Site icon Vistara News

ವಿಸ್ತಾರ ಸಂಪಾದಕೀಯ: ಹಂಪಿ ದೇಗುಲದ ಕಂಬ ವಿರೂಪಗೊಳಿಸಿದವರಿಗೆ ಶಿಕ್ಷೆಯಾಗಲಿ

Vistara Editorial, Those who defaced the pillar of Hampi temple should be punished

ಮುಖ್ಯಮಂತ್ರಿ ಸಿದ್ದರಾಮಯ್ಯ (CM Siddaramaiah) ಅವರ ಕಾರ್ಯಕ್ರಮದ ಹಿನ್ನೆಲೆಯಲ್ಲಿ ವಿಶ್ವಪ್ರಸಿದ್ಧ ಹಂಪಿ ವಿರೂಪಾಕ್ಷ ದೇವಾಲಯದ (Hampi Virupaksha Temple) ಕಂಬಗಳಿಗೆ ಮೊಳೆ ಹೊಡೆದ ಪ್ರಕರಣಕ್ಕೆ ಸಂಬಂಧಿಸಿದಂತೆ ಕರ್ನಾಟಕ ಸರ್ಕಾರದ ದತ್ತಿ ಇಲಾಖೆಗೆ (Endowment Department) ಭಾರತೀಯ ಪುರಾತತ್ವ ಸರ್ವೇಕ್ಷಣಾ ಇಲಾಖೆ (ASI) ನೋಟಿಸ್‌ ನೀಡಿದೆ. ಹಂಪಿ ವಿರೂಪಾಕ್ಷೇಶ್ವರ ದೇವಾಲಯದ ಕಂಬಗಳಿಗೆ ಮೊಳೆ ಹೊಡೆದ ಫೋಟೊಗಳು ವೈರಲ್‌ ಆದ ಬೆನ್ನಲ್ಲೇ ಎಎಸ್‌ಐ ನೋಟಿಸ್ ಜಾರಿಗೊಳಿಸಿದೆ. ಕಳೆದ ವಾರ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಕನ್ನಡ ಜ್ಯೋತಿ ಕಾರ್ಯಕ್ರಮದ ಹಿನ್ನೆಲೆಯಲ್ಲಿ ಹಂಪಿ ವಿರೂಪಾಕ್ಷೇಶ್ವರ ದೇವಾಲಯಕ್ಕೆ ಭೇಟಿ ನೀಡಿದ್ದರು. ಇದೇ ವೇಳೆ ಧ್ವಜ ಕಟ್ಟಲು ವಿರೂಪಾಕ್ಷ ದೇವಾಲಯದ ಕಂಬಕ್ಕೆ ದತ್ತಿ ಇಲಾಖೆಯಿಂದಲೇ ಡ್ರಿಲ್‌ನಿಂದ ಕೊರೆದು, ಕಂಬಕ್ಕೆ ಮೊಳೆ ಹೊಡೆಸಲಾಗಿತ್ತು. ಆದರೆ, ಹಂಪಿಯು ಯುನೆಸ್ಕೋ ವಿಶ್ವ ಪಾರಂಪರಿಕ ತಾಣಗಳ ಪಟ್ಟಿಗೆ ಸೇರಿರುವ ಕಾರಣ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ ಪುರಾತತ್ವ ಇಲಾಖೆಯು ದತ್ತಿ ಇಲಾಖೆಗೆ ನೋಟಿಸ್‌ ಜಾರಿಗೊಳಿಸಿದೆ. ಹೆರಿಟೇಜ್‌ ತಾಣಗಳನ್ನು ನಾವು ಹೇಗೆ ನೋಡಿಕೊಳ್ಳುತ್ತಿದ್ದೇವೆ ಎಂಬುದನ್ನು ಗಮನಿಸಲು ಈ ನಿದರ್ಶನ ಸಾಕು.

ದೇವಾಲಯದ ಉತ್ತರ ದಿಕ್ಕಿನಲ್ಲಿ ಗೇಟ್‌ ಕೂರಿಸಲು, ಭಕ್ತರು ಸಾಲಿನಲ್ಲಿ ಹೋಗಲು ತಂತಿ ಬೇಲಿ ನಿರ್ಮಿಸಬೇಕು ಎಂದು ದತ್ತಿ ಇಲಾಖೆಯಿಂದ ಮೊಳೆ ಹೊಡೆಯಲಾಗಿದೆಯಂತೆ. ಮೊಳೆ ಹೊಡೆಯುವ ಮುನ್ನ ದತ್ತಿ ಇಲಾಖೆಯು ಪುರಾತತ್ವ ಇಲಾಖೆಯ ಅನುಮತಿ ಕೂಡ ಪಡೆದಿಲ್ಲ, ಮಾಹಿತಿಯನ್ನೂ ನೀಡಿಲ್ಲ. ಹಾಗಾಗಿ, ಹಂಪಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ದತ್ತಿ ಇಲಾಖೆಯ ಅಧಿಕಾರಿಯನ್ನು ಕರೆಸಿ ನೋಟಿಸ್‌ ಜಾರಿಗೊಳಿಸಲಾಗಿದೆ. ಹಂಪಿಯು ಯುನೆಸ್ಕೋ ಪಾರಂಪರಿಕ ತಾಣದ ಮಾನ್ಯತೆ ಪಡೆದಿದ್ದು, ಇದಕ್ಕೆ ಹಾನಿ ಮಾಡಿರುವುದನ್ನು ಪುರಾತತ್ವ ಇಲಾಖೆ ಗಂಭೀರವಾಗಿ ಪರಿಗಣಿಸಿದೆ. ನಮ್ಮಲ್ಲಿ ಹೆರಿಟೇಜ್‌ ತಾಣಗಳ ಬಗ್ಗೆ ಗೌರವವಿಲ್ಲ. ಸರಿಯಾದ ಪೌರಪ್ರಜ್ಞೆಯೂ ಇಲ್ಲದ ನಮ್ಮ ದೇಶದಲ್ಲಿ ಐತಿಹಾಸಿಕ ಸ್ಮಾರಕಗಳು, ಮಾಸ್ತಿಗಲ್ಲು- ವೀರಗಲ್ಲುಗಳನ್ನು ನಡೆಯುವ ಹಾಸುಗಲ್ಲುಗಳಾಗಿ ಬಳಸಿದ್ದನ್ನೂ ನಾವು ಕಾಣಬಹುದು. ಇಂಥ ನಾಡಿನಲ್ಲಿ ಹೆರಿಟೇಜ್‌ ತಾಣಗಳ ರಕ್ಷಣೆಯ ಬಗ್ಗೆ ಎಷ್ಟು ಎಚ್ಚರ ವಹಿಸಿದರೂ ಸಾಲದು.

1986ರಲ್ಲಿಯೇ ಹಂಪಿಯು ಯುನೆಸ್ಕೋ ವಿಶ್ವ ಪಾರಂಪರಿಕ ತಾಣಗಳ ಪಟ್ಟಿಗೆ ಸೇರಿದೆ. ಕರ್ನಾಟಕದ ಕೆಲವೇ ಯುನೆಸ್ಕೋ ಮಾನ್ಯತೆ ಪಡೆದ ಹೆರಿಟೇಜ್‌ ತಾಣಗಳನ್ನು ಹಂಪಿ ಒಂದು. ರಾಜ್ಯದ ಹೆಮ್ಮೆಯ ಐತಿಹಾಸಿಕ ತಾಣ ಹಂಪಿಯ ಪ್ರವಾಸೋದ್ಯಮಕ್ಕೆ ಕೇಂದ್ರ ಸರ್ಕಾರದ ʼಅತ್ಯುತ್ತಮ ಪ್ರವಾಸೋದ್ಯಮ ಗ್ರಾಮ-2023ʼ ರಾಷ್ಟ್ರೀಯ ಪ್ರಶಸ್ತಿಯೂ ಈ ವರ್ಷ ಸಂದಿತ್ತು. ಇಲ್ಲಿನ ವಿಜಯನಗರ ಸಾಮ್ರಾಜ್ಯದ ಕಾಲದ ವಾಸ್ತುಶಿಲ್ಪಗಳು, ದೇವಾಲಯಗಳು, ಕಲ್ಲಿನ ಕಟ್ಟಡಗಳು ಇಡೀ ಜಗತ್ತಿನ ಗಮನ ಸೆಳೆದಿದ್ದು, ಜಗತ್ತಿನಾದ್ಯಂತದಿಂದ ಪ್ರವಾಸಿಗರು ಇಲ್ಲಿಗೆ ಭೇಟಿ ನೀಡುತ್ತಿದ್ದಾರೆ. ಐಹೊಳೆ ಪಟ್ಟದಕಲ್ಲು, ಹೊಯ್ಸಳ ದೇವಾಲಯಗಳು, ಪಶ್ಚಿಮ ಘಟ್ಟ, ದಕ್ಖನಿ ಸುಲ್ತಾನರ ರಚನೆಗಳು, ಶ್ರೀರಂಗಪಟ್ಟಣದ ತಾಣಗಳು, ಹಿರೇಬೆಣಕಲ್‌ ಸಮಾಧಿಗಳು ಹೀಗೆ ಯುನೆಸ್ಕೊ ವಿಶ್ವ ಮಾನ್ಯತೆ ಪಡೆದಿವೆ. ಕರ್ನಾಟಕದಲ್ಲಿ ಇಂಥ ನೂರಾರು ತಾಣಗಳನ್ನು ನಾವು ಗುರುತಿಸಬಹುದಾದರೂ, ಇವುಗಳನ್ನು ಯುನೆಸ್ಕೊವೇ ಗುರುತಿಸಿರುವುದರಿಂದ ಜಾಗತಿಕ ಮಟ್ಟದಲ್ಲಿ ಇವುಗಳಿಗೆ ಒಂದು ಮಾನ್ಯತೆ ದೊರೆತಿದೆ. ಯುನೆಸ್ಕೋ ಏನೂ ಇವುಗಳು ನಿರ್ವಹಣೆಗೆ ಹಣ ನೀಡುವುದಿಲ್ಲ. ಆದರೆ ಯುನೆಸ್ಕೋ ಪಟ್ಟಿಯಲ್ಲಿ ಇವುಗಳು ಸ್ಥಾನ ಪಡೆದರೆ ಅದು ವಿಶ್ವದ ಕುತೂಹಲಿ ಪ್ರವಾಸಿಗರ ಪ್ರಯಾಣದ ಪಟ್ಟಿಯಲ್ಲಿ ಒಂದು ಜಾಗ ಪಡೆಯುತ್ತದೆ. ಜಗತ್ತನ್ನು ಸುತ್ತಾಡುವ ಪ್ರವಾಸಪ್ರೇಮಿಗಳಿಗೆ ಇವು ಮೊದಲ ಆದ್ಯತೆಯಾಗುತ್ತವೆ. ಹೀಗೆ ಇಲ್ಲಿಗೆ ಜನ ಹರಿದುಬಂದಂತೆ, ಇಲ್ಲಿನ ಆದಾಯ ಮತ್ತು ನಿರ್ವಹಣೆಗೆ ಸಂಪನ್ಮೂಲ ಹೆಚ್ಚುತ್ತದೆ. ಆದರೆ ನಾವು ಈ ತಾಣಗಳ ಹೆರಿಟೇಜ್‌ ಮೌಲ್ಯವನ್ನು ಉಳಿಸಿಕೊಳ್ಳಬೇಕಿರುವುದು ಮುಖ್ಯ.

“ಪ್ರಾಚೀನ ಸ್ಮಾರಕಗಳು ಮತ್ತು ಪುರಾತತ್ವ ಸ್ಥಳಗಳು ಮತ್ತು ಅವಶೇಷಗಳು (ತಿದ್ದುಪಡಿ ಮತ್ತು ಮೌಲ್ಯೀಕರಣ) ಕಾಯಿದೆ- 2010′ ಪ್ರಕಾರ ಐತಿಹಾಸಿಕ ಕಟ್ಟಡಗಳು ಅಥವಾ ಸ್ಥಳಗಳಲ್ಲಿ ನಿರ್ಮಾಣ ಚಟುವಟಿಕೆಗಳನ್ನು ಸಂಪೂರ್ಣವಾಗಿ ನಿಷೇಧಿಸಲಾಗಿದೆ. ರಾಷ್ಟ್ರೀಯ ಸ್ಮಾರಕಗಳಿಂದ 200 ಮೀಟರ್ ತ್ರಿಜ್ಯದ ಪ್ರದೇಶದಲ್ಲಿ ಯಾವುದೇ ಕಟ್ಟಡ ನಿರ್ಮಾಣ ಕಾಮಗಾರಿಗಳನ್ನು ನಿಷೇಧಿಸಲಾಗಿದೆ. ಸ್ಮಾರಕಗಳಿಗೆ ಹಾನಿ ಎಸಗುವ ಯಾವುದೇ ಚಟುವಟಿಕೆಗೆ ಮೂರು ತಿಂಗಳಿಂದ ಎರಡು ವರ್ಷದವರೆಗೆ ಜೈಲು ಶಿಕ್ಷೆ, 5000 ರೂ.ಗಳಿಂದ 1 ಲಕ್ಷದವರೆಗೆ ದಂಡ ವಿಧಿಸಬಹುದಾಗಿದೆ. ಯಾವುದೇ ಅನಿವಾರ್ಯ ಕಾಮಗಾರಿ, ರಚನೆ ಇತ್ಯಾದಿಗಳಿದ್ದರೆ ರಾಷ್ಟ್ರೀಯ ಸ್ಮಾರಕ ಪ್ರಾಧಿಕಾರದಿಂದ ಅನುಮತಿ ಪಡೆಯುವುದು ಅತ್ಯಗತ್ಯ. ಪ್ರಸ್ತುತ ಪ್ರಕರಣದಲ್ಲಿ ಯಾವುದೇ ಅನುಮತಿ ಪಡೆಯಲಾಗಿಲ್ಲ. ಸರ್ಕಾರಿ ಇಲಾಖೆಗೂ ಈ ನಿಬಂಧನೆಯಿಂದ ವಿನಾಯಿತಿ ಇಲ್ಲ. ಹೀಗಾಗಿ ಇದು ಶಿಕ್ಷಾರ್ಹ ಅಪರಾಧ. ಇದನ್ನು ಪುರಾತತ್ವ ಇಲಾಖೆ ಗಂಭೀರವಾಗಿ ಪರಿಗಣಿಸಬೇಕಿದೆ.

ಈ ಸಂಪಾದಕೀಯವನ್ನೂ ಓದಿ: ವಿಸ್ತಾರ ಸಂಪಾದಕೀಯ: ಕ್ರಿಕೆಟ್ ವರ್ಲ್ಡ್‌ ಕಪ್‌ನಲ್ಲಿ ಭಾರತದ ಅಜೇಯ ಓಟ; ಟ್ರೋಫಿ ಗೆಲ್ಲಲು ಎರಡೇ ಹೆಜ್ಜೆ ಬಾಕಿ

Exit mobile version