Site icon Vistara News

CBSE Result | ಜುಲೈ ತಿಂಗಳಲ್ಲಿ ಸಿಬಿಎಸ್‌ಇ ಫಲಿತಾಂಶ ಪ್ರಕಟ, ವಿದ್ಯಾರ್ಥಿಗಳು ನಿರಾಳ

CBSE Exam

ನವ ದೆಹಲಿ: 2022ರ ಸಿಬಿಎಸ್‌ಸಿ 10ನೇ ತರಗತಿಯ ಪರೀಕ್ಷೆ ಫಲಿತಾಂಶ (CBSE Result) ಜುಲೈ 4ರಂದು ಮತ್ತು 12ನೇ ತರಗತಿಯ ಫಲಿತಾಂಶ ಜುಲೈ 10ರಂದು ಪ್ರಕಟವಾಗಲಿದೆ ಎಂದು ಸಿಬಿಎಸ್‌ಇ ಬೋರ್ಡ್‌ ತಿಳಿಸಿದೆ.

ಈವರೆಗೆ ರಾಜ್ಯ ಹಾಗೂ ಐಸಿಎಸ್‌ಸಿ ಬೋರ್ಡ್‌ನಿಂದ 10 ಹಾಗೂ 12ನೇ ತರಗತಿಯ ಫಲಿತಾಂಶ ಪ್ರಕಟವಾಗಿದ್ದರೂ ಸಿಬಿಎಸ್‌ಇ ಬೋರ್ಡ್‌ನಿಂದ ಫಲಿತಾಂಶ ಪ್ರಕಟವಾಗಿಲ್ಲ. ಈಗಾಗಲೇ ಏಪ್ರಿಲ್‌ ಹಾಗೂ ಮೇ ತಿಂಗಳಲ್ಲಿ ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದಾರೆ. 10 ಹಾಗೂ 12ನೇ ತರಗತಿ ಎಂದರೆ ಮುಂದಿನ ಘಟ್ಟಕ್ಕೆ ನಿರ್ಣಾಯಕ ಹಂತ, ಹೀಗಾಗಿ ಇವುಗಳ ಫಲಿತಾಂಶವನ್ನು ಶೀಘ್ರದಲ್ಲಿ ಪ್ರಕಟಿಸಬೇಕಾಗಿರುವುದು ಅಗತ್ಯ. ಉಳಿದ ಬೋರ್ಡ್‌ನಿಂದ ಫಲಿತಾಂಶ ಪ್ರಕಟವಾಗಿದ್ದು, ಸಿಬಿಎಸ್‌ಇ ಬೋರ್ಡ್‌ ಇನ್ನೂ ಪ್ರಕಟಿಸಿಲ್ಲ. ಇದರಿಂದ ಉನ್ನತ ವ್ಯಾಸಂಗದ ಅಪೇಕ್ಷಿತ ವಿದ್ಯಾರ್ಥಿಗಳಿಗೆ ವಿವಿಧ ವಿಶ್ವವಿದ್ಯಾಲಯಕ್ಕೆ ಅರ್ಜಿ ಸಲ್ಲಿಸಲು ತೊಂದರೆ ಉಂಟಾಗಿದೆ. ಫಲಿತಾಂಶ ಪ್ರಕಟವಾಗದೆ ಅರ್ಜಿ ಸಲ್ಲಿಸಲು ಸಾಧ್ಯವಾಗುತ್ತಿಲ್ಲ. ಹೀಗಾಗಿ ಸಿಬಿಎಸ್‌ಸಿ ವಿದ್ಯಾರ್ಥಿಗಳು ಫಲಿತಾಂಶಕ್ಕಾಗಿ ಕಾಯುತ್ತಿದ್ದಾರೆ. ಹೀಗೆ ಕಾಯುತ್ತಿದ್ದ ವಿದ್ಯಾರ್ಥಿಗಳಿಗೆ ಸಿಬಿಎಸ್‌ಇ ಬೋರ್ಡ್‌ನಿಂದ ಫಲಿತಾಂಶ ಪ್ರಕಟವಾಗುವ ದಿನಾಂಕವನ್ನು ಘೋಷಣೆ ಮಾಡಿದ್ದನ್ನು ಕೇಳಿ ನಿರಾಳ ಭಾವ ಮೂಡಿದೆ.

ಫಲಿತಾಂಶ ಪ್ರಕಟ ತಡವಾಗಲು ಏನು ಕಾರಣ?

ಈ ಬಾರಿ ಸಿಬಿಎಸ್‌ಇ ಬೋರ್ಡ್‌ನಿಂದ ಪರೀಕ್ಷೆಯನ್ನು ಎರಡು ಹಂತದಲ್ಲಿ ನಡೆಸಲಾಗಿತ್ತು. ಮೊದಲ ಟರ್ಮ್‌ ಪರೀಕ್ಷೆಯನ್ನು 2021ರ ನವೆಂಬರ್‌-ಡಿಸೆಂಬರ್‌ ತಿಂಗಳಲ್ಲಿ ನಡೆಸಲಾಗಿತ್ತು. ಈ ಪರೀಕ್ಷೆಯಲ್ಲಿ ಕೇವಲ ಒಬ್ಜೆಕ್ಟಿವ್‌ ಪ್ರಶ್ನೆಗಳಿಗೆ ಮಾತ್ರ ಉತ್ತರಿಸಲು ಸೂಚಿಸಲಾಗಿತ್ತು. ಈ ಪರೀಕ್ಷೆ ನಡೆದು ಮೂರು ತಿಂಗಳ ಬಳಿಕ ಸಿಬಿಎಸ್‌ಸಿ ಬೋರ್ಡ್ ಫಲಿತಾಂಶವನ್ನು ಪ್ರಕಟಿಸಿತ್ತು.

ಎರಡನೇ ಟರ್ಮ್‌ ಪರೀಕ್ಷೆಯನ್ನು 2022ರ ಏಪ್ರಿಲ್‌ ಹಾಗೂ ಮೇ ತಿಂಗಳಲ್ಲಿ ನಡೆಸಲಾಗಿತ್ತು. ಈ ಹಂತದ ಪರೀಕ್ಷೆಯಲ್ಲಿ ಕೇವಲ ಆಬ್ಜೆಕ್ಟಿವ್‌ ಪ್ರಶ್ನೆ ಮಾತ್ರವಲ್ಲ, ವಿವರವಾಗಿ ಉತ್ತರಿಸಬೇಕಾದ ಪ್ರಶ್ನೆಗಳನ್ನೂ ಕೇಳಲಾಗಿತ್ತು. ಈ ಎರಡೂ ಟರ್ಮ್‌ ಪರೀಕ್ಷೆಯ ಫಲಿತಾಂಶವನ್ನು ಪರಿಗಣಿಸಿ, ಎರಡೂ ಫಲಿತಾಂಶದ ಆಧಾರದ ಮೇಲೆ ಒಟ್ಟು ಫಲಿತಾಂಶ ಪ್ರಕಟವಾಗಲಿದೆ ಎಂದು ಸಿಬಿಎಸ್‌ಸಿ ಬೋರ್ಡ್‌ ತಿಳಿಸಿದೆ.

ಮೊದಲ ಟರ್ಮ್‌ ಪರೀಕ್ಷೆಯ ಫಲಿತಾಂಶ ಪ್ರಕಟವಾದ ಬಳಿಕ ಕೆಲವು ಶಾಲೆಗಳಲ್ಲಿ ಎಲ್ಲ ವಿದ್ಯಾರ್ಥಿಗಳು ಒಂದೇ ಸಮನಾಗಿ ಅಂಕ ಗಳಿಸಿದ್ದು ಬೆಳಕಿಗೆ ಬಂದಿತ್ತು. ಇದರಿಂದ ಮೌಲ್ಯಮಾಪನದ ಪ್ರಕ್ರಿಯೆಯ ಪಾರದರ್ಶಕತೆಯ ಬಗ್ಗೆ ಹಲವು ವಿದ್ಯಾರ್ಥಿಗಳು ಹಾಗೂ ಶಿಕ್ಷಕರು ಪ್ರಶ್ನೆ ಎತ್ತಿದ್ದರು. ಈ ಬಗ್ಗೆ ಸಿಬಿಎಸ್‌ಇ ಬೋರ್ಡ್‌ನ್ನು ಪ್ರಶ್ನಿಸಿದಾಗ ʻಕೋವಿಡ್‌ ಇದ್ದ ಕಾರಣಕ್ಕೆ ಮೊದಲ ಟರ್ಮ್‌ ಪರೀಕ್ಷೆಯನ್ನು ಆಬ್ಜೆಕ್ಟಿವ್‌ ಮಾದರಿಯಲ್ಲಿ ಮಾಡಬೇಕಾಯಿತು. ಈ ಹೊಸ ಮಾದರಿಯ ಪರೀಕ್ಷೆಗೆ ಶಾಲೆಯ ಶಿಕ್ಷಕರು ಹಾಗು ವಿದ್ಯಾರ್ಥಿಗಳು ಶ್ರಮ ವಹಿಸಿದ್ದಾರೆ. ಅಲ್ಲದೆ, 12ನೇ ತರಗತಿಯ ವಿದ್ಯಾರ್ಥಿಗಳು ಕಳೆದ ಎರಡು ವರ್ಷಗಳಿಂದ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತಯಾರಿ ನಡೆಸುತ್ತಿರುವ ಕಾರಣದಿಂದ ಉತ್ತಮ ಅಂಕ ಪಡೆದಿರುವ ಸಾಧ್ಯತೆಯಿದೆʼ ಎಂದು ತಿಳಿಸಿದೆ.

ಈ ಬಾರಿಯ ಫಲಿತಾಂಶದಲ್ಲಿ ಯಾವುದೇ ರೀತಿಯ ಗೊಂದಲಕ್ಕೆ ಎಡೆಮಾಡಿಕೊಡದಂತೆ ಎಚ್ಚರ ವಹಿಸಿದೆ. ಜುಲೈ 4 ಹಾಗೂ ಜುಲೈ 10ರಂದು ಎರಡೂ ಟರ್ಮ್‌ಗಳ ಫಲಿತಾಂಶ ಪ್ರಕಟವಾಗಲಿರುವ ಸುದ್ದಿ ಕೇಳಿ ವಿದ್ಯಾರ್ಥಿಗಳು ನಿರಾಳರಾಗಿದ್ದಾರೆ.

ಇದನ್ನೂ ಓದಿ: 2nd puc result | ಮೇಲುಗೈ ಸಾಧಿಸಿದ ಬಾಲಕಿಯರು; ದಕ್ಷಿಣ ಕನ್ನಡ ಜಿಲ್ಲೆ ಫಸ್ಟ್‌, ಚಿತ್ರದುರ್ಗ ಲಾಸ್ಟ್

Exit mobile version