ಬೆಂಗಳೂರು: ಖಾಲಿ ಇರುವ ಕುಲಪತಿಗಳ (Vice Chancellor) ಹುದ್ದೆಗೆ ನೇಮಕವನ್ನು ಕೂಡಲೇ ಮಾಡಬೇಕು. ಈ ಕುರಿತ ಕಡತಗಳನ್ನು ಕೂಡಲೇ ರಾಜ್ಯಪಾಲರಿಗೆ ರವಾನಿಸಬೇಕು. ಅಲ್ಲದೆ, 7 ವಿವಿಗಳಿಗೆ ಕೂಡಲೇ ಹಣ ಬಿಡುಗಡೆ ಮಾಡಬೇಕು ಎಂದು ರಾಜ್ಯದ ಮಾಜಿ ಉಪ ಮುಖ್ಯಮಂತ್ರಿ ಡಾ. ಸಿ.ಎನ್. ಅಶ್ವತ್ಥನಾರಾಯಣ (Dr CN Ashwathnarayan) ಅವರು ಒತ್ತಾಯಿಸಿದರು.
ನಗರದ ಮಲ್ಲೇಶ್ವರದ ಬಿಜೆಪಿ ರಾಜ್ಯ ಕಾರ್ಯಾಲಯ ಜಗನ್ನಾಥ ಭವನದಲ್ಲಿ ಮಂಗಳವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಡಾ. ಸಿ.ಎನ್. ಅಶ್ವತ್ಥನಾರಾಯಣ, ಹಂಪಿ ವಿವಿಗೆ ಅನುದಾನವೂ ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆ ಕುರಿತು ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಅವರಿಗೆ ಮನವಿ ನೀಡುತ್ತೇವೆ ಎಂದು ತಿಳಿಸಿದರು.
ರಾಜ್ಯಪಾಲರ ಗಮನ ಸೆಳೆಯುವೆ
ಕಾಂಗ್ರೆಸ್ ಸರ್ಕಾರ ರಾಜ್ಯದಲ್ಲಿ ಅಧಿಕಾರಕ್ಕೆ ಬಂದ ಸಮಯದಿಂದ ಉನ್ನತ ಶಿಕ್ಷಣ ಕ್ಷೇತ್ರವನ್ನು ನಿರ್ಲಕ್ಷಿಸಿದೆ. ಗೊಂದಲಗಳನ್ನು ನಿರ್ಮಾಣ ಮಾಡುತ್ತಿದೆ. ಕಾಲಕಾಲಕ್ಕೆ ತೆಗೆದುಕೊಳ್ಳಬೇಕಾದ ನಿರ್ಣಯಗಳನ್ನು ಮರೆತು ರಾಜಕೀಯಪ್ರೇರಿತವಾಗಿ ಸಮಯವನ್ನು ವ್ಯರ್ಥ ಮಾಡುತ್ತಿದೆ ಎಂದು ಆರೋಪಿಸಿದ ಡಾ. ಸಿ.ಎನ್. ಅಶ್ವತ್ಥನಾರಾಯಣ, ಈ ಬಗ್ಗೆ ಸರ್ಕಾರದ ಗಮನ ಸೆಳೆಯುವುದಲ್ಲದೆ, ರಾಜ್ಯಪಾಲರ ಗಮನ ಸೆಳೆಯಲಾಗುವುದು ಎಂದು ಹೇಳಿದರು.
ಪಬ್ಲಿಕ್ ವಿವಿ, ರಾಜ್ಯದ ವಿವಿಗಳಲ್ಲಿ ಕುಲಪತಿಗಳ ಸ್ಥಾನ ತೆರವಾಗಿ ಬಹಳಷ್ಟು ತಿಂಗಳುಗಳೇ ಕಳೆದಿವೆ. ಜೂನ್ ತಿಂಗಳಿನಲ್ಲಿ ಮಂಗಳೂರು ವಿವಿಯ ಸ್ಥಾನ ತೆರವಾದರೆ, ರಾಣಿ ಚನ್ನಮ್ಮ ವಿವಿ ಜುಲೈ ತಿಂಗಳಿನಲ್ಲಿ, ವಿಜಯನಗರ ವಿಶ್ವವಿದ್ಯಾಲಯದ ಈ ಉನ್ನತ ಸ್ಥಾನ ಆಗಸ್ಟ್‌ನಲ್ಲಿ ಖಾಲಿ ಆಗಿದೆ ಎಂದು ಡಾ. ಸಿ.ಎನ್. ಅಶ್ವತ್ಥನಾರಾಯಣ ವಿವರಿಸಿದರು.
ಕುವೆಂಪು ವಿವಿ, ಬಾಗಲಕೋಟೆಯ ತೋಟಗಾರಿಕಾ ವಿವಿ ಹುದ್ದೆಗಳು ಜುಲೈ ತಿಂಗಳಿನಲ್ಲಿ ತೆರವಾಗಿವೆ. ಹಲವು ತಿಂಗಳಾದರೂ ಕುಲಪತಿಗಳ ನೇಮಕಾತಿ ಮಾಡಿಲ್ಲ. ಪರಿಶೋಧನಾ ಸಮಿತಿ ನೇಮಕಗೊಂಡಿದೆ. ಸಮಿತಿ ವರದಿಯನ್ನೂ ಕೊಟ್ಟಿದೆ. ಅದನ್ನು ನೋಡಲು ಮುಖ್ಯಮಂತ್ರಿಗಳಿಗೆ ಸಮಯ ಇಲ್ಲ ಎಂದು ಡಾ. ಸಿ.ಎನ್. ಅಶ್ವತ್ಥನಾರಾಯಣ ಆಕ್ಷೇಪಿಸಿದರು.
ಇದನ್ನು ರಾಜ್ಯಪಾಲರ ಕಚೇರಿಗೆ ಸಲ್ಲಿಸಿಲ್ಲ. ಇವರು ನಿರ್ಲಕ್ಷಿಸಿದ್ದರಿಂದ ವಿವಿಗಳು ಸಾಕಷ್ಟು ಸಮಸ್ಯೆಗಳನ್ನು ಎದುರಿಸುತ್ತಿವೆ. ಹಣಕಾಸಿನ ಕೊರತೆ, ಸಿಬ್ಬಂದಿ ಕೊರತೆ, ಮುಖ್ಯಸ್ಥರಾದ ಕುಲಪತಿಗಳ ಕೊರತೆ ಇದೆ. ತಾತ್ಕಾಲಿಕ ಕುಲಪತಿ ಇದ್ದರೆ ಅಲ್ಲಿ ಏನೂ ನಿರ್ಣಯ ತೆಗೆದುಕೊಳ್ಳಲಾಗುವುದಿಲ್ಲ ಎಂದು ಹೇಳಿದರು.
ವಿವಿಗಳ ವೇತನ ವಿಳಂಬಕ್ಕೆ ಆಕ್ಷೇಪ
ಅಸಡ್ಡೆ, ನಿರ್ಲಕ್ಷ್ಯ ಮಾಡುತ್ತಿದ್ದಾರೆ. ಪ್ರತಿ ಜಿಲ್ಲೆಗೊಂದು ವಿವಿ ಇರಬೇಕೆಂಬ ಯುಪಿಎ ಸರ್ಕಾರ ಇರುವಾಗ ಮಾಡಿದ ಶಿಫಾರಸಿನಡಿ ಶೈಕ್ಷಣಿಕ ಹಿಂದುಳಿದ ಜಿಲ್ಲೆಗಳಲ್ಲಿ ವಿವಿ ತೆರೆದಿದ್ದು, ಗುಣಮಟ್ಟದ ಶಿಕ್ಷಣಕ್ಕಾಗಿ ಪ್ರಯತ್ನ ನಡೆದಿತ್ತು. ನಾವು 7 ನೂತನ ವಿವಿಗಳನ್ನು ಜಿಲ್ಲೆಗಳಲ್ಲಿ ಆರಂಭಿಸಿದ್ದೇವೆ. ಬೀದರ್, ಕೊಪ್ಪಳ, ಬಾಗಲಕೋಟೆ, ಹಾವೇರಿ, ಕೊಡಗು, ಚಾಮರಾಜನಗರ ಜಿಲ್ಲೆಗಳಲ್ಲಿ ಕುಲಪತಿಗಳ ನೇಮಕ ಆಗಿದೆ. 10 ತಿಂಗಳಾದರೂ ಅವರಿಗೆ ವೇತನ ನೀಡಿಲ್ಲ ಎಂದು ಡಾ.ಅಶ್ವತ್ಥನಾರಾಯಣ ಅವರು ಆಕ್ಷೇಪ ವ್ಯಕ್ತಪಡಿಸಿದರು.
2 ಕೋಟಿ ರೂಪಾಯಿ ಕೊಡಲೂ ಸಾಧ್ಯವಿಲ್ಲವೇ?
ನಾವೇನೂ ದೊಡ್ಡ ಬಜೆಟ್ ಕೊಟ್ಟಿಲ್ಲ. ವರ್ಷಕ್ಕೆ ತಲಾ 2 ಕೋಟಿ ರೂ. ನಿಶ್ಚಯಿಸಿದ್ದೆವು. 10 ತಿಂಗಳಾದರೂ ಸಂಬಳ ಕೊಟ್ಟಿಲ್ಲ. 2 ಕೋಟಿ ರೂಪಾಯಿ ಕೊಡಲೂ ಇವರಿಗೆ ಸಾಧ್ಯವಿಲ್ಲವೇ ಎಂದು ಡಾ. ಸಿ.ಎನ್. ಅಶ್ವತ್ಥನಾರಾಯಣ ಪ್ರಶ್ನಿಸಿದರು. ಇಂಥ ಪರಿಸ್ಥಿತಿಯಲ್ಲಿ ಉತ್ತಮ ಸಮಾಜ ಕಟ್ಟಲು ಹೇಗೆ ಸಾಧ್ಯ ಎಂದು ಕೇಳಿದರು. ಇದು ರಾಜಕೀಯಪ್ರೇರಿತ ದುರುದ್ದೇಶ ಎಂದು ಟೀಕಿಸಿದರು.
ಕುಲಪತಿಗಳ ನೇಮಕಾತಿಯಲ್ಲೂ ವಿಳಂಬ
ವಿವಿಗಳಲ್ಲಿ ವಿದ್ಯಾರ್ಥಿಗಳು ಸಂಕಷ್ಟಕ್ಕೆ ಸಿಲುಕಿದ್ದಾರೆ. ಪ್ರೊಫೆಸರ್‌ಗಳು ಸೇರಿ ಬೋಧಕ, ಬೋಧಕೇತರ ಸಿಬ್ಬಂದಿಯೂ ತೊಂದರೆ ಅನುಭವಿಸುವಂತಾಗಿದೆ. ಹಣ ಕೊಡುವುದಿಲ್ಲ, ನಿರ್ಣಯ ಮಾಡುತ್ತಿಲ್ಲ. ಸ್ಥಾನಗಳನ್ನು ಭರ್ತಿ ಮಾಡುವುದಿಲ್ಲ. ಎಂದಿನಂತೆ ನಡೆಯಬೇಕಾದ ಕುಲಪತಿಗಳ ನೇಮಕಾತಿಯಲ್ಲೂ ವಿಳಂಬ ಮಾಡುತ್ತಿದ್ದಾರೆ ಎಂದು ಡಾ. ಸಿ.ಎನ್. ಅಶ್ವತ್ಥನಾರಾಯಣ ಟೀಕಿಸಿದರು.
ಕನ್ನಡ ಅಸ್ಮಿತೆ ಬಗ್ಗೆ ಸಿದ್ದರಾಮಯ್ಯನವರು ಉದ್ದುದ್ದ ಭಾಷಣ ಮಾಡುತ್ತಾರೆ. ಹಂಪಿ ಕನ್ನಡ ವಿವಿಗೆ ಅಭಿವೃದ್ಧಿಗೆ 72 ಕೋಟಿ ರೂಪಾಯಿ ಕೇಳಿದ್ದರು. ಆದರೆ, ಕೇವಲ 1.20 ಕೋಟಿ ನೀಡಿದ್ದಾರೆ. ಬರೀ ಖಾಲಿ ಭಾಷಣ, ಖಾಲಿ ಆಶ್ವಾಸನೆ ಕಾಂಗ್ರೆಸ್ ಸರ್ಕಾರದ್ದಾಗಿದೆ. ಯುವಕರ ವಿರೋಧಿ, ಅಭಿವೃದ್ಧಿ ವಿರೋಧಿ, ಶಿಕ್ಷಣ ವಿರೋಧಿ ಸರ್ಕಾರ ಇದೆಂದು ಡಾ. ಸಿ.ಎನ್. ಅಶ್ವತ್ಥನಾರಾಯಣ ದೂರಿದರು.
ಇದನ್ನೂ ಓದಿ: Congress Karnataka: ಕೆಪಿಸಿಸಿ ಕಚೇರಿಯಲ್ಲಿ ಕಾರ್ಯಕರ್ತೆ-ಫೋಟೋಗ್ರಾಫರ್ ಮಧ್ಯೆ ಕುರ್ಚಿ ಗಲಾಟೆ!
ಮಾಜಿ ಸಚಿವ ಗೋಪಾಲಯ್ಯ, ವಿಧಾನ ಪರಿಷತ್ ಸದಸ್ಯ ಛಲವಾದಿ ನಾರಾಯಣಸ್ವಾಮಿ, ಬೆಂಗಳೂರು ದಕ್ಷಿಣ ಜಿಲ್ಲಾಧ್ಯಕ್ಷ ಮತ್ತು ಶಾಸಕ ಸಿ.ಕೆ.ರಾಮಮೂರ್ತಿ ಅವರು ಪತ್ರಿಕಾಗೋಷ್ಠಿಯಲ್ಲಿ ಇದ್ದರು.