Site icon Vistara News

ವಿಸ್ತಾರ ಸಂಪಾದಕೀಯ: ಮಕ್ಕಳಲ್ಲಿ ಕಾಣಿಸಿಕೊಳ್ಳುವ ಕ್ರೌರ್ಯಕ್ಕೆ ಮದ್ದೇನು?

Childrens Angry

#image_title

ಅಂಬೆಗಾಲಿಡುವ ಮಕ್ಕಳಲ್ಲಿ ಹಿಂಸಾತ್ಮಕ, ಕ್ರೌರ್ಯದ ಮನೋಭಾವ ಹೆಚ್ಚಾಗುತ್ತಿದೆಯೇ ಎಂಬ ಪ್ರಶ್ನೆ ಕಾಡುವಂತಹ ಘಟನೆ ಬೆಂಗಳೂರಿನ ಮಾಂಟೆಸ್ಸರಿ ಶಾಲೆಯೊಂದರಲ್ಲಿ ನಡೆದಿದೆ. ಪುಟ್ಟ ಹುಡುಗನೊಬ್ಬ ಮತ್ತೊಬ್ಬನಿಗೆ ಮನಸೋ ಇಚ್ಛೆ ಹೊಡೆಯುವುದು, ಕಚ್ಚುವುದು ಮಾಡಿದ್ದಾನೆ. ಒಂದು ಬಾರಿಯಲ್ಲ ಐದಾರು ಸಲ ಹೀಗೆ ಹಲ್ಲೆ ನಡೆಸಿದ್ದಾನೆ. ಇಷ್ಟೆಲ್ಲ ನಡೆಯುತ್ತಿದ್ದರೂ, ಮಗು ಚೀರಾಡುತ್ತಿದ್ದರೂ ಯಾವ ಒಬ್ಬ ಸಿಬ್ಬಂದಿ ಕೂಡ ಬಂದು ನೋಡಿಲ್ಲ. ಇದು ಸಾರ್ವಜನಿಕವಾಗಿ ವ್ಯಾಪಕ ಟೀಕೆಗೆ ಗುರಿಯಾಗಿದೆ. ಇದು ಸಿಸಿ ಟಿವಿಯಲ್ಲಿ ದಾಖಲಾಗಿರುವುದರಿಂದ ಸಾರ್ವಜನಿಕರ ಗಮನಕ್ಕೆ ಬಂದಿದೆ. ಇಂಥ ಘಟನೆ ಇದೊಂದೇ ಆಗಿರಬಹುದೇ, ಅಥವಾ ಇಂಥ ಇನ್ನಷ್ಟು ಘಟನೆಗಳು ವರದಿಯಾಗದೆ ಹೋಗುತ್ತಿರಬಹುದೇ ಎಂಬ ಆತಂಕವೂ ಇದರಿಂದ ಮೂಡಿದೆ.

ಈ ಘಟನೆ ಹಲವು ನೆಲೆಯಲ್ಲಿ ನಾವು ಚಿಂತೆಗೀಡಾಗುವಂತೆ ಮಾಡಿದೆ. ಈ ನಿರ್ದಿಷ್ಟ ಘಟನೆಯನ್ನೇ ನೋಡುವುದಾದರೆ, ಇಲ್ಲಿ ಹಲ್ಲೆಗೀಡಾಗಿರುವ ಮಗುವನ್ನು ಸಂತೈಸುವುದೂ ಮುಖ್ಯ; ಅದರೊಂದಿಗೆ ಇಲ್ಲಿ ನಡೆದಿರುವ ಹಲ್ಲೆಯು ಯಾವ ಪ್ರಮಾಣದ್ದು, ಹಲ್ಲೆ ನಡೆಸಿರುವ ಮಗುವಿನ ಮನಸ್ಸಿನಲ್ಲಿ ಏನಿದೆ ಎಂಬುದೂ ಮುಖ್ಯವಾಗುತ್ತದೆ. ಈ ಪ್ರಮಾಣದ ಹಿಂಸೆಗೆ ಇಳಿಯಲು ಆ ಮಗುವಿಗೆ ಪೋಷಕವಾದ ಅಂಶಗಳು ಯಾವುದು ಎಂಬುದನ್ನು ಆ ಮಗು ಹಾಗೂ ಮಗುವಿನ ಪೋಷಕರ ಕೌನ್ಸೆಲಿಂಗ್‌ ಮಾಡಿ ತಿಳಿದುಕೊಳ್ಳುವ ಅಗತ್ಯವಿದೆ. ಮಕ್ಕಳು ಹಿಂಸೆಯನ್ನು ಕಲಿಯಲು ನಾನಾ ಕಾರಣಗಳಿರಬಹುದು. ಕೇವಲ ಮನೆಯ ವಾತಾವರಣದಿಂದ ಬರುತ್ತದೆ ಎಂದೇನಿಲ್ಲ. ಮಗು ನೋಡುವ ದೃಶ್ಯ ಮಾಧ್ಯಮ, ಸುತ್ತಮುತ್ತಲಿನವರ- ಬಂಧುಗಳ ವರ್ತನೆ, ಸ್ಮಾರ್ಟ್‌ಫೋನ್‌ ಬಳಕೆ ಹೀಗೆ ಯಾವುದೂ ಕಾರಣವಾಗಿರಬಹುದು. ಕೆಲವೊಮ್ಮೆ ನಿಖರ ಕಾರಣವೂ ಗೊತ್ತಾಗದೇ ಇರಲೂ ಸಾಧ್ಯವಿದೆ. ಅದೇನೇ ಇದ್ದರೂ, ಇಂಥ ವರ್ತನೆಯನ್ನು ʼಅಪರಾಧ-ಶಿಕ್ಷೆʼಯ ಮಾದರಿಯಲ್ಲಿ ಕಾಣದೆ, ʼಸಮಸ್ಯೆ- ಕೌನ್ಸೆಲಿಂಗ್‌ʼನ ಮಾದರಿಯಲ್ಲಿ ನೋಡಬೇಕಿದೆ.

ಇಲ್ಲಿ ಎದುರಾಗುವ ಇನ್ನೊಂದು ಪ್ರಶ್ನೆಯೆಂದರೆ, ಡೇ ಕೇರ್‌ಗಳಲ್ಲಿ ನಮ್ಮ‌ ಮಕ್ಕಳು ಸುರಕ್ಷಿತರಾಗಿದ್ದಾರೆಯೇ? ನೋಡಲು ಅತ್ಯಾಧುನಿಕವಾಗಿರುವ ಡೇ ಕೇರ್‌ಗಳಲ್ಲಿ ನಮ್ಮ ಮಕ್ಕಳನ್ನು ನೋಡಿಕೊಳ್ಳಲು ಸಿಬ್ಬಂದಿ ಇರುತ್ತಾರೆ. ಸುರಕ್ಷಿತವಾಗಿ ನೋಡಿಕೊಳ್ಳುತ್ತಾರೆ ಎಂದುಕೊಳ್ಳುತ್ತೇವೆ. ಆದರೆ ಈ ಗ್ರಹಿಕೆಯನ್ನು ಮರುಪರಿಶೀಲಿಸಿಕೊಳ್ಳಬೇಕಿದೆ. ಹಣ ಸಂಪಾದನೆಯೇ ಮುಖ್ಯವೆಂದುಕೊಂಡಿರುವ ಡೇ ಕೇರ್‌ಗಳು ಮಕ್ಕಳನ್ನು ಅವರ ಪಾಡಿಗೆ ಬಿಟ್ಟು ಇಂಥ ಸನ್ನಿವೇಶಕ್ಕೆ ತುತ್ತಾಗಿಸುವ ಸಾಧ್ಯತೆ ಸಾಕಷ್ಟಿದೆ. ಇದನ್ನು ತಡೆಗಟ್ಟುವ ಸಾಧ್ಯತೆಗಳನ್ನೂ ನಾವು ಪರಿಶೀಲಿಸಬೇಕಿದೆ. ಡೇ ಕೇರ್‌ಗಳ ಮಾಲಿಕರು, ಸಿಬ್ಬಂದಿಗಳೇ ಇದಕ್ಕೇ ಸೂಕ್ತ ಕ್ರಮಗಳನ್ನು ತೆಗೆದುಕೊಳ್ಳಬೇಕು. ಹಾಗೇ ಇವುಗಳಿಗೆ ಶಾಲಾಡಳಿತ ಮಂಡಳಿಗಳಂತೆ ಪೋಷಕರ ಮಂಡಳಿಗಳನ್ನು ರೂಪಿಸುವುದು ಹಾಗೂ ಅಲ್ಲಿನ ಆಗುಹೋಗುಗಳ ಬಗ್ಗೆ ಸೂಕ್ಷ್ಮ ನಿಗಾ ಇಡುವಂತೆ ಮಾಡಲು ಸರ್ಕಾರ ಕ್ರಮ ತೆಗೆದುಕೊಳ್ಳುವುದು ಉತ್ತಮ ಕ್ರಮಗಳಾಗಬಲ್ಲುದು. ಸದ್ಯ ಘಟನೆ ನಡೆದ ಡೇ ಕೇರ್‌ ಕೇಂದ್ರವನ್ನು ಉತ್ತರದಾಯಿಯಾಗಿಸಬೇಕಿದೆ.

ಇದನ್ನೂ ಓದಿ : ವಿಸ್ತಾರ ಸಂಪಾದಕೀಯ: ಮೋದಿ ಫಲಪ್ರದ ಅಮೆರಿಕ ಭೇಟಿ, ದ್ವಿಪಕ್ಷೀಯ ಸಂಬಂಧ ವೃದ್ಧಿ

ಇಂದಿನ ಮಕ್ಕಳಲ್ಲಿ ಹಿಂಸಾಭಾವನೆ ಹೆಚ್ಚಾಗುತ್ತಿದೆಯೇ, ಹೆಚ್ಚಾಗುತ್ತಿದ್ದರೆ ಇದಕ್ಕೆ ಮದ್ದೇನು ಎಂಬುದನ್ನೂ ಈ ಹೊತ್ತಿನಲ್ಲಿ ನಾವು ವಿವೇಚಿಸಬೇಕಿದೆ. ಹೈಸ್ಕೂಲ್‌ ಹಾಗೂ ಕಾಲೇಜು ಮಕ್ಕಳಲ್ಲಿ ಹಿಂಸಾ ಮನೋಭಾವನೆ ಹೆಚ್ಚುತ್ತಿರುವುದನ್ನು ನಾವು ವ್ಯಕ್ತವಾಗಿಯೇ ಇಂದು ಕಾಣಬಹುದು. ಇದು ಇನ್ನೂ ಸಣ್ಣಪ್ರಾಯದ ಮಕ್ಕಳಲ್ಲಿಯೂ ಕಾಣಿಸಿಕೊಳ್ಳಬಹುದು ಎಂಬುದು ಮಾತ್ರ ಗಾಬರಿಯಾಗುವ ವಿಷಯ. ಹಿಂಸೆಯ ಮಾತುಗಳು, ನೋಟಗಳು, ಪೋಷಕರ ವರ್ತನೆಗಳು, ಬಂಧುಗಳ ನಡವಳಿಕೆ, ಸುತ್ತಮುತ್ತಲಿನ ವಾತಾವರಣ, ದೃಶ್ಯಮಾಧ್ಯಮದಲ್ಲಿ ಪದೇ ಪದೇ ನೋಡುವ ವಿಚಾರಗಳು, ಎಲ್ಲವೂ ಇದಕ್ಕೆ ಕಾರಣವಾಗಿರಬಹುದು. ಹಿಂಸೆಗೆ ಪೋಷಕವಾಗಬಹುದಾದ ಮಾಧ್ಯಮಗಳನ್ನು ಕಡಿಮೆ ಮಾಡಲು ಪೋಷಕರು ಸ್ವಯಂಪ್ರೇರಿತವಾಗಿ ಮುಂದಾಗುವುದಷ್ಟೇ ಇದಕ್ಕೆ ಪರಿಹಾರ. ಇದನ್ನೂ ಮೀರಿ ಮುಂದುವರಿದರೆ ಕೌನ್ಸೆಲಿಂಗ್‌ ಅಗತ್ಯವಾದೀತು. ಅದನ್ನು ಪಡೆಯಲು ಹಿಂಜರಿಯಬಾರದು.

Exit mobile version