ಬೆಂಗಳೂರು: 5 ಮತ್ತು 8ನೇ ತರಗತಿಗೆ ಸಾರ್ವಜನಿಕ ಪರೀಕ್ಷೆ ನಡೆಸುವ ರಾಜ್ಯ ಸರ್ಕಾರದ ನಿರ್ಧಾರವನ್ನು ಖಾಸಗಿ ಶಾಲೆಗಳ ಒಕ್ಕೂಟ (ರುಪ್ಸಾ) ವಿರೋಧಿಸಿದೆ. ಇದು ಮಕ್ಕಳಿಗೆ ಅನಗತ್ಯ ಒತ್ತಡ ಸೃಷ್ಟಿಸಲಿದ್ದು, ನಿರ್ಧಾರವನ್ನು ಮರಳಿ ಪರಿಶೀಲಿಸುವಂತೆ ತಿಳಿಸಿದೆ.
ಈ ಬಗ್ಗೆ ಮುಖ್ಯಮಂತ್ರಿಗಳಿಗೆ ನೋಂದಾಯಿತ ಅನುದಾನ ರಹಿತ ಖಾಸಗಿ ಶಾಲೆಗಳ ಮ್ಯಾನೇಜ್ಮೆಂಟ್ ಸಂಘ (ರುಪ್ಸಾ) ಪತ್ರ ಬರೆದಿದೆ. ಪತ್ರದಲ್ಲಿ ಉಲ್ಲೇಖಿಸಲಾದ ಅಂಶಗಳು ಹೀಗಿವೆ:
- ಸರ್ಕಾರದ ನಿರ್ಧಾರ ಆಶ್ಚರ್ಯಕರ ಮತ್ತು ಅವೈಜ್ಞಾನಿಕ. ಶೈಕ್ಷಣಿಕ ವರ್ಷ ಮುಗಿಯಲು ಕೇವಲ 2-3 ತಿಂಗಳಿರುವಾಗ ಈ ತರಹದ ನಿರ್ಧಾರ ಶಿಕ್ಷಣ ಸಂಸ್ಥೆಗಳನ್ನೂ ಪೋಷಕರನ್ನೂ ಆತಂಕಕ್ಕೆ ಒಳಪಡಿಸಿದೆ.
- ರಾಜ್ಯದ ಶಿಕ್ಷಣ ಕ್ಷೇತ್ರದಲ್ಲಿ ಅನುದಾನ ರಹಿತ ಶಾಲೆಗಳ ಪಾತ್ರ 50%ರಷ್ಟು ಇದೆ. ಮಕ್ಕಳ ಭವಿಷ್ಯ ನಿರ್ಧರಿಸುವ ನಿರ್ಧಾರಗಳನ್ನು ತೆಗೆದುಕೊಳ್ಳುವಾಗ ಈ ಕ್ಷೇತ್ರದ ಅಭಿಪ್ರಾಯಗಳನ್ನೂ ಪರಿಗಣಿಸಬೇಕು.
- ಈಗಾಗಲೇ ಇರುವ ಸಿಸಿಇ (ನಿರಂತರ ಮೌಲ್ಯಮಾಪನ) ಕ್ರಮದಲ್ಲಿ ಈಗಾಗಲೆ 4 ರೂಪಣಾತ್ಮಕ ಪರೀಕ್ಷೆಗಳು ಹಾಗೂ 1 ಸಂಕಲನಾತ್ಮಕ ಪರೀಕ್ಷೆ ಮುಗಿದಿದ್ದು ಮಕ್ಕಳ ಕಲಿಕೆಯ ಪ್ರಗತಿಯನ್ನು ಮೌಲ್ಯಾಂಕನಕ್ಕೊಳಪಡಿಸಿ ಫಲಿತಾಂಶವನ್ನು ಶಿಕ್ಷಣ ಇಲಾಖೆಯ ವೆಬ್ಸೈಟ್ನಲ್ಲಿ ಅಪ್ಲೋಡ್ ಮಾಡಲಾಗಿದೆ. ಇಷ್ಟಾದ ಮೇಲೂ ಮಕ್ಕಳನ್ನು ಮತ್ತೊಮ್ಮೆ ಪಬ್ಲಿಕ್ ಪರೀಕ್ಷೆಗೆ ದೂಡುವುದು ಅವರನ್ನು ಮಾನಸಿಕ ಖಿನ್ನತೆಗೆ ಮತ್ತು ಪೋಷಕರನ್ನು
ಆತಂಕಕ್ಕೆ ಈಡು ಮಾಡಲಿದೆ. - ಸರ್ಕಾರಿ ಕನ್ನಡ ಮಾಧ್ಯಮದ ಶಾಲೆಗಳಿಗೆ ವಿತರಿಸಲಾಗಿರುವ ಅಭ್ಯಾಸ ಹಾಳೆಗಳ ಆಧಾರದ ಮೇಲೆ ಮಾತ್ರ ಮೌಲ್ಯಮಾಪನ ಕೈಗೊಳ್ಳುವುದು ಖಾಸಗಿ, ಇಂಗ್ಲಿಷ್ ಮಾಧ್ಯಮ ಶಾಲೆಯ ಮಕ್ಕಳ ಸಂಪೂರ್ಣ ಮೌಲ್ಯಮಾಪನಕ್ಕೆ ಅನ್ಯಾಯ ಮಾಡಿದಂತೆ.
- ಮೌಲ್ಯಮಾಪನ ಸರಳಗೊಳಿಸಲು ಕೇವಲ ಬಹು ಆಯ್ಕೆಯ ಪ್ರಶ್ನೆಗಳನ್ನು ಕೇಳಿ ಪರೀಕ್ಷೆ ನಡೆಸುವುದರಿಂದ ಮಕ್ಕಳ ವಿವರಣಾತ್ಮಕ ಕೌಶಲ್ಯ ಕುಂಠಿತವಾಗುತ್ತದೆ.
- ಮತ್ತೆ ಕೋವಿಡ್ ಸಾಂಕ್ರಾಮಿಕದ ಆತಂಕ ತಲೆದೋರಿದ್ದು, ಈ ಪರಿಸ್ಥಿತಿಯಲ್ಲಿ ಮುಂಜಾಗ್ರತಾ ದೃಷ್ಟಿಯಿಂದ ಪಬ್ಲಿಕ್ ಪರೀಕ್ಷೆ ಸಮಂಜಸವಲ್ಲ.
- ಸರ್ಕಾರಿ ಶಾಲೆಗಳ ಎಸ್ಡಿಎಂಸಿ ರಾಜ್ಯ ಒಕ್ಕೂಟ, ಶಿಕ್ಷಣ ತಜ್ಞರು ಹೀಗೆ ಎಲ್ಲರೂ ಪಬ್ಲಿಕ್ ಪರೀಕ್ಷೆಗೆ ವಿರೋಧ ವ್ಯಕ್ತಪಡಿಸಿದ್ದಾರೆ. ಆದರೂ ಶಿಕ್ಷಣ ಮಂತ್ರಿಗಳು ಹಠಕ್ಕೆ ಬಿದ್ದವರಂತೆ ತೋರುತ್ತಿದೆ.
- ಆತುರ ಪಡದೆ ಮತ್ತೊಮ್ಮೆ ಶಿಕ್ಷಣ ತಜ್ಞರ ಜೊತೆಗೆ, ಖಾಸಗಿ ಶಿಕ್ಷಣ ಸಂಸ್ಥೆಗಳ ಜೊತೆಗೆ ಸಮಾಲೋಚಿಸಿ ನಿರ್ಧಾರ ತೆಗೆದುಕೊಳ್ಳಲು ವಿನಂತಿಸುತ್ತೇವೆ.
ಇದನ್ನೂ ಓದಿ | Education News | 5 ಮತ್ತು 8ನೇ ತರಗತಿಗಳಿಗೆ ಪಬ್ಲಿಕ್ ಪರೀಕ್ಷೆ; ಫೇಲ್ ಆದರೆ ಮುಂದೇನು?