ಬೆಂಗಳೂರು: ಇಂಜಿನಿಯರಿಂಗ್ ಹಾಗೂ ವಿವಿಧ ವೃತ್ತಿಪರ ಕೋರ್ಸ್ ಸೇರ್ಪಡೆಗೆ ಕರ್ನಾಟಕ ಪರೀಕ್ಷಾ ಪ್ರಾಧಿಕಾರ (Karnataka Examinations Authority-KEA) ನಡೆಸುವ ಸಾಮಾನ್ಯ ಪ್ರವೇಶ ಪರೀಕ್ಷೆಗೆ (karnataka common entrance test) ಅರ್ಜಿಸಲ್ಲಿಸಲು ಹೊಸ ಲಿಂಕ್ ಸೋಮವಾರ ತೆರೆದುಕೊಂಡಿದೆ.
ಈ ಬಾರಿ ಪರೀಕ್ಷೆಗಳು ಜೂನ್ 16ರಿಂದ ಆರಂಭವಾಗಲಿವೆ. ಈಗಾಗಲೆ ಪರೀಕ್ಷಾ ವೇಳಾಪಟ್ಟಿಯನ್ನು ಬಿಡುಗಡೆ ಮಾಡಲಾಗಿದೆ. ಈ ವರ್ಷ ವಿದ್ಯಾರ್ಥಿಗಳು ಅರ್ಜಿ ಭರ್ತಿ ಮಾಡಲು ಅನುಕೂಲವಾಗಲು ಸರಳವಾದ ಲಿಂಕ್ ರೂಪಿಸಲಾಗಿದೆ. ಪ್ರಾಯೋಗಿಕವಾಗಿ ಅರ್ಜಿ ಭರ್ತಿ ಮಾಡಲು ಈ ಹಿಂದೆಯೇ ಒಂದು ಲಿಂಕ್ ನೀಡಲಾಗಿತ್ತು. ಅದರಲ್ಲಿ ಅರ್ಜಿ ಶುಲ್ಕವನ್ನು ಕೇವಲ ₹1 ರೂ. ಎಂದು ತಿಳಿಸಲಾಗಿತ್ತು, ಅಭ್ಯರ್ಥಿಗಳು ಅಷ್ಟೇ ಶುಲ್ಕವನ್ನು ಪ್ರಾಯೋಗಿಕವಾಗಿ ಪಾವತಿ ಮಾಡಿದ್ದರು.
ಆದರೆ ಅನೇಕ ಅಭ್ಯರ್ಥಿಗಳು ಅದೇ ಅಸಲಿ ಅರ್ಜಿ ಎಂದು ಭಾವಿಸಿದ್ದಾರೆ. ಹಳೆಯ ಲಿಂಕ್ ಅನ್ನು KEA ಹಿಂಪಡೆದಿದೆ. ಇದೀಗ ಹೊಸ ಅರ್ಜಿಯ ಲಿಂಕ್ ಅನ್ನು ಸೋಮವಾರ ಬೆಳಗ್ಗೆ 11 ಗಂಟೆಗೆ KEA ವೆಬ್‌ಸೈಟ್‌ನಲ್ಲಿ ಬಿಡುಗಡೆ ಮಾಡಲಾಗಿದೆ. ಅರ್ಜಿ ಸಲ್ಲಿಕೆಗೆ ಮೇ5ರ ವರೆಗೆ ಅವಧಿಯಿದೆ.
ಎಸ್‌ಎಸ್‌ಎಲ್‌ಸಿಯಲ್ಲಿ ಅಭ್ಯರ್ಥಿಯ ನೋಂದಣಿ ಸಂಖ್ಯೆಯನ್ನು ನಮೂದಿಸಿದರೆ ಸಾಕು ವಿದ್ಯಾರ್ಥಿಯ ಹೆಸರು, ತಂದೆ ತಾಯಿಯ ಹೆಸರು ತಾನಾಗಿಯೇ ಭರ್ತಿಯಾಗುತ್ತದೆ. ವಿದ್ಯಾರ್ಥಿ 1ರಿಂದ 12ನೇ ತರಗತಿವರೆಗೆ ವ್ಯಾಸಂಗ ಮಾಡಿದ ವಿವರ, ಮೀಸಲಾತಿ ಮಾಹಿತಿಗಳನ್ನು ಅಪ್‌ಲೋಡ್ ಮಾಡಿದರೆ ಸಾಕು ಎಂದು ಪ್ರಾಧಿಕಾರದ ಕಾರ್ಯನಿರ್ವಾಹಕ ನಿರ್ದೇಶಕಿ ಎಸ್. ರಮ್ಯಾ ಹೇಳಿದ್ದಾರೆ.
ವಿದ್ಯಾರ್ಥಿಗಳು ಈ ಲಿಂಕ್ ಕ್ಲಿಕ್ ಮಾಡಿ ಆನ್‌ಲೈನ್ ಅರ್ಜಿ ಪಡೆಯಬಹುದು
ಈ ಕುರಿತು ಹೆಚ್ಚಿನ ಮಾಹಿತಿ ನೀಡಿರುವ ರಮ್ಯಾ, ₹1 ಪಾವತಿ ಮಾಡಿ ಅರ್ಜಿ ಸಲ್ಲಿಸಿರುವ ವಿದ್ಯಾರ್ಥಿಗಳು ಇದೀಗ ನೀಡಲಾಗಿರುವ ಹೊಸ ಲಿಂಕ್ ಭರ್ತಿ ಮಾಡಬೇಕು. ಅಸಲಿಗೆ ಶುಲ್ಕ ಸಾಮಾನ್ಯ ವಿದ್ಯಾರ್ಥಿಗಳಿಗೆ ₹750, ವಿವಿಧ ವರ್ಗದ ವಿದ್ಯಾರ್ಥಿಗಳಿಗೆ ₹350 ಹಾಗೂ ಶುಲ್ಕ ವಿನಾಯಿತಿ ಇರುತ್ತದೆ. ಈ ಬಾರಿ ವಿದ್ಯಾರ್ಥಿಗಳು ಮಾಹಿತಿ ಮಾತ್ರ ನೀಡಬೇಕಿದ್ದು, ಯಾವುದೇ ದಾಖಲೆ ನೀಡಬೇಕಿಲ್ಲ. ದಾಖಲಾತಿಗಳನ್ನು ದಾಖಲಾತಿ ಪರಿಶೀಲನಾ ಸಮಯದಲ್ಲಿ ನೀಡಿದರೆ ಸಾಕು ಎಂದು ಹೇಳಿದ್ದಾರೆ. ಸಿಇಟಿ ಪರೀಕ್ಷೆ ಕುರಿತು ಹೆಚ್ಚಿನ ಮಾಹಿತಿಗಾಗಿ ಕೆಇಎ ಅಧಿಕೃತ ವೆಬ್‌ಸೈಟ್‌ಗೆ ಭೇಟಿ ನೀಡಬಹುದು.