಆರ್‌ಎಸ್‍ನಲ್ಲಿ ಸಂಗ್ರಹವಾಗುವ ನೀರಿನಲ್ಲಿ ಬೆಂಗಳೂರು ನಗರ ಒಂದಕ್ಕೆ ಪ್ರತಿ ತಿಂಗಳು 1.6 ಟಿಎಂಸಿ ನೀರು ಬೇಕು. ಮೈಸೂರು, ಮಂಡ್ಯ, ರಾಮನಗರ, ಚಾಮರಾಜನಗರಗಳಿಗೆ ಕಾವೇರಿ ನೀರೇ ಬೇಕು. ಪರಿಸ್ಥಿತಿ ಗಮನಿಸಿದರೆ ನೀರಿನ ಕೊರತೆ ಕಾಡುವ ಎಲ್ಲಾ ಲಕ್ಷಣಗಳೂ ಎದ್ದು ಕಾಣುತ್ತಿವೆ. 2010ರಲ್ಲಿ ಮಳೆ ಕೊರತೆಯುಂಟಾಗಿ ಕೆಆರ್‌ಎಸ್ ನೀರಿನ ಪ್ರಮಾಣ ಕುಸಿದಿದ್ದಾಗ ಬೆಂಗಳೂರಿನಲ್ಲಿ ಜಲಮಂಡಳಿ ವಾರದಲ್ಲಿ ಎರಡು ಬಾರಿ ಮಾತ್ರ ನೀರು ಪೂರೈಸಿತ್ತು. ಈಗ ಮತ್ತೆ ಅದೇ ರೀತಿಯ ಪರಿಸ್ಥಿತಿ ಎದುರಾಗಲಿದೆ ಎಂಬ ಭೀತಿ ಎದುರಾಗಿದೆ.
ಬೆಂಗಳೂರಿನಲ್ಲಿ ಒಂದು ಕಾಲದಲ್ಲಿ 1000ಕ್ಕೂ ಹೆಚ್ಚು ಕೆರೆಗಳಿದ್ದವು. ಇಂದು ಆ ಕೆರೆಗಳಲ್ಲಿ 200ಕ್ಕಿಂತ ಕಡಿಮೆ ಉಳಿದಿವೆ. ಉಳಿದಿರುವವೂ ಒಳಚರಂಡಿ ನೀರಿನ ಸಂಗ್ರಾಹಾಗಾರಗಳಾಗಿವೆ. ಇಲ್ಲಿ ಸಂಗ್ರಹವಾಗುವ ಕೊಳಚೆ ನೀರು ಅಂತರ್ಜಲವನ್ನೂ ಕಲುಷಿತಗೊಳಿಸುತ್ತದೆ. ಅದು ಕೊಳವೆ ಬಾವಿಗೆ ಸೇರುತ್ತದೆ. ಬೆಂಗಳೂರಿನಲ್ಲಿರುವ ಶೇಕಡಾ 52ರಷ್ಟು ಬೋರ್‌ವೆಲ್ ನೀರು ಮತ್ತು ಶೇಕಡಾ 59ರಷ್ಟು ಟ್ಯಾಪ್ ನೀರು ಕುಡಿಯಲು ಯೋಗ್ಯವಾಗಿಲ್ಲ. ಇವು ಕ್ರಮವಾಗಿ ಶೇಕಡಾ 8.4 ಮತ್ತು ಶೇಕಡಾ 19ರಷ್ಟು ಹಾನಿಕರ ಇ.ಕೋಲಿ ಬ್ಯಾಕ್ಟೀರಿಯಾಗಳನ್ನು ಹೊಂದಿವೆ ಎಂದು ಒಂದು ವರದಿ ಹೇಳುತ್ತದೆ.
ಇದನ್ನೂ ಓದಿ: MLC Election: ಬೆಂಗಳೂರು ಶಿಕ್ಷಕರ ಕ್ಷೇತ್ರ; ಕಾಂಗ್ರೆಸ್‌ನ ಪುಟ್ಟಣ್ಣ ಗೆಲುವು; ಮೈತ್ರಿ ಅಭ್ಯರ್ಥಿಗೆ ಸೋಲು
ಇಂಥ ಹೊತ್ತಿನಲ್ಲಿ ಜವಾಬ್ದಾರಿಯುತ ಸರ್ಕಾರ ಏನು ಮಾಡಬೇಕು? ಕುಡಿಯುವ ನೀರಿನ ಸ್ಥಿತಿಗತಿಯ ಕಡೆಗೆ ಆದ್ಯತೆ ನೀಡಬೇಕು. ಆದರೆ ನಮ್ಮ ರಾಜ್ಯ ಸರ್ಕಾರಕ್ಕೆ ಸದಾ ಗ್ಯಾರಂಟಿಗಳದೇ ಚಿಂತೆ. ಗ್ಯಾರಂಟಿಗಳ ಜೊತೆಗೆ ಮೂಲಸೌಕರ್ಯಗಳನ್ನೂ ಬಲಿಷ್ಠಗೊಳಿಸಬೇಕಾದುದು ಅದರ ಜವಾಬ್ದಾರಿ. ಕಾವೇರಿ ನದಿಯ ನೀರಿನ ಕುರಿತ ವಿವಾದದಲ್ಲಿ ತಮಿಳುನಾಡಿನ ಪರ ಪ್ರಾಧಿಕಾರ ಈ ಬಾರಿ ತೀರ್ಪು ನೀಡಿದಾಗ, ಸರ್ಕಾರ ದಿಟ್ಟವಾಗಿ ಪ್ರತಿಭಟಿಸಲಿಲ್ಲ. ಬದಲಾಗಿ ಮಣಿದು ನೀರನ್ನು ಬಿಟ್ಟಿತು. ಇದು ಕೂಡ ಕೊರತೆಗೆ ಕಾರಣವಾಗಿದೆ. ತಮಿಳುನಾಡಿನಲ್ಲಿ ಮಿತ್ರಪಕ್ಷ ಅಧಿಕಾರದಲ್ಲಿದೆ ಎಂಬುದು ಅವರ ಓಲೈಕೆಗೂ, ನಮ್ಮ ಜನರ ಕಡೆಗಣನೆಗೂ ಕಾರಣವಾಗಬಾರದು. ಇದೀಗ ಬೆಂಗಳೂರು ನೀರಿಗಾಗಿ ಚಡಪಡಿಸುತ್ತಿದೆ. ಟ್ಯಾಂಕರ್ ನೀರಿಗೆ ಏಕರೂಪಿ ದರ ನಿಗದಿಪಡಿಸುವುದು, ಕುಡಿಯುವ ನೀರಿನ ಕೊರತೆ ನೀಗಿಸುವ ಇತರ ಸುಸ್ಥಿರ ಕ್ರಮಗಳನ್ನು ಕೈಗೊಳ್ಳುವುದು ಈಗ ಸರ್ಕಾರದಿಂದ ಆಗಬೇಕಿದೆ.
ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ