Site icon Vistara News

Dharmendra Pradhan: ವಿದ್ಯಾರ್ಥಿಗಳಿಗೆ ಗುಡ್‌ನ್ಯೂಸ್‌; ಎರಡು ಬಾರಿ 10, 12ನೇ ತರಗತಿ ಬೋರ್ಡ್‌ ಪರೀಕ್ಷೆ ಬರೆಯಲು ಅವಕಾಶ

board exam

board exam

ನವದೆಹಲಿ: ಕೇಂದ್ರ ಸರ್ಕಾರ ವಿದ್ಯಾರ್ಥಿಗಳಿಗೆ ಗುಡ್‌ನ್ಯೂಸ್‌ ನೀಡಿದೆ. 2025-26ನೇ ಶೈಕ್ಷಣಿಕ ಸಾಲಿನಿಂದ 10 ಮತ್ತು 12ನೇ ತರಗತಿಯ ವಿದ್ಯಾರ್ಥಿಗಳು ವರ್ಷಕ್ಕೆ ಎರಡು ಬಾರಿ ಬೋರ್ಡ್‌ ಪರೀಕ್ಷೆಗೆ ಹಾಜರಾಗುವ ಆಯ್ಕೆ ಹೊಂದಲಿದ್ದಾರೆ ಎಂದು ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್‌ (Dharmendra Pradhan) ತಿಳಿಸಿದರು. ʼʼಈ ಯೋಜನೆಯು ಶೈಕ್ಷಣಿಕ ಒತ್ತಡವನ್ನು ಕಡಿಮೆ ಮಾಡುವ ಗುರಿಯನ್ನು ಹೊಂದಿದೆ. ಮಾತ್ರವಲ್ಲ ಇದು 2020ರಲ್ಲಿ ಪರಿಚಯಿಸಲಾದ ರಾಷ್ಟ್ರೀಯ ಶಿಕ್ಷಣ ನೀತಿ (National Education Policy)ಯಲ್ಲಿ ವಿವರಿಸಿದ ಉದ್ದೇಶಕ್ಕೆ ಹೊಂದಿಕೆಯಾಗುತ್ತದೆʼʼ ಎಂದು ಅವರು ಹೇಳಿದರು.

ಛತ್ತೀಸ್‌ಗಢದ ರಾಯ್‌ಪುರದ ಪಂಡಿತ್‌ ದೀನದಯಾಳ್‌ ಉಪಾಧ್ಯಾಯ ಸಭಾಂಗಣದಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಅವರು ವಿದ್ಯಾರ್ಥಿಗಳೊಂದಿಗೆ ಸಂವಾದ ನಡೆಸುವ ವೇಳೆ ಈ ಮಹತ್ವದ ನಿರ್ಧಾರ ಘೋಷಿಸಿದರು. ಕಳೆದ ವರ್ಷ ಆಗಸ್ಟ್‌ನಲ್ಲಿ ಶಿಕ್ಷಣ ಸಚಿವಾಲಯ ಘೋಷಿಸಿದ ಹೊಸ ಪಠ್ಯಕ್ರಮ ಚೌಕಟ್ಟು (New Curriculum Framework) ಪ್ರಕಾರ, ಉತ್ತಮವಾಗಿ ಕಾರ್ಯನಿರ್ವಹಿಸಲು ವಿದ್ಯಾರ್ಥಿಗಳು ಸಾಕಷ್ಟು ಸಮಯ ಮತ್ತು ಅವಕಾಶ ಒದಗಿಸಲಾಗುತ್ತದೆ. ಇದನ್ನು ಖಚಿತಪಡಿಸಿಕೊಳ್ಳಲು ಬೋರ್ಡ್ ಪರೀಕ್ಷೆಗಳನ್ನು ವರ್ಷಕ್ಕೆ ಕನಿಷ್ಠ ಎರಡು ಬಾರಿ ನಡೆಸಲಾಗುವುದು. ಈ ಪೈಕಿ ವಿದ್ಯಾರ್ಥಿಗಳು ಅತ್ಯುತ್ತಮ ಸ್ಕೋರ್ ಅನ್ನು ಉಳಿಸಿಕೊಳ್ಳುವ ಆಯ್ಕೆಯನ್ನು ಹೊಂದಲಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಸಚಿವರು ಹೇಳಿದ್ದೇನು?

ಧರ್ಮೇಂದ್ರ ಪ್ರಧಾನ್‌ ಮಾತನಾಡಿ, “ಎನ್ಇಪಿ ಮೂಲಕ ವಿದ್ಯಾರ್ಥಿಗಳ ಮೇಲಿನ ಒತ್ತಡ ಕಡಿಮೆ ಮಾಡುವುದು, ಗುಣಮಟ್ಟದ ಶಿಕ್ಷಣ ಒದಗಿಸುವುದು, ಸಂಸ್ಕೃತಿಯನ್ನು ಪರಿಚಯಿಸುವುದು ಮತ್ತು ಭವಿಷ್ಯಕ್ಕಾಗಿ ಅವರನ್ನು ಸಿದ್ಧಪಡಿಸುವುದು ಪ್ರಧಾನಿ ನರೇಂದ್ರ ಮೋದಿ ಅವರ ಉದ್ದೇಶ. ಈ ಮೂಲಕ 2047ರ ವೇಳೆಗೆ ಭಾರತವನ್ನು ಅಭಿವೃದ್ಧಿ ಹೊಂದಿದ ದೇಶವನ್ನಾಗಿ ಮಾಡಲಾಗುವುದುʼʼ ಎಂದು ಹೇಳಿದರು.

ಪ್ರತಿ ವರ್ಷ ಶಾಲೆಗಳಲ್ಲಿ 10 ದಿನ ಬ್ಯಾಗ್‌ ರಹಿತ ದಿನಗಳನ್ನು ಆಚರಿಸುವ ಪ್ರಾಧಾನ್ಯತೆಯನ್ನೂ ಸಚಿವರು ಒತ್ತಿ ಹೇಳಿದರು. ʼʼಕಲೆ, ಸಂಸ್ಕೃತಿ ಮತ್ತು ಕ್ರೀಡೆಗಳೊಂದಿಗೆ ವಿದ್ಯಾರ್ಥಿಗಳು ತೊಡಗಿಸಿಕೊಳ್ಳಬೇಕು. ಶಿಕ್ಷಣದ ಜತೆಗೆ ಕೌಶಲ್ಯಗಳನ್ನೂ ಮೈಗೂಡಿಸಿಕೊಳ್ಳಬೇಕುʼʼ ಎಂದು ಕರೆ ನೀಡಿದರು.

ಇದೇ ವೇಳೆ ಪಿಎಂ ಶ್ರೀ (Prime Minister Schools for Rising India) ಯೋಜನೆಗೆ ಚಾಲನೆ ನೀಡಲಾಯಿತು. ಯೋಜನೆಯ ಮೊದಲ ಹಂತದಲ್ಲಿ ರಾಜ್ಯದ 211 ಶಾಲೆಗಳನ್ನು ‘ಹಬ್ ಆ್ಯಂಡ್ ಸ್ಪೋಕ್’ (Hub and spoke) ಮಾದರಿಯಲ್ಲಿ ಮೇಲ್ದರ್ಜೆಗೇರಿಸಲಾಗುವುದು. ಇದಕ್ಕಾಗಿ ತಲಾ 2 ಕೋಟಿ ರೂ. ಮೀಸಲಿಡಲಾಗಿದೆ ಎಂದು ಪ್ರಧಾನ್‌ ವಿವರಿಸಿದರು.

ಇದನ್ನೂ ಓದಿ: SSLC And PUC Exam : ಎಸ್‌ಎಸ್‌ಎಲ್‌ಸಿ, ದ್ವಿತೀಯ ಪಿಯುಸಿ ಪರೀಕ್ಷೆಗೆ ಡೇಟ್‌ ಫಿಕ್ಸ್‌; ಏನಿದೆ ಈ ಬಾರಿ ಷರತ್ತುಗಳು

“ಭಾರತೀಯ ಭಾಷೆಗಳಲ್ಲಿ ಶಿಕ್ಷಣ ಎನ್ನುವುದು ರಾಷ್ಟ್ರೀಯ ಶಿಕ್ಷಣ ನೀತಿ 2020ರ ಪ್ರಧಾನ ಅಂಶ. ಛತ್ತೀಸ್‌ಗಢ ಸರ್ಕಾರ ಮುಂದಿನ ಶೈಕ್ಷಣಿಕ ವರ್ಷದಿಂದ ಶಿಶುವಿಹಾರ ಸೇರಿದಂತೆ ಎಲ್ಲ ಆಯಾಮಗಳಲ್ಲಿ ರಾಷ್ಟ್ರೀಯ ಶಿಕ್ಷಣ ನೀತಿ 2020 ಅನ್ನು ಅಕ್ಷರಶಃ ಜಾರಿಗೆ ತರಲಿದೆ ಎನ್ನುವ ನಿರೀಕ್ಷೆ ಇದೆ” ಎಂದು ಧರ್ಮೇಂದ್ರ ಪ್ರಧಾನ್‌ ಸಾಮಾಜಿಕ ಜಾಲತಾಣ ಎಕ್ಸ್‌ನಲ್ಲಿ ಪೋಸ್ಟ್ ಮಾಡಿದ್ದಾರೆ.

Exit mobile version