ದೇಶಾದ್ಯಂತ ಕ್ರಿಮಿನಲ್ ಕೇಸ್‌ಗಳನ್ನು ಎದುರಿಸುತ್ತಿರುವ ಸಂಸದರು ಹಾಗೂ ಶಾಸಕರಿಗೆ ಸುಪ್ರೀಂ ಕೋರ್ಟ್ (Supreme Court) ಶಾಕ್ ನೀಡಿದೆ. ಸಂಸದರು ಹಾಗೂ ಶಾಸಕರ ವಿರುದ್ಧ ದಾಖಲಾದ ಕ್ರಿಮಿನಲ್ ಕೇಸ್‌ಗಳನ್ನು ಕ್ಷಿಪ್ರವಾಗಿ ವಿಲೇವಾರಿ ಮಾಡಬೇಕು ಎಂದಿದೆ. ಸಂಸದರು ಹಾಗೂ ಶಾಸಕರ ವಿರುದ್ಧ ದಾಖಲಾದ ಕೇಸ್‌ಗಳ (Criminal Cases) ಕ್ಷಿಪ್ರ ವಿಚಾರಣೆಗೆ ಸುಮೋಟೊ (ಸ್ವಯಂಪ್ರೇರಿತವಾಗಿ ದೂರು ದಾಖಲಿಸಿಕೊಳ್ಳುವುದು) ಕೇಸ್ ದಾಖಲಿಸಿಕೊಳ್ಳಬೇಕು ಎಂದು ಕೂಡ ನಿರ್ದೇಶನ ನೀಡಿದೆ. ಸಂಸದರು ಹಾಗೂ ಶಾಸಕರ ವಿರುದ್ಧ ದಾಖಲಾದ ಕ್ರಿಮಿನಲ್ ಕೇಸ್‌ಗಳ ಕುರಿತು ಕ್ಷಿಪ್ರವಾಗಿ ವಿಚಾರಣೆ ನಡೆಯುವ ವ್ಯವಸ್ಥೆ ಜಾರಿಗೆ ಬರಬೇಕು ಎಂದು ವಕೀಲ ಅಶ್ವಿನಿ ಉಪಾಧ್ಯಾಯ ಅವರು ಸಲ್ಲಿಸಿದ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಾಲಯ, ಹೈಕೋರ್ಟ್‌ಗಳಿಗೆ ಹಲವು ನಿರ್ದೇಶನಗಳನ್ನು ನೀಡಿತು. ಕ್ಷಿಪ್ರವಾಗಿ ಪ್ರಕರಣಗಳ ವಿಲೇವಾರಿಗೆ ಆಯಾ ನ್ಯಾಯಾಲಯಗಳಿಗೆ ಮಹತ್ವದ ನಿರ್ದೇಶನ ನೀಡಲು ಹೈಕೋರ್ಟ್‌ಗಳಿಗೆ ಪ್ರಿನ್ಸಿಪಲ್ ಜಿಲ್ಲಾ ಅಥವಾ ಸೆಷನ್ಸ್ ನ್ಯಾಯಾಲಯದ ಜಡ್ಜ್‌ಗಳ ಅವಶ್ಯಕತೆ ಬೀಳುತ್ತದೆ. ಹೈಕೋರ್ಟ್‌ಗಳು ಈ ಜಡ್ಜ್‌ಗಳನ್ನು ಕೂಡ ಬಳಸಿಕೊಂಡು, ಅಧೀನ ನ್ಯಾಯಾಲಯಗಳಲ್ಲಿ ವೇಗವಾಗಿ ವಿಚಾರಣೆ ನಡೆಯುವಂತೆ ಕ್ರಮ ತೆಗೆದುಕೊಳ್ಳಬೇಕು ಎಂದು ನಿರ್ದೇಶಿಸಿದೆ. ಇದೀಗ ಜನಪ್ರತಿನಿಧಿಗಳಿಗೆ ಆತಂಕದ ಸಮಯ ಸನ್ನಿಹಿತವಾಗಿದೆ(Vistara Eidtorial).
ಜನಪ್ರತಿನಿಧಿಗಳು ತಮ್ಮ ಜನಬಲ, ಧನಬಲ, ಅಧಿಕಾರಬಲದ ಮೂಲಕ, ತಮ್ಮ ಮೇಲೆ ದಾಖಲಾಗಿರುವ ಪ್ರಕರಣಗಳನ್ನು ತನಿಖೆಯ ಹಾದಿ ತಪ್ಪಿಸುವುದು, ಕೋರ್ಟ್ ವಿಚಾರಣೆಗಳನ್ನು ಸಾಧ್ಯವಾದಷ್ಟು ವಿಳಂಬ ಮಾಡುವುದು, ಇವೆಲ್ಲ ಇದ್ದುದೇ ಆಗಿವೆ. ಇದೀಗ ಅಂಥ ಸಂಸದರು ಹಾಗೂ ಶಾಸಕರ ವಿರುದ್ಧ ದಾಖಲಾದ ಕ್ರಿಮಿನಲ್ ಪ್ರಕರಣಗಳ ಗಾಂಭೀರ್ಯವನ್ನು ಅರಿತುಕೊಂಡು, ಆದ್ಯತೆಯ ಮೇಲೆ ಪ್ರಕರಣಗಳನ್ನು ಕೈಗೆತ್ತಿಕೊಳ್ಳಿ ಎಂದು ಹೈಕೋರ್ಟ್‌ಗಳಿಗೆ ಸುಪ್ರೀಂ ಕೋರ್ಟ್ ಸೂಚಿಸಿದೆ. ಗಲ್ಲು ಶಿಕ್ಷೆ ಅಥವಾ ಜೀವಾವಧಿ ಶಿಕ್ಷೆ ವಿಧಿಸಬಹುದಾದ ಪ್ರಕರಣಗಳನ್ನು ಮೊದಲ ಆದ್ಯತೆ ಮೇರೆಗೆ ಕೈಗೆತ್ತಿಕೊಳ್ಳಬೇಕು. ಇನ್ನು ಐದು ವರ್ಷ ಅಥವಾ ಅದಕ್ಕಿಂತ ಹೆಚ್ಚು ಅವಧಿಗೆ ಶಿಕ್ಷೆ ವಿಧಿಸಬಹುದಾದ ಪ್ರಕರಣಗಳನ್ನು ನಂತರದ ಆದ್ಯತೆಯ ಮೇಲೆ ವಿಲೇವಾರಿ ಮಾಡಬೇಕು. ವಿಶೇಷ ಸಂದರ್ಭಗಳನ್ನು ಹೊರತುಪಡಿಸಿ ಅಧೀನ ನ್ಯಾಯಾಲಯಗಳು ವಿಚಾರಣೆಯನ್ನು ಪದೇಪದೆ ಮುಂದೂಡಬಾರದು ಎಂದು ಕೂಡ ಸರ್ವೋಚ್ಚ ನ್ಯಾಯಾಲಯವು ಆದೇಶಿಸಿದೆ. ಇವರ ವಿರುದ್ಧ ದಾಖಲಾದ ಪ್ರಕರಣಗಳ ವಿಚಾರಣೆ, ಶಿಕ್ಷೆ ಸೇರಿ ಹಲವು ವಿಷಯಗಳು ಸಾರ್ವಜನಿಕರಿಗೂ ಗೊತ್ತಾಗಬೇಕು. ಅದಕ್ಕಾಗಿ ಹೈಕೋರ್ಟ್‌ಗಳ ವೆಬ್‌ಸೈಟ್‌ಗಳಲ್ಲಿ ಇಂತಹ ಪ್ರಕರಣಗಳ ಕುರಿತು ಮಾಹಿತಿ ಇರುವ ಟ್ಯಾಬ್ ಅಭಿವೃದ್ಧಿಪಡಿಸಬೇಕು ಎಂದೂ ಹೈಕೋರ್ಟ್‌ಗಳಿಗೆ ಸೂಚಿಸಿದೆ.
ಕ್ರಿಮಿನಲ್ ದಾಖಲೆ ಇರುವ ಜನಪ್ರತಿನಿಧಿಗಳೇನೂ ಕಡಿಮೆ ಸಂಖ್ಯೆಯಲ್ಲಿಲ್ಲ. ಕಳೆದ ಚುನಾವಣೆ ವೇಳೆ ಅಭ್ಯರ್ಥಿಗಳು ಸಲ್ಲಿಸಿದ ಅಫಿಡವಿಟ್‌ಗಳ ಮಾಹಿತಿಯನ್ನೇ ಇಟ್ಟುಕೊಂಡು ಹೇಳುವುದಾದರೆ ಸಂಸತ್ತಿನ 763 ಸದಸ್ಯರಲ್ಲಿ 306 ಮಂದಿಯ ವಿರುದ್ಧ ಕ್ರಿಮಿನಲ್ ಮೊಕದ್ದಮೆಗಳಿವೆ. ಅಂದರೆ, ಕ್ರಿಮಿನಲ್ ಪ್ರಕರಣಗಳನ್ನು ಎದುರಿಸುತ್ತಿರುವ ಸಂಸದರ ಪ್ರಮಾಣ ಶೇ.40ರಷ್ಟಿದೆ. ಅಸೋಸಿಯೇಷನ್ ಫಾರ್ ಡೆಮಾಕ್ರಟಿಕ್ ರಿಫಾರ್ಮ್ಸ್ (ADR) ಮತ್ತು ನ್ಯಾಷನಲ್ ಎಲೆಕ್ಷನ್ ವಾಚ್ (NEW) ಈ ಮಾಹಿತಿಗಳನ್ನು ನೀಡಿವೆ. ಕೊಲೆ, ಕೊಲೆಯ ಯತ್ನ, ಅಪಹರಣ, ಮಹಿಳೆಯರ ವಿರುದ್ಧ ಕ್ರಿಮಿನಲ್ ಪ್ರಕರಣ ಸೇರಿದಂತೆ ಗಂಭೀರ ಪ್ರಕರಣಗಳನ್ನು ಎದುರಿಸುತ್ತಿರುವುದಾಗಿ 194 (ಶೇ.25) ಸಂಸದರು ಹೇಳಿಕೊಂಡಿದ್ದಾರೆ. ಕ್ರಿಮಿನಲ್ ಕೇಸ್ ಎದುರಿಸುತ್ತಿರುವ ಸಂಸದರ ಪೈಕಿ ಕೇರಳ ಸಂಸದರು ಅಗ್ರಸ್ಥಾನದಲ್ಲಿದ್ದಾರೆ. ಪ್ರಮಾಣ ಪತ್ರದಲ್ಲಿ ಕ್ರಿಮಿನಲ್ ಪ್ರಕರಣಗಳನ್ನು ಘೋಷಿಸಿದ ಸಂಸದರ ಪಟ್ಟಿಯಲ್ಲಿ ಕೇರಳ (73%) ಅಗ್ರಸ್ಥಾನದಲ್ಲಿದ್ದು, ನಂತರ ಸ್ಥಾನದಲ್ಲಿ ಬಿಹಾರ, ಮಹಾರಾಷ್ಟ್ರ (57%) ಮತ್ತು ತೆಲಂಗಾಣ (50%) ರಾಜ್ಯಗಳಿವೆ. ಈ ವಿಷಯದಲ್ಲಿ ಯಾವ ಪಕ್ಷವೂ ಸಾಚಾ ಆಗಿಲ್ಲ. ಭಾರತೀಯ ಜನತಾ ಪಕ್ಷದ 385 ಸಂಸದರಲ್ಲಿ 139 (36%), ಕಾಂಗ್ರೆಸ್‌ನ 81 ಸಂಸದರಲ್ಲಿ 43 (53%), ತೃಣಮೂಲದ 36 ಸಂಸದರಲ್ಲಿ 14 (39%) ಕಾಂಗ್ರೆಸ್ (ಟಿಎಂಸಿ), ರಾಷ್ಟ್ರೀಯ ಜನತಾ ದಳದ (ಆರ್‌ಜೆಡಿ) 6 ಸಂಸದರಲ್ಲಿ 5 (83%), ಸಿಪಿಎಂ 8 ಸಂಸದರ ಪೈಕಿ 6, ಆಮ್ ಆದ್ಮಿ ಪಕ್ಷದ (ಎಎಪಿ) 11 ಸಂಸದರಲ್ಲಿ ಮೂವರು, ವೈಎಸ್‌ಆರ್‌ಪಿ ಪಕ್ಷದ 31 ಸಂಸದರಲ್ಲಿ 13 (42%) ಮತ್ತು ರಾಷ್ಟ್ರೀಯವಾದಿ ಕಾಂಗ್ರೆಸ್ ಪಕ್ಷದ 8 ಸಂಸದರಲ್ಲಿ 3 (38%) ಮಂದಿಯ ಮೇಲೆ ಕ್ರಿಮಿನಲ್ ಮೊಕದ್ದಮೆಗಳಿವೆ. ಈ ಪೈಕಿ 32 ಸಂಸದರು ಕೊಲೆ ಯತ್ನ, 21 ಸಂಸದರು ಮಹಿಳೆಯರ ವಿರುದ್ಧದ ಅಪರಾಧ, ನಾಲ್ವರ ವಿರುದ್ಧ ಅತ್ಯಾಚಾರ ಪ್ರಕರಣಗಳಿವೆ.
ಈ ಆರೋಪಗಳನ್ನು ಹೊತ್ತಿರುವವರೆಲ್ಲರೂ ಅಪರಾಧಿಗಳೇ ಆಗಿರಬೇಕಿಲ್ಲ, ನಿಜ. ಆದರೆ ವರ್ಷಗಟ್ಟಲೆ ಇಂಥ ಪ್ರಕರಣಗಳನ್ನು ಎದುರಿಸುವುದು ಅಪರಾಧಿಗೆ ಪಾರಾಗುವ ದಾರಿಯಾಗಿಬಿಟ್ಟರೆ, ನಿರಪರಾಧಿಗೆ ನಿಜಕ್ಕೂ ಅದೊಂದು ಅನ್ಯಾಯ ಅಥವಾ ಹಿಂಸೆಯೇ ಆಗಿಬಿಡುತ್ತದೆ. ಅಪರಾಧಿಗಳು ಅಧಿಕಾರದಲ್ಲಿದ್ದು ಪ್ರಭಾವಿಗಳಾಗಿರುವುದರಿಂದ ಸಾಕ್ಷಿಗಳನ್ನು ನಾಶ ಮಾಡಿಕೊಂಡು ಪಾರಾಗಿಬಿಡಬಹುದು. ಇದು ಇವರು ಇನ್ನಷ್ಟು ಅಪರಾಧ ಎಸಗಲು ಪ್ರೇರಣೆಯೂ ಆಗಬಹುದು. ಹಾಗೆಯೇ ಜನಸೇವೆಯ ಹುಮ್ಮಸ್ಸಿನಲ್ಲಿರುವ ವ್ಯಕ್ತಿಯ ಮೇಲೆ ಇರಬಹುದಾದ ಸುಳ್ಳು ಪ್ರಕರಣಗಳಿಂದಾಗಿ ಆತ ಸಾರ್ವಜನಿಕ ಜೀವನದ ಮೇಲಿನ ಆಸಕ್ತಿಯನ್ನೇ ಕಳೆದುಕೊಳ್ಳಬಹುದು; ಇದು ನಿಜಕ್ಕೂ ಸಮಾಜಕ್ಕೆ ಆಗುವ ದ್ವಿಮುಖ ಹಾನಿ. ವಿಳಂಬ ನ್ಯಾಯ, ನ್ಯಾಯವನ್ನೇ ನಿರಾಕರಿಸಿದಂತೆ ಎಂಬ ಮಾತು ಕ್ಲೀಷೆಯಾಗಿದ್ದರೂ ಅದರಲ್ಲಿ ಅರ್ಥವಿದೆ. ಪ್ರಭಾವಿಗಳಿಂದ ಅನ್ಯಾಯಕ್ಕೊಳಗಾದವರು, ಸಂತ್ರಸ್ತರಿಗೆ ಬೇಗನೆ ನ್ಯಾಯ ದೊರೆಯಬೇಕಿದ್ದರೆ ಈ ಪ್ರಕರಣಗಳು ಬೇಗನೆ ವಿಲೇವಾರಿಯಾಗಬೇಕು. ಹಾಗೆಯೇ ಜನರಿಗೂ ತಮ್ಮನ್ನು ಪ್ರತಿನಿಧಿಸುತ್ತಿರುವವರು ಎಂಥವರು ಎಂಬುದು ಗೊತ್ತಾಗಬೇಕು. ಹೀಗಾಗಿ ಈ ಪ್ರಕರಣಗಳ ಶೀಘ್ರ ವಿಲೇವಾರಿಯತ್ತ ಸುಪ್ರೀಂ ಕೋರ್ಟ್ ಚಿತ್ತ ಹರಿಸಿರುವುದು ನಿಜಕ್ಕೂ ಉತ್ತಮ ಬೆಳವಣಿಗೆಯಾಗಿದೆ.
ಈ ಸಂಪಾದಕೀಯವನ್ನೂ ಓದಿ: ವಿಸ್ತಾರ ಸಂಪಾದಕೀಯ: ಕಿರಿಕಿರಿ ಕರೆಗಳಿಗೆ ಕಡಿವಾಣ ಅಗತ್ಯ