Site icon Vistara News

CM Siddaramaiah : ಮುಂದಿನ ಶೈಕ್ಷಣಿಕ ವರ್ಷದಿಂದ NEP ರದ್ದು; ಸಿಎಂ ಸಿದ್ದರಾಮಯ್ಯ ಘೋಷಣೆ

NEP Siddaramaiah

ಬೆಂಗಳೂರು: ಕೇಂದ್ರ ಮತ್ತು ರಾಜ್ಯ ಸರ್ಕಾರಗಳ (Central and state Government) ನಡುವೆ ತಿಕ್ಕಾಟಕ್ಕೆ ಕಾರಣವಾಗಿರುವ ರಾಷ್ಟ್ರೀಯ ಶಿಕ್ಷಣ ನೀತಿಯನ್ನು (National Education Policy) ಮುಂದಿನ ಶೈಕ್ಷಣಿಕ ವರ್ಷದಿಂದ ರಾಜ್ಯದಲ್ಲಿ ರದ್ದುಗೊಳಿಸಲಾಗುವುದು (NEP Cancelled from Next year) ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ (CM Siddaramaiah) ಹೇಳಿದ್ದಾರೆ. ಕೆಪಿಸಿಸಿ ಕಚೇರಿಯಲ್ಲಿ ನಡೆದ ಕರ್ನಾಟಕ ಕಾಂಗ್ರೆಸ್ ಸಮಿತಿಯ ಸರ್ವ ಸದಸ್ಯರ ಸಭೆಯನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಕೇಂದ್ರ ಸರ್ಕಾರ 2020ರಲ್ಲಿ ರಾಷ್ಟ್ರೀಯ ಶಿಕ್ಷಣ ನೀತಿಯನ್ನು ಜಾರಿಗೆ ತಂದಿತ್ತು ಮತ್ತು ಅದನ್ನು ಹಂತ ಹಂತವಾಗಿ ಅನುಷ್ಠಾನಗೊಳಿಸುವಂತೆ ಸೂಚಿಸಿತ್ತು. ಕರ್ನಾಟಕದಲ್ಲಿ ಆಡಳಿತದಲ್ಲಿದ್ದ ಬಿಜೆಪಿ ಸರ್ಕಾರ ಅದನ್ನು ದೇಶದಲ್ಲೇ ಪ್ರಪ್ರಥಮವಾಗಿ ಜಾರಿ ಮಾಡಿದ ಹೆಗ್ಗಳಿಕೆಯನ್ನು ಹೊಂದಿತ್ತು. ಆಗಲೇ ಕಾಂಗ್ರೆಸ್‌ ಇದನ್ನು ವಿರೋಧಿಸಿತ್ತು. ಇದೀಗ ಕಾಂಗ್ರೆಸ್‌ ಸರ್ಕಾರ ಅಸ್ತಿತ್ವಕ್ಕೆ ಬಂದ ಬಳಿಕ ಮೊದಲ ಬಜೆಟ್‌ನಲ್ಲಿಯೇ ಅದನ್ನು ರದ್ದುಪಡಿಸುವುದಾಗಿ ಘೋಷಣೆ ಮಾಡಿತ್ತು. ಇದೀಗ ಕಾಂಗ್ರೆಸ್‌ ಸಭೆಯಲ್ಲಿ ಮುಂದಿನ ಶೈಕ್ಷಣಿಕ ವರ್ಷದಿಂದ ಎನ್‌ಇಪಿಯನ್ನು ಸಂಪೂರ್ಣ ರದ್ದುಗೊಳಿಸಲಾಗುವುದು ಎಂದು ಸಿದ್ದರಾಮಯ್ಯ ಪ್ರಕಟಿಸಿದ್ದಾರೆ.

ʻʻಅಗತ್ಯವಾದ ಕೆಲವೊಂದು ಸಿದ್ಧತೆಗಳನ್ನು ಮಾಡಿಕೊಂಡು NEP ರದ್ದುಗೊಳಿಸಬೇಕಿದೆ. ಈ ವರ್ಷ ಅದಕ್ಕೆ ಸಮಯ ಇರಲಿಲ್ಲ. ಚುನಾವಣೆ ಫಲಿತಾಂಶ ಬಂದು ಸರ್ಕಾರ ರಚನೆ ಆಗುವ ವೇಳೆಗೆ ಶೈಕ್ಷಣಿಕ ವರ್ಷ ಆರಂಭವಾಗಿತ್ತು. ಮಧ್ಯದಲ್ಲಿ ಸಮಸ್ಯೆ ಆಗಬಾರದು ಎನ್ನುವ ಕಾರಣದಿಂದ ಈ ವರ್ಷ ಹಾಗೆಯೇ ಮುಂದುವರಿದಿದೆʼʼ ಎಂದು ಸಿದ್ದರಾಮಯ್ಯ ಹೇಳಿದರು.

ಇದನ್ನೂ ಓದಿ: NEP 2020 : ರಾಷ್ಟ್ರೀಯ ಶಿಕ್ಷಣ ನೀತಿಗೆ ಕರ್ನಾಟಕದಲ್ಲಿ ಕೊನೇ ಮೊಳೆ? ಬೇಡವೇ ಬೇಡವೆಂದ ತಜ್ಞರು!

ರಾಷ್ಟ್ರೀಯ ಶಿಕ್ಷಣ ನೀತಿಗೆ ಏಕ ಕಾಲದಲ್ಲಿ ವಿದ್ಯಾರ್ಥಿಗಳು, ಪೋಷಕರು ಮತ್ತು ಉಪನ್ಯಾಸಕರು ಹಾಗೂ ಶಿಕ್ಷಕರ ವಿರೋಧವಿದೆ. ಬಿಜೆಪಿ ದೇಶದಲ್ಲಿ ಎಲ್ಲಾ ಕಡೆ ಈ ನೀತಿಯನ್ನು ಜಾರಿಗೊಳಿಸದೆ ರಾಜ್ಯದಲ್ಲಿ ಮೊದಲ ಬಾರಿಗೆ ಜಾರಿಗೊಳಿಸಿ ನಾಡಿನ ವಿದ್ಯಾರ್ಥಿ ಸಮೂಹದ ಹಿತಾಸಕ್ತಿಯನ್ನು ಬಲಿ ಕೊಟ್ಟಿದೆ ಎಂದು ಸಿದ್ದರಾಮಯ್ಯ ಹೇಳಿದರು.

ರಾಷ್ಟ್ರೀಯ ಶಿಕ್ಷಣ ನೀತಿಯನ್ನು ಅಂಗನವಾಡಿ, ಎಲ್‌ಕೆಜಿ ಮಟ್ಟದಿಂದ ಆರಂಭಿಸಿ ಬಳಿಕ 2030ರ ಹೊತ್ತಿಗೆ ಎಲ್ಲ ತರಗತಿಗಳಿಗೆ ಅನ್ವಯಿಸಬೇಕು ಎಂದು ಮೂಲ ಕರಡಿನಲ್ಲಿ ಹೇಳಲಾಗಿತ್ತು. ಆದರೆ, ರಾಜ್ಯದಲ್ಲಿ ಕಾಲೇಜು ಹಂತದಿಂದ ಇದನ್ನು ಆರಂಭಿಸಲಾಗಿತ್ತು.

ಪದವಿ ಮಟ್ಟದಲ್ಲಿ ಕೌಶಲಾಧರಿತ ಶಿಕ್ಷಣ ವ್ಯವಸ್ಥೆಯಾಗಿರುವ ರಾಷ್ಟ್ರೀಯ ಶಿಕ್ಷಣ ನೀತಿಯ ಬಗ್ಗೆ ಪರ ವಿರುದ್ಧ ಅಭಿಪ್ರಾಯಗಳು ಎಲ್ಲ ಕಡೆ ಇವೆ. ಪದವಿಯನ್ನು ಯಾವುದೇ ಹಂತದಲ್ಲಿ ಮುಕ್ತಾಯಗೊಳಿಸಬಹುದಾದ, ವಿಜ್ಞಾನ ಓದುವವರು ಸಾಹಿತ್ಯವನ್ನೂ ಕಲಿಸಬಹುದಾದ ಅವಕಾಶವನ್ನು ನೀಡಿರುವ ಈ ಶಿಕ್ಷಣ ಪದ್ಧತಿ ಸಾಕಷ್ಟು ಕುತೂಹಲ ಕೆರಳಿಸಿತ್ತು. ಆದರೆ ಅದರ ಅನುಷ್ಠಾನ ಸರಿ ಆಗಿಲ್ಲ ಎಂಬ ದೂರಿದೆ. ಇದೀಗ ರಾಜ್ಯ ಸರ್ಕಾರ ತನ್ನ ಮೊದಲಿನ ತೀರ್ಮಾನದಂತೆ ಅದನ್ನು ರದ್ದುಗೊಳಿಸಲು ಮುಂದಾಗಿದೆ. ಆದರೆ, ಇದುವರೆಗೆ ರಾಷ್ಟ್ರೀಯ ಶಿಕ್ಷಣ ನೀತಿಯಡಿ ಶಿಕ್ಷಣ ಪಡೆದವರು ಸಂಕಷ್ಟಕ್ಕೆ ಸಿಲುಕಬಹುದೇ ಎಂಬ ಪ್ರಶ್ನೆಯೂ ಎದುರಾಗಿದೆ.

ಇದನ್ನೂ ಓದಿ: Karnataka Budget 2023 : ರಾಷ್ಟ್ರೀಯ ಶಿಕ್ಷಣ ನೀತಿ ರದ್ದು; ರಾಜ್ಯದಲ್ಲಿ ಜಾರಿಗೆ ಬರಲಿದೆ ಹೊಸ ನೀತಿ

Exit mobile version