Site icon Vistara News

Exams Postponed: ಲೋಕಸಭಾ ಚುನಾವಣೆ ಹಿನ್ನೆಲೆ: ಪ್ರಮುಖ ಪರೀಕ್ಷೆಗಳ ದಿನಾಂಕ ಬದಲು; ಹೊಸ ವೇಳಾಪಟ್ಟಿ ಇಲ್ಲಿದೆ

Exams Postponed

Exams Postponed

ನವದೆಹಲಿ: ಬಹು ನಿರೀಕ್ಷಿತ ಲೋಕಸಭಾ ಚುನಾವಣೆ (Lok Sabha elections 2024)ಗೆ ದಿನಾಂಕ ಘೋಷಣೆಯಾಗಿದೆ. ಏಳು ಹಂತದಲ್ಲಿ ನಡೆಯುವ ಮತದಾನಕ್ಕೆ ಏಪ್ರಿಲ್‌ 19ರಂದು ಚಾಲನೆ ಸಿಗಲಿದೆ. ಹೀಗಾಗಿ ದೇಶಾದ್ಯಂತ ಬಿರುಸಿನ ರಾಜಕೀಯ ಚಟುವಟಿಕೆ ಆರಂಭವಾಗಿದೆ. ಇದರ ಜತೆಗೆ ದೇಶದಲ್ಲಿ ನಡೆಯುವ ಪ್ರಮುಖ ನೇಮಕಾತಿ ಪರೀಕ್ಷೆಗಳು ಹಾಗೂ ಅರ್ಹತಾ ಪರೀಕ್ಷೆಗಳ ದಿನಾಂಕವನ್ನು ಬದಲಾವಣೆ ಮಾಡಲಾಗಿದೆ (Exams Postponed). ಆ ಕುರಿತಾದ ವಿವರ ಇಲ್ಲಿದೆ.

ಯಾವೆಲ್ಲ ಪರೀಕ್ಷೆಯ ದಿನಾಂಕದಲ್ಲಿ ಬದಲಾವಣೆ?

ದೇಶದ ಪ್ರಮುಖ ಸ್ಪರ್ಧಾತ್ಮಕ ಪರೀಕ್ಷೆಗಳಾದ ಯುಪಿಎಸ್‌ಸಿ ಸಿವಿಲ್‌ ಸರ್ವೀಸ್‌ ಪ್ರಿಲಿಮ್ಸ್‌ (UPSC Civil Service Prelims), ನೀಟ್‌ ಪಿಜಿ 2024 (NEET PG 2024), ಜೆಇಇ ಮೇನ್ಸ್‌ (JEE Main), ಐಸಿಎಐ ಸಿಎ (ICAI CA) ಮಧ್ಯಂತರ ಪರೀಕ್ಷೆ, ಕರ್ನಾಟಕ-ಪಿಎಸ್‌ಐ (PSI) ಪರೀಕ್ಷೆ, ಎಂಎಚ್‌ಟಿ ಸಿಇಟಿ (MHT CET) (ಪಿಸಿಎಂ ಮತ್ತು ಪಿಸಿಬಿ), ಟಿಎಸ್‌ ಇಎಪಿಸಿಇಟಿ (TS EAPCET) 2024 ಪರೀಕ್ಷೆಗಳ ದಿನಾಂಕದ ವೇಳಾಪಟ್ಟಿಯನ್ನು ಬದಲಾಯಿಸಲಾಗಿದೆ.

ಯುಪಿಎಸ್‌ಸಿ ಸಿಎಸ್‌ಇ ಪ್ರಿಲಿಮ್ಸ್‌ 2024

ಕೇಂದ್ರ ನಾಗರೀಕ ಸೇವಾ ಆಯೋಗ (UPSC) ತನ್ನ ನಾಗರಿಕ ಸೇವೆಗಳ ಪರೀಕ್ಷೆ (ಸಿಎಸ್‌ಇ) 2024ರ ವೇಳಾಪಟ್ಟಿಯನ್ನು ಪರಿಷ್ಕರಿಸಿದೆ. ಆರಂಭದಲ್ಲಿ ಮೇ 26ಕ್ಕೆ ನಿಗದಿಯಾಗಿದ್ದ ಪರೀಕ್ಷೆ ಜೂನ್ 16ಕ್ಕೆ ಮುಂದೂಡಲಾಗಿದೆ ಎಂದು ಪ್ರಕಟಣೆ ತಿಳಿಸಿದೆ.

ನೀಟ್‌ ಪಿಜಿ 2024

ಚುನಾವಣೆ ಕಾರಣದಿಂದ ದಿನಾಂಕ ಬದಲಾಯಿಸಿಕೊಂಡ ಇನ್ನೊಂದು ಪ್ರಮುಖ ಪರೀಕ್ಷೆ ಎಂದರೆ ಅದು ರಾಷ್ಟ್ರೀಯ ವೈದ್ಯಕೀಯ ಆಯೋಗ ನಡೆಸುವ ನೀಟ್‌ ಪಿಜಿ 2024. ಜುಲೈ 7ರಂದು ನಡೆಯಬೇಕಿದ್ದ ಪರೀಕ್ಷೆ ಮುಂಚಿತವಾಗಿ ಅಂದರೆ ಜೂನ್‌ 23ಕ್ಕೆ ನಡೆಯಲಿದೆ. ಫಲಿತಾಂಶಗಳು ಈ ಹಿಂದೆ ಘೋಷಿಸಿದಂತೆ ಜುಲೈ 15ರೊಳಗೆ ಪ್ರಕಟವಾಗಲಿದೆ.

ಜೆಇಇ ಮೇನ್‌ 2024

ಜಂಟಿ ಪ್ರವೇಶ ಪರೀಕ್ಷೆ (JEE) ಮೇನ್ 2024ರ ಪರೀಕ್ಷೆಯ ದಿನಾಂಕಗಳನ್ನು ಪರಿಷ್ಕರಿಸಲಾಗಿದೆ. ಹೊಸ ವೇಳಾಪಟ್ಟಿಯ ಪ್ರಕಾರ ಜೆಇಇ ಮೇನ್‌ 2024 ಸೆಷನ್ 2 ಅನ್ನು ಏಪ್ರಿಲ್ 4 ಮತ್ತು 12ರ ನಡುವೆ ನಡೆಸಲಾಗುತ್ತದೆ. ಪೇಪರ್ 1 (ಬಿಇ / ಬಿಟೆಕ್) ಏಪ್ರಿಲ್ 4, 5, 6, 8 ಮತ್ತು 9ರಂದು ನಡೆಯಲಿದ್ದು, ಪೇಪರ್ 2 ಏಪ್ರಿಲ್ 12ರಂದು ನಡೆಯಲಿದೆ.

ಐಸಿಎಐ ಸಿಎ ಮಧ್ಯಂತರ ಪರೀಕ್ಷೆ

ಭಾರತೀಯ ಚಾರ್ಟೆಡ್‌ ಅಕೌಂಟೆಂಟ್‌ಗಳ ಸಂಸ್ಥೆ ನಡೆಸುವ, ಚಾರ್ಟೆಡ್‌ ಅಕೌಂಟೆಂಟ್‌ ಮಧ್ಯಂತರ ಪರೀಕ್ಷೆಗಳ ಗ್ರೂಪ್‌ 1 ಅನ್ನು ಮೇ 3, 5, ಮತ್ತು 9ರಂದು ನಡೆಸಲಾಗುತ್ತದೆ. ಇದಕ್ಕೂ ಮುನ್ನ ಮೇ 7ರಂದು ನಡೆಸಲಾಗುತ್ತದೆ ಎಂದು ತಿಳಿಸಲಾಗಿತ್ತು. ಅದೇ ರೀತಿ, ಗ್ರೂಪ್ 2 ಪರೀಕ್ಷೆಯು ಮೇ 9, 11 ಮತ್ತು 13ರ ಬದಲಿಗೆ ಮೇ 11, 15 ಮತ್ತು 17ರಂದು ನಡೆಸಲಾಗುವುದು ಎಂದು ಪ್ರಕಟಣೆ ತಿಳಿಸಿದೆ.

ಕರ್ನಾಟಕ-ಪಿಎಸ್‌ಐ ಪರೀಕ್ಷೆ

ಕರ್ನಾಟಕ ಪರೀಕ್ಷಾ ಪ್ರಾಧಿಕಾರ ಮೇ 8ರಂದು ನಡೆಸಲಿದ್ದ ಪಿಎಸ್‌ಐ ಪರೀಕ್ಷೆಯ ದಿನಾಂಕವನ್ನೂ ಪರಿಷ್ಕರಿಸಲಾಗಿದೆ. ಹೊಸ ದಿನಾಂಕವನ್ನು ಕರ್ನಾಟಕದಲ್ಲಿ ಚುನಾವಣೆ ಮುಗಿದ ಬಳಿಕ ಪ್ರಕಟಿಸಲಾಗುವುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಎಂಎಚ್‌ಟಿ ಸಿಇಟಿ (ಪಿಸಿಎಂ ಮತ್ತು ಪಿಸಿಬಿ)

ಮಹಾರಾಷ್ಟ್ರ ರಾಜ್ಯ ಸಾಮಾನ್ಯ ಪ್ರವೇಶ ಪರೀಕ್ಷೆ (MHT CET) ಕೋಶವು ಪಿಸಿಬಿ ಮತ್ತು ಪಿಸಿಎಂ ಅಭ್ಯರ್ಥಿಗಳಿಗೆ ನಡೆಸುವ ಎಂಎಚ್‌ಟಿ ಸಿಇಟಿ ಪರೀಕ್ಷೆಯ ಹೊಸ ದಿನಾಂಕವನ್ನು ಪ್ರಕಟಿಸಿದೆ. ಏಪ್ರಿಲ್ 16 ಮತ್ತು 30ರ ನಡುವೆ ಪರೀಕ್ಷೆಗಳು ಈಗ ಮೇ 2ರಿಂದ 17ರ ವರೆಗೆ ನಡೆಸುವುದಾಗಿ ತಿಳಿಸಿದೆ.

ಟಿಎಸ್‌ ಇಎಪಿಸಿಇಟಿ 2024

ತೆಲಂಗಾಣ ರಾಜ್ಯ ಎಂಜಿನಿಯರಿಂಗ್, ಕೃಷಿ ಮತ್ತು ಫಾರ್ಮಸಿ (ಪಶು ವೈದ್ಯಕೀಯ ಇತ್ಯಾದಿ) ಸಾಮಾನ್ಯ ಪ್ರವೇಶ ಪರೀಕ್ಷೆ (TS EAPCET-2024) ಮೇ 9, 10, 11 ಮತ್ತು 12ರಂದು ನಡೆಯಲಿದೆ.

ಇದನ್ನೂ ಓದಿ: KPSC: ಗಮನಿಸಿ; ಕೆಪಿಎಸ್‌ಸಿ ಹುದ್ದೆಗಳಿಗೆ ಅರ್ಜಿ ಸಲ್ಲಿಸುವ ದಿನಾಂಕ ವಿಸ್ತರಣೆ; ತಿದ್ದುಪಡಿ ಅಧಿಸೂಚನೆಯಲ್ಲಿ ಏನಿದೆ?

Exit mobile version