Site icon Vistara News

CET 2024: ದ್ವಿತೀಯ ಪಿಯು ವಿದ್ಯಾರ್ಥಿಗಳಿಗೆ ಗುಡ್‌ನ್ಯೂಸ್‌; ಸಿಇಟಿಗೆ ಹೆಚ್ಚು ಅಂಕಗಳ ಪಟ್ಟಿ ಪರಿಗಣನೆ

CET exam 2024

ಬೆಂಗಳೂರು: ದ್ವಿತೀಯ ಪಿಯುಸಿ ವಿದ್ಯಾರ್ಥಿಗಳಿಗೆ ಕರ್ನಾಟಕ ಪರೀಕ್ಷಾ ಪ್ರಾಧಿಕಾರ (KEA) ಗುಡ್‌ನ್ಯೂಸ್‌ ನೀಡಿದೆ. ದ್ವಿತೀಯ ಪಿಯುಸಿಯ ಮೂರು ಪರೀಕ್ಷೆಗಳನ್ನು ಬರೆಯುವ ವಿದ್ಯಾರ್ಥಿಗಳು ಯಾವುದರಲ್ಲಿ ಹೆಚ್ಚು ಅಂಕ ಪಡೆದಿರುತ್ತಾರೋ ಅದನ್ನೇ ಸಿಇಟಿ (CET 2024)ಗೆ ಪರಿಗಣಿಸಲು ಕೆಇಎ ಸಮ್ಮತಿ ಸೂಚಿಸಿದೆ. ಇದರಿಂದ ನೂರಾರು ವಿದ್ಯಾರ್ಥಿಗಳು ನಿರಾಳವಾಗಿದ್ದಾರೆ. ಎಂಜಿನಿಯರ್‌ ಸೇರಿದಂತೆ ವಿವಿಧ ವೃತ್ತಿಪರ ಕೋರ್ಸ್‌ಗಳ ಪ್ರವೇಶಕ್ಕೆ ಕೆಇಎ ಪ್ರತಿವರ್ಷ ಸಿಇಟಿ ನಡೆಸುತ್ತದೆ.

ಸಿಇಟಿ ಜತೆಗೆ ದ್ವಿತೀಯ ಪಿಯುಸಿಯಲ್ಲಿ ಗಳಿಸಿದ ಅಂಕವನ್ನೂ ರ‍್ಯಾಂಕಿಂಗ್​ಗೆ ಪರಿಗಣಿಸಲಾಗುತ್ತದೆ. ಇದುವರೆಗೆ ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಫೇಲಾದರೆ ಪೂರಕ ಪರೀಕ್ಷೆ ಬರೆದು ತೇರ್ಗಡೆಯಾಗಬೇಕಿತ್ತು. ಮುಖ್ಯ ಪರೀಕ್ಷೆ ಮತ್ತು ಪೂರಕ ಪರೀಕ್ಷೆಯಲ್ಲಿ ಪಡೆದ ಅಂಕಗಳನ್ನು ಕ್ರೂಡೀಕರಿಸಿ ಅಂಕಪಟ್ಟಿ ನೀಡಲಾಗುತ್ತಿತ್ತು.

ನಿಯಮದಲ್ಲಿ ಬದಲಾವಣೆ

ಈ ಬಾರಿ ಈ ನಿಯಮದಲ್ಲಿ ಕೊಂಚ ಬದಲಾವಣೆ ತರಲಾಗಿದೆ. ಇದೇ ಮೊದಲ ಬಾರಿಗೆ ವಿದ್ಯಾರ್ಥಿಗಳ ಅನುಕೂಲದ ದೃಷ್ಟಿಯಿಂದ ಮೂರು ಪರೀಕ್ಷೆಗಳನ್ನು ಪರಿಚಯಿಸಲಾಗಿದೆ. ಒಂದು ವೇಳೆ ಕಡಿಮೆ ಅಂಕ ಬಂದಿದ್ದರೆ ಅದನ್ನು ಉತ್ತಮಪಡಿಸಿಕೊಳ್ಳಲು ವಿದ್ಯಾರ್ಥಿಗಳು ಇನ್ನು ಉಳಿದ ಎರಡು ಪರೀಕ್ಷೆಗಳನ್ನೂ ಬರೆಯಬಹುದು. ಹೆಚ್ಚು ಅಂಕ ಬಂದಿರುವುದನ್ನೇ ಪರಿಗಣಿಸಿ ಅಂತಿಮ ಅಂಕಪಟ್ಟಿ ನೀಡಲಾಗುತ್ತದೆ.

ಇದೀಗ ಆ ಹೆಚ್ಚುವರಿ ಅಂಕವನ್ನೇ ಸಿಇಟಿ ರ‍್ಯಾಂಕಿಂಗ್‌ಗೂ ಪರಿಣಿಸಲಾಗುತ್ತದೆ ಎಂದು ಪ್ರಕಟಣೆ ತಿಳಿಸಿದೆ. ಈ ಬಗ್ಗೆ ಕೆಇಎ ಕಾರ್ಯ ನಿರ್ವಾಹಕ ನಿರ್ದೇಶಕಿ ಎಸ್‌.ರಮ್ಯಾ ಮಾತನಾಡಿ, ʼʼಹೆಚ್ಚು ಅಂಕ ಬಂದಿರುವ ಅಂತಿಮ ಅಂಕ ಪಟ್ಟಿಯನ್ನು ಸಿಇಟಿ ಅಂಕಗಳ ಜತೆ ರ‍್ಯಾಂಕಿಂಗ್‌ ಪಟ್ಟಿ ಸಿದ್ಧಪಡಿಸಲು ಪರೀಕ್ಷಾ ಪ್ರಾಧಿಕಾರ ಪರಿಗಣಿಸಲಿದೆʼʼ ಎಂದು ತಿಳಿಸಿದ್ದಾರೆ.

ಪಿಯುಸಿ ಪರೀಕ್ಷೆ 2

ದ್ವಿತೀಯ ಪಿಯುಸಿ ಪರೀಕ್ಷೆ 2 ಬರೆಯಲು ಇಚ್ಛಿಸುವವರು ಏಪ್ರಿಲ್ 10ರಿಂದ 16 ರವರೆಗೆ ಅರ್ಜಿ ಸಲ್ಲಿಸಬಹುದು. ಕಾಲೇಜಿನಲ್ಲಿ ಪ್ರಾಂಶುಪಾಲರ ಸಹಾಯದೊಂದಿಗೆ ಅಥವಾ ವೆಬ್‌ಸೈಟ್‌ನಲ್ಲಿ ನೇರವಾಗಿ ಪರೀಕ್ಷೆ 2ಕ್ಕೆ ನೋಂದಣಿ ಮಾಡಿಕೊಳ್ಳಬಹುದಾಗಿದೆ. ಇದು ದಂಡ ರಹಿತ ಅವಕಾಶವಾಗಿದೆ. ಇನ್ನು ಇದರ ನಂತರ ದಂಡ ಸಹಿತವಾಗಿ ಏಪ್ರಿಲ್‌ 17 ಮತ್ತು 18ಕ್ಕೆ ಅರ್ಜಿ ಸಲ್ಲಿಸಲು ಅವಕಾಶ ನೀಡಲಾಗಿದೆ. ದ್ವಿತೀಯ ಪಿಯು ಪರೀಕ್ಷೆ 2 ಬರೆಯಲು ಇಚ್ಛಿಸುವವರು ಮರು ಮೌಲ್ಯಮಾಪನಕ್ಕೆ ಅರ್ಜಿ ಸಲ್ಲಿಸಿದ್ದರೆ ಅದರ ಫಲಿತಾಂಶಕ್ಕಾಗಿ ಕಾಯಬೇಕಿಲ್ಲ. ಕೂಡಲೇ ಅರ್ಜಿ ಸಲ್ಲಿಸಲು ಅವಕಾಶ ಇದೆ. ಪರೀಕ್ಷೆ 2 ಅನ್ನು ಬರೆಯುವವರಿಗೆ ಒಂದು ವಿಷಯಕ್ಕೆ 140 ರೂಪಾಯಿ ಶುಲ್ಕವನ್ನು ನಿಗದಿ ಮಾಡಿದ್ದರೆ, ಎರಡು ವಿಷಯಕ್ಕೆ 270 ರೂ., ಮೂರು ಅಥವಾ ಹೆಚ್ಚಿನ ವಿಷಯಕ್ಕೆ 400 ರೂಪಾಯಿ ಶುಲ್ಕವನ್ನು ವಿಧಿಸಲಾಗಿದೆ.

ಸಿಇಟಿ ಪರೀಕ್ಷೆ ಯಾವಾಗ?

ಸಿಇಟಿ 2024ರ ಪರೀಕ್ಷೆಗಳು ಏಪ್ರಿಲ್‌ 18 ಮತ್ತು 19ರಂದು ನಡೆಯಲಿದೆ. ಏಪ್ರಿಲ್ 18 – ಬೆಳಿಗ್ಗೆ 10-30ರಿಂದ ಜೀವಶಾಸ್ತ್ರ , ಮಧ್ಯಾಹ್ನ 2.30ರಿಂದ ಗಣಿತ, ಏಪ್ರಿಲ್ 19 – ಬೆಳಿಗ್ಗೆ 10-30ರಿಂದ ಭೌತಶಾಸ್ತ್ರ , ಮಧ್ಯಾಹ್ನ ರಸಾಯನ ಶಾಸ್ತ್ರ, ಏಪ್ರಿಲ್ 20 – ಹೊರನಾಡು ಮತ್ತು ಗಡಿನಾಡ ಕನ್ನಡಿಗರಿಗೆ ಭಾಷಾ ಪರೀಕ್ಷೆ ಆಯೋಜಿಸಲಾಗಿದೆ.

ಇದನ್ನೂ ಓದಿ: 2nd PUC Result: ದ್ವಿತೀಯ ಪಿಯುಸಿ ವಾರ್ಷಿಕ ಪರೀಕ್ಷೆ 2ರ ವೇಳಾಪಟ್ಟಿ ಪ್ರಕಟ; ಏಪ್ರಿಲ್‌ 29ರಿಂದ ಮೇ 16ರವರೆಗೆ ಎಕ್ಸಾಂ

Exit mobile version