Site icon Vistara News

AI SCHOOL: ಕೇರಳದಲ್ಲಿ ಮೊದಲ ಎಐ ಶಾಲೆ ʼಇಸ್ಕೂಲ್‌ʼ ಆರಂಭ

AI SCHOOL

ತಿರುವನಂತಪುರಂ: ಕೃತಕ ಬುದ್ಧಿಮತ್ತೆ (ಎಐ) ಕ್ಷೇತ್ರದಲ್ಲಿ ಕೇರಳ ಮುಂಚೂಣಿಯಲ್ಲಿದ್ದು, ಶಿಕ್ಷಣ ಕ್ಷೇತ್ರದಲ್ಲಿ ಈ ತಂತ್ರಜ್ಞಾನವನ್ನು ಅಳವಡಿಸಿಕೊಳ್ಳುವ ಮೂಲಕ ಮಹತ್ವದ ಮೈಲುಗಲ್ಲು ದಾಟಿದೆ. ತಿರುವನಂತಪುರದ ಶಾಂತಿಗಿರಿ ವಿದ್ಯಾಭವನದಲ್ಲಿ ದೇಶದ ಪ್ರಥಮ ಎಐ ಶಾಲೆಯನ್ನು, ದೇಶದ ಮಾಜಿ ರಾಷ್ಟ್ರಪತಿ ರಾಮನಾಥ್‌ ಕೋವಿಂದ್‌ ಉದ್ಘಾಟಿಸಿದ್ದಾರೆ.

ವೇದಿಕ್‌ ಇಸ್ಕೂಲ್‌ ಮತ್ತು ಅಮೆರಿಕದ ಐಲರ್ನಿಂಗ್‌ ಇಂಜಿನ್ಸ್‌ ಸಂಸ್ಥೆಗಳ ಸಹಭಾಗಿತ್ವದಲ್ಲಿ ಈ ಎಐ ಶಾಲೆ ಅಸ್ತಿತ್ವಕ್ಕೆ ಬಂದಿದೆ. ಉನ್ನತ ಮಟ್ಟದ ವಿದ್ಯಾಭ್ಯಾಸವನ್ನು ವಿದ್ಯಾರ್ಥಿಗಳಿಗೆ ಒದಗಿಸಿಕೊಡುವ ಉದ್ದೇಶವನ್ನು ಎಐ ತಂತ್ರಜ್ಞಾನವನ್ನು ಆಧರಿಸಿದ ಈ ನೂತನ ಕಲಿಕಾ ಪದ್ಧತಿ ಹೊಂದಿದೆ. ತಜ್ಞರು, ಪ್ರಾಧ್ಯಾಪಕರು, ಮಾಜಿ ಮುಖ್ಯ ಕಾರ್ಯದರ್ಶಿಗಳು, ಕುಲಪತಿಗಳು ಮತ್ತು ಡಿಜಿಪಿಗಳನ್ನು ಹೊಂದಿರುವ ಉನ್ನತ ಮಟ್ಟದ ಸಮಿತಿಯು ಈ ಶಾಲೆಯನ್ನು ನಿರ್ವಹಿಸುತ್ತಿದೆ.

ಮೊದಲಿಗೆ, 8ರಿಂದ 12ನೇ ತರಗತಿವರೆಗಿನ ವಿದ್ಯಾರ್ಥಿಗಳಿಗೆ ಈ ಶಿಕ್ಷಣ ಕ್ರಮವನ್ನು ಪರಿಚಯಿಸಲಾಗುತ್ತಿದೆ. ಎಐ ಅಳವಡಿಕೆಯಿಂದ ಮಕ್ಕಳಿಗೆ ಅಂತಾರಾಷ್ಟ್ರೀಯ ಮಟ್ಟದ ಕಲಿಕಾ ವ್ಯವಸ್ಥೆಯನ್ನು ಅಳವಡಿಸಿರುವುದಾಗಿ ಸಂಸ್ಥೆ ಹೇಳಿಕೊಂಡಿದೆ. JEE, NEET, CUET, CLAT, GMAT, ಮತ್ತು IELTS ನಂಥ ಸ್ಪರ್ಧಾತ್ಮಕ ಪರೀಕ್ಷೆಗಳಿಗೂ ಈ ಮೂಲಕ ತರಬೇತಿ ನೀಡಲಾಗುತ್ತಿದೆ.

ಇದಲ್ಲದೆ, ಹೊರದೇಶಗಳ ವಿಶ್ವವಿದ್ಯಾಲಯಗಳಿಂದ ಶಿಕ್ಷಣ ಮಾರ್ಗದರ್ಶನವೂ ವಿದ್ಯಾರ್ಥಿಗಳಿಗೆ ಈ ಮೂಲಕ ಲಭ್ಯವಿದೆ. ಈ ಹೊಸ ರೀತಿಯ ಸರ್ವಾಂಗೀಣ ಶಿಕ್ಷಣವನ್ನು ಶಾಲೆಯ ವೆಬ್‌ಸೈಟ್‌ ಮೂಲಕವೇ ಎಐ ತಂತ್ರಜ್ಞಾನವನ್ನಾಧರಿಸಿ ನೀಡಲಾಗುತ್ತಿದ್ದು, ಅವರ ಮೇಲೆ ಹೆಚ್ಚಿನ ಆರ್ಥಿಕ ಹೊರೆಯನ್ನು ಹೇರಲಾಗುತ್ತಿಲ್ಲ. ಇದು ಶಾಲೆಯ ಸಮಯದ ನಂತರವೂ ಮಕ್ಕಳಿಗೆ ಲಭ್ಯವಾಗಲಿದೆ ಎಂದು ಶಾಲೆಯ ಮೂಲಗಳು ತಿಳಿಸಿವೆ.

ಹೊಸ ಪಠ್ಯಕ್ರಮದ ಬಗ್ಗೆ ವಿವರಿಸಿರುವ ಶಾಲೆಯ ಮೂಲಗಳು, ಪಾಠ, ಪರೀಕ್ಷೆ ಮತ್ತು ಸ್ಪರ್ಧಾತ್ಮಕ ಪರೀಕ್ಷೆಗಳ ಅಭ್ಯಾಸದಲ್ಲಿ ಮಕ್ಕಳು ಮತ್ತು ಪಾಲಕರು ಎದುರಿಸುವ ತೊಡಕುಗಳನ್ನು ಗಮನದಲ್ಲಿ ಇರಿಸಿಕೊಂಡು ಇದನ್ನು ರೂಪಿಸಲಾಗಿದೆ. 2020ರ ಹೊಸ ರಾಷ್ಟ್ರೀಯ ಶಿಕ್ಷಣ ನೀತಿಗೆ ಅನುಸಾರವಾಗಿಯೇ ಈ ಪ‍ಠ್ಯಕ್ರಮವಿದೆ ಎಂದು ಹೇಳಿವೆ.

ಇದನ್ನೂ ಓದಿ: Generative AI: ಜನರೇಟಿವ್ ಕೃತಕ ಬುದ್ಧಿಮತ್ತೆಯಿಂದ ಉದ್ಯೋಗ ನಷ್ಟವಾಗಲ್ಲ, ಹೆಚ್ಚಾಗುತ್ತವೆ!

Exit mobile version