Site icon Vistara News

Residential Schools: ಜ್ಞಾನ ದೇಗುಲ ವಿವಾದ; ಧೈರ್ಯವಾಗಿ ಯಾರನ್ನು ಪ್ರಶ್ನಿಸಬೇಕು; ಈ ವಾಕ್ಯ ಬರೆದಿದ್ದು ಯಾರು?; ಬಿಜೆಪಿ ಪ್ರಶ್ನೆ

N Ravikumar in assembly council

ಬೆಂಗಳೂರು: ರಾಜ್ಯದ ಎಲ್ಲ ವಸತಿ ಶಾಲೆಗಳ (Residential Schools) ಪ್ರವೇಶ ದ್ವಾರದಲ್ಲಿ ಇದ್ದ ಘೋಷ ವಾಕ್ಯವನ್ನು ಬದಲಾಯಿಸಿರುವ ಸಮಾಜ ಕಲ್ಯಾಣ ಇಲಾಖೆ (Department of Social Welfare) ಕ್ರಮಕ್ಕೆ ರಾಜ್ಯಾದ್ಯಂತ ವ್ಯಾಪಕ ಟೀಕೆಗಳು ವ್ಯಕ್ತವಾಗುತ್ತಿವೆ. ಈ ವಿಚಾರವು ಈಗ ವಿಧಾನ ಮಂಡಲ ಅಧಿವೇಶನದಲ್ಲಿ (Karnataka Budget Session 2024) ಚರ್ಚೆಗೆ ಕಾರಣವಾಗಿದೆ. ಸರ್ಕಾರದ ಈ ನಿರ್ಧಾರದ ವಿರುದ್ಧ ಬಿಜೆಪಿ ಕೆಂಡವಾಗಿದ್ದು, ವಿಧಾನ ಪರಿಷತ್‌ನಲ್ಲಿ ಭಾರಿ ಗದ್ದಲ ಮಾಡಿದೆ. ಅಲ್ಲದೆ, ಸದನದ ಬಾವಿಗಿಳಿದು ಪ್ರತಿಭಟನೆ ನಡೆಸಿದೆ. ಈ ಮೊದಲು ವಸತಿ ಶಾಲೆಗಳಲ್ಲಿ ರಾಷ್ಟ್ರಕವಿ ಕುವೆಂಪು ಅವರು ಬರೆದಿದ್ದ “ಜ್ಞಾನ ದೇಗುಲವಿದು, ಕೈ ಮುಗಿದು ಒಳಗೆ ಬಾ” ಎನ್ನುವ ಘೋಷವಾಕ್ಯ ಇತ್ತು. ಆದರೆ, ಈಗ ಇದನ್ನು ಬದಲಾಯಿಸಿ ಬರೆದಿರುವ ಘೋಷವಾಕ್ಯ ಯಾರದ್ದು ಎಂಬುದನ್ನು ಸರ್ಕಾರ ಸ್ಪಷ್ಟಪಡಿಸಬೇಕು ಎಂದು ಬಿಜೆಪಿ (BJP Karnataka) ಪಟ್ಟು ಹಿಡಿದಿದೆ.

ಕಾಂಗ್ರೆಸ್‌ ಸರ್ಕಾರದ ಈ ನಿರ್ಧಾರದ ವಿರುದ್ಧ ಕಿಡಿಕಾರಿರುವ ಪರಿಷತ್‌ ಸದಸ್ಯ ರವಿಕುಮಾರ್, ಶಾಲೆಗಳಲ್ಲಿ ಈವರೆಗೆ “ಜ್ಞಾನ ದೇಗುಲವಿದು, ಕೈ ಮುಗಿದು ಒಳಗೆ ಬಾ” ಎಂಬ ಘೋಷವಾಕ್ಯ ಇತ್ತು. ಇದನ್ನು ನಮ್ಮ ರಾಷ್ಟ್ರಕವಿ ಕುವೆಂಪು ಬರೆದಿದ್ದರು. ಬದಲಾದ ಘೋಷವಾಕ್ಯ ಯಾರದ್ದು ಎಂಬುದು ಸ್ಪಷ್ಟವಾಗಬೇಕು ಎಂದು ಆಗ್ರಹಿಸಿದರು.

ಶಿಕ್ಷಣ ಸಂಸ್ಥೆಗಳು ಎಂದರೆ ದೇವರು ಎಂಬ ಭಾವನೆ ಇದೆ. ಇದನ್ನು ಚರ್ಚೆಗೆ ಅವಕಾಶ ಕೊಡಿ ಎಂದು ಎನ್. ರವಿಕುಮಾರ್ ಕೇಳಿಕೊಂಡರು. ಆಗ ಮಧ್ಯಪ್ರವೇಶ ಮಾಡಿದ ಸಭಾನಾಯಕ ಭೋಸರಾಜು, ಇದು ಚರ್ಚೆಗೆ ಕೊಡುವ ವಿಚಾರ ಅಲ್ಲ ಎಂದು ಅಭಿಪ್ರಾಯವನ್ನು ತಿಳಿಸಿದರು. ಆಗ ಎದ್ದುನಿಂತ ಪ್ರತಿಪಕ್ಷ ಸದಸ್ಯರು ಕೂಡಲೇ ಆದೇಶವನ್ನು ವಾಪಸ್‌ ಪಡೆಯಬೇಕು ಎಂದು ಆಗ್ರಹಿಸಿದರು.

ಬಳಿಕ ಪರಿಷತ್‌ ಸದಸ್ಯರಾದ ರವಿಕುಮಾರ್‌ ಅವರು ಸದನದ ಬಾವಿಗಿಳಿದು ಆದೇಶ ವಾಪಸ್ ಪಡೆಯುವಂತೆ ಆಗ್ರಹಿಸಿದರು. ಆಗ ಬಿಜೆಪಿಯ ಎಲ್ಲ ಸದಸ್ಯರು ಬಾವಿಗಿಳಿದು ಪ್ರತಿಭಟಿಸಿದರು. ಇದಕ್ಕೆ ಪ್ರತಿಕ್ರಿಯೆ ನೀಡಿದ ಕಾಂಗ್ರೆಸ್‌ ಸದಸ್ಯರು, ನೋಟಿಸ್ ಕೊಡಿ ಎಂದು ಹೇಳಿದರು. ಅದಕ್ಕೆ ಪ್ರತಿಕ್ರಿಯೆ ನೀಡಿದ ವಿಧಾನ ಪರಿಷತ್‌ ವಿಪಕ್ಷ ನಾಯಕ ಕೋಟಾ ಶ್ರೀನಿವಾಸ್ ಪೂಜಾರಿ, ಈಗ ಶೂನ್ಯ ವೇಳೆಯಾಗಿದ್ದು, ಚರ್ಚೆಗೆ ಅವಕಾಶ ಕೊಡಿ ಎಂದರು. ಆಗ ಆಡಳಿತ ಮತ್ತು ವಿಪಕ್ಷಗಳ ನಡುವೆ ವಾಕ್ಸಮರ ನಡೆದಿದೆ.

ಈ ವೇಳೆ ಸಭಾಪತಿ ಸ್ಥಾನದಲ್ಲಿ ಕುಳಿತಿದ್ದ ತೇಜಸ್ವಿನಿ ರಮೇಶ್, ಶೂನ್ಯ ವೇಳೆಯಲ್ಲಿ ಚರ್ಚೆಗೆ ಅವಕಾಶ ಇಲ್ಲ. ಬಾವಿಯಿಂದ ಹೊರಗೆ ಬನ್ನಿ ಎಂದು ಹೇಳಿದರು. ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿದ ವಿಪಕ್ಷ ನಾಯಕ ಕೋಟ ಶ್ರೀನಿವಾಸ ಪೂಜಾರಿ, ಬಾವಿಯಿಂದ ಹೊರಗೆ ಬರಬೇಡಿ ಸೂಚನೆ ನೀಡಿದರು. ಆ ವೇಳೆ ಬಿಜೆಪಿ ಸದಸ್ಯರು ಸರ್ಕಾರದ ವಿರುದ್ಧ ಧಿಕ್ಕಾರ ಕೂಗಿದರು.

ಆಗ ಮಧ್ಯಪ್ರವೇಶ ಮಾಡಿದ ಸಭಾಪತಿ ತೇಜಸ್ವಿನಿ ರಮೇಶ್‌, ಈ ಬಗ್ಗೆ ನೋಟಿಸ್‌ ಕೊಡಿ, ಚರ್ಚೆಗೆ ಅವಕಾಶ ಮಾಡಿಕೊಡುತ್ತೇನೆ. ಸುಮ್ಮನೆ ಸದನದ ಸಮಯವನ್ನು ನಾಶ ಮಾಡಬೇಡಿ ಎಂದು ಹೇಳಿದರು. ಆಗ ಮಧ್ಯಪ್ರವೇಶ ಮಾಡಿದ ಸಭಾನಾಯಕ ಭೋಸರಾಜು, ಸದನದ ಸಮಯ ಹಾಳು ಮಾಡಬೇಡಿ. ನಾಚಿಕೆ ಆಗಲ್ವಾ ನಿಮಗೆ ಎಂದು ಪ್ರಶ್ನಿಸಿದರು. ಇದು ಪರಸ್ಪರ ವಾಕ್ಸಮರಕ್ಕೆ ಕಾರಣವಾಯಿತು.

ವಿಪಕ್ಷ ನಾಯಕ ಕೋಟ ಶ್ರೀನಿವಾಸ್ ಪೂಜಾರಿ ಮಾತನಾಡಿ, ಈ ಸರ್ಕಾರದವರು ಪದೇ ಪದೆ ಇಂತಹ ವಿವಾದಾತ್ಮಕ ಸುತ್ತೋಲೆ ಹೊರಡಿಸುತ್ತಾರೆ. ಸರಸ್ವತಿ ಪೂಜೆ ಮಾಡಬೇಡಿ ಎಂದು ಹೇಳುತ್ತಾರೆ. ಜ್ಞಾನ ದೇಗುಲ ಪ್ರಶ್ನೆ ಮಾಡು ಅಂತ ಬದಲಿಸುತ್ತಾರೆ. ಇದೆಂಥ ನ್ಯಾಯ ಎಂದು ಪ್ರಶ್ನೆ ಮಾಡಿದರು. ಸದನದಲ್ಲಿ ಬಿಜೆಪಿ ಪ್ರತಿಭಟನೆಯನ್ನು ಮುಂದುವರಿಸಿದ್ದರಿಂದ ಸಭಾಪತಿಗಳು ಐದು ನಿಮಿಷಗಳ ಕಾಲ ಸದನವನ್ನು ಮುಂದೂಡಿದರು.

ವಿಧಾನ ಪರಿಷತ್ ವಿಪಕ್ಷ ನಾಯಕ ಕೋಟಾ ಶ್ರೀನಿವಾಸ್ ಪೂಜಾರಿ ಮಾತನಾಡಿ, ಸಿಎಂ ಸಿದ್ದರಾಮಯ್ಯ ಸರ್ಕಾರಕ್ಕೆ ಏನಾಗಿದೆ ಅಂತ ಗೊತ್ತಾಗಿಲ್ಲ. ಶಾಲೆ ಪ್ರಾರಂಭವಾಗಿ ಇಲ್ಲಿಯವರೆಗೂ ಕೈ ಮುಗಿದು ಒಳಗೆ ಬಾ, ಜ್ಞಾನ ದೇಗುಲ ಅಂತಿತ್ತು. ಅದನ್ನು ಈಗ ಪ್ರಶ್ನಿಸು ಬಾ ಅಂತ ಹೇಳಿದ್ದಾರೆ. ಶೂನ್ಯ ವೇಳೆಯಲ್ಲಿ ಇದನ್ನು ರವಿಕುಮಾರ್ ಪ್ರಶ್ನಿಸಿದ್ದಾರೆ. ಆದೇಶ ವಾಪಸ್ ಪಡೆಯುವಂತೆ ಒತ್ತಾಯ ಮಾಡಿದರೂ ವಾಪಸ್ ಪಡೆಯುವ ಲಕ್ಷಣ ಇಲ್ಲ. ಸಮಾಜ ಕಲ್ಯಾಣ ಇಲಾಖೆ ಇತ್ತೀಚೆಗೆ ಹಬ್ಬ ಹರಿದಿನ ವಿಚಾರವಾಗಿ ಆದೇಶ ಹೊರಡಿಸಿತ್ತು. ಅದರಲ್ಲೂ ಕೂಡ ಬಹಳ ಗೊಂದಲ ಮಾಡಿದ್ದರು. ಆಭಾಸವಾದ ವಿಚಾರವನ್ನು ಸೇರಿಸಿದೆ. ಸರ್ಕಾರದಲ್ಲಿ ಬೇಜವಾಬ್ದಾರಿತನ ಹೆಚ್ಚಿದೆ. ನಿರ್ಧಾರ ಮಾಡಿ ಕೂಡಲೇ ಆದೇಶವನ್ನು ಹಿಂಪಡೆಯಬೇಕು ಎಂದು ತಿಳಿಸಿದರು.

ಇದನ್ನೂ ಓದಿ: Residential Schools : ಜ್ಞಾನದೇಗುಲ ವಿವಾದ; ಹಿಂದು ಸಂಸ್ಕೃತಿ ನಾಶಕ್ಕೆ ಹುನ್ನಾರ ಎಂದ ಮೋಹನ ಗೌಡ

ಆದೇಶ ಹಿಂಪಡೆಯುವವರೆಗೂ ನಮ್ಮ‌ ಹೋರಾಟ ನಿಲ್ಲೋದಿಲ್ಲ

ವಿಧಾನ ಪರಿಷತ್ ಸದಸ್ಯ ಎನ್. ರವಿಕುಮಾರ್ ಮಾತನಾಡಿ, “ಜ್ಞಾನ ದೇಗುಲ ಧೈರ್ಯವಾಗಿ ಪ್ರಶ್ನಿಸು” ಎಂದು ಹಾಕಿದ್ದೀರಲ್ಲ. ಏನು ಅಂತ ಪ್ರಶ್ನಿಸಬೇಕು? ವಿದ್ಯಾ ದದಾತಿ ವಿನಯಂ ಎಂದು ಹೇಳಲಾಗುತ್ತದೆ. ಆದರೆ, ನೀವು ಈಗ ಮಾಡುತ್ತಿರುವುದು ಏನು? ಹೇಳಲು ಹೊರಟಿರುವುದು ಏನು? ಸಮಾಜ ಕಲ್ಯಾಣ ಇಲಾಖೆ ಸಚಿವರು ಹೊಸ ಆದೇಶವನ್ನು ಮಾಡಿದ್ದಾರೆ. ಹತ್ತಾರು ಶಾಲೆಗಳಲ್ಲಿ ಬರೆಸಿ, ಬಳಿಕ ಅಳಿಸಿ ಹಾಕಿದ್ದಾರೆ. ಕೆಂಗಲ್ ಹನುಮಂತಯ್ಯ ಕಟ್ಟಿಸಿರುವ ಈ ವಿಧಾನಸೌಧಕ್ಕೆ ಸರ್ಕಾರಿ ಕೆಲಸ, ದೇವರ ಕೆಲಸ ಎಂದಿದೆ. ಅದನ್ನು ಬದಲಿಸುತ್ತೀರಾ? ಸಾವಿರಾರು ಶಾಲೆಗಳಲ್ಲಿ ಸರಸ್ವತಿ ವಿಗ್ರಹ ಇದೆ. ಅದನ್ನೂ ರದ್ದು ಮಾಡ್ತೀರಾ? ಸರ್ಕಾರಕ್ಕೆ ಬುದ್ಧಿ ಭ್ರಮಣೆ ಆಗಿದೆಯಾ? ಕೂಡಲೇ ಆದೇಶವನ್ನು ವಾಪಸ್ ಪಡೆಯಬೇಕು. ವಿಧಾನ ಪರಿಷತ್‌ನಲ್ಲಿ ಸಚಿವರು ಬಂದು ಉತ್ತರವನ್ನು ನೀಡಲಿ. ಅಧಿಕೃತ ಆದೇಶ ಇಲ್ಲ ಎನ್ನುವುದಾದರೆ ಅದನ್ನೇ ಹೇಳಲಿ. ಯಾವ ಅಧಿಕಾರಿ ಸೋಷಿಯಲ್ ಮೀಡಿಯಾದಲ್ಲಿ ಹೇಳಿದ್ದಾರೋ? ಆ ಅಧಿಕಾರಿ ವಿರುದ್ಧ ಕ್ರಮ ಕೈಗೊಳ್ಳಲಿ. ಸಚಿವರ ಬೆಂಬಲ ಇಲ್ಲದೆ ಅಧಿಕಾರಿ ಆದೇಶ ಮಾಡುತ್ತಾರಾ? ಅವರ ಆದೇಶ ಹಿಂಪಡೆಯುವವರೆಗೂ ನಮ್ಮ‌ ಹೋರಾಟ ನಿಲ್ಲೋದಿಲ್ಲ ಎಂದು ಹೇಳಿದರು. ಕಲಾಪ ಕೆಲಕಾಲ ಮುಂದೂಡಿಕೆಯಾಗಿ ಮತ್ತೆ ಆರಂಭವಾದರೂ ಮತ್ತೆ ಗದ್ದಲವಾಗಿದ್ದರಿಂದ ಮುಂದೂಡಿಕೆಯಾಯಿತು.

Exit mobile version