ಪ್ರಧಾನಮಂತ್ರಿ ನರೇಂದ್ರ ಮೋದಿ (Narendra Modi) ಅವರು ದೇಶದ ಅತ್ಯುನ್ನತ ನಾಗರಿಕ ಪ್ರಶಸ್ತಿಯಾದ ಭಾರತ ರತ್ನವನ್ನು ಮೂವರು ಸಾಧಕರಿಗೆ ಘೋಷಿಸಿದ್ದಾರೆ. ಮಾಜಿ ಪ್ರಧಾನಿಗಳಾದ ಪಿ.ವಿ.ನರಸಿಂಹ ರಾವ್ (PV Narasimha Rao), ಚೌಧರಿ ಚರಣ್ ಸಿಂಗ್ (Charan singh chaudhary) ಹಾಗೂ ಹಸಿರು ಕ್ರಾಂತಿ ಪಿತಾಮಹ ಎಂ.ಎಸ್.ಸ್ವಾಮಿನಾಥನ್ (MS Swaminathan) ಅವರಿಗೆ ಭಾರತರತ್ನ ಘೋಷಿಸಲಾಗಿದೆ. ಒಂದು ವಾರದ ಹಿಂದೆ ಮಾಜಿ ಉಪಪ್ರಧಾನಿ ಲಾಲ್‌ಕೃಷ್ಣ ಅಡ್ವಾಣಿ ಅವರಿಗೆ ಭಾರತ ರತ್ನ ಪುರಸ್ಕಾರವನ್ನು ಘೋಷಿಸಲಾಗಿತ್ತು. ಅದಕ್ಕೂ ಕೆಲವು ದಿನಗಳ ಮೊದಲು ಬಿಹಾರದ ಹಿಂದುಳಿದ ಸಮುದಾಯಗಳ ಮಹಾನಾಯಕ ಎಂದೇ ಗುರುತಿಸಲ್ಪಟ್ಟಿದ್ದ ಕರ್ಪೂರಿ ಠಾಕೂರ್ ಅವರಿಗೆ ಭಾರತ ರತ್ನವನ್ನು ಮರಣೋತ್ತರವಾಗಿ ನೀಡಲಾಗಿತ್ತು. ಈ ಮೂಲಕ ಈ ವರ್ಷ ಒಟ್ಟು ಐದು ಮಂದಿಗೆ ಭಾರತ ರತ್ನ ನೀಡಿದಂತಾಗಿದೆ. ಕಳೆದ ನಾಲ್ಕು ವರ್ಷಗಳಿಂದ ಯಾರಿಗೂ ಈ ಅತ್ಯುನ್ನತ ಪ್ರಶಸ್ತಿಯನ್ನು ನೀಡಿರಲಿಲ್ಲ. 2019ರಲ್ಲಿ ಪ್ರಣಬ್ ಮುಖರ್ಜಿ ಅವರಿಗೆ ನೀಡಿದ್ದೇ ಕೊನೆ. ನಾಲ್ಕು ವರ್ಷಗಳ ಬರ ನೀಗುವಂತೆ ಐವರು ಅರ್ಹರಿಗೆ ಈ ಅತ್ಯುನ್ನತ ಪುರಸ್ಕಾರ ಸಂದಿದೆ(Vistara Editorial).
ಪಿ.ವಿ.ನರಸಿಂಹ ರಾವ್ ಅವರು ವಿಶಿಷ್ಟ ಕಾಲಘಟ್ಟವೊಂದರಲ್ಲಿ ದೇಶವನ್ನು ಪ್ರಧಾನಿಯಾಗಿ ಮುನ್ನಡೆಸಿದವರು. ಆಂಧ್ರಪ್ರದೇಶದಲ್ಲಿ ಜನಿಸಿ, 15 ಭಾಷೆಗಳನ್ನು ಕಲಿತು ನಿರರ್ಗಳವಾಗಿ ಮಾತನಾಡುತ್ತಿದ್ದ ಅವರು ಮಹಾ ಮುತ್ಸದ್ಧಿ ಹಾಗೂ ವಿದ್ವಾಂಸ. ಸಂಕಷ್ಟದಲ್ಲಿದ್ದ ಭಾರತದ ಆರ್ಥಿಕತೆಯನ್ನು ಉದ್ಧರಿಸುವ ಪಣತೊಟ್ಟ ಪಿವಿಎನ್ ಅವರು ಆಮದು ನೀತಿಯನ್ನು ಬದಲಾಯಿಸಿದರು. ಖಾಸಗೀಕರಣಕ್ಕೆ ನಾಂದಿ ಹಾಡಿದರು. ಭಾರತದಲ್ಲಿ ವಿದೇಶಿ ಹೂಡಿಕೆಗೆ ಉತ್ತೇಜನ ನೀಡಿದರು. ಕಾರ್ಪೊರೇಟ್ ತೆರಿಗೆಯನ್ನು ಹೆಚ್ಚಿಸಿದರು. ಆರ್ಥಿಕ ಉದಾರೀಕರಣ ನೀತಿ ಜಾರಿಗೆ ತಂದರು. ಸರ್ಕಾರದ ಸಂಸ್ಥೆಗಳಲ್ಲೂ ಖಾಸಗಿಕರಣ ಅಳವಡಿಸಿಕೊಂಡರು. ಇದರಿಂದಾಗಿ ವಿದೇಶಗಳು, ಉದ್ಯಮಿಗಳ ಹಣವು ಹೂಡಿಕೆಯಾಗಿ ಬದಲಾಯಿತು. ಡಾ.ಮನಮೋಹನ್ ಸಿಂಗ್ ಅವರಂತಹ ಆರ್ಥಿಕ ಚಾಣಕ್ಯನನ್ನು ಸಂಪುಟಕ್ಕೆ ಸೇರಿಸಿಕೊಂಡು ಅವರಿಗೆ ಸ್ವಾತಂತ್ರ್ಯ ಕೊಟ್ಟರು. ಇದೆಲ್ಲದರ ಪರಿಣಾಮ ಭಾರತದ ಆರ್ಥಿಕತೆಯು ಹೊಸ ರೂಪ ಪಡೆಯಿತು. ಆರ್ಥಿಕ ಸುಧಾರಣೆ ಜತೆಗೆ ರಾವ್ ದೇಶದ ರಕ್ಷಣಾ ವ್ಯವಸ್ಥೆಯನ್ನು ಬಲಪಡಿಸಿ ಮೊದಲ ಅಣ್ವಸ್ತ್ರ ಪರೀಕ್ಷೆಗೂ ಭಾರತವನ್ನು ಸಜ್ಜುಗೊಳಿಸಿದರು.
ಭಾರತದ ಐದನೇ ಪ್ರಧಾನ ಮಂತ್ರಿಯಾಗಿದ್ದ ಚೌಧರಿ ಚರಣ್ ಸಿಂಗ್ ಅವರನ್ನು ʼರೈತ ಮಹಾನಾಯಕʼ ಎಂದೇ ಕರೆಯಲಾಗುತ್ತದೆ. ತಮ್ಮ ಜೀವನದುದ್ದಕ್ಕೂ ಅವರು ರೈತರು ಮತ್ತು ಅವರ ಕುಟುಂಬಗಳ ಉನ್ನತಿಗಾಗಿ ಶ್ರಮಿಸಿದರು. ಭಾರತದ ಸ್ವಾತಂತ್ರ್ಯಕ್ಕಾಗಿ ಹೋರಾಡಿದ ಅವರು ಹಲವಾರು ಬಾರಿ ಜೈಲಿಗೂ ಹೋಗಿದ್ದರು. ಉತ್ತರಪ್ರದೇಶದಲ್ಲಿ ಎರಡು ಬಾರಿ ಮುಖ್ಯಮಂತ್ರಿಯಾಗಿ, ದೇಶದ ಐದನೇ ಪ್ರಧಾನಿಯಾಗಿ ಅವರು ಸೇವೆ ಸಲ್ಲಿಸಿದರು. ಕಾಂಗ್ರೆಸ್‌ನ ದುರಾಡಳಿತ, ಇಂದಿರಾ ಗಾಂಧಿಯವರ ಸರ್ವಾಧಿಕಾರದಿಂದ ತತ್ತರಿಸಿದ್ದ 80ರದ ದಶಕದಲ್ಲಿ ಚೌಧರಿಯವರು ಕಾಂಗ್ರೆಸ್ಸೇತರ ನಾಯಕನಾಗಿ ಅಲ್ಪ ಅವಧಿಗೇ ಆದರೂ ದೇಶವನ್ನು ಮುನ್ನಡೆಸಿದರು. ಅವರು ಭೂಸುಧಾರಣೆಗಳ ಮುಖ್ಯ ರೂವಾರಿಯಾಗಿದ್ದರು. 1939ರಲ್ಲಿ ಡಿಪಾರ್ಟ್‌ಮೆಂಟ್ ರಿಡೆಂಪ್ಶನ್ ಬಿಲ್‌ನ ರಚನೆ ಮತ್ತು ಅಂತಿಮಗೊಳಿಸುವಿಕೆಯಲ್ಲಿ ಪ್ರಮುಖ ಪಾತ್ರ ವಹಿಸಿದರು. 1960ರಲ್ಲಿ ಭೂ ಹಿಡುವಳಿ ಕಾಯಿದೆಯನ್ನು ತರುವಲ್ಲಿ ಪ್ರಮುಖ ಪಾತ್ರ ವಹಿಸಿದರು. ಇದು ಭೂ ಹಿಡುವಳಿಗಳ ಮೇಲಿನ ಸೀಲಿಂಗ್ ಅನ್ನು ಕಡಿಮೆ ಮಾಡಿ ಏಕರೂಪವಾಗಿಸಿತು. ಹೀಗೆ ಜೀವನದುದ್ದಕ್ಕೂ ಇವರು ರೈತರ ಹಿತಾಸಕ್ತಿಗಳ ಪರವಾಗಿದ್ದರು.
ಭಾರತದ ಹಸಿರು ಕ್ರಾಂತಿಯ ಪಿತಾಮಹ ಎಂದೇ ಗುರುತಿಸಿಕೊಂಡಿದ್ದ ಖ್ಯಾತ ವಿಜ್ಞಾನಿ ಡಾ.ಎಂ.ಎಸ್.ಸ್ವಾಮಿನಾಥನ್ ಅವರು ಹೆಚ್ಚು ಇಳುವರಿ ನೀಡುವ ಭತ್ತದ ತಳಿಗಳನ್ನು ಅಭಿವೃದ್ಧಿಪಡಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದರು. ಇದು ಭಾರತದ ಕಡಿಮೆ ಆದಾಯದ ರೈತರು ಹೆಚ್ಚಿನ ಇಳುವರಿಯನ್ನು ಉತ್ಪಾದಿಸಲು ಸಹಾಯ ಮಾಡಿತು. ಅವರ ಆವಿಷ್ಕಾರ ಆ ದಿನಗಳ ಭಾರತದ ಜನಸಂಖ್ಯೆಯ ಬೆಳವಣಿಗೆಗೆ ತಕ್ಕಂತೆ ಸಾಕಷ್ಟು ಆಹಾರ ಉತ್ಪಾದನೆಯಲ್ಲಿ ಪ್ರಮುಖ ಪಾತ್ರ ವಹಿಸಿತ್ತು. ಸ್ವಾತಂತ್ರ್ಯದ ನಂತರದ ಮೊದಲ ಎರಡು ದಶಕಗಳಲ್ಲಿ, ಅಪಾರವಾದ ಸವಾಲುಗಳು ನಮ್ಮೆದುರಿಗಿದ್ದವು, ಅವುಗಳಲ್ಲಿ ಆಹಾರದ ಕೊರತೆಯೂ ಒಂದಾಗಿತ್ತು. 1960ರ ದಶಕದ ಆರಂಭದಲ್ಲಿ ಭಾರತವು ಕ್ಷಾಮದ ಕರಿಛಾಯೆಯೊಂದಿಗೆ ಹೋರಾಡುತ್ತಿತ್ತು. ಇದೇ ಸಮಯದಲ್ಲೇ ಪ್ರೊ. ಸ್ವಾಮಿನಾಥನ್ ಅವರ ದೂರದೃಷ್ಟಿಯು ಕೃಷಿ ಸಮೃದ್ಧಿಯ ಹೊಸ ಯುಗಕ್ಕೆ ನಾಂದಿ ಹಾಡಿತು. ಗೋಧಿ ತಳಿಯ ಅಭಿವೃದ್ಧಿಯಂತಹ ಕ್ಷೇತ್ರಗಳಲ್ಲಿ ಸ್ವಾಮಿನಾಥನ್ ಅವರ ಮುಂಚೂಣಿ ಕೆಲಸವು ಗೋಧಿ ಉತ್ಪಾದನೆಯಲ್ಲಿಯೂ ಗಮನಾರ್ಹ ಹೆಚ್ಚಳಕ್ಕೆ ಕಾರಣವಾಯಿತು.
ಇಂದು ಭಾರತ ರತ್ನ ಪಡೆದಿರುವ ಮೂವರೂ ಅದಕ್ಕೆ ಅತ್ಯಂತ ಅರ್ಹರಾದವರೇ. ಹಾಗೆಯೇ ಈ ಹಿಂದೆ ಪಡೆದ ಎಲ್‌ಕೆ ಅಡ್ವಾಣಿ ಹಾಗೂ ಕರ್ಪೂರಿ ಠಾಕೂರ್ ಅವರು ಕೂಡ. ಈ ಐವರಲ್ಲಿ ಅಡ್ವಾಣಿ ಮಾತ್ರ ಇಂದು ನಮ್ಮೊಂದಿಗೆ ಇದ್ದಾರೆ. ಈ ಹಿರಿಯರೆಲ್ಲರ ಮುನ್ನೋಟ, ದೂರದೃಷ್ಟಿ, ಆಡಳಿತ, ಪರಿಶ್ರಮ, ಮುತ್ಸದ್ಧಿತನಗಳು ನಮ್ಮ ದೇಶವನ್ನು ಅಭಿವೃದ್ಧಿಯ ಪಥದಲ್ಲಿ ಇಷ್ಟು ಮುಂದೆ ತಂದು ನಿಲ್ಲಿಸಿವೆ ಎಂಬುದನ್ನು ಮರೆಯುವಂತಿಲ್ಲ. ಭಾರತ ರತ್ನ ನೀಡುವ ಮೂಲಕ ಇವರ ನೆನಪನ್ನು ಇನ್ನಷ್ಟು ಚಿರಸ್ಥಾಯಿಯಾಗಿಸಿದಂತಾಗಿದೆ.
ಈ ಸುದ್ದಿಯನ್ನೂ ಓದಿ: ವಿಸ್ತಾರ ಸಂಪಾದಕೀಯ: ನಿಜವಾದ ಅರ್ಥದಲ್ಲಿ ʼಜನಸ್ಪಂದನʼವಾಗಲಿ