ಬೆಂಗಳೂರು: ರಾಜ್ಯದಲ್ಲಿ 13,352 ಪ್ರಾಥಮಿಕ ಶಾಲಾ ಶಿಕ್ಷಕರ (primary school teachers) ಆಯ್ಕೆಗೆ ಹೈಕೋರ್ಟ್ ಗ್ರೀನ್ ಸಿಗ್ನಲ್ ನೀಡಿದೆ. ಮುಖ್ಯ ನ್ಯಾಯಮೂರ್ತಿಗಳಾದ ಪ್ರಸನ್ನ ಬಿ ವರಾಳೆ, ನ್ಯಾಯಮೂರ್ತಿ ಎಂ.ಜಿ.ಎಸ್ ಕಮಲ್ ಅವರನ್ನು ಒಳಗೊಂಡ ಕರ್ನಾಟಕ ಹೈಕೋರ್ಟ್ (karnataka High court) ವಿಭಾಗೀಯ ಪೀಠದಿಂದ ಈ ಆದೇಶ ಹೊರಬಿದ್ದಿದೆ. ಈ ಹಿಂದೆ ಏಕಸದಸ್ಯ ಪೀಠ ನೀಡಿದ್ದ ನೇಮಕಾತಿ (Teachers Appointment) ಮರು ರೂಪಿಸಬೇಕು ಎಂಬ ಆದೇಶವನ್ನು ರದ್ದುಪಡಿಸಿದ ವಿಭಾಗೀಯ ಪೀಠ ಮಾ.8, 2023 ರ ಆಯ್ಕೆ ಪಟ್ಟಿಯಂತೆ 13,352 ಪ್ರಾಥಮಿಕ ಶಾಲಾ ಶಿಕ್ಷಕರ ಆಯ್ಕೆಗೆ ಸೂಚಿಸಿದೆ. ರಾಜ್ಯದಲ್ಲಿ 6ರಿಂದ 8ನೇ ತರಗತಿಗಳಿಗೆ ಶಿಕ್ಷಕರ ಕೊರತೆ ಇರುವುದನ್ನು ಪರಿಗಣಿಸಿ ಕೋರ್ಟ್ ಈ ಕ್ರಮ ಕೈಗೊಂಡಿದೆ.
ಈ ಹಿಂದೆ ನೇಮಕಾತಿ ಮರುರೂಪಿಸಲು ಸೂಚಿಸಿದ್ದ ಏಕಸದಸ್ಯ ಪೀಠದ ಆದೇಶವನ್ನು ಹೈಕೋರ್ಟ್ ವಿಭಾಗೀಯ ಪೀಠ ರದ್ದುಪಡಿಸಿದೆ. ಮಾರ್ಚ್.8, 2023 ರ ಆಯ್ಕೆಪಟ್ಟಿಯಂತೆ ನೇಮಕಾತಿ ಅಂತಿಮಗೊಳಿಸಲು ಹೈಕೋರ್ಟ್ ನಿರ್ದೇಶನ ನೀಡಿದೆ.
ಏಕಸದಸ್ಯ ಪೀಠ ತಡೆ ಒಡ್ಡಿದ್ದು ಯಾಕೆ?
ಹಿಂದುಳಿದ ವರ್ಗದ ವಿವಾಹಿತ ಮಹಿಳೆಯನ್ನು ಶಿಕ್ಷಕರ ಆಯ್ಕೆಗೆ ಪರಿಗಣಿಸುವಾಗ ಪತಿಯ ಆದಾಯ ಪರಿಗಣನೆಗೆ ಸರ್ಕಾರ ನಿಯಮ ರೂಪಿಸಿತ್ತು. ಆದರೆ, ರಾಜ್ಯ ಸರ್ಕಾರದ ಈ ನೀತಿಯನ್ನು ಏಕಸದಸ್ಯ ಪೀಠ ಅಮಾನ್ಯಗೊಳಿಸಿತ್ತು. ಮಹಿಳೆಯ ಗಂಡನ ಆದಾಯದ ಬದಲು ಅಭ್ಯರ್ಥಿ ತಂದೆಯ ಜಾತಿ, ಆದಾಯ ಪ್ರಮಾಣಪತ್ರ ಆಧರಿಸಲು ಸೂಚಿಸಿತ್ತು.
ಇದೀಗ ಹೈಕೋರ್ಟ್‌ನ ವಿಭಾಗೀಯ ಪೀಠ ಏಕಸದಸ್ಯ ಪೀಠದ ಈ ಆದೇಶ ರದ್ದುಪಡಿಸಿದೆ. ಜತೆಗೆ ಈ ಹಿಂದಿನಂತೆಯೇ 13,352 ಪ್ರಾಥಮಿಕ ಶಾಲಾ ಶಿಕ್ಷಕರ ಆಯ್ಕೆ ಮಾಡುವಂತೆ ಸೂಚಿಸಿದೆ. ಆದರೆ, ಕೆಲವು ಅಭ್ಯರ್ಥಿಗಳ ಆಯ್ಕೆಯನ್ನು ಕೆಎಸ್ಎಟಿ ಆದೇಶ ಬರುವವರೆಗೆ ಮುಂದೂಡಿದೆ.
ಯಾರ ಅರ್ಜಿ ಅಂತಿಮವಾಗುತ್ತದೆ?
ಯಾರೆಲ್ಲ ಸರ್ಕಾರದ ಅಧಿಸೂಚನೆಯಂತೆ ಗಂಡನ ಆದಾಯ ಪ್ರಮಾಣಪತ್ರ ಸಲ್ಲಿಸಿದ್ದಾರೋ ಅವರ ಆಯ್ಕೆಯನ್ನು ಅಂತಿಮಗೊಳಿಸಲು ಹೈಕೋರ್ಟ್ ಸೂಚಿಸಿದೆ. ಯಾರು ನಿಗದಿತ ನಮೂನೆಯಲ್ಲಿ ಅರ್ಜಿ ಸಲ್ಲಿಸಿಲ್ಲವೋ ಆ ಅಭ್ಯರ್ಥಿಗಳ ಆಯ್ಕೆಯನ್ನು ಕರ್ನಾಟಕ ಆಡಳಿತ ನ್ಯಾಯಮಂಡಳಿ ಆದೇಶದವರೆಗೆ ಮುಂದೂಡುವಂತೆ ಹೈಕೋರ್ಟ್ ಸೂಚನೆ ನೀಡಿದೆ. ನೊಂದ ಅಭ್ಯರ್ಥಿಗಳು ಕೆಎಸ್ಎಟಿಯಲ್ಲಿ ದಾವೆ ಹೂಡಬಹುದು. ಆ ದಾವೆ ಇತ್ಯರ್ಥವಾಗುವವರೆಗೆ ನಿಗದಿತ ನಮೂನೆಯಲ್ಲಿ ಆದಾಯ ಪ್ರಮಾಣಪತ್ರ ಸಲ್ಲಿಸದ ಅಭ್ಯರ್ಥಿಗಳ ಆಯ್ಕೆ ಮುಂದೂಡಬೇಕು ಎನ್ನುವುದು ಸೂಚನೆ.
Guest Teachers Appointment : ಪ್ರಾಥಮಿಕ, ಪ್ರೌಢಶಾಲೆಗೆ 10 ಸಾವಿರ ಅತಿಥಿ ಶಿಕ್ಷಕರ ನೇಮಕಕ್ಕೆ ಸರ್ಕಾರ ಅನುಮತಿ
ಮೊದಲ ಆಯ್ಕೆ ಪಟ್ಟಿಯಲ್ಲಿ 13,352 ಅಭ್ಯರ್ಥಿಗಳನ್ನು ಆಯ್ಕೆ ಮಾಡಲಾಗಿತ್ತು. ಅವುಗಳ ಪೈಕಿ 451 ಅಭ್ಯರ್ಥಿಗಳನ್ನು 2023ರ ಜೂನ್ 8 ಆಯ್ಕೆ ಪಟ್ಟಿಯಲ್ಲಿ ಬದಲಾವಣೆ ಮಾಡಲಾಗಿತ್ತು. ಹೈಕೋರ್ಟ್ ಏಕಸದಸ್ಯ ಪೀಠದ ಆದೇಶ ಅನ್ವಯಿಸಿ ರೂಪಿಸಿದ ಹೊಸ ನಿಯಮದಡಿ 451 ಅಭ್ಯರ್ಥಿಗಳನ್ನು ಬದಲಿ ಅಭ್ಯರ್ಥಿಯಾಗಿ ಆಯ್ಕೆಯಾಗಿದ್ದರು. ಇದೀಗ 451 ಅಭ್ಯರ್ಥಿಗಳ ಆಯ್ಕೆಯನ್ನು ಮರುಯೋಚನೆ ಮಾಡಬೇಕಾಗಿದೆ.