Site icon Vistara News

Education Guide : ಎಲ್ಲರ ಶಿಕ್ಷಣಕ್ಕಾಗಿ ದೂರ ಶಿಕ್ಷಣ!

distance education

ಉನ್ನತ ಶಿಕ್ಷಣವು ಎಲ್ಲರಿಗೂ ಎಲ್ಲೆಡೆ ದೊರೆಯಬೇಕು, ಮನೆ ಬಾಗಿಲಿನಲ್ಲಿಯೇ ಶಿಕ್ಷಣ ದೊರೆಯುವಂತಾಗಬೇಕು ಎಂಬ ಉದ್ದೇಶದಿಂದ ದೂರ ಶಿಕ್ಷಣ ವ್ಯವಸ್ಥೆಯನ್ನು (Distance Education) ಜಾರಿಗೆ ತರಲಾಗಿದೆ. ಔಪಚಾರಿಕ ಶಿಕ್ಷಣದಿಂದ ವಂಚಿತರಾಗಿರುವವರಿಗೆ ಇದು ವರದಾನವಾಗಿದೆ.

1985 ರಲ್ಲಿ ಇಂದಿರಾ ಗಾಂಧಿ ರಾಷ್ಟ್ರೀಯ ಮುಕ್ತ ವಿಶ್ವವಿದ್ಯಾಲಯದ (ಇಗ್ನೊ) ಸ್ಥಾಪನೆಯೊಂದಿಗೆ ನಮ್ಮ ದೇಶದಲ್ಲಿ ದೂರ ಶಿಕ್ಷಣವು (education news) ಪ್ರಾರಂಭವಾಗಿದ್ದು, ಇಂದು ಮುಕ್ತ ವಿಶ್ವವಿದ್ಯಾಲಯ ಹೆಸರಿನಲ್ಲಿ ಚಾಲ್ತಿಯಲ್ಲಿದೆ. ಸರ್ಕಾರದ ಕೆಲ ಹುದ್ದೆಗಳ ನೇಮಕಾತಿ ಸೇರಿದಂತೆ ದೂರ ಶಿಕ್ಷಣ ಪಡೆದವರಿಗೆ ಈಗ ಎಲ್ಲೆಡೆ ಅವಕಾಶ ಲಭ್ಯವಾಗುತ್ತಿದೆ. ಮುಖ್ಯವಾಗಿ ಪದವಿ ಪಡೆದವರು ಉನ್ನತ ಶಿಕ್ಷಣವನ್ನು ದೂರ ಶಿಕ್ಷಣದ ಮೂಲಕ ಪಡೆಯುವುದು ಸಾಮಾನ್ಯವಾಗಿದೆ. ಇದು ವೃತ್ತಿ ಜೀವನದಲ್ಲಿ ಹೆಚ್ಚಿನ ಅವಕಾಶಗಳನ್ನು ಕೂಡ ನೀಡುತ್ತಿದೆ.

ಕಾರಣಾಂತರಗಳಿಂದ ಔಪಚಾರಿಕ ಶಿಕ್ಷಣ ಪಡೆಯಲು ನಿಮಗೆ ಸಾಧ್ಯವಾಗುವುದಿಲ್ಲ ಎಂದಾಗಿದ್ದರೆ ನೀವು ದೂರ ಶಿಕ್ಷಣವನ್ನು ಪಡೆಯಬಹುದು. ಇಂದು ವಿಜ್ಞಾನ, ತಂತ್ರಜ್ಞಾನ ವಿಷಯಗಳನ್ನು ಕೂಡ ದೂರ ಶಿಕ್ಷಣದ ಮೂಲಕ ಪಡೆಯುವ ಅವಕಾಶವನ್ನು ಕಲ್ಪಿಸಲಾಗಿದೆ. ದೇಶದ ಬಹುತೇಕ ವಿಶ್ವವಿದ್ಯಾನಿಲಯಗಳಿಗೆ ದೂರ ಶಿಕ್ಷಣ ನೀಡಲು ವಿಶ್ವವಿದ್ಯಾನಿಲಯ ಧನಸಹಾಯ ಆಯೋಗವು (ಯುಜಿಸಿ) ಅನುಮತಿ ನೀಡಿದೆ. ನಮ್ಮ ರಾಜ್ಯದ ಮಂಗಳೂರು ವಿವಿ, ಮೈಸೂರು ವಿವಿ, ಕುವೆಂಪು ವಿವಿ, ಬೆಂಗಳೂರು ವಿವಿಗಳಲ್ಲಿ ದೂರ ಶಿಕ್ಷಣದ ಕೋರ್ಸ್‌ಗಳಿದ್ದವು. ಆದರೆ ರಾಜ್ಯ ಸರ್ಕಾರವು ಸಾಂಪ್ರದಾಯಿಕ ವಿವಿಗಳಲ್ಲಿನ ದೂರ ಶಿಕ್ಷಣ (education news) ಚಟುವಟಿಕೆಗಳನ್ನು ನಿಲ್ಲಿಸುವ ತೀರ್ಮಾನ ತೆಗೆದುಕೊಂಡಿದ್ದು, ಈ ಸಂಬಂಧ ಕಾಯ್ದೆ ರೂಪಿಸಿದೆ. ಹೀಗಾಗಿ ರಾಜ್ಯದಲ್ಲಿ ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾನಿಲಯ ಮಾತ್ರ ದೂರ ಶಿಕ್ಷಣವನ್ನು ನೀಡುತ್ತಿದೆ.

ಶಿಕ್ಷಣಕ್ಕೆ ಸಂಬಂಧಿಸಿದ ಸುದ್ದಿಗಳಿಗಾಗಿ ಇಲ್ಲಿ (Click Here) ಕ್ಲಿಕ್‌ ಮಾಡಿ.

ಜನಪ್ರಿಯವಾಗುತ್ತಿರುವ ಕರಾಮುವಿವಿ

ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾನಿಲಯವು (KSOU) 1996 ರಿಂದ ದೂರ ಶಿಕ್ಷಣವನ್ನು ನೀಡುವ ಕೆಲಸ ಮಾಡುತ್ತಿದೆ. ʻಎಲ್ಲರಿಗೂ ಉನ್ನತ ಶಿಕ್ಷಣ, ಎಲ್ಲೆಡೆʼ ಎಂಬ ಧ್ಯೇಯವಾಕ್ಯದೊಂದಿಗೆ ಈ ವಿವಿಯು ಕೆಲಸ ಮಾಡುತ್ತಿದ್ದು, ನ್ಯಾಕ್‌ನಿಂದ A+ ಗ್ರೇಡ್‌ ಪಡೆದುಕೊಂಡಿದೆ. ರಾಜ್ಯವು ಉನ್ನತ ಶಿಕ್ಷಣದಲ್ಲಿ ಮುಂದಿದ್ದು, ಇದಕ್ಕೆ ಈ ವಿವಿಯ ಕೊಡುಗೆಯು ಅಪಾರವಾಗಿದೆ. ಮೈಸೂರಿನಲ್ಲಿ ಪ್ರಧಾನ ಕಚೇರಿ ಹೊಂದಿರುವ ಮುಕ್ತ ವಿವಿಯು ರಾಜ್ಯಾದ್ಯಂತ 34 ಪ್ರಾದೇಶಿಕ ಕಚೇರಿಗಳನ್ನು ಹೊಂದಿದೆ. ರಾಜ್ಯದಲ್ಲಿ ಪ್ರತಿ ಜಿಲ್ಲೆಗೊಂದು ಪ್ರಾದೇಶೀಕ ಕೇಂದ್ರ ತೆರೆಯಲು ತೀರ್ಮಾನಿಸಿದೆ. 64 ಕೋರ್ಸ್‌ಗಳು ಲಭ್ಯವಿದ್ದು, ಇನ್ನೂ 51 ಹೊಸ ಕೋರ್ಸ್‌ಗಳನ್ನು ಆರಂಭಿಸಲು ಉದ್ದೇಶಿಸಿದೆ.

ದೇಶದಲ್ಲಿ ಒಟ್ಟು 16 ಸರ್ಕಾರಿ ಮುಕ್ತ ವಿವಿಗಳಿದ್ದು, ಮೈಸೂರು ಮುಕ್ತವಿವಿಯು ಸದ್ಯ ದೇಶದಲ್ಲಿಯೇ ಎರಡನೇ ಅತ್ಯುತ್ತಮ ಮುಕ್ತ ವಿವಿ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ಪತಿ ಬಾರಿ ಸುಮಾರು 18 ಸಾವಿರ ವಿದ್ಯಾರ್ಥಿಗಳು ಇಲ್ಲಿ ಶಿಕ್ಷಣಕ್ಕಾಗಿ ಪ್ರವೇಶ ಪಡೆಯುತ್ತಿದ್ದಾರೆ. ಸದ್ಯವೇ ಆನ್‌ಲೈನ್‌ ಕೋರ್ಸ್‌ಗಳನ್ನು ಆರಂಭಿಸಲು ಮುಕ್ತ ವಿವಿ ಉದ್ದೇಶಿಸಿದೆ. ಇ-ಬುಕ್‌, ಇ-ಲೈಬ್ರರಿ ಸೌಲಭ್ಯ, ಡಿಜಿಟಲ್‌ ಶಿಕ್ಷಣ ನೀಡುವ ಸೌಕರ್ಯಗಳನ್ನು ವಿವಿಯು ಹೊಂದಿದೆ. ರೇಡಿಯೋ, ಆಡಿಯೊ-ವಿಡಿಯೋ ಉಪನ್ಯಾಸಗಳ ಮೂಲಕ ಹಾಗೂ ‘ಇನ್-ಹೌಸ್ ಸ್ಟುಡಿಯೋ’ಗಳ ಮೂಲಕ ಅತ್ಯುತ್ತಮ ಶಿಕ್ಷಣವನ್ನು ಒದಗಿಸಲಾಗುತ್ತಿದೆ.

ಮುಕ್ತ ವಿವಿಯ ವಿಶೇಷತೆಗಳಿವು;

ಎಂಬಿಎ (MBA) ಎಂ. ಕಾಮ್ (M.com), ಮೀಡಿಯಾಕ್ಕೆ ಸಂಬಂಧಿಸಿದ ಕೋರ್ಸ್‌ಗಳು, ಎಂಎ(MA) ಈ ವಿವಿಯಲ್ಲಿ ಹೆಚ್ಚು ಬೇಡಿಕೆಯಿರುವ ಕೋರ್ಸ್‌ಗಳಾಗಿವೆ. ಪ್ರತಿ ವರ್ಷ ಎರಡು ಬಾರಿ (ಜನವರಿ ಮತ್ತು ಜೂನ್‌ನಲ್ಲಿ) ಕೋರ್ಸ್‌ಗಳಿಗೆ ಅಡ್ಮಿಷನ್‌ ಮಾಡಿಕೊಳ್ಳಲಾಗುತ್ತದೆ. ಅಡ್ಮಿಷನ್‌ ಪ್ರಕ್ರಿಯೆಗಳು ಕೂಡ ಆನ್‌ಲೈನ್‌ನಲ್ಲಿಯೇ ನಡೆಯುತ್ತದೆ. ಶುಲ್ಕವನ್ನೂ ಆನ್‌ಲೈನ್‌ನಲ್ಲಿಯೇ ಪಾವತಿಸಬಹುದಾಗಿರುತ್ತದೆ. ಕೋಚಿಂಗ್ ತರಗತಿಗಳಿಗೆ ಬರುವ ವಿದ್ಯಾರ್ಥಿಗಳಿಗೆ ಹಾಸ್ಟೆಲ್‌ಗಳಲ್ಲಿ ವಸತಿ ಸೌಲಭ್ಯ, ಕೌಶಲ್ಯ ಅಭಿವೃದ್ಧಿ ಕಾರ್ಯಕ್ರಮಗಳು, ಉದ್ಯೋಗ ಮೇಳಗಳನ್ನು ನಡೆಸುತ್ತಾ ಈ ವಿವಿಯು ಗಮನ ಸೆಳೆದಿದೆ.

ಜುಲೈ ಆವೃತ್ತಿಯ ಪ್ರವೇಶಾತಿಗಾಗಿ ಇಲ್ಲಿ ಕ್ಲಿಕ್ (Click Here) ಮಾಡಿ. (ಆಗಸ್ಟ್‌ 31 ಕೊನೆಯ ದಿನ.

ಮುಕ್ತ ವಿವಿಯಲ್ಲಿ ಯಾವೆಲ್ಲಾ ಶಿಕ್ಷಣ ಪಡೆಯಬಹುದು? ತಿಳಿಯಲು ಇಲ್ಲಿ ಕ್ಲಿಕ್ (Click Here) ಮಾಡಿ.

ಯಾವ ಕೋರ್ಸಿಗೆ ಎಷ್ಟು ಶುಲ್ಕ ತಿಳಿಯಲು ಇಲ್ಲಿ ಕ್ಲಿಕ್ (Click Here) ಮಾಡಿ.

ವಿವಿಯ ವೆಬ್‌ಸೈಟ್‌ ವಿಳಾಸ: https://ksoumysuru.ac.in/kannada/index.php

ಎನ್‌ಐಓಎಸ್‌ನಲ್ಲಿಯೂ ಓದಬಹುದು!

ಕೇಂದ್ರ ಸರ್ಕಾರದ ಮಾನವ ಸಂಪನ್ಮೂಲ ಅಭಿವೃದ್ಧಿ ಸಚಿವಾಲಯ 1989 ರಲ್ಲಿ ರಾಷ್ಟ್ರೀಯ ಮುಕ್ತ ಶಾಲೆ ಸ್ಥಾಪಿಸಿದೆ. 2002 ರಿಂದ ಇದಕ್ಕೆ ʻನ್ಯಾಷನಲ್‌ ಇನ್‌ಸ್ಟಿಟ್ಯೂಟ್‌ ಆಫ್‌ ಓಪನ್ ಸ್ಕೂಲ್ (NIOS) ಎಂದು ಮರು ನಾಮಕರಣ ಮಾಡಲಾಗಿದ್ದು, ಕೇಂದ್ರ ಕಚೇರಿ ನೊಯಿಡಾದಲ್ಲಿದೆ. ನಮ್ಮ ಬೆಂಗಳೂರು ಸೇರಿದಂತೆ 20 ಪ್ರಾದೇಶಿಕ ಕೇಂದ್ರಗಳು, 6500ಕ್ಕೂ ಹೆಚ್ಚು ಮಾನ್ಯತೆ ಪಡೆದ ಸಂಸ್ಥೆಗಳು (ಅಧ್ಯಯನ ಕೇಂದ್ರಗಳು), 1500 ಕ್ಕೂ ಹೆಚ್ಚಿನ ಮಾನ್ಯತೆ ಪಡೆದ ವ್ರತ್ತಿಸಂಬಂಧಿ ಸಂಸ್ಥೆಗಳು (ಅಧ್ಯಯನ ಕೇಂದ್ರಗಳು), ಮತ್ತು ಕೆಲವು ವಿಶೇಷ ಮಾನ್ಯತೆ ಪಡೆದ ಸಂಸ್ಥೆಗಳ ಮೂಲಕ ಶಿಕ್ಷಣ ನೀಡುವ ಕೆಸಲ ಮಾಡುತ್ತಿದೆ.

ಪ್ರಪಂಚದ ಅತೀ ಬೃಹತ್ ಮುಕ್ತ ಶಾಲೆ ಎಂದು ಪ್ರಸಿದ್ಧಿ ಪಡೆದಿರುವ ಎನ್‌ಐಓಎಸ್‌ನಲ್ಲಿ ವರ್ಷವಿಡಿ ಆನ್‌ಲೈನ್‌ನಲ್ಲಿ ಕೋರ್ಸ್‌ಗಳಿಗೆ ಪ್ರವೇಶ ಪ್ರಕ್ರಿಯೆ ನಡೆಯುತ್ತಲೇ ಇರುತ್ತದೆ. ಎನ್‌ಸಿಆರ್‌ಟಿ ಜಾರಿಗೆ ತಂದ ಪಠ್ಯಕ್ರಮದ ಪ್ರಕಾರವೇ ಇಲ್ಲಿ ಶಿಕ್ಷಣ ನೀಡಲಾಗುತ್ತಿದ್ದು, ವಿದ್ಯಾರ್ಥಿಗಳಿಗೆ ಮಾಧ್ಯಮಾ ಮತ್ತು ವಿಷಯ ಸಂಯೋಜನೆಯ ಆಯ್ಕೆಯಲ್ಲಿ ಮುಕ್ತ ಆವಕಾಶ ನೀಡಲಾಗಿರುತ್ತದೆ. ಕನ್ನಡ ಸೇರಿದಂತೆ ಎಲ್ಲ ಪ್ರಾದೇಶಿಕ ಭಾಷೆಗಳಲ್ಲಿಯೂ ಇಲ್ಲಿ ಶಿಕ್ಷಣ ಲಭ್ಯ. 10 ನೇ ತರಗತಿಯಿಂದ ಉನ್ನತ ಶಿಕ್ಷಣದವರೆಗೆ ಇಲ್ಲಿ ಶಿಕ್ಷಣ ಪಡೆಯಬಹುದಾಗಿದೆ. ಇಲ್ಲಿ ನೀಡುವ ಪ್ರಮಾಣ ಪತ್ರವನ್ನು ದೇಶದ ಬಹುತೇಕ ಎಲ್ಲಾ ಶಿಕ್ಷಣ ಮಂಡಳಿಗಳು, ಸಂಸ್ಥೆಗಳು ಮತ್ತು ವಿಶ್ವವಿದ್ಯಾನಿಲಯಗಳು ಪರಿಗಣಿಸಲಿದ್ದು, ಮುಂದಿನ ಶಿಕ್ಷಣಕ್ಕೆ ಪ್ರವೇಶ ನಿಡುತ್ತವೆ. ಬಹುತೇಕ ಸರ್ಕಾರಿ ಉದ್ಯೋಗದ ನೇಮಕಾತಿ ಸಂದರ್ಭದಲ್ಲಿಯೂ ಪರಿಗಣಿಸಲಾಗುತ್ತದೆ.

ಬೆಂಗಳೂರಿ ಪ್ರಾದೇಶಿಕ ಕಚೇರಿಯವೆ ವೆಬ್‌ ವಿಳಾಸ ಇಂತಿದೆ: https://rcbengaluru.nios.ac.in

ಇಗ್ನೋದಲ್ಲಿಯೂ ಕಲಿಕೆಯ ಅವಕಾಶ

ಇಂದಿರಾ ಗಾಂಧಿ ರಾಷ್ಟ್ರೀಯ ಮುಕ್ತ ವಿಶ್ವಿವಿದ್ಯಾಲಯ (IGNOU) ಕೂಡ ಬೆಂಗಳೂರಿನಲ್ಲಿ ಪ್ರಾದೇಶಿಕ ಕಚೇರಿ ಹೊಂದಿದ್ದು, ರಾಜ್ಯದ ವಿದ್ಯಾರ್ಥಿಗಳಿಗೆ ದೂರ ಶಿಕ್ಷಣ ನೀಡುವ ಕೆಲಸ ಮಾಡುತ್ತಿದೆ. ಪದವಿ, ಸ್ನಾತಕೋತ್ತರ ಪದವಿ, ಪಿಜಿ ಡಿಪ್ಲೊಮಾ ಮತ್ತು ಸರ್ಟಿಫಿಕೇಷನ್‌ ಕೋರ್ಸ್‌ಗಳನ್ನು ಇಲ್ಲಿ ಮಾಡಬಹುದಾಗಿದೆ. ರಾಜ್ಯಾದ್ಯಂತ 55 ಅಧ್ಯಯನ ಕೇಂದ್ರಗಳನ್ನು ಈ ವಿವಿಯು ಹೊಂದಿದ್ದು, ಉತ್ತಮವಾದ ಶಿಕ್ಷಣವನ್ನು ನೀಡುವ ಕೆಲಸ ಮಾಡುತ್ತಿದೆ.

ರಾಜ್ಯದಲ್ಲಿನ ಅಧ್ಯಯನ ಕೇಂದ್ರಗಳ ಮಾಹಿತಿಗೆ ಇಲ್ಲಿ ಕ್ಲಿಕ್‌ (Click Here) ಮಾಡಿ.

ಬೆಂಗಳೂರಿ ಪ್ರಾದೇಶಿಕ ಕಚೇರಿಯವೆ ವೆಬ್‌ ವಿಳಾಸ ಇಂತಿದೆ: http://rcbangalore.ignou.ac.in

ಎಚ್ಚರಿಕೆ ವಹಿಸಿ!

ಯಾವುದೇ ಕರೆಸ್ಪಾಂಡೆನ್ಸ್‌ ಪದವಿ ಮಾದುವುದಕ್ಕೂ ಮೊದಲು ವಿದ್ಯಾರ್ಥಿಗಳು ಆ ಕೋರ್ಸ್‌ ಯುಜಿಸಿಯಿಂದ ಮಾನ್ಯತೆ ಪಡೆದಿದೆಯೇ ಎಂಬುದನ್ನು ಪರಿಶೀಲಿಸಿಕೊಳ್ಳಬೇಕು. ಇಂದು ಅನೇಕ ಖಾಸಗಿ ಶಿಕ್ಷಣ ಸಂಸ್ಥೆಗಳೂ ದೂರ ಶಿಕ್ಷಣವನ್ನು ನೀಡುತ್ತಿದ್ದು, ಇವು ಅಗತ್ಯ ಎಲ್ಲ ಮಾನ್ಯತೆ ಪಡೆದುಕೊಂಡಿವೆಯೇ ಎಂಬುದನ್ನು ಪರಿಶೀಲಿಸಿಯೇ ವಿದ್ಯಾರ್ಥಿಗಳು ಕೋರ್ಸ್‌ ಮಾಡಲು ಮುಂದಾಗಬೇಕು. ಮಾನ್ಯತೆ ಪಡೆಯದ ವಿವಿಗಳಲ್ಲಿ, ಶಿಕ್ಷಣ ಸಂಸ್ಥೆಗಳಲ್ಲಿ ಕೋರ್ಸ್‌ ಮಾಡಿದರೆ ಅದು ಉಪಯೋಗಕ್ಕೆ ಬಾರದು.

ಇದನ್ನೂ ಓದಿ : Education Guide : ಸುಲಭದ ಮತ್ತು ಗುಣಮಟ್ಟದ ಶಿಕ್ಷಣಕ್ಕೆ ಸ್ವಯಂ ಯೋಜನೆ

Exit mobile version