ನವದೆಹಲಿ: ಜೆಇಇ ಮೇನ್ಸ್ ಸೆಷನ್ 2 (JEE Main 2024 Session 2) ಪರೀಕ್ಷೆಗೆ ನೋಂದಣಿ ಪ್ರಕ್ರಿಯೆ ಆರಂಭವಾಗಿದೆ. ಅರ್ಹರು ಮಾರ್ಚ್ 2ರ ತನಕ ಅರ್ಜಿ ಸಲ್ಲಿಸಬಹುದು ಎಂದು ರಾಷ್ಟ್ರೀಯ ಪರೀಕ್ಷಾ ಸಂಸ್ಥೆ (NTA) ತಿಳಿಸಿದೆ. ಏಪ್ರಿಲ್ 1ರಿಂದ 15ರ ಮಧ್ಯೆ ಈ ಜೆಇಇ ಎರಡನೇ ಹಂತದ ಪರೀಕ್ಷೆ ನಡೆಯಲಿದೆ.
ಮೊದಲ ಸೆಷನ್‌ಗೆ ಅರ್ಜಿ ಸಲ್ಲಿಸಿ ಶುಲ್ಕ ಪಾವತಿಸಿದವರು ಎರಡನೇ ಸೆಷನ್ ಅರ್ಜಿ ಸಲ್ಲಿಕೆ ವೇಳೆ ಸೆಷನ್‌ನ ಅರ್ಜಿ ಸಂಖ್ಯೆ ಮತ್ತು ಪಾಸ್‌ವರ್ಡ್ ನಮೂದಿಸಬೇಕು ಎಂದು ಸೂಚಿಸಲಾಗಿದೆ. ಹೊಸದಾಗಿ ಅರ್ಜಿ ಸಲ್ಲಿಸುವವರು ನಿಗದಿತ ದಿನಾಂಕದೊಳಗೆ ಮಾರ್ಗಸೂಚಿ ಅನುಸಾರ ಅರ್ಜಿ ಸಲ್ಲಿಸಬೇಕು ಎಂದು ಸೂಚಿಸಲಾಗಿದೆ.
ಈ ಲಾಗಿನ್ ವೇಳೆ ಅಭ್ಯರ್ಥಿಗಳು ಪತ್ರಿಕೆ, ಪರೀಕ್ಷಾ ಮಾಧ್ಯಮ, ರಾಜ್ಯ ಅರ್ಹತಾ ಸಂಹಿತೆ, ಸೆಷನ್ 2ಗೆ ಆದ್ಯತೆಯ ನಗರಗಳು, ಶೈಕ್ಷಣಿಕ ಅರ್ಹತೆ ವಿವರಗಳನ್ನು ನಮೂದಿಸಬೇಕು. ಬಳಿಕ ಪರೀಕ್ಷಾ ಶುಲ್ಕ ಪಾವತಿ ಪ್ರಕ್ರಿಯೆಯನ್ನು ಪೂರ್ಣಗೊಳಿಸಬೇಕು.
ಕಳೆದ ವಾರ ಮುಕ್ತಾಯವಾದ ಜೆಇಇ ಮೇನ್ಸ್ ಮೊದಲ ಸೆಷನ್‌ನಲ್ಲಿ ಒಟ್ಟು ಅರ್ಜಿ ಸಲ್ಲಿಸಿದವರ ಪೈಕಿ ಶೇ. 95.8ರಷ್ಟು ಅಭ್ಯರ್ಥಿಗಳು ಹಾಜರಿದ್ದರು ಎಂದು ಮೂಲಗಳು ತಿಳಿಸಿವೆ. ಜೆಇಇ ಮೇನ್ಸ್ ಇಂಗ್ಲಿಷ್, ಹಿಂದಿ, ಕನ್ನಡ ಸೇರಿದಂತೆ 12 ಪ್ರಾದೇಶಿಕ ಭಾಷೆಗಳಲ್ಲಿ ನಡೆಯಲಿದೆ. ಭಾರತದ ಹೊರಗಿನ 21 ನಗರಗಳಲ್ಲಿಯೂ ಈ ಪರೀಕ್ಷೆ ಬರೆಯಲು ಅವಕಾಶ ಕಲ್ಪಿಸಲಾಗಿದೆ. ಜೆಇಇ ಪರೀಕ್ಷೆಯಲ್ಲಿ ಉನ್ನತ ಶ್ರೇಣಿಯಲ್ಲಿ ತೇರ್ಗಡೆ ಹೊಂದುವ ವಿದ್ಯಾರ್ಥಿಗಳು ದೇಶದ ಪ್ರತಿಷ್ಟಿತ ಎನ್‌ಐಟಿ, ಐಐಟಿ ಮತ್ತು ಕೇಂದ್ರದ ಅನುದಾನಿತ ಎಂಜಿನಿಯರಿಂಗ್ ಕಾಲೇಜುಗಳಲ್ಲಿ ಪ್ರವೇಶ ಪಡೆಯಲು ಅರ್ಹತೆ ಹೊಂದುತ್ತಾರೆ. ಜೆಇಇ ಮೇನ್ಸ್ ಸೆಷನ್ 2ರ ಫಲಿತಾಂಶ ಏಪ್ರಿಲ್ 25ರಂದು ಹೊರ ಬರುವ ನಿರೀಕ್ಷೆ ಇದೆ.
ಜೆಇಇ ಮೇನ್ಸ್ ಸೆಷನ್ 2 ಅರ್ಜಿ ಸಲ್ಲಿಸುವ ವಿಧಾನ
- ಅಧಿಕೃತ ವೆಬ್ಸೈಟ್ https://jeemain.nta.nic.in/ಗೆ ಭೇಟಿ ನೀಡಿ.
- ಈಗ ಓಪನ್ ಆಗುವ ಹೋಮ್ ಪೇಜ್ನಲ್ಲಿ ಕಾಣಿಸುವ JEE Main 2024 Session 2 ಲಿಂಕ್ ಮೇಲೆ ಕ್ಲಿಕ್ ಮಾಡಿ.
- ಹೆಸರು ನೋಂದಾಯಿಸಿದ ಬಳಿಕ ಅಪ್ಲಿಕೇಷನ್ ಫಾರಂ ಭರ್ತಿ ಮಾಡಿ.
- ಅಗತ್ಯವಾದ ಮಾಹಿತಿ ತುಂಬಿ ಅರ್ಜಿ ಶುಲ್ಕ ಪಾವತಿಸಿ.
- ಮತ್ತೊಮ್ಮೆ ಮಾಹಿತಿಯನ್ನು ಪರಿಶೀಲಿಸಿ ಅರ್ಜಿ ಸಲ್ಲಿಸಿ.
- ಭವಿಷ್ಯದ ಅಗತ್ಯಗಳಿಗಾಗಿ ಅರ್ಜಿ ಫಾರಂನ ಪ್ರಿಂಟ್ಔಟ್ ತೆಗೆದಿಡಿ.
ಇದನ್ನೂ ಓದಿ: JEE Mains : 24ರಂದು ಜೆಇಇ ಮೇನ್ಸ್ 2024 ಪ್ರವೇಶ ಪತ್ರ ಬಿಡುಗಡೆ