ಬೆಂಗಳೂರು: ಮುಂದಿನ ಶೈಕ್ಷಣಿಕ ವರ್ಷದಲ್ಲಿ ಮಾರ್ಚ್‌ಗೆ ರಾಜ್ಯದಲ್ಲಿ 600 ಕೆಪಿಎಸ್ ಶಾಲೆಗಳನ್ನು (KPS School) ತೆರೆಯುವ ಗುರಿಯನ್ನು ಹಾಕಿಕೊಂಡಿದ್ದೇನೆ. ಅದರ ಮುಂದಿನ ವರ್ಷ ಮತ್ತೆ 1 ಸಾವಿರ ಶಾಲೆ ತೆರೆಯಲಾಗುತ್ತದೆ. ಆ ಬಳಿಕ ಬಾಕಿ ಉಳಿದವುಗಳನ್ನು ತೆರೆಯುವ ಗುರಿಯನ್ನು ಹಾಕಿಕೊಳ್ಳಲಾಗಿದೆ ಎಂದು ಶಿಕ್ಷಣ ಸಚಿವ ಮಧು ಬಂಗಾರಪ್ಪ ಅವರು (Education Minister Madhu Bangarappa) ಪವರ್ ಪಾಯಿಂಟ್ ವಿತ್ ಎಚ್‌ಪಿಕೆ (Power Point with HPK) ಸಂದರ್ಶನದಲ್ಲಿ ಹೇಳಿದರು.
ವಿಸ್ತಾರ ನ್ಯೂಸ್ ಪ್ರಧಾನ ಸಂಪಾದಕ ಹರಿಪ್ರಕಾಶ್ ಕೋಣೆಮನೆ (Hariprakash Konemane) ಅವರು ನಡೆಸಿಕೊಡುವ “ಪವರ್ ಪಾಯಿಂಟ್ ವಿತ್ ಎಚ್‌ಪಿಕೆ” ವಿಶೇಷ ಸಂದರ್ಶನದಲ್ಲಿ ಮಾತನಾಡಿದ ಶಿಕ್ಷಣ ಸಚಿವ ಮಧು ಬಂಗಾರಪ್ಪ, ರಾಜ್ಯದಲ್ಲಿ 6100 ಗ್ರಾಮ ಪಂಚಾಯಿತಿಗಳು ಇದ್ದು, 2 ಗ್ರಾಮ ಪಂಚಾಯಿತಿಗೆ ಒಂದರಂತೆ ಕೆಪಿಎಸ್ ಶಾಲೆಯನ್ನು ತೆರೆಯುವ ಗುರಿಯನ್ನು ನಾವು ಹೊಂದಿದ್ದೇವೆ. ಆದರೆ, ಅದಕ್ಕೆ ತಕ್ಕಂತೆ ಜನಸಂಖ್ಯೆ ಸಹ ಇರಬೇಕಾಗುತ್ತದೆ. ಮುಂದಿನ ದಿನಗಳಲ್ಲಿ ಇದರ ಬಗ್ಗೆ ನೋಡೋಣ ಎಂದು ಹೇಳಿದರು.
ಇದನ್ನೂ ಓದಿ: Power Point with HPK : ಸಿಎಂ ಸಿದ್ದರಾಮಯ್ಯಗೆ ಮಾಮ ಎಂದು ಕರೆಯುವ ಶಿವರಾಜಕುಮಾರ್!
ಈ ಹಿಂದೆ ಪ್ರಾಯೋಗಿಕವಾಗಿ ಜಾರಿಗೆ ತಂದಿರುವ ಕರ್ನಾಟಕ ಪಬ್ಲಿಕ್ ಸ್ಕೂಲ್‌ಗೆ (ಕೆಪಿಎಸ್) ನಾವು ಈಗ ಹೆಚ್ಚಿನ ಒತ್ತು ಕೊಡುತ್ತಿದ್ದೇವೆ. ಈ ಶಾಲೆಯಲ್ಲಿ ಎಲ್ಲ ತರಹದ ಮೂಲ ಸೌಕರ್ಯವೂ ಇರುತ್ತದೆ. ಇದರಲ್ಲಿ ನಾವು ಇಂಗ್ಲಿಷ್ ಮಾಧ್ಯಮವನ್ನು ಕಲಿಸಲಿದ್ದೇವೆ. ಇಂಗ್ಲಿಷ್ ಮಾಧ್ಯಮವೆಂದರೆ ಯಾರೂ ಭಯ ಪಡುವ ಅಗತ್ಯವಿಲ್ಲ. ಇದರಲ್ಲಿ ಕನ್ನಡ ಮೊದಲ ಭಾಷೆಯಾಗಿರಲಿದ್ದು, ಇಂಗ್ಲಿಷ್ ದ್ವಿತೀಯ ಭಾಷೆಯಾಗಿರಲಿದೆ. ಆದರೆ, ಇಂಗ್ಲಿಷ್ ಕಲಿಕಾ ಮಾಧ್ಯಮವನ್ನು ಕೊಡುವ ನಿಟ್ಟಿನಲ್ಲಿ ನಾವು ಕೆಪಿಎಸ್ ಅನ್ನು ಅನುಷ್ಠಾನಕ್ಕೆ ತರುತ್ತಿದ್ದೇವೆ ಎಂದು ಸಚಿವ ಮಧು ಬಂಗಾರಪ್ಪ ತಿಳಿಸಿದರು.
ಈ ವರ್ಷ ಕೆಪಿಎಸ್‌ಗೆ ಶೇಕಡಾ 450ರಷ್ಟು ಬೇಡಿಕೆ ಬಂದಿದೆ. ಕೆಪಿಎಸ್ ಶಾಲೆಗಾಗಿ ಜನ ಈಗ ಕ್ಯೂ ನಿಂತಿದ್ದಾರೆ. ಅಂದರೆ ಸರ್ಕಾರಿ ಶಾಲೆಗೆ ಡಿಮ್ಯಾಂಡ್ ಬಂದಿದೆ ಎಂದಾಯಿತು. ಇಲ್ಲಿ ಗುಣಮಟ್ಟದ ಶಿಕ್ಷಣ ಸೇರಿದಂತೆ ಸಂಗೀತ ಇನ್ನಿತರ ಚಟುವಟಿಕೆಯನ್ನು ಹೇಳಿಕೊಡಲಾಗುವುದು ಎಂದು ಸಚಿವ ಮಧು ಬಂಗಾರಪ್ಪ ಹೇಳಿದರು.
ಯಾವುದೇ ಖಾಸಗಿ ಶಾಲೆಗಳಿಗೆ ಕಡಿಮೆ ಇರುವುದಿಲ್ಲ
ಕೆಪಿಎಸ್ ಶಾಲೆ ಎಂಬುದು ಯಾವುದೇ ಖಾಸಗಿ ಶಾಲೆಗಳಿಗೆ ಕಡಿಮೆ ಇರುವುದಿಲ್ಲ. ಅವುಗಳಿಗೆ ಸರಿಸಮಾನವಾಗಿ ಇವು ಕಾರ್ಯನಿರ್ವಹಣೆ ಮಾಡಲಿವೆ. ನಾನು ಈಗಾಗಲೇ ಕೆಪಿಎಸ್ ಶಾಲೆಗಳಿಗೆ ಭೇಟಿ ಕೊಟ್ಟು ವೀಕ್ಷಿಸಿದ್ದೇನೆ. ಅಲ್ಲಿರುವ ಮಕ್ಕಳು ಬಡತನದ ಹಿನ್ನೆಲೆ ಇದ್ದರೂ ಇಂಗ್ಲಿಷ್ ಅನ್ನು ಸುಲಲಿತವಾಗಿ ಮಾತನಾಡುತ್ತಾರೆ. ಆ ರೀತಿಯಾಗಿ ನಮ್ಮ ಎಲ್ಲ ಮಕ್ಕಳು ಮಾತನಾಡುವಂತೆ ಆಗಬೇಕು. ಕೆಪಿಎಸ್ ಶಾಲೆ ಮೂಲಕ ಅದಾಗುತ್ತದೆ ಎಂದು ಸಚಿವ ಮಧು ಬಂಗಾರಪ್ಪ ಹೇಳಿದರು.
ಇದನ್ನೂ ಓದಿ: Power Point with HPK : ಗೀತಕ್ಕ ಸ್ಪರ್ಧೆ ತೀರ್ಮಾನ ನನ್ನದೆಂದ ಮಧು ಬಂಗಾರಪ್ಪ!
ಮಕ್ಕಳಿಗೆ ಬ್ಯಾಗ್ ಹೊರೆ ತಗ್ಗಲಿದೆ
ಮಕ್ಕಳಿಗೆ ಪಠ್ಯ ಪುಸ್ತಕದ ಹೊರೆ ಹೆಚ್ಚಾಗಿದೆ. ದಿನವೂ ಅವುಗಳನ್ನು ಶಾಲೆಗೆ ಹೊತ್ತೊಯ್ಯುವುದು ಕಷ್ಟ ಎಂಬುದು ನನ್ನ ಅರಿವಿಗೆ ಬಂದಿದೆ. ಬಸ್ ನಿಲ್ದಾಣದಲ್ಲಿ ಒಬ್ಬಳು ವಿದ್ಯಾರ್ಥಿನಿ ಬಸ್ ಬಂದಾಗ ಎದ್ದು ಚೀಲವನ್ನು ಹಾಕಿಕೊಂಡಾಗ ಅದರ ಭಾರವನ್ನು ತಾಳಲಾರದೆ ಹಿಂಬದಿಗೆ ಬಿದ್ದು ಬಿಟ್ಟಿದ್ದಳು. ಅದೇ ಆಕೆ ರಸ್ತೆಗೆ ಬಿದ್ದಿದ್ದರೆ ಏನು ಗತಿ ಎಂದು ಫೋಟೊ ಸಹಿತ ಒಬ್ಬರು ನನಗೆ ಪ್ರಶ್ನೆ ಮಾಡಿದ್ದರು. ಹೀಗಾಗಿ ನಾನು ಮಕ್ಕಳಿಗೆ ಆ ಹೊರೆಯನ್ನು ಇಳಿಸುವ ತೀರ್ಮಾನಕ್ಕೆ ಬಂದಿದ್ದೇನೆ. ಹಾಗಂತ ಅವರ ಪಠ್ಯದಲ್ಲಿ ಇಳಿಕೆ ಮಾಡುವುದಿಲ್ಲ ಹೊರೆಯನ್ನು ಇಳಿಕೆ ಮಾಡುತ್ತೇನೆ. ಅದು ಹೇಗೆ ಎಂದು ಸಹ ನಾನು ತೀರ್ಮಾನ ಮಾಡಿದ್ದೇನೆ. ಸದ್ಯಕ್ಕೆ ಆ ಬಗ್ಗೆ ಹೇಳುವುದಿಲ್ಲ ಎಂದಷ್ಟೇ ಸಚಿವ ಮಧು ಬಂಗಾರಪ್ಪ ವಿವರಿಸಿದರು.