ಭಾರತೀಯ ಅಪರಾಧ ತನಿಖೆ ಮತ್ತು ನ್ಯಾಯಾಂಗ ವಿಚಾರಣೆಯ ಪ್ರಕ್ರಿಯೆಯನ್ನು ಆಮೂಲಾಗ್ರವಾಗಿ ಬದಲಾಯಿಸಲಿರುವ ಮೂರು ಕ್ರಿಮಿನಲ್ ಕಾಯಿದೆಗಳ ವಿಧೇಯಕಗಳಿಗೆ ಲೋಕಸಭೆ ಮತ್ತು ರಾಜ್ಯಸಭೆ ತಮ್ಮ ಅನುಮೋದನೆ ನೀಡಿವೆ. ಭಾರತದ ಕ್ರಿಮಿನಲ್ ನ್ಯಾಯ ವ್ಯವಸ್ಥೆಯ ವಸಾಹತುಕಾಲದ ಕಾಯಿದೆಗಳಾದ ಭಾರತೀಯ ದಂಡ ಸಂಹಿತೆ (IPC), ಅಪರಾಧ ಪ್ರಕ್ರಿಯಾ ಸಂಹಿತೆ (CrPC) ಮತ್ತು ಸಾಕ್ಷಿ ಕಾಯಿದೆ (ಎವಿಡೆನ್ಸ್ ಆಕ್ಟ್) ಅನ್ನು ಬದಲಿಸುವ ಮೂರು ವಿಧೇಯಕಗಳನ್ನು ಕೆಳಮನೆಯು ಬುಧವಾರ ಅಂಗೀಕರಿಸಿದೆ, ಗುರುವಾರ ಮೇಲ್ಮನೆ ಒಪ್ಪಿಗೆ ನೀಡಿದೆ. ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ನಡೆಸಿದ ಸುಮಾರು 150 ಸಭೆಗಳು; 18 ರಾಜ್ಯಗಳು, ಆರು ಕೇಂದ್ರಾಡಳಿತ ಪ್ರದೇಶಗಳ ಸಂಸದರು ಮತ್ತು ಅಧಿಕಾರಶಾಹಿಗಳಿಂದ, ಸುಪ್ರೀಂ ಕೋರ್ಟ್, 16 ಹೈಕೋರ್ಟ್ಗಳು, 27 ನ್ಯಾಯಾಂಗ ಅಕಾಡೆಮಿಗಳಿಂದ ಪಡೆದ ಸುಮಾರು 3,200 ಸಲಹೆಗಳು ಇದರ ಹಿಂದಿವೆ. ಈ ವಿಧೇಯಕಗಳನ್ನು ರೂಪಿಸುವ ಕೆಲಸ ಅವಸರದಲ್ಲಿ ನಡೆದಿಲ್ಲ, ಸಾಕಷ್ಟು ಯೋಚಿಸಿಯೇ ಹಾಗೂ ವಿಚಾರ ವಿಮರ್ಶೆ ನಡೆಸಿಯೇ ಇವುಗಳನ್ನು ಸಿದ್ಧಪಡಿಸಲಾಗಿದೆ ಎಂಬುದಕ್ಕೆ ಇದು ಸಾಕ್ಷಿ. ಹಳೆಯ ಕಾಯಿದೆಗಳ ಜಾಗದಲ್ಲಿ ಭಾರತೀಯ ನ್ಯಾಯ ಸಂಹಿತೆ (Bharatiya Nyaya Sanhita) ಭಾರತೀಯ ನಾಗರಿಕ ಸುರಕ್ಷಾ ಸಂಹಿತೆ (Bharatiya Nagarik Suraksha Sanhita) ಮತ್ತು ಭಾರತೀಯ ಸಾಕ್ಷಿ ವಿಧೇಯಕ (Bharatiya Sakshya Bill) ಬರಲಿವೆ.
ಹೊಸ ಕಾಯಿದೆಗಳು ಅಪರಾಧಿಗೆ ಶಿಕ್ಷೆಯನ್ನು ನೀಡುವುದಕ್ಕಿಂತಲೂ ತ್ವರಿತ ನ್ಯಾಯವನ್ನು ನೀಡುವುದರ ಮೇಲೆ ಕೇಂದ್ರೀಕರಿಸಿದೆ ಎಂದು ಅಮಿತ್ ಶಾ ಹೇಳಿದ್ದಾರೆ. ಇದು ನಿಜವಾಗಬೇಕು. ತ್ವರಿತ ನ್ಯಾಯದ ಅಲಭ್ಯತೆಯೇ ಇಂದು ದೊಡ್ಡ ಸಮಸ್ಯೆ. ನ್ಯಾಯಾಂಗ ಪ್ರಕ್ರಿಯೆಯ ವಿಳಂಬವೇ ಇಂದು ಸಂತ್ರಸ್ತರನ್ನು ಇನ್ನಷ್ಟು ಬಲಿಪಶುಗಳನ್ನಾಗಿ, ಅಪರಾಧಿಗಳನ್ನು ಮತ್ತಷ್ಟು ಬಲಿಷ್ಠರನ್ನಾಗಿ ಮಾಡುವಂಥದು. ಇದು ತಪ್ಪಬೇಕಿದೆ. ಹೊಸ ವಿಧೇಯಕಗಳು ಸ್ವರೂಪದಲ್ಲಿ, ಸೆಕ್ಷನ್ಗಳ ಸಂಖ್ಯೆಯಲ್ಲಿ, ಅಪರಾಧ ಹಾಗೂ ಶಿಕ್ಷೆಗಳ ವ್ಯಾಖ್ಯಾನಗಳಲ್ಲಿ ಬಹಳಷ್ಟು ವ್ಯತ್ಯಾಸವನ್ನು ಹೊಂದಿವೆ. ಬ್ರಿಟಿಷ್ ಕಾಲದ ಪಳೆಯುಳಿಕೆಗಳನ್ನು ತೊಡೆದುಹಾಕಿ, ಇವುಗಳನ್ನು ʼಭಾರತೀಯʼಗೊಳಿಸುವುದು ಮುಖ್ಯ ಆದ್ಯತೆಯಾಗಿತ್ತು. ಅದರಂತೆ ಕ್ರಿಮಿನಲ್ ಮೊಕದ್ದಮೆಗಳು, ಬಂಧನಗಳು, ತನಿಖೆಗಳು, ಚಾರ್ಜ್ಶೀಟ್ಗಳ ಸಲ್ಲಿಕೆ, ಮ್ಯಾಜಿಸ್ಟ್ರೇಟ್ಗಳ ಮುಂದೆ ವಿಚಾರಣೆಗಳು, ವಿಚಾರಣೆ, ಜಾಮೀನು, ತೀರ್ಪು ಮತ್ತು ಕ್ಷಮಾದಾನ ಅರ್ಜಿ ಇತ್ಯಾದಿಗಳನ್ನು ನಡೆಸಲು ವಿಧೇಯಕಗಳು ಸಮಯವನ್ನು ನಿಗದಿಪಡಿಸುತ್ತವೆ. 45 ದಿನಗಳಲ್ಲಿ ಪ್ರಕರಣಗಳನ್ನು ಇತ್ಯರ್ಥಪಡಿಸಲು ಒತ್ತು ನೀಡುತ್ತದೆ.
ಬ್ರಿಟಿಷರ ಆಳ್ವಿಕೆಯಲ್ಲಿ ಅಧಿಕಾರದಲ್ಲಿದ್ದವರಿಗೆ ರಕ್ಷಣೆ ನೀಡುವುದು ಆದ್ಯತೆಯಾಗಿತ್ತು. ಹೊಸ ಕಾನೂನುಗಳು ಮಹಿಳೆಯರು, ಮಕ್ಕಳು, ನರಹತ್ಯೆ ಮತ್ತು ರಾಷ್ಟ್ರದ ವಿರುದ್ಧದ ಅಪರಾಧಗಳ ತಡೆಗೆ ಆದ್ಯತೆ ನೀಡುತ್ತವೆ. ಹೊಸ ಶಾಸನಗಳ ಗಮನವು ನ್ಯಾಯವನ್ನು ಒದಗಿಸುವುದು ಮತ್ತು ಮಾನವ ಹಕ್ಕುಗಳನ್ನು ರಕ್ಷಿಸುವುದು ಆಗಿದೆ. ಹೊಸ ಕಾಯಿದೆಗಳು ಭಯೋತ್ಪಾದನೆ, ಸಂಘಟಿತ ಅಪರಾಧಗಳು, ದೇಶದ್ರೋಹದ ಸ್ಪಷ್ಟ ವ್ಯಾಖ್ಯಾನವನ್ನು ಹೊಂದಿವೆ. ವಿಕಸನಗೊಳ್ಳುತ್ತಿರುವ ಕಾನೂನು ಸನ್ನಿವೇಶದಲ್ಲಿ ಭಾರತೀಯ ಸಾಕ್ಷಿ ಕಾಯಿದೆಯ ಪರಿಣಾಮಕಾರಿತ್ವ ಮತ್ತು ಪ್ರಸ್ತುತತೆಯನ್ನು ಹೆಚ್ಚಿಸಲು ಪ್ರಯತ್ನಿಸುತ್ತದೆ. ಅಪ್ರಾಪ್ತ ಬಾಲಕಿಯರ ಮೇಲಿನ ಸಾಮೂಹಿಕ ಅತ್ಯಾಚಾರಕ್ಕೆ ಜೀವಾವಧಿ ಶಿಕ್ಷೆ ಅಥವಾ ಮರಣದಂಡನೆ ವಿಧಿಸಲಾಗಿದೆ. ಸಾಮೂಹಿಕ ಅತ್ಯಾಚಾರ ಪ್ರಕರಣಗಳಲ್ಲಿ 20 ವರ್ಷಗಳ ಶಿಕ್ಷೆ ಅಥವಾ ಜೀವಾವಧಿ ಶಿಕ್ಷೆಗೆ ಅವಕಾಶ ಕಲ್ಪಿಸಲಾಗಿದೆ. ಹೊಸದಾಗಿ ಗುಂಪು ಹತ್ಯೆ, ಮರ್ಯಾದಾ ಹತ್ಯೆ ಅಪರಾಧಿಗಳಿಗೆ ಜೀವಾವಧಿ ಶಿಕ್ಷೆ ಅಥವಾ ಮರಣದಂಡನೆ ನೀಡಲಾಗಿದೆ. ಇವೆಲ್ಲವೂ ಸ್ವಾಗತಾರ್ಹ ಬದಲಾವಣೆಗಳು.
ಇನ್ನೊಂದು ಹೊಸ ಸೇರ್ಪಡೆಯೆಂದರೆ, ದೇಶದಲ್ಲಿ ಅಪರಾಧ ಎಸಗಿ ಹೊರ ದೇಶದಲ್ಲಿ ತಲೆ ಮರೆಸಿಕೊಂಡ, ವಿಚಾರಣೆಗೆ ಹಾಜರಾದ ಅಪರಾಧಿಗಳ ಗೈರುಹಾಜರಿಯಲ್ಲಿಯೇ ವಿಚಾರಣೆ ನಡೆಸಿ ತಪ್ಪಿತಸ್ಥರಿಗೆ ಶಿಕ್ಷೆ ವಿಧಿಸುವ ಅವಕಾಶದ ಸೇರ್ಪಡೆ. ಅಂಥ ಆರೋಪಿಗಳಿಗೆ ನ್ಯಾಯಾಲಯದ ಮುಂದೆ ಹಾಜರಾಗಲು ತೊಂಬತ್ತು ದಿನಗಳ ಕಾಲಾವಕಾಶ ನೀಡಲಾಗುತ್ತದೆ. ಅವರು ಬರಲು ವಿಫಲವಾದರೆ, ಅವರಿಗೆ ಪಬ್ಲಿಕ್ ಪ್ರಾಸಿಕ್ಯೂಟರ್ ಅನ್ನು ನೇಮಿಸಿ, ಕಾನೂನು ಪ್ರಕ್ರಿಯೆಯನ್ನು ಚುರುಕುಗೊಳಿಸಿ, ಕಾನೂನು ಕ್ರಮ ಜರುಗಿಸಲಾಗುತ್ತದೆ. ಇದು ಅವರನ್ನು ಮರಳಿ ಕರೆತರುವ ಪ್ರಕ್ರಿಯೆಯನ್ನು ತ್ವರಿತಗೊಳಿಸುತ್ತದೆ. ಇದು ಕೂಡ ಆರ್ಥಿಕ ಅಪರಾಧಗಳನ್ನು ಮಾಡಿ ಹೊರದೇಶಕ್ಕೆ ಓಡಿಹೋಗುವವರಿಗೆ ಎಚ್ಚರಿಕೆಯ ಗಂಟೆ.
ಈ ತಿದ್ದುಪಡಿಗಳು, ಮಾರ್ಪಾಡುಗಳು ಬಹುಕಾಲದಿಂದ ಅಗತ್ಯವಾಗಿದ್ದವು. ವಸಾಹತು ಕಾಲದ ಕಾನೂನುಗಳು ಹಾಗೇ ನಡೆದುಕೊಂಡು ಬಂದಿವೆ. ಕಾಲ ಸರಿದಂತೆ ಅಪರಾಧ ಮತ್ತು ಶಿಕ್ಷೆಯ ಬಗ್ಗೆ ನಮ್ಮ ನಿಲುವುಗಳು ಸುಧಾರಿಸುತ್ತ ಹೋಗಬೇಕು. ಕೇಂದ್ರ ಸರ್ಕಾರ ಈ ನಿಟ್ಟಿನಲ್ಲಿ ದೊಡ್ಡ ಹೆಜ್ಜೆಯನ್ನೇ ಇಟ್ಟಿದೆ. ಇದು ಗಮನಾರ್ಹ ಸುಧಾರಣೆ. ನಮ್ಮದೇ ಆದ ನ್ಯಾಯವ್ಯವಸ್ಥೆಯೊಂದನ್ನು ರೂಪಿಸಿಕೊಳ್ಳುವ ನಿಟ್ಟಿನಲ್ಲಿ ಇದು ಮಹತ್ವದ ಉಪಕ್ರಮ. ಈ ಕಾಯಿದೆಗಳಿಗೆ ಎಲ್ಲ ರಾಜಕೀಯ ಪಕ್ಷಗಳು ಬೆಂಬಲ ನೀಡಿ, ಕಾನೂನಾತ್ಮಕ ಸುಧಾರಣೆಗೆ ಹಾದಿಯಲ್ಲಿ ಕೈಗೂಡಿಸಬೇಕಿದೆ.
ಈ ಸಂಪಾದಕೀಯವನ್ನೂ ಓದಿ: ವಿಸ್ತಾರ ಸಂಪಾದಕೀಯ: ಸಂಸದರ ನಾಚಿಕೆಗೇಡಿನ ವರ್ತನೆ ಖಂಡನೀಯ