Site icon Vistara News

ವಿಸ್ತಾರ ಸಂಪಾದಕೀಯ: ಆಧುನಿಕ ತಂತ್ರಜ್ಞಾನ ನೆರವಿನಿಂದ ವಿದ್ಯುತ್ ಅವಘಡಗಳನ್ನು ಶೂನ್ಯಕ್ಕಿಳಿಸಿ

editorial vistara, With help of technology electrical Accidents should be reduce to zero

ಬೆಂಗಳೂರು ನಗರದಲ್ಲಿ ಪುಟ್ಟ ಮಗುವನ್ನು ಕಂಕುಳಲ್ಲಿ ಎತ್ತಿಕೊಂಡು ರಸ್ತೆ ಬದಿ ನಡೆದುಕೊಂಡು ಹೋಗುತ್ತಿದ್ದ ತಾಯಿ ಸೌಂದರ್ಯ ಅವರು ವಿದ್ಯುತ್‌ ಆಘಾತಕ್ಕೆ ಒಳಗಾಗಿ ಮಗುವಿನೊಂದಿಗೆ ಸುಟ್ಟು ಕರಕಲಾಗಿದ್ದಾರೆ. ಫುಟಪಾತ್‌ ಮೇಲೆ ತುಂಡಾಗಿ ಬಿದ್ದಿದ್ದ ವಿದ್ಯುತ್ ತಂತಿಯನ್ನು ತುಳಿದಿದ್ದರಿಂದ ತಾಯಿ-ಮಗಳಿಬ್ಬರೂ ದಾರುಣವಾಗಿ ಸಾವು ಕಂಡರು. ಬೆಸ್ಕಾಮ್ ನಿರ್ಲಕ್ಷ್ಯಕ್ಕೆ ಬಾಳಿ ಬದುಕಬೇಕಾಗಿದ್ದ ಎರಡು ಜೀವಗಳು ಬಲಿಯಾದವು. ಈ ಘಟನೆಗೆ ಸಂಬಂಧಿಸಿದಂತೆ ಕಾಡುಗೋಡಿ ಪೊಲೀಸರು ನಿರ್ಲಕ್ಷ್ಯದ ಆರೋಪದಡಿ ಬೆಸ್ಕಾಂ ವೈಟ್‌ಫೀಲ್ಡ್‌ ವಿಭಾಗದ ಎಕ್ಸಿಕ್ಯೂಟಿವ್ ಎಂಜಿನಿಯರ್ ಶ್ರೀರಾಮ್‌, ಅಸಿಸ್ಟೆಂಟ್‌ ಎಂಜಿನಿಯರ್‌ ಚೇತನ್‌, ಎಇಇ ಸುಬ್ರಮಣ್ಯ, ಜೂನಿಯರ್‌ ಎಂಜಿನಿಯರ್‌ ರಾಜಣ್ಣ ಹಾಗೂ ಸ್ಟೇಷನ್‌ ಆಪರೇಟರ್ ಮಂಜು ಅವರನ್ನು ಬಂಧಿಸಿದ್ದರು. ಬಳಿಕ ಸ್ಟೇಷನ್‌ ಬೇಲ್‌ ಮೇಲೆ ಎಲ್ಲರನ್ನೂ ಬಿಡುಗಡೆ ಮಾಡಲಾಗಿದೆ. ನಗರದಲ್ಲಿ ವಿದ್ಯುತ್ ತಂತಿ ತುಳಿದು ಸಾಯುತ್ತಿರುವುದೇ ಇದೇ ಮೊದಲಲ್ಲ. ಆಗಾಗ ಇಂಥ ದುರ್ಘಟನೆಗಳು ನಡೆಯುತ್ತಲೇ ಇವೆ. ಆದರೂ, ಬೆಸ್ಕಾಮ್ ‌ಮಾತ್ರ ಎಚ್ಚೆತ್ತುಕೊಳ್ಳದೇ ಗಾಢ ನಿದ್ರೆಯಲ್ಲಿದೆ. ಬೆಸ್ಕಾಮ್ ನೌಕರರೇ ಈ ಅವಘಡಗಳಿಗೆ ಬಲಿಯಾಗುತ್ತಿದ್ದರೂ ಪರಿಹಾರ ವ್ಯವಸ್ಥೆಯನ್ನು ರೂಪಿಸದಿರುವುದು ದುರಂತವಷ್ಟೇ(Vistara Editorial).

ಹೆಚ್ಚೂಕಡಿಮೆ ಒಂದು ಕಾಲು ಕೋಟಿ ಜನಸಂಖ್ಯೆಯನ್ನು ಹೊಂದಿರುವ ಬೆಂಗಳೂರಿನಲ್ಲಿ ವಿದ್ಯುತ್ ಮೂಲ ಸೌಕರ್ಯವನ್ನು ವ್ಯವಸ್ಥಿತವಾಗಿಡುವುದು ಸವಾಲಿನ ಕೆಲಸವಾದರೂ, ಬೆಸ್ಕಾಮ್ ಈ ನಿಟ್ಟಿನಲ್ಲಿ ದಕ್ಷತೆಯನ್ನು ಪ್ರದರ್ಶಿಸಲೇಬೇಕು. ಆದರೆ, ಬೆಸ್ಕಾಮ್ ನೌಕರರ ನಿರ್ಲಕ್ಷ್ಯದಿಂದಾಗಿ ನಗರದಲ್ಲಿ ಆಗಾಗ ಜನರು ವಿದ್ಯುತ್ ಆಘಾತಕ್ಕೆ ಬಲಿಯಾಗುತ್ತಲೇ ಇದ್ದಾರೆ. ಈ ಅವಘಡಗಳು ಹೇಗೆ ಸೃಷ್ಟಿಯಾಗುತ್ತವೆ, ಮಾನವ ಹಸ್ತಕ್ಷೇಪದಿಂದಲೋ, ತಾಂತ್ರಿಕ ಕಾರಣಗಳಿಂದಲೋ ಎಂಬುದನ್ನು ಪತ್ತೆ ಹಚ್ಚಬೇಕಾಗಿರುವುದು ಬೆಸ್ಕಾಮ್‌ನ ಕರ್ತವ್ಯ. ಬಿಬಿಎಂಪಿ ಸೇರಿದಂತೆ ಸಂಬಂಧಿಸಿದ ಸಂಸ್ಥೆಗಳೊಂದಿಗೆ ಸಮನ್ವಯ ಸಾಧಿಸಿ, ಸಾಧ್ಯವಾದಷ್ಟು ವಿದ್ಯುತ್ ಅವಘಡಗಳು ನಡೆಯದಂತೆ ನೋಡಿಕೊಳ್ಳಬೇಕಾಗಿದೆ.

ಬೆಂಗಳೂರಲ್ಲಿ ವಿದ್ಯುತ್ ಅವಘಡಗಳು ಮಾತ್ರವಲ್ಲದೇ, ಎಲ್ಲೆಂದರಲ್ಲಿ ಹರಿದು ಬಿದ್ದಿರುವ, ನೇತಾಡುವ ಇಂಟರ್ನೆಟ್, ದೂರವಾಣಿ ವೈರ್‌ಗಳು, ಕೇಬಲ್‌ಗಳು ಕೂಡ ಅನೇಕ ದುರ್ಘಟನೆಗಳ ಕಾರಣವಾದ ಉದಾರಣೆಗಳಿವೆ ಇದೆ. 2021ರಲ್ಲಿ ಕರ್ನಾಟಕ ಹೈಕೋರ್ಟ್‌, ಈ ವಿಷಯಕ್ಕೆ ಸಂಬಂಧಿಸಿದಂತೆ ಸರ್ಕಾರ ಹಾಗೂ ಬಿಬಿಎಂಪಿಗೆ ಛೀಮಾರಿ ಹಾಕಿತ್ತು. ಎಲ್ಲೆಂದರಲ್ಲಿ ಹರಡಿಕೊಂಡಿರುವ ಕೇಬಲ್‌ಗಳನ್ನು ಸುವ್ಯವಸ್ಥಿವಾಗಿ ಇಡುವಂತೆ ಸೂಚಿಸಿತ್ತು. ಆ ಬಳಿಕ ಬಿಬಿಎಂಪಿ ಈ ವಿಷಯದಲ್ಲಿ ಯಾವ ಕ್ರಮವನ್ನು ಕೈಗೊಂಡಿತ್ತು ಎಂಬುದು ಈವರೆಗೂ ಯಾರಿಗೂ ಗೊತ್ತಿಲ್ಲ. ಮತ್ತೊಂದು ದುರಂತ ಸಂಭವಿಸಿದಾಗಲಷ್ಟೇ ನಮಗೆ ಎಲ್ಲೆಂದರಲ್ಲಿ ಹರಡಿರುವ ಕೇಬಲ್‌ಗಳು, ಹರಿದು ಬಿದ್ದ ವಿದ್ಯುತ್ ತಂತಿಗಳ ಅಪಾಯದ ಅಗಾಧತೆ ಅನುಭವಕ್ಕೆ ಬರುತ್ತದೆ. ಇದು ತಪ್ಪು. ಹೀಗಾಗಬಾರದು. ಜೀವ ಹೋಗುವುದಕ್ಕಿಂತ ಮುಂಚೆಯೇ ಅವ್ಯವಸ್ಥೆಗಳನ್ನು ಸುಧಾರಿಸುವತ್ತ ನಾವು ಹೆಜ್ಜೆ ಇಡಬೇಕು.

ಬೆಂಗಳೂರು ಅಷ್ಟೇ ಅಲ್ಲ, ರಾಜ್ಯದ ವಿವಿಧೆಡೆ ನಿತ್ಯ ಒಬ್ಬರಿಲ್ಲಬ್ಬರು ವಿದ್ಯುತ್ ಅವಘಡಕ್ಕೆ ಬಲಿಯಾಗುವುದನ್ನು ಕೇಳುತ್ತೇವೆ. ವಿಶೇಷವಾಗಿ ಕೃಷಿಕರು, ಕಾರ್ಮಿಕರು ಹೆಚ್ಚಿನ ಸಂಖ್ಯೆಯಲ್ಲಿ ವಿದ್ಯುತ್ ಆಘಾತಕ್ಕೆ ಬಲಿಯಾಗುತ್ತಿದ್ದಾರೆ. ಹರಿದು ರಸ್ತೆ ಮೇಲೆ ಬಿದ್ದ ವಿದ್ಯುತ್ ತಂತಿ ತುಳಿದು ಆನೆ, ಕುರಿಗಳು, ದನಗಳು ಸೇರಿ ಅನೇಕ ಪ್ರಾಣಿಗಳು ಮೃತಪಟ್ಟ ಉದಾಹರಣೆಗಳಿವೆ. ಎಲ್ಲಕ್ಕಿಂತ ಹೆಚ್ಚಾಗಿ ಕಾರ್ಯನಿರತ ಲೈನ್‌ಮನ್‌ಗಳೇ ವಿದ್ಯುತ್ ತಗುಲಿ ಮೃತಪಟ್ಟವರ ಸಂಖ್ಯೆಗೇನೂ ಕಡಿಮೆ ಇಲ್ಲ.

ನಾವೀಗ ಕೃತಕ ಬುದ್ಧಿಮತ್ತೆ(ಎಐ), ಇಂಟರ್ನೆಟ್ ಆಫ್ ಥಿಂಗ್ಸ್(ಐಒಟಿ) ಕಾಲ ಘಟ್ಟದಲ್ಲಿದ್ದೇವೆ. ಆಧುನಿಕ ತಂತ್ರಜ್ಞಾನವು ಎಷ್ಟೋ ಅಪಾಯಕಾರಿ ಕೆಲಸಗಳನ್ನು ಇಂದು ಅಪಾಯರಹಿತವಾಗಿಸಿವೆ. ಹೀಗಿದ್ದಾಗ್ಯೂ, ಬೆಸ್ಕಾಮ್ ಆಗಲಿ, ಇಂಧನ ಇಲಾಖೆಯಾಗಲಿ ಯಾಕೆ ಇನ್ನೂ ಈ ನಿಟ್ಟಿನಲ್ಲಿ ತಂತ್ರಜ್ಞಾನವನ್ನು ಸಮರ್ಥವಾಗಿ ಬಳಸಿಕೊಳ್ಳುತ್ತಿಲ್ಲ? ವಿದ್ಯುತ್ ರಿಪೇರಿಯಂಥ ಕೆಲಸದ ವೇಳೆ ಈಗಲೂ ಹಳೆಯ ಪದ್ಧತಿಗಳಿಗೆ ಜೋತು ಬಿದ್ದಿರುವುದೇಕೆ ಎಂಬುದಕ್ಕೆ ಸಂಬಂಧಿಸಿದ ಸಂಸ್ಥೆಗಳೇ ಉತ್ತರಿಸಬೇಕು. ಅತ್ಯಾಧುನಿಕ ತಂತ್ರಜ್ಞಾನವನ್ನು ಬಳಸಿಕೊಂಡು ಅವಘಡಗಳನ್ನು ಕಡಿಮೆ ಮಾಡುವ ಪ್ರಯತ್ನವನ್ನು ಮಾಡಬೇಕು. ಈ ನಿಟ್ಟಿನಲ್ಲಿ ಅಗತ್ಯ ಸಂಶೋಧನ ಕೈಗೊಳ್ಳಬೇಕು. ಇತರ ಮುಂದುವರಿದ ರಾಷ್ಟ್ರಗಳ ಮಾದರಿಗಳನ್ನೂ ಅನುಸರಿಸಬಹುದು. ಒಟ್ಟಿನಲ್ಲಿ ವಿದ್ಯುತ್ ಅವಘಡಗಳನ್ನು ಶೂನ್ಯಕ್ಕಿಳಿಸುವ ಪ್ರಯತ್ನವನ್ನು ಬೆಸ್ಕಾಮ್ ಸೇರಿ ಸಂಬಂಧಿಸಿದ ಇಲಾಖೆ ಮತ್ತು ಸಂಸ್ಥೆಗಳು ಮಾಡಲಿ.

ಈ ಸಂಪಾದಕೀಯವನ್ನೂ ಓದಿ: ವಿಸ್ತಾರ ಸಂಪಾದಕೀಯ: 4 ಟ್ರಿಲಿಯನ್ ಡಾಲರ್ ಜಿಡಿಪಿ; ಭಾರತದ ಅಭಿವೃದ್ಧಿಯ ದ್ಯೋತಕ

Exit mobile version