Site icon Vistara News

2nd PU Exam: ಕಾಂಗ್ರೆಸ್‌ ಸಮಾವೇಶ; ಬಸ್‌ಗಳಿಲ್ಲದೇ ಪರೀಕ್ಷಾ ಕೇಂದ್ರಕ್ಕೆ ತೆರಳಲು ಪಿಯು ವಿದ್ಯಾರ್ಥಿಗಳ ಪರದಾಟ

IInd PUC exams to begin from March 1

ಬೆಂಗಳೂರು: ದ್ವಿತೀಯ ಪಿಯು ವಾರ್ಷಿಕ ಪರೀಕ್ಷೆ (2nd PU Exam) ಮಾ. 1ರಿಂದ ಶುರುವಾಗಿದ್ದು, ಮಾರ್ಚ್ 22ರವರೆಗೆ ನಡೆಯಲಿದೆ. ಪರೀಕ್ಷೆಯ ಮೊದಲ ದಿನವೇ ಗ್ರಾಮೀಣ ಭಾಗಗಳಲ್ಲಿ ಬಸ್‌ಗಳಿಲ್ಲದೇ ವಿದ್ಯಾರ್ಥಿಗಳು ಪರದಾಟ ಅನುಭವಿಸಿದ್ದರು. ಕುಣಿಗಲ್‌ನಲ್ಲಿ ನಡೆಯುತ್ತಿರುವ ಕಾಂಗ್ರೆಸ್ ಸಮಾವೇಶಕ್ಕೆ ರಾಮನಗರ ಡಿಪೋನಿಂದ ಕೆಎಸ್‌ಆರ್‌ಟಿಸಿ ಬಸ್‌ಗಳ ನಿಯೋಜನೆ ಮಾಡಲಾಗಿದೆ. ಗ್ರಾಮೀಣ ಪ್ರದೇಶಕ್ಕೆ ತೆರಳಿದ್ದ ಬಸ್‌ಗಳನ್ನು ರಾತ್ರೋರಾತ್ರಿ ಘಟಕಕ್ಕೆ ವಾಪಸ್ ಕರೆಸಿಕೊಂಡಿದ್ದಾರೆ. ಶುಕ್ರವಾರದಂದು ಕುಣಿಗಲ್ ಸಮಾವೇಶಕ್ಕೆ ಮಂಡ್ಯ, ರಾಮನಗರ, ತುಮಕೂರು ಸೇರಿದಂತೆ ವಿವಿಧ ಜಿಲ್ಲೆಯಿಂದ 300ಕ್ಕೂ ಅಧಿಕ ಬಸ್‌ಗಳನ್ನು ಒಪ್ಪಂದದ ಮೇರೆಗೆ ನಿಯೋಜಿಸಲಾಗಿದೆ. ಇತ್ತ ಪರೀಕ್ಷೆ ಸಮಯದಲ್ಲಿ ಸೂಕ್ತ ಬಸ್‌ಗಳಿಲ್ಲದೇ ವಿದ್ಯಾರ್ಥಿಗಳಿಗೆ ತೊಂದರೆ ಉಂಟಾಯಿತು.

ಪರೀಕ್ಷಾ ಕೇಂದ್ರಕ್ಕೆ ಮಧು ಬಂಗಾರಪ್ಪ ವಿಸಿಟ್‌

ರಾಜ್ಯಾದ್ಯಂತ ದ್ವಿತೀಯ ಪಿಯು ವಾರ್ಷಿಕ ಪರೀಕ್ಷೆ ಆರಂಭವಾದ ಹಿನ್ನೆಲೆಯಲ್ಲಿ ಶಾಲಾ ಶಿಕ್ಷಣ ಸಚಿವ ಮಧು ಬಂಗಾರಪ್ಪ ಪರೀಕ್ಷಾ ಕೇಂದ್ರಕ್ಕೆ ಖುದ್ದು ಭೇಟಿ ಕೊಟ್ಟರು. ಬೆಂಗಳೂರಿನ ಮಲ್ಲೇಶ್ವರಂ 13ನೇ ಕ್ರಾಸ್‌ನಲ್ಲಿರುವ ಸರ್ಕಾರಿ ಮಹಿಳಾ ಕಾಲೇಜಿಗೆ ಭೇಟಿ ನೀಡಿ, ವಿಧ್ಯಾರ್ಥಿಗಳ ಜತೆ ಕೆಲ ಹೊತ್ತು ಮಾತನಾಡಿ ಶುಭ ಕೋರಿದರು.

ಹೂ ಕೊಟ್ಟು ಶುಭ ಕೋರಿದ ಶಿಕ್ಷಕರು

ಮೊದಲ ದಿನ ವಿದ್ಯಾರ್ಥಿಗಳಿಗೆ ಗುಲಾಬಿ ಹೂವು ನೀಡಿ ಧೈರ್ಯವಾಗಿ ಪರೀಕ್ಷೆ ಎದುರಿಸುವಂತೆ ಶಿಕ್ಷಕರು ಆತ್ಮವಿಶ್ವಾಸ ತುಂಬಿದರು. ರಾಯಚೂರಿನ ಬಾಲಕಿಯರ ಸರಕಾರಿ ಪದವಿ ಕಾಲೇಜಿನಲ್ಲಿ ಪ್ರಾಂಶುಪಾಲರು ಹಾಗೂ ಉಪನ್ಯಾಸಕರು ವಿದ್ಯಾರ್ಥಿಗಳಿಗೆ ನಿರ್ಭೀತಿಯಿಂದ ಪರೀಕ್ಷೆ ಎದುರಿಸುವಂತೆ ಶುಭಕೋರಿದರು. ವಿದ್ಯಾರ್ಥಿಗಳಿಗೆ ಗುಲಾಬಿ ಹೂ ನೀಡಿ ಪರೀಕ್ಷಾ ಕೊಠಡಿಗೆ ಸ್ವಾಗತಿಸಿದರು. ಪಿಯುಸಿ ಪರೀಕ್ಷೆಯು ಜೀವನದಲ್ಲಿ ಒಂದು ದೊಡ್ಡ ಮೈಲುಗಲ್ಲು. ಹೀಗಾಗಿ ಎಲ್ಲರೂ ಚೆನ್ನಾಗಿ ಪರೀಕ್ಷೆ ಬರೆಯಿರಿ ಎಂದು ಸಲಹೆ ನೀಡಿದರು.

ದೇವರಿಗೆ ಕೈ ಮುಗಿದು ಪೂಜೆ ಸಲ್ಲಿಸಿದ ವಿದ್ಯಾರ್ಥಿಗಳು

ರಾಮನಗರ ಜಿಲ್ಲೆಯಲ್ಲೂ 7,762 ವಿದ್ಯಾರ್ಥಿಗಳು ಪರೀಕ್ಷೆ ಎದುರಿಸಲಿದ್ದಾರೆ. ಪರೀಕ್ಷೆಯ ಮೊದಲ ದಿನವಾದ ಕಾರಣ, ಪರೀಕ್ಷಾ ಕೊಠಡಿ ತೆರಳುವ ಮುನ್ನ ವಿದ್ಯಾರ್ಥಿಗಳು ರಾಮನಗರ ಜೂನಿಯರ್ ಕಾಲೇಜು ಬಳಿಯ ಆಂಜನೇಯ ಸ್ವಾಮಿಗೆ ಪೂಜೆ ಸಲ್ಲಿಸಿದರು. ಜಿಲ್ಲೆಯ ಒಟ್ಟು 13 ಪರೀಕ್ಷೆ ಕೇಂದ್ರಗಳಲ್ಲಿ ಪರೀಕ್ಷೆ ನಡೆಯುತ್ತಿದೆ. ಈ ಪೈಕಿ ರಾಮನಗರ 5, ಚನ್ನಪಟ್ಟಣ 3, ಕನಕಪುರ 2, ಹಾರೋಹಳ್ಳಿ 1, ಮಾಗಡಿಯಲ್ಲಿ 2 ಪರೀಕ್ಷೆ ಕೇಂದ್ರಗಳಿವೆ.

ವಿಜಯನಗರದಲ್ಲಿ ಪೊಲೀಸ್‌ ಬಿಗಿ ಭದ್ರತೆ

ಪರೀಕ್ಷಾ ಅಕ್ರಮಗಳು ನಡೆಯದಂತೆ ವಿಜಯನಗರ ಜಿಲ್ಲೆಯಲ್ಲಿ ಪೊಲೀಸ್‌ ಬಿಗಿ ಭದ್ರತೆ ವಹಿಸಲಾಗಿದೆ. ವಿಜಯನಗರ ಜಿಲ್ಲೆಯಲ್ಲಿ 18 ಪರೀಕ್ಷಾ ಕೇಂದ್ರಗಳಿದ್ದು, ಸುಮಾರು 15,911 ವಿದ್ಯಾರ್ಥಿಗಳು ನೋಂದಾಯಿಸಿಕೊಂಡಿದ್ದಾರೆ. ಪರೀಕ್ಷಾ ಕೇಂದ್ರಗಳ ಸುತ್ತ 200 ಮೀಟರ್‌ಗಳ ನಿಷೇಧಾಜ್ಞೆ ಜಾರಿ ಮಾಡಲಾಗಿದೆ. ಮೊಬೈಲ್, ಇತರೆ ಎಲೆಕ್ಟ್ರಾನಿಕ್ಸ್ ಉಪಕರಣಗಳು ಕೊಂಡೊಯ್ಯದಂತೆ ಪೊಲೀಸರು ಎಚ್ಚರಿಕೆ ನೀಡಿದ್ದಾರೆ. ಇನ್ನೂ ಕೊಡಗಿನಲ್ಲಿ ಯಾವುದೇ ಅಕ್ರಮ ನಡೆಯದಂತೆ ಜಿಲ್ಲಾಡಳಿತ ಎಚ್ಚರ ವಹಿಸಿದೆ. ಜಿಲ್ಲೆಯ ಒಟ್ಟು 19 ಕೇಂದ್ರಗಳಿದ್ದು, ನಗರದ ಪರೀಕ್ಷಾ ಕೇಂದ್ರಗಳ ಮುಂಭಾಗ ವಿದ್ಯಾರ್ಥಿಗಳು ಪುಸ್ತಕಗಳನ್ನು ಹಿಡಿದು ನಿಂತ ಚಿತ್ರಣ ಕಂಡು ಬಂತು.

ಇದನ್ನೂ ಓದಿ: K Shivaram: ಕೆ ಶಿವರಾಮ್ ಬಯೋಪಿಕ್‌ಗೆ `ಅಪ್ಪು’ ಗ್ರೀನ್​ ಸಿಗ್ನಲ್​ ಕೊಟ್ಟಿದ್ರಂತೆ!

ಮೊದಲ ದಿನ ಕನ್ನಡ, ಅರೇಬಿಕ್‌ ಪರೀಕ್ಷೆ

ರಾಜ್ಯಾದ್ಯಂತ 2024ರ ದ್ವಿತೀಯ ಪಿಯುಸಿಗೆ 6,98,627 ವಿದ್ಯಾರ್ಥಿಗಳು ನೋಂದಣಿ ಮಾಡಿಕೊಂಡಿದ್ದಾರೆ. ಈ ಪೈಕಿ 3,30,644 ಬಾಲಕರು, 3,67,980 ಬಾಲಕಿಯರು ಪರೀಕ್ಷೆಯನ್ನು ಬರೆಯಲಿದ್ದಾರೆ. ರಾಜ್ಯಾದ್ಯಂತ ಪಿಯುಸಿ ಪರೀಕ್ಷೆಯು 1,124 ಕೇಂದ್ರಗಳಲ್ಲಿ ನಡೆಯಲಿದೆ. 2023-24ನೇ ಸಾಲಿನಿಂದ ದ್ವಿತೀಯ ಪಿ.ಯು.ಸಿ. ಪರೀಕ್ಷಾ ಕ್ರಮದಲ್ಲಿ 80+20 patternನ್ನು (80 ಅಂಕಗಳಿಗೆ ಲಿಖಿತ ಪರೀಕ್ಷೆ ಮತ್ತು 20 ಅಂಕಗಳಿಗೆ ಆಂತರಿಕ ಮೌಲ್ಯಮಾಪನ) ಅಳವಡಿಸಲಾಗಿದೆ. ಶುಕ್ರವಾರ ಕನ್ನಡ ಹಾಗೂ ಅರೇಬಿಕ್ ಭಾಷೆಯ ಪರೀಕ್ಷೆಗಳು ಬೆಳಗ್ಗೆ 10.30ಕ್ಕೆ ಆರಂಭಗೊಳ್ಳಲಿವೆ.

ಶಾಲಾ ಶಿಕ್ಷಣ ಇಲಾಖೆಯು ಕೆಲವು ನಿರ್ಬಂಧಗಳನ್ನು ವಿಧಿಸಿದೆ. ಪರೀಕ್ಷಾ ಕೇಂದ್ರಗಳ ಸುತ್ತಲಿನ 200 ಮೀಟರ್ ವ್ಯಾಪ್ತಿಯಲ್ಲಿ ನಿಷೇಧಾಜ್ಞೆ (Prohibitory orders) ಇದ್ದು, ಕಟ್ಟೆಚ್ಚರ ವಹಿಸಲಾಗುತ್ತದೆ. ವಿದ್ಯಾರ್ಥಿಗಳು ಪರೀಕ್ಷಾ ಕೇಂದ್ರಕ್ಕೆ ಬರುವಾಗ ಐಡಿ ಕಾರ್ಡ್ ಕಡ್ಡಾಯಗೊಳಿಸಲಾಗಿದೆ. ನಿಯಮಾನುಸಾರ ಹಾಗೂ ಕೋರ್ಟ್ ಆದೇಶದ ಅನ್ವಯವೇ ಉಡುಪು ಧರಿಸಿ ಬರಬೇಕಿದೆ.

ದ್ವಿತೀಯ ಪಿಯುಸಿ ಪರೀಕ್ಷೆ ವೇಳಾಪಟ್ಟಿ ಹೀಗಿದೆ..

01-03-2024: ಕನ್ನಡ ಹಾಗೂ ಅರೇಬಿಕ್ ಪರೀಕ್ಷೆ
04-03-2024: ಗಣಿತ, ಶಿಕ್ಷಣ ಶಾಸ್ತ್ರ
05-03-2024: ರಾಜ್ಯ ಶಾಸ್ತ್ರ, ಸಂಖ್ಯಾಶಾಸ್ತ್ರ
06-03-2024: ಮಾಹಿತಿ ತಂತ್ರಜ್ಞಾನ, ರೀಟೈಲ್, ಆಟೋ ಮೊಬೈಲ್ಸ್‌
07-03-2024: ಇತಿಹಾಸ ಹಾಗೂ ಭೌತಶಾಸ್ತ್ರ
09-03-2024: ಐಚ್ಛಿಕ ಕನ್ನಡ, ಲೆಕ್ಕಶಾಸ್ತ್ರ, ಭೂಗರ್ಭ ಶಾಸ್ತ್ರ, ಗೃಹ ವಿಜ್ಞಾನ ಪರೀಕ್ಷೆ
11-03-2024: ತರ್ಕಶಾಸ್ತ್ರ, ವ್ಯವಹಾರ ಅಧ್ಯಯನ ಪರೀಕ್ಷೆ
13-03-2024: ಇಂಗ್ಲಿಷ್
15-03-2024: ಹಿಂದೂಸ್ತಾನಿ ಸಂಗೀತ, ಮನಃಶಾಸ್ತ್ರ, ರಸಾಯನ ಶಾಸ್ತ್ರ, ಮೂಲಗಣಿತ
16-03-2024: ಅರ್ಥಶಾಸ್ತ್ರ ಪರೀಕ್ಷೆ
18-03-2024: ಭೂಗೋಳ ಶಾಸ್ತ್ರ, ಜೀವಶಾಸ್ತ್ರ
20-03-2024: ಸಮಾಜಶಾಸ್ತ್ರ, ವಿದ್ಯುನ್ಮಾನ ಶಾಸ್ತ್ರ, ಗಣಕ ವಿಜ್ಞಾನ
21-03-2024: ತಮಿಳು, ತೆಲುಗು, ಮಲಯಾಳಂ, ಮರಾಠಿ, ಉರ್ದು, ಸಂಸ್ಕೃತ, ಫ್ರೆಂಚ್
22-03-2024: ಹಿಂದಿ ಪರೀಕ್ಷೆ

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

Exit mobile version