ನಿರಾಶೆ, ವೈಫಲ್ಯ, ಯಶಸ್ಸು, ಬೇಸರ, ಖಾಲಿತನ- ಹೀಗೆ ಬದುಕಿನಲ್ಲಿ ಎಂದಾದರೂ ಎದುರಿಸಲೇಬೇಕಾದ ಭಾವನೆಗಳನ್ನು ಮೀರಲಾಗದೆ ಸಿಟ್ಟಿನ ಕೈಗೆ ಬುದ್ಧಿ ಕೊಡುವವರ ಬಗ್ಗೆ ಕೇಳಿದಾಗಲೆಲ್ಲಾ ಅವರಿಂದ ಆಗಬಹುದಾದ ಅನಾಹುತವನ್ನು ನೆನೆದು ಮನ ತಲ್ಲಣಿಸುತ್ತದೆ. ನಂನಮ್ಮ ಭಾವನೆಗಳ ಮೇಲೆ ಹಿಡಿತವನ್ನು ಸಾಧಿಸುವ ಬದಲು, ನಾವೇ ಭಾವನೆಗಳ ಹಿಡಿತಕ್ಕೆ ಒಳಗಾಗುತ್ತಿದ್ದೇವಲ್ಲ.
ಯಾವುದೇ ದೇಶಗಳ ವಿಶ್ವವಿದ್ಯಾಲಯಗಳಲ್ಲಿ ತಲೆಕೆಟ್ಟ ವಿದ್ಯಾರ್ಥಿಯೊಬ್ಬ ನಡೆಸಿದ ಶೂಟೌಟ್‌ನಲ್ಲಿ ಎಷ್ಟೋ ಮಂದಿ ಸತ್ತರು ಎಂದು ಸುದ್ದಿ ಕೇಳಿದಾಗೆಲ್ಲ ಎದೆ ನಡುಗುತ್ತದೆ. ಇಂದಿನ ದಿನಗಳಲ್ಲಿ ಎಲ್ಲಾ ಕುಟುಂಬಗಳಲ್ಲೂ ಮಕ್ಕಳು ಎಲ್ಲೆಲ್ಲೋ ಓದುತ್ತಿರುವ ಸಂದರ್ಭಗಳಲ್ಲಿ ಇಂಥ ಸುದ್ದಿಗಳು ಹೆತ್ತವರ ನಿದ್ದೆಗೆಡಿಸುತ್ತವೆ. ನಿರಾಶೆ, ವೈಫಲ್ಯ, ಯಶಸ್ಸು, ಬೇಸರ, ಖಾಲಿತನ- ಹೀಗೆ ಬದುಕಿನಲ್ಲಿ ಎಂದಾದರೂ ಎದುರಿಸಲೇಬೇಕಾದ ಭಾವನೆಗಳನ್ನು ಮೀರಲಾಗದೆ ಸಿಟ್ಟಿನ ಕೈಗೆ ಬುದ್ಧಿ ಕೊಡುವವರ ಬಗ್ಗೆ ಕೇಳಿದಾಗಲೆಲ್ಲಾ ಅವರಿಂದ ಆಗಬಹುದಾದ ಅನಾಹುತವನ್ನು ನೆನೆದು ಮನ ತಲ್ಲಣಿಸುತ್ತದೆ. ಹೀಗೇಕೆ ಆಗುತ್ತಿದೆ? ನಂನಮ್ಮ ಭಾವನೆಗಳ ಮೇಲೆ ಹಿಡಿತವನ್ನು ಸಾಧಿಸುವ ಬದಲು, ನಾವೇ ಭಾವನೆಗಳ ಹಿಡಿತಕ್ಕೆ ಒಳಗಾಗುತ್ತಿದ್ದೇವಲ್ಲ.
ನಮ್ಮ ಭಾವನೆಗಳ ಮೇಲೆ ನಿಯಂತ್ರಣ ಅಥವಾ ಪ್ರಜ್ಞೆಯನ್ನು ಸ್ಥಿಮಿತದಲ್ಲಿ ಇರಿಸಿಕೊಳ್ಳುವ ಈ ಪ್ರಕ್ರಿಯೆಯನ್ನು ಸ್ಥಿತಪ್ರಜ್ಞತೆ (Emotional Resilience) ಎಂದು ಕರೆಯೋಣ. ಇನ್ನೂ ಸರಳವಾಗಿ ಹೇಳಬೇಕೆಂದರೆ, ಸುಖ-ಯಶಸ್ಸುಗಳಿಗೆ ಹಿಗ್ಗದೆ ಶೋಕ-ಸೋಲುಗಳಿಗೆ ಕುಗ್ಗದೆ ಇರುವಂಥ ಮನಸ್ಥಿತಿಯದು. ಇದೀಗ ಎಲ್ಲರಿಗೂ ಅಗತ್ಯವಾಗಿ ಬೇಕಾದ ಗುಣವೇ ಹೌದಾದರೂ, ವಿದ್ಯಾರ್ಥಿಗಳಿಗೆ ಇದರ ಅಗತ್ಯ ಎಂದಿಗಿಂತ ಹೆಚ್ಚು ಎನಿಸುತ್ತಿದೆ. ಉದಾ, ಸಿದ್ಧಾಂತಗಳ ಹೆಸರಿನಲ್ಲಿ ವೈಯಕ್ತಿಕ ದ್ವೇಷಗಳನ್ನು ಬೆಳೆಸಿಕೊಳ್ಳುವುದು ವಿದ್ಯಾರ್ಥಿ ಜೀವನದಿಂದಲೇ ಕಾಣುತ್ತೇವಲ್ಲ. ಹಾಗಾದರೆ ಯಾವುದಕ್ಕೆ ಎಲ್ಲಿ ಮತ್ತು ಎಷ್ಟು ಆದ್ಯತೆ ನೀಡಬೇಕು ಎಂಬಂಥ ನಿರ್ಧಾರಗಳು ನಂನಮ್ಮ ಭಾವಗಳ (Emotional Resilience) ಸ್ಥಿತಪ್ರಜ್ಞತೆಗೆ ಬಿಟ್ಟಿದ್ದಲ್ಲವೇ? ಹೌದು ಎಂದಾದರೆ, ಇದನ್ನು ಬೆಳೆಸಿಕೊಳ್ಳಲು ಸಾಧ್ಯವೇ?
ಕೆಲವು ಸಾಧ್ಯತೆಗಳು ಹುಟ್ಟಿನಿಂದಲೇ ಬಂದಿರುವಂಥವು. ಉದಾ, ಚೆನ್ನಾಗಿ ಹಾಡುವುದು ಅಥವಾ ಚಿತ್ರ ಬರೆಯುವುದು ಇತ್ಯಾದಿ. ಹಾಡುವ ಪ್ರತಿಭೆಯೇ ಇಲ್ಲವೆಂದಾದರೆ ಎಷ್ಟೇ ಕಂಠ ಶೋಷಣೆ ಮಾಡಿಕೊಂಡರೂ ಅವರಿಂದ ಚೆನ್ನಾಗಿ ಹಾಡುವುದು ಕಷ್ಟಸಾಧ್ಯ. ಆದರೆ ಗುಣಗಳನ್ನು ಸ್ವಪ್ರಯತ್ನದಿಂದ ಬೆಳೆಸಿಕೊಳ್ಳಬಹುದಲ್ಲ. ಎಮೋಶನಲ್ ರೆಸಿಲಿಯನ್ಸ್ ಎಂದೇ ವಿಶ್ವದೆಲ್ಲೆಡೆ ಗುರುತಿಸಲ್ಪಟ್ಟಿರುವ ಭಾವನಾತ್ಮದ ಸ್ಥಿತಿಸ್ಥಾಪಕತ್ವ ಅಥವಾ ನಾವು ಮೊದಲಿನಿಂದ ಕೇಳುತ್ತಾ ಬಂದಿರುವ (Emotional Resilience) ಸ್ಥಿತಪ್ರಜ್ಞತೆಯನ್ನು ಮೈಗೂಡಿಸಿಕೊಳ್ಳುವುದು ಹೇಗೆ? ವಿದ್ಯಾರ್ಥಿಗಳಿಗೆ ಇದರಿಂದ ಪ್ರಯೋಜನವೇನು?
ಸ್ಥಿತಪ್ರಜ್ಞತೆ ಎಂದರೆ?
ಒಂದಿಷ್ಟು ಸಂದರ್ಭಗಳನ್ನು ಗಮನಿಸೋಣ. ಮಗುವನ್ನು ಮೊದಲ ಬಾರಿಗೆ ಶಾಲೆ ಕರೆದೊಯ್ಯುತ್ತೀರಿ. ಕೆಲವು ಮಕ್ಕಳು ಏನೂ ಆಗದಂತೆ ಖುಷಿಯಿಂದಲೇ ಶಾಲೆಗೆ ಹೋದರೆ, ಕೆಲವು ಅತ್ತು ರಂಪ ಮಾಡುತ್ತವೆ. ಹಾಗೆಯೇ ಶಾಲೆಯನ್ನು ಬದಲಾಯಿಸಿದಾಗ, ಅವರಿಷ್ಟದ ಟೀಚರ್ ಶಾಲೆ ಬಿಟ್ಟು ಹೋದಾಗ, ಮಿತ್ರರೊಂದಿಗೆ ಜಗಳವಾಡಿದಾಗ- ಇಂಥ ಸಣ್ಣ ಸಂದರ್ಭಗಳಲ್ಲೂ ಮಕ್ಕಳು ಕೆಲವೊಮ್ಮೆ ಅತಿಯಾಗಿ ಪ್ರತಿಕ್ರಿಯಿಸುವುದನ್ನು ಕಾಣಬಹುದು. ಹೊಸದನ್ನು, ಬದಲಾವಣೆಯನ್ನು, ಅನಿರೀಕ್ಷಿತವಾದುದನ್ನು ಒಪ್ಪಿಕೊಳ್ಳಲು ಕಷ್ಟವಾದಾಗ ಅಥವಾ ಸಿದ್ಧರಿಲ್ಲದಿದ್ದಾಗ ಇಂಥವು ಹೆಚ್ಚಾಗುತ್ತವೆ ಎಂಬುದನ್ನು ಗಮನಿಸಬೇಕು. ಇದೇ ಮುಂದುವರಿದು, ಮನೆ ಬಿಟ್ಟು ಹಾಸ್ಟೆಲ್ ಸೇರಿದಾಗ ಎದುರಾಗಬಹುದು. ಮನೆಯ ಸೌಖ್ಯ ಕಾಣದೆ ಒಂದಿಷ್ಟು ವಿದ್ಯಾರ್ಥಿಗಳು ಒದ್ದಾಡಿದರೆ, ಹಲವರು ಬೇಗನೇ ಹೊಂದಿಕೊಳ್ಳುತ್ತಾರೆ, ಕೆಲವರು ಏನೂ ಆಗದಂತೆ ಬಿಂದಾಸ್ ಆಗಿಯೇ ಇರುತ್ತಾರೆ. ಬದಲಾವಣೆಗೆ ಎಷ್ಟು ಶೀಘ್ರ ಹೊಂದಿಕೊಳ್ಳುತ್ತೇವೆ ಎಂಬುದು ನಮ್ಮ ಎಮೋಶನ್ ರೆಸಿಲಿಯನ್ಸ್ ಎಷ್ಟು ಚೆನ್ನಾಗಿದೆ ಎಂಬುದನ್ನು ಅವಲಂಬಿಸಿರುತ್ತದೆ. ಬದುಕಿನ ಎಲ್ಲಾ ತಿರುವುಗಳಲ್ಲಿ, ಅನಿರೀಕ್ಷಿತ ವಿದ್ಯಮಾನಗಳಲ್ಲಿ ನಮ್ಮನ್ನು ಕಾಯುವುದು ನಾವೇ ಬೆಳೆಸಿಕೊಳ್ಳುವ ಈ ಮಾನಸಿತ ಸ್ಥಿರತೆ(Concentration tips).
ಯಾಕೆ ಬೇಕು?
ದಿನನಿತ್ಯ ಅಪಾರ ಪ್ರಮಾಣದಲ್ಲಿ ದೈಹಿಕ ಮತ್ತು ಮಾನಸಿಕ ಬದಲಾವಣೆಗಳನ್ನು ವಿದ್ಯಾರ್ಥಿಗಳು ಎದುರಿಸುತ್ತಿರುತ್ತಾರೆ. ಇವಿಷ್ಟರ ನಡುವೆ ಓದು, ಒತ್ತಡ, ಮಿತ್ರರು, ಹೆತ್ತವರು- ಎಲ್ಲವನ್ನೂ ಎಲ್ಲರನ್ನೂ ನಿಭಾಯಿಸಬೇಕು. ಹಾಗಾಗಿ ಎದುರು ಬರುವುದನ್ನೆಲ್ಲಾ ʻವಾತಾಪಿ ಜೀರ್ಣೋಭವʼ ಮಾಡಿಕೊಂಡು ಬದುಕಿನಲ್ಲಿ ಮುಂದುವರಿಯೇಡವೇ? ಬಹುನಿರೀಕ್ಷಿತ ಪರೀಕ್ಷೆಯಲ್ಲಿ ಗುರಿಯಿರಿಸಿಕೊಂಡಷ್ಟು ಯಶಸ್ಸು ದೊರೆಯದಿದ್ದರೆ, ನಿನ್ನೆಯವರೆಗೆ ೨೪*೭ ತನ್ನೊಂದಿಗೆ ಚಾಟ್ ಮಾಡುತ್ತಿದ್ದವಳು ಇಂದು ಮುಖವನ್ನೇ ನೋಡದಿದ್ದರೆ, ಕುಟುಂಬದಲ್ಲಿ ಆಪ್ತರೊಬ್ಬರು ಕಣ್ಮರೆಯಾದರೆ, ಊರು-ಮನೆಗಳನ್ನು ಬಿಟ್ಟು ಎಲ್ಲಿಗೋ ಹೋಗಬೇಕಾಗಿ ಬಂದರೆ- ಅದೇ ಜೀವನದ ಕೊನೆಯಲ್ಲ! ಹೊಸ ಬದುಕಿನ ಆರಂಭವೂ ಆಗಿರಬಹುದಲ್ಲ. ಇಂಥವೆಲ್ಲವನ್ನೂ ಅರಗಿಸಿಕೊಳ್ಳಲು ವಿದ್ಯಾರ್ಥಿ ಜೀವನದಲ್ಲಿ ಇದು ಮುಖ್ಯ ಎನಿಸುತ್ತದೆ. ಇದಕ್ಕೇನು ಮಾಡಬೇಕು?
ಪ್ರಗತಿಯನ್ನೂ ಗುರುತಿಸಿ
ಹೌದು, ಯಶಸ್ಸುಗಳನ್ನು ಮಾತ್ರವೇ ಗುರುತಿಸಿ ಸಂಭ್ರಮಿಸಬೇಕೆಂದೇನಿಲ್ಲ. ಸಣ್ಣ ಪ್ರಗತಿಯನ್ನೂ ಗುರುತಿಸಿಕೊಳ್ಳಿ. ಕಳೆದ ಬಾರಿಗಿಂತ ಈ ಬಾರಿಯ ಗ್ರೇಡ್ ಅಥವಾ ಅಂಕಗಳು ಕೊಂಚವೇ ಹೆಚ್ಚಾದರೆ, ಅದನ್ನೂ ಪರಿಗಣಿಸಿ. ಇದರಿಂದ ಬೆಳವಣಿಗೆಯ ಹಾದಿಯಲ್ಲಿ ದೃಢವಾಗಿ ಮುನ್ನಡೆಯಲು ಸಾಧ್ಯವಾಗುತ್ತದೆ. ನಮ್ಮ ಉದ್ದೇಶವಿರುವುದು ಬದುಕಿನಲ್ಲಿ ಧನಾತ್ಮಕವಾಗಿದ್ದು ಎಲ್ಲಿದೆ ಅದನ್ನು ಕೇಂದ್ರೀಕರಿಸುವುದು, ಎಷ್ಟೇ ಸಣ್ಣದಾದರೂ ಸರಿ.
ಗುರಿ ಹೇಗಿದೆ?
ಅಂಬೆಗಾಲಿಡುವ ಮಕ್ಕಳ ಮುಂದೆ ಸ್ವಲ್ಪವೇ ದೂರದಲ್ಲಿ ಗೊಂಬೆಯನ್ನಿಟ್ಟರೆ, ಅದನ್ನು ಹಿಡಿಯಲು ಯತ್ನಿಸುತ್ತಾರೆ. ತೀರಾ ದೂರದಲ್ಲಿಟ್ಟರೆ ಪ್ರಯತ್ನ ನಿಲ್ಲಿಸುತ್ತಾರೆ. ಇದು ದೊಡ್ಡ ಮಕ್ಕಳ ವಿಷಯದಲ್ಲೂ ಸತ್ಯ. ಹಾಗಾಗಿ ಯಶಸ್ಸಿನೆಡೆಗೆ ಒಂದೊಂದೇ ಹೆಜ್ಜೆ ಇರಿಸುವುದಕ್ಕೆ ಬೇಕಾಗಿ, ಪ್ರಾಕ್ಟಿಕಲ್ ಆದಂಥ ಗುರಿಯನ್ನು ಇರಿಸಿಕೊಳ್ಳಿ. ತೀರಾ ಅಸಾಧ್ಯವಾದ ಗುರಿಯನ್ನು ಇರಿಸಿಕೊಂಡರೆ ಧನಾತ್ಮಕ ಗುಣವನ್ನು ಮೈಗೂಡಿಸಿಕೊಳ್ಳುವುದು ಕಷ್ಟವಾದೀತು.
ನೆರವಾಗಿ
ನಿಮ್ಮದೇ ಮನೆಯವರು, ಆಪ್ತರು, ಮಿತ್ರರು ವಿನಂತಿಸಿಕೊಂಡರೆ, ನಿಮ್ಮ ಮಿತಿಯಲ್ಲಿ ನೆರವಾಗಿ. ನಾವು ಮಾಡಿದ ಒಳ್ಳೆಯ ಕೆಲಸಗಳು ಯಾವುದೋ ರೂಪದಲ್ಲಿ, ಯಾರದ್ದೋ ಮೂಲಕ ನಮ್ಮನ್ನೇ ಸೇರುತ್ತವೆ ಎಂಬ ಧನಾತ್ಮಕ ನಂಬಿಕೆಯನ್ನು ಇರಿಸಿಕೊಳ್ಳಿ. ಕಷ್ಟದ ದಿನಗಳಲ್ಲಿ ಇಂಥವೇ ಭಾವನೆಗಳು ನಮ್ಮನ್ನು ಗಟ್ಟಿ ಮಾಡುತ್ತವೆ.
ಒಪ್ಪಿಕೊಳ್ಳಿ
ನಿಮ್ಮ ಯಶಸ್ಸನ್ನು ಒಪ್ಪಿಕೊಂಡಂತೆ, ಸೋಲನ್ನೂ ಹಿಂಜರಿಕೆ ಇಲ್ಲದೆ ಒಪ್ಪಿಕೊಳ್ಳಿ. ಮಾತ್ರವಲ್ಲ, ನಿಮ್ಮಲ್ಲಿನ ಯಾವುದೇ ಅನಗತ್ಯ ಗುಣಗಳನ್ನು ಗುರುತಿಸುವಷ್ಟು ಸಹನೆ ಇರಲಿ. ತೊಡಕು ಇದೆ ಎಂದು ಒಪ್ಪಿಕೊಳ್ಳುವುದೇ ಅದರ ನಿವಾರಣೆಯತ್ತ ನಾವು ಇಡುವ ಮೊದಲ ಹೆಜ್ಜೆ.
ಹೇಳಿಕೊಳ್ಳಿ
ನಿಮ್ಮ ಮನಸ್ಸಿನ ಭಾವನೆಗಳನ್ನು ಆಪ್ತರೊಂದಿಗೆ ಹಂಚಿಕೊಳ್ಳಿ. ಮನಸ್ಸು ಹಗುರವಾದಷ್ಟೂ ಆರೋಗ್ಯಪೂರ್ಣವಾಗಿರುತ್ತದೆ. ನೆರವು ಬೇಕೆನಿಸಿದರೆ, ಕೇಳುವುದಕ್ಕೆ ಹಿಂಜರಿಯೇಡಿ.