ಬೆಂಗಳೂರು: ಶಾಲಾ ಪಠ್ಯಪುಸ್ತಕ ವಿವಾದ ತಾರಕಕ್ಕೇರಿದ ನಂತರ ರೋಹಿತ್ ಚಕ್ರತೀರ್ಥ ಸಮಿತಿಯನ್ನು ವಿಸರ್ಜನೆ ಮಾಡಿದ್ದ ರಾಜ್ಯಸ ರ್ಕಾರ ಇದೀಗ ಪಿಯು ಪಠ್ಯಪರಿಷ್ಕರಣೆ ಹೊಣೆಯಿಂದಲೂ ಚಕ್ರತೀರ್ಥ ಅವರನ್ನು ಮುಕ್ತಿಗೊಳಿಸಿದೆ. ಈ ಕುರಿತು ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಬಿ.ಸಿ. ನಾಗೇಶ್ ಮಾಹಿತಿ ನೀಡಿದ್ದಾರೆ.
ಈ ಕುರಿತು ಬೆಂಗಳೂರಿನಲ್ಲಿ ನಾಗೇಶ್ ಮಾಹಿತಿ ನೀಡಿದ್ದಾರೆ. ಸದ್ಯಕ್ಕೆ ಪಿಯು ಪಠ್ಯಪುಸ್ತಕ ಪರಿಷ್ಕರಣೆಯನ್ನು ಕೈಬಿಟ್ಟಿದ್ದೇವೆ. ದ್ವಿತೀಯ ಪಿಯುಸಿಯಲ್ಲಿದ್ದ ಅಧ್ಯಾಯ 4.2 ʼಹೊಸ ಧರ್ಮಗಳ ಉದಯʼ ಪಠ್ಯಭಾಗ ಪರಿಷ್ಕರಣೆ ಆಗಬೇಕಿತ್ತು. ಅದನ್ನಷ್ಟೆ ಸರಿಪಡಿಸುವ ಬದಲು ಪಠ್ಯವನ್ನು ಪರಿಷ್ಕರಿಸಿ ಎಂದು ಹೇಳಿದ್ದೆವು. ಈಗ ಆ ಕಾರ್ಯವನ್ನು ಕೈಬಿಟ್ಟಿದ್ದೇವೆ ಎಂದು ಹೇಳಿದ್ದಾರೆ.
ಇದನ್ನೂ ಓದಿ | ಪಠ್ಯಪುಸ್ತಕದ ಮತ್ತೊಂದು ಎಡವಟ್ಟು: ಮಕ್ಕಳಿಗೆ ಪಾಠ ಮಾಡುವ ರೀತಿ ಇದೇನ?
ಸಿದ್ದರಾಮಯ್ಯ ಸರ್ಕಾರದ ಅವಧಿಯಲ್ಲಿ ಪ್ರೊ. ಬರಗೂರು ರಾಮಚಂದ್ರಪ್ಪ ಅವರ ಸಮಿತಿಯು ಪಠ್ಯಪುಸ್ತಕಗಳನ್ನು ಸಮಗ್ರವಾಗಿ ಪರಿಷ್ಕರಣೆ ಮಾಡಿತ್ತು. ಈ ಪರಿಷ್ಕರಣೆಯಲ್ಲಿ ಟಿಪ್ಪು ಸುಲ್ತಾನನನ್ನು ವೈಭವೀಕರಿಸಲಾಗಿದೆ, ಹಿಂದುಗಳ ಭಾವನೆಗಳಿಗೆ ಧಕ್ಕೆ ತರಲಾಗಿದೆ ಎಂದು ಆರ್‌ಎಸ್‌ಎಸ್ ವಲಯ ಹಾಗೂ ಬಿಜೆಪಿಯಿಂದ ವಿರೋಧ ಕೇಳಿಬಂದಿತ್ತು. ಅದಕ್ಕಾಗಿ ರಾಜ್ಯ ಸರ್ಕಾರ ಲೇಖಕ ರೋಹಿತ್ ಚಕ್ರತೀರ್ಥ ಅಧ್ಯಕ್ಷತೆಯ ಸಮಿತಿ ರಚಿಸಿತ್ತು. ಈ ವಿವಾದ ತಾರಕಕ್ಕೇರಿ ಎರಡು ದಿನದ ಹಿಂದಷ್ಟೆ ಸಿಎಂ ಬಸವರಾಜ ಬೊಮ್ಮಾಯಿ ಅವರು ರೋಹಿತ್ ಚಕ್ರತೀರ್ಥ ಅವರ ಸಮಿತಿಯನ್ನು ವಿಸರ್ಜನೆ ಮಾಡಿದ್ದರು. ಆದರೆ ಈ ಸಮಿತಿ ವಿಸರ್ಜನೆಗೂ ಮುನ್ನವೇ ಪಿಯು ಪಠ್ಯ ಪರಿಷ್ಕರಣೆಗೂ ರೋಹಿತ್ ಚಕ್ರತೀರ್ಥ ಅವರ ಸಮಿತಿಯನ್ನು ಸರ್ಕಾರ ರಚನೆ ಮಾಡಿತ್ತು.
ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಪಠ್ಯ ಪರಿಷ್ಕರಣೆ ಸಮಿತಿಯನ್ನು ಸರ್ಕಾರ ವಿಸರ್ಜನೆ ಮಾಡಿದೆಯೇ ವಿನಃ ಪಿಯು ಪಠ್ಯ ಪರಿಷ್ಕರಣೆ ಸಮಿತಿಯನ್ನಲ್ಲ. ಈ ಆದೇಶ ಇನ್ನೂ ಜೀವಂತವಾಗಿದೆ. ಈ ಕುರಿತು ಸ್ವತಃ ರೋಹಿತ್ ಚಕ್ರತೀರ್ಥ ಸ್ಪಷ್ಟನೆ ನೀಡಿದ್ದರು. ವಿಸರ್ಜನೆ ಆಗಿರುವುದು ಹೈಸ್ಕೂಲ್ ಮತ್ತು ಪ್ರೈಮರಿ ಪಠ್ಯಪರಿಷ್ಕರಣೆ ಸಮಿತಿ ಮಾತ್ರ. ಪಿಯು ಪಠ್ಯಪರಿಷ್ಕರಣೆ ಸಮಿತಿಗೂ ಈ ಆದೇಶಕ್ಕೂ ಸಂಬಂಧ ಇಲ್ಲ. ಸರ್ಕಾರ ನಮಗೆ ನೀಡಿರುವ ಕೆಲಸ ಮಾಡಿ ಮುಗಿಸುತ್ತೇವೆ ಎಂದಿದ್ದರು.
ಈಗಾಗಲೆ ಪ್ರಾಥಮಿಕ ಪಠ್ಯದ ವಿಚಾರದಲ್ಲಿ ವಿವಾದ ಆಗಿರುವುದರಿಂದ ಪಿಯು ಪಠ್ಯ ಪರಿಷ್ಕರಣೆ ಕಾರ್ಯದಿಂದ ಹಿಂದೆ ಸರಿಯುತ್ತೀರ? ಎಂಬ ಪ್ರಶ್ನೆಗೆ ಉತ್ತರಿಸಿದ ರೋಹಿತ್ ಚಕ್ರತೀರ್ಥ, ಹಿಂದೆ ಸರಿಯುವ ಪ್ರಶ್ನೆಯೇ ಇಲ್ಲ. ಸರ್ಕಾರ ನಮಗೆ ಒಂದು ಕೆಲಸ ಕೊಟ್ಟಿದೆ. ಅದನ್ನು ಪೂರೈಸಬೇಕಾಗಿರುವುದು ನಮ್ಮ ಜವಾಬ್ದಾರಿ ಎಂದು ಹೇಳಿದ್ದರು.
ರೋಹಿತ್ ಚಕ್ರತೀರ್ಥ ಅಧ್ಯಕ್ಷತೆಯ ಶಾಲಾ ಪಠ್ಯ ಪರಿಷ್ಕರಣೆ ಸಮಿತಿ ವಿಸರ್ಜನೆ ಮಾಡಿದ್ದರೂ ಇನ್ನೂ ವಿವಾದ ಮುಕ್ತಾಯವಾಗಿಲ್ಲ. ಈಗಲೂ ದಿನಕ್ಕೊಂದು ವಿವಾದ ತಲೆ ಎತ್ತುತ್ತಲೇ ಇದೆ. ಅಂಬೇಡ್ಕರ್, ಬಸವಣ್ಣ ಸೇರಿ ಅನೇಕರಿಗೆ ಅವಮಾನ ಮಾಡಲಾಗಿದೆ ಎಂಬ ಆರೋಪ ಕೇಳುತ್ತಲೇ ಇದೆ. ಇನ್ನು ಪಿಯು ಪಠ್ಯವನ್ನೂ ಪರಿಷ್ಕರಣೆ ಮಾಡಿದರೆ ಚುನಾವಣೆ ಸಮಯದಲ್ಲಿ ಕಷ್ಟವಾಗುತ್ತದೆ ಎಂದು ಸಿಎಂ ಬೊಮ್ಮಾಯಿ ನಿರ್ಧರಿಸಿದ್ದಾರೆ. ಸಿಎಂ ಸೂಚನೆ ಮೇರೆಗೆ ಸಮಿತಿ ವಿಸರ್ಜನೆ ತೀರ್ಮಾನವನ್ನು ನಾಗೇಶ್ ತೆಗೆದುಕೊಂಡಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಶಾಲಾ ಪಠ್ಯ ಪರಿಷ್ಕರಣೆ ಸಮಿತಿ ವಿಸರ್ಜನೆ ನಂತರವೂ ವಿವಾದ ಮುಂದುವರಿದಿರುವ ಕುರಿತು ಪ್ರತಿಕ್ರಿಯಿಸಿರುವ ನಾಗೇಶ್, ಈಗಾಗಲೆ ಸಮಿತಿಗಳನ್ನು ವಿಸರ್ಜನೆ ಮಾಡಲಾಗಿದೆ. ಅನೇಕ ಬಾರಿ ಸಿಎಂ ಪ್ರತಿಕ್ರಿಯೆ ನೀಡಿದ್ದಾರೆ. ನಾವು ಮಾಡಿದ ಕೆಲಸದಲ್ಲಿ ಇರುವ ತಪ್ಪನ್ನು ತಿದ್ದಿಕೊಳ್ಳುತ್ತೇವೆ ಎಂದು ಹೇಳಿದ್ದೇವೆಯೇ ವಿನಃ ಅವರ ರೀತಿ ವಿತಂಡ ವಾದ ಮಾಡುತ್ತಿಲ್ಲ. ಇಷ್ಟರ ನಂತರವೂ ಆರೋಪ ಮುಂದುವರಿಸುವುದಾದರೆ ಸರಿಯಿಲ್ಲ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.
ಸರ್ಕಾರದಿಂದ ಅಧಿಕೃತ ಸೂಚನೆ ಬಂದಿಲ್ಲ
ಪಿಯು ಪಠ್ಯಪರಿಷ್ಕರಣೆ ಸಮಿತಿ ಕೈಬಿಟ್ಟಿರುವುದಾಗಿ ಬಿ.ಸಿ. ನಾಗೇಶ್ ಅವರ ಹೇಳಿಕೆ ಕುರಿತು ರೋಹಿತ್ ಚಕ್ರತೀರ್ಥ ಪ್ರತಿಕ್ರಿಯೆ ನೀಡಿದ್ದಾರೆ. ʼಇನ್ನೂ ವರದಿಯನ್ನು ನಾವು ಸಲ್ಲಿಕೆ ಮಾಡಿಲ್ಲ. ವರದಿ ನೀಡಲು ಸಿದ್ಧತೆ ಮಾಡಿಕೊಳ್ಳುತ್ತಿದ್ದೇವೆ. ಅವರು ವರದಿ ಬೇಕು ಎಂದರೆ ನೀಡುತ್ತೇವೆ, ಬೇಡ ಎಂದರೆ ವರದಿ ನೀಡುವುದಿಲ್ಲ. ಸರ್ಕಾರದ ಅಪೇಕ್ಷೆ ಹೇಗಿರುತ್ತದೆಯೋ ಅದಕ್ಕೆ ಅನುಗಣವಾಗಿ ನಾವು ನಡೆಯುತ್ತೇವೆʼ ಎಂದು ತಿಳಿಸಿದ್ದಾರೆ.
ಇದನ್ನೂ ಓದಿ | ಪಠ್ಯಪುಸ್ತಕ ನೈತಿಕತೆ ಕೊರತೆ ಎದುರಿಸುತ್ತಿದೆ: ಸಿದ್ಧಗಂಗಾ ಸ್ವಾಮೀಜಿ