ಭಾರತಕ್ಕೆ ತಮ್ಮ ಸಾಧನೆಯಿಂದ ಹೆಮ್ಮೆ ತಂದಿರುವ ಇಬ್ಬರು ಕುಸ್ತಿಪಟುಗಳು (Wrestlers) ತೋರಿರುವ ವಿಶಿಷ್ಟವಾದ ಪ್ರತಿರೋಧ ಇದೀಗ ರಾಷ್ಟ್ರ ಮಟ್ಟದಲ್ಲಿ ಚರ್ಚೆಯಾಗುತ್ತಿದೆ. ರಿಯೋ ಒಲಿಂಪಿಕ್ಸ್ ಕಂಚಿನ ಪದಕ ವಿಜೇತೆ ಸಾಕ್ಷಿ ಮಲಿಕ್(sakshi malik) ಕ್ರೀಡೆಯನ್ನು ತೊರೆಯುವ ಬೆದರಿಕೆ ಒಡ್ಡಿದ್ದಾರೆ. ತಮ್ಮ ಕುಸ್ತಿ ಬೂಟುಗಳನ್ನು ಮೇಜಿನ ಮೇಲೆ ಇರಿಸಿ ಇದನ್ನು ಹೇಳಿದ್ದಾರೆ. ಇನ್ನೊಬ್ಬ ಒಲಿಂಪಿಕ್ ಪದಕ ವಿಜೇತ ಕುಸ್ತಿಪಟು ಬಜರಂಗ ಪುನಿಯಾ (bajrang punia) ತಮ್ಮ ಪದ್ಮಶ್ರೀ (Padma Award) ಪ್ರಶಸ್ತಿಯನ್ನು ವಾಪಸ್ ಮಾಡುವುದಾಗಿ ಘೋಷಣೆ ಮಾಡಿದ್ದಾರೆ. ಕುಸ್ತಿ ಒಕ್ಕೂಟದ ಅಧ್ಯಕ್ಷ ಸ್ಥಾನಕ್ಕೆ ಬ್ರಿಜ್‌ಭೂಷಣ್ ಅವರ ಬೆಂಬಲಿಗ ಸಂಜಯ್ ಸಿಂಗ್ ಆಯ್ಕೆಯಾದ ಬಳಿಕ ಕುಸ್ತಿಪಟುಗಳು ಅಸಮಾಧಾನಗೊಂಡಿದ್ದಾರೆ. ಮೇಲಿನ ಇಬ್ಬರು, ವಿನೇಶ್ ಫೋಗಟ್ ಸೇರಿದಂತೆ ದೇಶದ ಅಗ್ರ ಕುಸ್ತಿಪಟುಗಳು ಫಲಿತಾಂಶದ ಬಗ್ಗೆ ನಿರಾಶೆ ವ್ಯಕ್ತಪಡಿಸಿದ್ದಾರೆ(Vistara Editorial).
ಇದರೊಂದಿಗೆ ಭಾರತೀಯ ಕುಸ್ತಿ ಒಕ್ಕೂಟವು ಮತ್ತೆ ಒತ್ತಡಕ್ಕೆ ಸಿಲುಕಿದೆ. ಸಂಜಯ್ ಸಿಂಗ್ ಅವರು 12 ವರ್ಷಗಳ ಕಾಲ ಡಬ್ಲ್ಯುಎಫ್ಐ ಮುಖ್ಯಸ್ಥರಾಗಿದ್ದ ಬ್ರಿಜ್ ಭೂಷಣ್ ಶರಣ್ ಸಿಂಗ್ ಅವರ ದೀರ್ಘಕಾಲದ ಸಹಾಯಕರಾಗಿದ್ದಾರೆ. ಉತ್ತರ ಪ್ರದೇಶದಿಂದ ಆರು ಬಾರಿ ಸಂಸದರಾಗಿದ್ದ ಬ್ರಿಜ್ ಭೂಷಣ್ ಶರಣ್ ಸಿಂಗ್ ಅವರು ಮಹಿಳಾ ಕುಸ್ತಿಪಟುಗಳಿಗೆ ಲೈಂಗಿಕ ಕಿರುಕುಳ ನೀಡಿದ್ದಾರೆ ಎಂದು ಮಲಿಕ್ ಸೇರಿದಂತೆ ಉನ್ನತ ಕುಸ್ತಿಪಟುಗಳು ಆರೋಪಿಸಿ, ತಿಂಗಳ ಕಾಲ ದೆಹಲಿಯಲ್ಲಿ ಪ್ರತಿಭಟನೆ ನಡೆಸಿದ್ದರು. ಯಾವುದೇ ಬಗೆಯ ಸಂಧಾನಗಳಿಗೆ ಬಗ್ಗದೆ ನಡೆಸಿದ ಅವರ ಪ್ರತಿಭಟನೆಗೆ ಮಣಿದು ಕೊನೆಗೂ ಬ್ರಿಜ್‌ಭೂಷಣ್ ರಾಜೀನಾಮೆ ನೀಡಬೇಕಾಗಿ ಬಂದಿತ್ತು. ಆದರೆ ಈಗ ಸಂಜಯ್ ಸಿಂಗ್ ಫೆಡರೇಶನ್ ಮುಖ್ಯಸ್ಥರಾಗಿ ಆಯ್ಕೆಯಾಗಿರುವುದರಿಂದ, ಮಹಿಳಾ ಕುಸ್ತಿಪಟುಗಳು ಮತ್ತೆ ಕಿರುಕುಳ ಎದುರಿಸುತ್ತಲೇ ಇರಬೇಕಾಗಬಹುದು ಎಂಬ ವಿನೇಶ್ ಫೋಗಟ್ ಅವರ ಮಾತಿನಲ್ಲಿ ಸತ್ಯಾಂಶವಿದೆ.
2012ರಿಂದ 2022ರವರೆಗೆ 10 ವರ್ಷಗಳ ಅವಧಿಯಲ್ಲಿ ತಮ್ಮ ಮೇಲೆ ದೌರ್ಜನ್ಯ ನಡೆದಿದೆ ಎಂದು ಏಳು ಮಹಿಳಾ ಕುಸ್ತಿಪಟುಗಳು ಸಂಸದರ ವಿರುದ್ಧ ಲೈಂಗಿಕ ಕಿರುಕುಳ ಮತ್ತು ಕ್ರಿಮಿನಲ್ ಬೆದರಿಕೆಯ ಆರೋಪ ಹೊರಿಸಿದ್ದರು. ಪ್ರತ್ಯೇಕ ಪೊಲೀಸ್ ದೂರುಗಳನ್ನು ದಾಖಲಿಸಿದ್ದಾರೆ. ಆದರೆ ದಿಲ್ಲಿ ಪೊಲೀಸರು ಬ್ರಿಷ್ಭೂಷಣ್ ವಿರುದ್ಧ ಪ್ರಕರಣ ದಾಖಲಿಸಿಕೊಂಡಿರಲಿಲ್ಲ. ಹೀಗಾಗಿ ಕುಸ್ತಿಪಟುಗಳು ಸುಪ್ರೀಂ ಕೋರ್ಟ್ ಮೊರೆ ಹೋಗಿದ್ದರು. ಪೊಲೀಸರಿಗೆ ನೋಟಿಸ್ ಜಾರಿಗೊಳಿಸಿದ ಸುಪ್ರೀಮ್ ಕೋರ್ಟ್ ದೂರು ದಾಖಲಿಸಿಕೊಳ್ಳುವಂತೆ ಸೂಚನೆ ನೀಡಿತ್ತು. ನಂತರ ದೆಹಲಿ ಪೊಲೀಸರು ಪ್ರಕಣ ದಾಖಲಿಸಿಕೊಂಡು ತನಿಖೆ ಆರಂಭಿಸಿ, ಬ್ರಿಜ್‌ಭೂಷಣ್ ವಿರುದ್ಧ ಕೋರ್ಟಿಗೆ ಚಾರ್ಜ್‌ಶೀಟ್ ಸಲ್ಲಿಸಿದ್ದರು. ಬ್ರಿಜ್‌ಭೂಷಣ್ ಮೇಲಿರುವ ಆರೋಪಗಳು ಗಂಭೀರ ಸ್ವರೂಪದ್ದು, ತೀವ್ರ ವಿಚಾರಣೆಗೆ ಅರ್ಹವಾದುದು ಎಂದು ಕೋರ್ಟ್ ಅಭಿಪ್ರಾಯಪಟ್ಟಿದೆ. ಇಷ್ಟೆಲ್ಲ ಆದ ಮೇಲೂ, ಕಳಂಕಿತ ವ್ಯಕ್ತಿಯ ಸಹಾಯಕನೇ ಮತ್ತೆ ಕುಸ್ತಿ ಒಕ್ಕೂಟದ ಅಧ್ಯಕ್ಷನಾಗಿ ಕುಳಿತುಕೊಳ್ಳುವಂತಾದುದು, ಆರೋಪಿಯೇ ಮತ್ತೆ ಸೂತ್ರವನ್ನು ತನ್ನ ಕೈಯಲ್ಲಿ ಹಿಡಿಯುವಂತಾಗಿರುವುದು ವಿಪರ್ಯಾಸ.
ದೂರು ದಾಖಲಿಸಿಕೊಳ್ಳುವುದಕ್ಕೇ ನಿರಾಕರಿಸಿದ್ದ ಪೊಲೀಸರ ನಡೆಯ ಹಿನ್ನೆಲೆಯಲ್ಲಿ ಬ್ರಿಜ್‌ಭೂಷಣ್‌ನ ರಾಜಕೀಯ ಪ್ರಭಾವವೂ ಇದೆ. ಕುಸ್ತಿಪಟುಗಳು ಜನವರಿಯಲ್ಲಿ ಪ್ರತಿಭಟನೆ ಮಾಡಿದಾಗ ಕ್ರೀಡಾ ಸಚಿವಾಲಯದ ಮಧ್ಯಸ್ಥಿಕೆಯಲ್ಲಿ ತನಿಖೆಗೆ ಮೇಲುಸ್ತುವಾರಿ ಸಮಿತಿ ರಚನೆ ಮಾಡಿತ್ತು. ತನಿಖೆ ನಡೆಸಿದ ಸಮಿತಿ ವರದಿ ಸಲ್ಲಿಸಿದ್ದರೂ ವರದಿಯ ವಿವರಗಳು ಸಿಕ್ಕಿಲ್ಲ. ಈಗ ಆ ಸಮಿತಿಯನ್ನೂ ವಿಸರ್ಜಿಸಲಾಗಿದೆ. ಸಂಸದನಾಗಿರುವ ಬ್ರಿಜ್‌ಭೂಷಣ್ ಭಾರಿ ಪ್ರಭಾವಿಯೂ ಆಗಿದ್ದು, ಇನ್ನೂ ಅವರ ಹಿಡಿತದಲ್ಲಿ ಕುಸ್ತಿ ಫೆಡರೇಶನ್ ಇದೆ. ಕಳಂಕಿತರು ನಿರಪರಾಧಿಗಳು ಎಂದು ಸಾಬೀತಾಗುವವರೆಗೆ ವಿಚಾರಣೆ ಎದುರಿಸಬೇಕು. ಕುಸ್ತಿಪಟುಗಳ ಆರೋಪದಲ್ಲಿ ನಿಜವಿದೆಯೇ ಎಂಬುದು ದೇಶಕ್ಕೆ ಗೊತ್ತಾಗಬೇಕು. ಅಲ್ಲಿಯವರೆಗೂ ಬ್ರಿಜ್‌ಭೂಷಣ್ ತನ್ನ ಕಾರುಭಾರು ನಡೆಸದಂತೆ ಕಾನೂನು, ತನಿಖಾ ಸಂಸ್ಥೆಗಳು ಹಾಗೂ ನ್ಯಾಯಾಂಗ ಸೂಕ್ತ ಕ್ರಮ ತೆಗೆದುಕೊಳ್ಳಬೇಕಿವೆ.
ಈ ಸಂಪಾದಕೀಯವನ್ನು ಓದಿ: ವಿಸ್ತಾರ ಸಂಪಾದಕೀಯ: ನ್ಯಾಯ ನೀಡುವುದೇ ಹೊಸ ಕ್ರಿಮಿನಲ್ ಕಾಯಿದೆಗಳ ಆದ್ಯತೆಯಾಗಲಿ
ಕುಸ್ತಿ ಒಕ್ಕೂಟದಲ್ಲಿ ನಡೆದಿರುವ ಈ ಹಗರಣದಿಂದಾಗಿ ರಾಷ್ಟ್ರೀಯವಾಗಿ, ಅಂತಾರಾಷ್ಟ್ರೀಯವಾಗಿ ನಮ್ಮ ಕ್ರೀಡಾಕ್ಷೇತ್ರದ ಘನತೆಗೆ ಸಾಕಷ್ಟು ಹಾನಿಯಾಗಿದೆ. ಕಳಂಕ ಮೆತ್ತಿಕೊಂಡಿದೆ. ಇದು ಹೀಗೆಯೇ ಮುಂದುವರಿಯಬಾರದು. ಕುಸ್ತಿ ಒಕ್ಕೂಟವೂ ಸೇರಿದಂತೆ ಹಲವಾರು ಕ್ರೀಡಾ ಒಕ್ಕೂಟಗಳ ಮೇಲೆ ರಾಜಕಾರಣಿಗಳ ಭಾರಿ ಹಿಡಿತವಿದೆ. ಕೆಲವನ್ನು ಆ ಹಿಡಿತದಿಂದ ಮುಕ್ತಿಗೊಳಿಸಲಾಗಿದ್ದರೂ ಕುಸ್ತಿ ಒಕ್ಕೂಟ ಮಾತ್ರ ಇನ್ನೂ ಪಾಳೇಗಾರಿಕೆಯ ಸನ್ನಿವೇಶದಲ್ಲೇ ಇದ್ದಂತಿದೆ. ಪುರುಷ ಕುಸ್ತಿ ಪಟುಗಳಿಗೂ ಅಪರಾಧಕ್ಕೂ ಇರುವ ಸಂಬಂಧವೂ ಆಗಾಗ ದೇಶದ ಗಮನ ಸೆಳೆದಿದೆ. ಸರ್ಕಾರ ಕೂಡಲೇ ಇದರ ಬಗ್ಗೆ ಗಮನ ಹರಿಸಿ, ವಿವಾದಕ್ಕೆ ತೆರೆಯೆಳೆದು, ಜಾಗತಿಕ ಕ್ರೀಡಾವಲಯದಲ್ಲಿ ನಮ್ಮ ದೇಶ ನಗೆಗೇಡಾಗುವುದನ್ನು ತಪ್ಪಿಸಬೇಕಿದೆ.