ಕೋಲಾರ ಜಿಲ್ಲೆ ಮಾಲೂರು ತಾಲೂಕಿನ ಯಲವಳ್ಳಿ ಗ್ರಾಮದಲ್ಲಿರುವ ಮೊರಾರ್ಜಿ ದೇಸಾಯಿ ವಸತಿ ಶಾಲೆಯಲ್ಲಿ (Morarji Desai Residential School) ಸ್ವಚ್ಛತೆಯ ನೆಪದಲ್ಲಿ ಮಕ್ಕಳನ್ನೇ ಮಲದ ಗುಂಡಿಗೆ ಇಳಿಸಿದ (Toilet Pit cleaning) ಘಟನೆಗೆ ರಾಜ್ಯಾದ್ಯಂತ ಆಕ್ರೋಶ ವ್ಯಕ್ತವಾಗಿದೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ವಸತಿ ಶಾಲೆಯ ಪ್ರಾಂಶುಪಾಲರಾದ ಭಾರತಮ್ಮ ಮತ್ತು ಚಿತ್ರ ಕಲೆ ಶಿಕ್ಷಕ ಮುನಿಯಪ್ಪ ಅವರನ್ನು ಬಂಧಿಸಲಾಗಿದೆ. ವಾರ್ಡನ್ ಮಂಜುನಾಥ್ ಹಾಗೂ ಸಹ ಶಿಕ್ಷಕ ಅಭಿಷೇಕ್ ವಿರುದ್ಧವೂ ಎಫ್ಐಆರ್ ದಾಖಲಾಗಿದ್ದು, ಅವರು ತಲೆ ಮರೆಸಿಕೊಂಡಿದ್ದಾರೆ. ಈ ಕೃತ್ಯದಲ್ಲಿ ಭಾಗಿಯಾದ ಶಿಕ್ಷಕರ ಅಮಾನತಿಗೆ ಸೂಚಿಸಲಾಗಿದೆ. ಘಟನೆ ಬಗ್ಗೆ ತನಿಖೆ ನಡೆಸಿ ವರದಿ ಸಲ್ಲಿಸುವಂತೆ ಜಿಲ್ಲಾ ಪಂಚಾಯತ್ ಸಿಇಒಗೆ ಸೂಚನೆ ನೀಡಿರುವುದಾಗಿ ಜಿಲ್ಲಾಧಿಕಾರಿ ಅಕ್ರಂ ಪಾಷ ಹೇಳಿದ್ದಾರೆ. ಈ ಪ್ರಕರಣದಲ್ಲಿ ಅಮಾನತು ಎಂಬುದು ತೀರಾ ಚಿಕ್ಕ ಶಿಕ್ಷೆಯಾಯಿತು, ತಪ್ಪಿತಸ್ಥರನ್ನು ಸೇವೆಯಿಂದಲೇ ವಜಾ ಮಾಡಬೇಕು. ಯಾಕೆಂದರೆ, ಈ ಪ್ರಕರಣದಲ್ಲಿ ಮಕ್ಕಳ ಹಕ್ಕುಗಳ ಸಂಪೂರ್ಣ ಉಲ್ಲಂಘನೆಯಾಗಿದೆ(Vistara Editorial).
ಈ ವಸತಿ ಶಾಲೆಯಲ್ಲಿ ಮಕ್ಕಳಿಂದ ಮಲದ ಗುಂಡಿಗೆ ಇಳಿಸಿ ಕ್ಲೀನ್ ಮಾಡಿದ್ದಲ್ಲದೇ, ಕಳೆದ ಹಲವು ದಿನಗಳಿಂದ ಮಕ್ಕಳಿಗೆ ಇದೇ ರೀತಿಯಲ್ಲಿ ರೀತಿಯಲ್ಲಿ ಕಿರುಕುಳ ನೀಡಲಾಗುತ್ತಿತ್ತು ಎಂಬ ಆರೋಪ ಕೂಡ ಕೇಳಿ ಬಂದಿದೆ. ಮಕ್ಕಳಿಗೆ ಹೊಡೆಯುವುದು, ಮಕ್ಕಳನ್ನು ರಾತ್ರಿ ಹೊತ್ತಿನಲ್ಲಿ ಬ್ಯಾಗ್ ಹೊರಿಸಿ ಕೂರಿಸಿ ಹಿಂಸೆ ಕೊಡಲಾಗುತ್ತಿದೆ. ವಸತಿ ಶಾಲೆಯಲ್ಲಿ ಸುಮಾರು 250 ಜನ ಮಕ್ಕಳಿದ್ದು, ಅವರಿಗೆ ಶಿಕ್ಷೆ ನೀಡುವುದನ್ನು ತಪ್ಪಿಸಬೇಕು ಎಂದು ಪೋಷಕರು ಆಗ್ರಹಿಸಿರುವುದು ಸೂಕ್ತವಾಗಿದೆ.
ಸಾಮಾನ್ಯವಾಗಿ ವಸತಿ ಶಾಲೆಗೆ ಮಕ್ಕಳನ್ನು ಕಳುಹಿಸುವುದು ಅತ್ಯುತ್ತಮ ಶಿಕ್ಷಣ ಪಡೆದು, ಉತ್ತಮ ನಾಗರಿಕರಾಗಲಿ ಎಂಬ ಕಾರಣಕ್ಕೆ. ಆದರೆ, ಮಲ ಹೊರುವುದು, ಮಲದ ಗುಂಡಿಗೆ ಮನುಷ್ಯರನ್ನು ಇಳಿಸುವುದು ಸೇರಿದಂತೆ ಇತರ ಸಾಮಾಜಿಕ ಅನಿಷ್ಠಗಳ ಬಗ್ಗೆ ಪಾಠ ಮಾಡಬೇಕಾದ ಶಿಕ್ಷಕರೆ, ಮಕ್ಕಳನ್ನು ಅದೇ ಕೃತ್ಯಗಳಿಗೆ ಬಳಸಿಕೊಂಡಿರುವುದು ಅತ್ಯಂತ ಹೀನ ಕೃತ್ಯ ಮಾತ್ರವಲ್ಲದೇ, ಅಕ್ಷಮ್ಯ ಅಪರಾಧವೂ ಹೌದು.
ಸ್ವಾತ್ಯಂತ್ರ ಬಂದು 75 ವರ್ಷಗಳಾದರೂ, ಸಾಕಷ್ಟು ತಂತ್ರಜ್ಞಾನ ಲಭ್ಯವಿದ್ದಾಗಲೂ ಮಲ ಹೊರುವ ಪದ್ಧತಿ(Manual Scavenging), ಮಲ ಗುಂಡಿ ಸ್ವಚ್ಛಗೊಳಿಸಲು ಕಾರ್ಮಿಕರನ್ನು ಬಳಸುವ ಪದ್ಧತಿ ಇನ್ನೂ ಹೋಗಿಲ್ಲ. ಇದು ನಮ್ಮ ವ್ಯವಸ್ಥೆಯ ವೈಫಲ್ಯ. ಕಳೆದ 30 ವರ್ಷದಲ್ಲಿ ದೇಶಾದ್ಯಂತ 1,035 ಜನ ಒಳಚರಂಡಿ ಸ್ವಚ್ಛಗೊಳಿಸುವ ವೇಳೆ ಮೃತಪಟ್ಟಿದ್ದಾರೆ. 2018ರಿಂದ ದೇಶದಲ್ಲಿ ಸೆಪ್ಟಿಕ್ ಟ್ಯಾಂಕ್ ಮತ್ತು ಒಳಚರಂಡಿಗಳನ್ನು ಸ್ವಚ್ಛಗೊಳಿಸುವಾಗ 400ಕ್ಕೂ ಹೆಚ್ಚು ಜನರು ಸಾವನ್ನಪ್ಪಿದ್ದಾರೆ ಎನ್ನುವ ಕಳವಳಕಾರಿ ಅಂಶ ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಸಚಿವಾಲಯದ ವರದಿಯಲ್ಲೇ ಬಹಿರಂಗವಾಗಿದೆ. ಅಂದರೆ, ದೊಡ್ಡವರೇ ಈ ರೀತಿಯ ಕೆಲಸದಲ್ಲಿ ತೊಡಗಿ, ಮೃತಪಟ್ಟಿರುವಾಗ ಚಿಕ್ಕಮಕ್ಕಳನ್ನು ಮಲದ ಗುಂಡಿಗೆ ಇಳಿಸಿದ ಶಿಕ್ಷಕರೆಷ್ಟು ಹೃದಯಹೀನರು ಎಂಬುದು ಅರ್ಥವಾಗುತ್ತದೆ.
ಮ್ಯಾನ್ಯುವಲ್ ಸ್ಕಾವೆಂಜರ್ ಉದ್ಯೋಗ ನಿಷೇಧ ಮತ್ತು ಪುನರ್ವಸತಿ ಕಾಯ್ದೆ 2013ರ ಪ್ರಕಾರ ಮ್ಯಾನ್ಯುವಲ್ ಸ್ಕಾವೆಂಜಿಂಗ್ ಅನ್ನು ನಿಷೇಧಿಸಲಾಗಿದೆ. ಅಂದರೆ ಕೈಯಿಂದ ಮಲ ಸ್ವಚ್ಛಗೊಳಿಸುವ, ಹೊರುವ ಕೆಲಸವನ್ನು ಮಾಡುವಂತಿಲ್ಲ. ಈ ಕಾನೂನು ಪ್ರಕಾರ ಮಕ್ಕಳನ್ನು ಮಲದ ಗುಂಡಿ ಇಳಿಸಿರುವುದು ಸ್ಪಷ್ಟವಾಗಿ ಅಪರಾಧ ಎಂದು ಸಾಬೀತಾಗುತ್ತದೆ. ರಾಜ್ಯ ಸರ್ಕಾರವು ಈ ಪ್ರಕರಣವನ್ನು ಬಹಳ ಗಂಭೀರವಾಗಿ ಪರಿಗಣಿಸಬೇಕು. ರಾಜ್ಯದಲ್ಲಿರುವ ಎಲ್ಲ ವಸತಿ ಶಾಲೆಗಳನ್ನು ಸಮೀಕ್ಷೆ ಮಾಡಿ, ಎಲ್ಲೆಲ್ಲಿ ಈ ರೀತಿಯ ಕೃತ್ಯಗಳು ನಡೆಯುತ್ತಿರುವುದನ್ನು ಗುರುತಿಸಬೇಕು. ಅಗತ್ಯ ಬಿದ್ದರೆ ತಿಳಿವಳಿಕೆ ಹೇಳಬೇಕು; ಇಲ್ಲವೇ ಸಂಬಂಧಿಸಿದ ತಪ್ಪಿತಸ್ಥ ಶಿಕ್ಷಕರು, ಅಧಿಕಾರಿಗಳನ್ನು ಕೆಲಸದಿಂದ ಕಿತ್ತುಹಾಕಬೇಕು. ಜತೆಗೆ, ವಸತಿ ಶಾಲೆಗಳ ಈ ಮಲ ಗುಂಡಿಗಳನ್ನು ಸ್ವಚ್ಛಗೊಳಿಸಲು ಯಾಂತ್ರಿಕ ವ್ಯವಸ್ಥೆಯನ್ನು ಮಾಡಿಕೊಡಬೇಕು. ಇದಕ್ಕೆ ಸ್ಥಳೀಯ ಆಡಳಿತಗಳ ನೆರವು ಪಡೆದುಕೊಳ್ಳಬೇಕು.
ಯಲವಳ್ಳಿ ಗ್ರಾಮದಲ್ಲಿರುವ ಮೊರಾರ್ಜಿ ದೇಸಾಯಿ ವಸತಿ ಶಾಲೆಯ ಈ ಕೃತ್ಯ ಗೊತ್ತಾದ್ದರಿಂದ ಪ್ರಕರಣದ ಗಂಭೀರತೆ ಅರಿವಾಗುತ್ತಿದೆ. ಆದರೆ, ಇದೇ ರೀತಿಯ ಪ್ರಕರಗಳು ವಸತಿ ಶಾಲೆಗಳಲ್ಲಿ ನಡೆದಿರುವ ಸಾಧ್ಯತೆಗಳನ್ನು ತಳ್ಳಿ ಹಾಕುವಂತಿಲ್ಲ. ಹಾಗಾಗಿ, ಈ ವಿಷಯದಲ್ಲಿ ನಿರ್ಲಕ್ಷ್ಯ ತೋರದೇ ಸರ್ಕಾರವು, ಒಂದು ನಿರ್ದಿಷ್ಟ ಕಾರ್ಯಸೂಚಿಯೊಂದಿಗೆ ಮುಂದಡಿ ಇಡಬೇಕು.
ಈ ಸುದ್ದಿಯನ್ನೂ ಓದಿ: ವಿಸ್ತಾರ ಸಂಪಾದಕೀಯ: ಸೂಕ್ತ ಕಾಲದಲ್ಲಿ ಕೋವಿಡ್ ಮುನ್ನೆಚ್ಚರಿಕೆ ವಹಿಸಿ