Site icon Vistara News

ವಿಸ್ತಾರ ಸಂಪಾದಕೀಯ: ಪ. ಬಂಗಾಳದ ಸಂದೇಶ್‌ಖಾಲಿ ದೌರ್ಜನ್ಯ ಪ್ರಕರಣ ಆಘಾತಕಾರಿ

Sandeshkhali

ಪಶ್ಚಿಮ ಬಂಗಾಳದ ಉತ್ತರ 24 ಪರಗಣ ಜಿಲ್ಲೆಯ ಸಂದೇಶ್‌ಖಾಲಿಯಲ್ಲಿ ನಡೆದ ಮಹಿಳೆಯರ ಮೇಲಿನ ಲೈಂಗಿಕ ದೌರ್ಜನ್ಯ ಪ್ರಕರಣ ನಿಧಾನವಾಗಿ ದೇಶಾದ್ಯಂತ ಪ್ರತಿಧ್ವನಿಸಲು ತೊಡಗಿದೆ. ಸಂದೇಶ್‌ಖಾಲಿ ಎಂಬ ಹಳ್ಳಿಯಲ್ಲಿ ಸ್ಥಳೀಯ ಟಿಎಂಸಿ ನಾಯಕರಿಂದ ಮಹಿಳೆಯರ ಮೇಲೆ ಲೈಂಗಿಕ ದೌರ್ಜನ್ಯ ನಡೆದಿದ್ದು, ಅದನ್ನು ಬಹಳ ಕಾಲದಿಂದ ಸಹಿಸಿಕೊಂಡಿದ್ದ ಮಹಿಳೆಯರು ಇದೀಗ ಹೊರಬಂದು ದಿಟ್ಟವಾಗಿ ಮಾತನಾಡಲು ತೊಡಗಿದ್ದಾರೆ. ಈ ಪ್ರದೇಶವೀಗ ಹಲವು ಪ್ರತಿಭಟನೆಗಳಿಗೆ ಸಾಕ್ಷಿಯಾಗುತ್ತಿದೆ. ಹಲವಾರು ಸ್ಥಳೀಯ ಮಹಿಳೆಯರು ತೃಣಮೂಲ ಕಾಂಗ್ರೆಸ್‌ನ ಪ್ರಬಲ ವ್ಯಕ್ತಿ ಶಾಜಹಾನ್ ಶೇಖ್ ಮತ್ತು ಆತನ ಬೆಂಬಲಿಗರು ಬಲವಂತವಾಗಿ ಭೂ ಕಬಳಿಸಿದ್ದಾರೆ ಮತ್ತು ತಮ್ಮ ಮೇಲೆ ಲೈಂಗಿಕ ದೌರ್ಜನ್ಯ ನಡೆಸಿದ್ದಾರೆ ಎಂದು ಆರೋಪಿಸಿದ್ದಲ್ಲದೆ, ಪ್ರತಿಭಟನೆ ನಡೆಸಿದ್ದಾರೆ.

ಪ್ರಕರಣದಲ್ಲಿನ ಮೂವರು ಪ್ರಮುಖ ಆರೋಪಿಗಳ ಪೈಕಿ ಇಬ್ಬರನ್ನು ಪೊಲೀಸರು ಬಂಧಿಸಿದ್ದಾರೆ. ಇವರಿಬ್ಬರ ರಾಜಕೀಯ ಮಾರ್ಗದರ್ಶಕ ಶೇಖ್ ಶಹಜಹಾನ್ ಇನ್ನೂ ತಲೆಮರೆಸಿಕೊಂಡಿದ್ದಾನೆ. ಈತ ಆಡಳಿತ ಪಕ್ಷ ತೃಣಮೂಲ ಕಾಂಗ್ರೆಸ್‌ನ ಸದಸ್ಯ ಆಗಿರುವುದರಿಂದಲೇ ಈತನನ್ನು ಪೊಲೀಸರ ಕಣ್ಣಿನಿಂದ ಮರೆ ಮಾಡಲಾಗಿದೆ. ಈತ ಬಹುಕೋಟಿ ಪಡಿತರ ಹಗರಣವೊಂದರಲ್ಲಿ ಕೇಂದ್ರದ ಜಾರಿ ನಿರ್ದೇಶನಾಲಯಕ್ಕೂ ವಿಚಾರಣೆಗೆ ಬೇಕಾದವನು. ಹೀಗಾಗಿ ಇವನ ವಿಚಾರಣೆಗೆ ಜನವರಿ 5ರಂದು ಸಂದೇಶ್‌ಖಾಲಿಗೆ ಜಾರಿ ನಿರ್ದೇಶನಾಲಯ ಮತ್ತು ಸಿಎಪಿಎಫ್ ಸಿಬ್ಬಂದಿ ತೆರಳಿತ್ತು. ಈ ಸಂದರ್ಭದಲ್ಲಿ ಈತನ ಬೆಂಬಲಿಗರು ಇಡಿ ಸಿಬ್ಬಂದಿಗಳ ಮೇಲೆ ದಾಳಿ ನಡೆಸಿದ್ದರು. ಇಡಿ ಸಿಬ್ಬಂದಿ ಅಂದು ಬದುಕುಳಿದು ಬಂದುದೇ ಹೆಚ್ಚು. ಈ ದಾಳಿಯ ಹಿಂದಿನ ಮಾಸ್ಟರ್ ಮೈಂಡ್ ಶಹಜಹಾನ್.‌ ಸಂದೇಶ್‌ಖಾಲಿಯಲ್ಲಿ ಪ್ರತಿಭಟನೆ ನಡೆಸುತ್ತಿರುವ ಸ್ಥಳೀಯ ಮಹಿಳೆಯರು ಆರೋಪಿಯ ತೋಟದ ಮನೆ ಮತ್ತು ಕೋಳಿ ಫಾರಂಗೆ ಬೆಂಕಿ ಹಚ್ಚಿದ್ದಾರೆ. ಅಂದರೆ ಇವರ ಆಕ್ರೋಶ ಎಷ್ಟಿದೆ ಎಂಬುದನ್ನು ಅರ್ಥ ಮಾಡಿಕೊಳ್ಳಬಹುದು.

ಸಂದೇಶ್‌ಖಾಲಿ ಗ್ರಾಮಕ್ಕೆ ರಾಷ್ಟ್ರೀಯ ಮಹಿಳಾ ಆಯೋಗದ ಅಧ್ಯಕ್ಷೆ ಭೇಟಿ ನೀಡಿ ಪರಿಸ್ಥಿತಿಯನ್ನು ಅವಲೋಕಿಸಿದ್ದಾರೆ. “”ಇಲ್ಲಿನ ಸಂತ್ರಸ್ತ ಮಹಿಳೆಯರ ಧ್ವನಿಯನ್ನು ಹತ್ತಿಕ್ಕಲಾಗುತ್ತಿದೆ. ಇದಕ್ಕೆ ಆಳುವ ಸರ್ಕಾರವೇ ನೇರವಾಗಿ ಸಹಕರಿಸುತ್ತಿದೆ” ಎಂದು ಅವರು ಆರೋಪಿಸಿದ್ದಾರೆ. “ಸತ್ಯ ಹೊರಬರದಂತೆ ಸರ್ಕಾರ ತಡೆಯುತ್ತಿದೆʼʼ ಎಂದಿದ್ದಾರೆ. ರಾಷ್ಟ್ರೀಯ ಮಹಿಳಾ ಆಯೋಗದ ಅಧ್ಯಕ್ಷೆಯ ಮಾತುಗಳ ಗಂಭೀರತೆಯನ್ನು ನಾವು ಅರ್ಥ ಮಾಡಿಕೊಳ್ಳಬಹುದು. ಇದು ಸಮಗ್ರವಾಗಿ ತನಿಖೆಯಾಗಬೇಕಾದ ವಿಚಾರ. ತನಿಖೆಯ ಮೂಲಕ ಸತ್ಯ ಹೊರಬರಬೇಕಿದೆ. ಈ ನಡುವೆ, ಸಂದೇಶ್‌ಖಾಲಿಗೆ ಭೇಟಿ ನೀಡಲು ಮುಂದಾದ ಸಂಸದ ಸುಕಾಂತ್‌ ಮುಜುಂದಾರ್‌ ಅವರನ್ನು ರಾಜ್ಯ ಪೊಲೀಸರ ಮೂಲಕ ಅಲ್ಲಿನ ಸರ್ಕಾರ ತಡೆದಿದೆ. ರಾಜ್ಯ ಸರ್ಕಾರಕ್ಕೆ ಈ ವಿಚಾರದಲ್ಲಿ ಇರುವ ಭಯವಾದರೂ ಏನು? ಯಾವ ಸಂಗತಿಯನ್ನು ಬಹಿರಂಗವಾಗದಂತೆ ತಡೆಯಲು ಅದು ಯತ್ನಿಸುತ್ತಿದೆ? ಈ ವಿಚಾರ ದೇಶಕ್ಕೆ ಸ್ಪಷ್ಟವಾಗಬೇಕಿದೆ.

ಇದನ್ನೂ ಓದಿ : ವಿಸ್ತಾರ ಸಂಪಾದಕೀಯ: ರೈತರ ಚಳವಳಿ ಸುಖಾಂತ್ಯ ಕಾಣಲಿ

ಶಹಜಹಾನ್‌ನಂಥ ಆರೋಪಿಯನ್ನು ಸಾಕಿ ತೃಣಮೂಲಕ್ಕೆ ಆಗಬೇಕಾದುದೇನು? ಆತನನ್ನು ರಕ್ಷಿಸಲು ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಯಾಕೆ ಯತ್ನಿಸುತ್ತಿದ್ದಾರೆ? ಆತ ತೃಣಮೂಲದ ನಾಯಕನೇ ಇರಬಹುದು. ಆದರೆ ಆತನಿಂದ ಅನ್ಯಾಯಕ್ಕೊಳಗಾದ ಮಹಿಳೆಯರೇ ಬೀದಿಗಿಳಿದು ಪ್ರತಿಭಟಿಸುತ್ತಿರುವಾಗಲೂ, ಸ್ವತಃ ಮಹಿಳೆಯಾದ ಮಮತಾ ಬ್ಯಾನರ್ಜಿ ಅವರಿಗೆ ಇದರ ಸೂಕ್ಷ್ಮತೆ, ಗುರುತ್ವ ಅರ್ಥವಾಗದೆ ಹೋಯಿತೇ? ಅವರೇನೋ ʼಪ್ರಕರಣದ ತನಿಖೆಗೆ ಸ್ವಾಗತʼ ಎಂದು ಬಾಯುಪಚಾರಕ್ಕೆ ಹೇಳಿದ್ದಾರೆ. ಆದರೆ ಅವರ ಮಾತಿಗೆ ಅನುಗುಣವಾಗಿ ರಾಜ್ಯ ಪೊಲೀಸ್‌ ಸಹಕರಿಸುತ್ತಿಲ್ಲ. ಕೇಂದ್ರದ ತನಿಖಾಧಿಕಾರಿಗಳು, ಸಂಸದರು ಅಲ್ಲಿಗೆ ತೆರಳಿದರೆ ಅವರ ಮೇಲೆ ತೃಣಮೂಲ ಪಕ್ಷದವರ ಕಡೆಯಿಂದ ದಾಳಿಗಳಾಗುತ್ತಿವೆ. ಇದು ಒಕ್ಕೂಟ ವ್ಯವಸ್ಥೆಯ ರಾಜ್ಯ ಸರ್ಕಾರವೊಂದು ನಡೆದುಕೊಳ್ಳಬೇಕಾದ ರೀತಿಯಲ್ಲ. ʼರಾಜ್ಯದಲ್ಲಿ ರಾಷ್ಟ್ರಪತಿ ಆಳ್ವಿಕೆ ಹೇರಬೇಕು” ಎಂದು ಬಿಜೆಪಿಯ ಕೆಲವರು ಒತ್ತಾಯಿಸಿದ್ದಾರೆ; ಇಂಥ ಮಾತು ಬರುವಂತೆ ನಡೆದುಕೊಳ್ಳುವುದು ರಾಜ್ಯ ಸರ್ಕಾರಕ್ಕೆ ಭೂಷಣವಲ್ಲ. ಸಂದೇಶ್‌ಖಾಲಿ ಸಂತ್ರಸ್ತರಿಗೆ ನ್ಯಾಯ ಸಿಗಲಿ

Exit mobile version