Site icon Vistara News

Stipend Hike: ವೈದ್ಯಕೀಯ ವಿದ್ಯಾರ್ಥಿಗಳ ಶಿಷ್ಯವೇತನ ಹೆಚ್ಚಳ, ಆಗಸ್ಟ್‌ 1ರಿಂದಲೇ ಅನ್ವಯ

medical students stipend

ಬೆಂಗಳೂರು: ಸ್ನಾತಕೋತ್ತರ ವೈದ್ಯಕೀಯ ವಿದ್ಯಾರ್ಥಿಗಳ (PG Medical Students) ಸ್ಟೈಪೆಂಡ್​ (Stipend) ಅನ್ನು ಕರ್ನಾಟಕ ರಾಜ್ಯ ಸರಕಾರ (Karnataka Government) ಶೇ.25ರಷ್ಟು ಹೆಚ್ಚಳ ಮಾಡಿದೆ. ಆ ಮೂಲಕ ವೈದ್ಯಕೀಯ ವಿದ್ಯಾರ್ಥಿಗಳ ಮುಷ್ಕರಕ್ಕೆ (Medical Students Strike) ಸರ್ಕಾರ ಮಣಿದಿದೆ. ಶೇ.100ರಷ್ಟು ಸ್ಟೈಪೆಂಡ್ ಹೆಚ್ಚಳಕ್ಕೆ (Stipend Hike) ಆಗ್ರಹಿಸಿ ಸ್ನಾತಕೋತ್ತರ ವೈದ್ಯಕೀಯ ವಿದ್ಯಾರ್ಥಿಗಳು ಮುಷ್ಕರ ನಡೆಸುತ್ತಿದ್ದರು.

ಈ ಹಿನ್ನೆಲೆಯಲ್ಲಿ ವೈದ್ಯಕೀಯ ಶಿಕ್ಷಣ ಸಚಿವ ಶರಣ ಪ್ರಕಾಶ್ ಪಾಟೀಲ್ (Minister for Medical Education Sharanaparakash Patil) ಸುದ್ದಿಗೋಷ್ಠಿ ನಡೆಸಿ, ಶೇ.25ರಷ್ಟು ಸ್ಟೈಪೆಂಡ್​​ ಹೆಚ್ಚಳ ಮಾಡುತ್ತೇವೆ ಎಂದು ಹೇಳಿದರು. ವೈದ್ಯಕೀಯ ಶಿಕ್ಷಣ ಸಚಿವರ ಭರವಸೆ ಬೆನ್ನಲ್ಲೇ ವಿದ್ಯಾರ್ಥಿಗಳು ಮುಷ್ಕರ ವಾಪಸ್ ಪಡೆದಿದ್ದಾರೆ.

ಪರಿಷ್ಕೃತ ವೇತನ ಹೀಗಿರಲಿದೆ:

ಸ್ನಾತಕೋತ್ತರ ವೈದ್ಯ ವಿದ್ಯಾರ್ಥಿಗಳು:
1ನೇ ವರ್ಷ – ರೂ. 45,000 ದಿಂದ 56,250
2ನೇ ವರ್ಷ- ರೂ. 50,000 ದಿಂದ 62,500
3ನೇ ವರ್ಷ- ರೂ. 55,000 ದಿಂದ 68,750

ಸೂಪರ್ ಸ್ಪೆಷಾಲಿಟಿ ವೈದ್ಯ ವಿದ್ಯಾರ್ಥಿಗಳು:
1ನೇ ವರ್ಷ – ರೂ. 55,000 ದಿಂದ 68,750
2ನೇ ವರ್ಷ- ರೂ. 60,000 ದಿಂದ 75,000
3ನೇ ವರ್ಷ- ರೂ. 65,000 ದಿಂದ 81,250
ಸೀನಿಯರ್ ರೆಸಿಡೆಂಟ್ಸ್: ರೂ. 60,000 ದಿಂದ 75,000

ಮಂಜೂರಾದ ಸೀಟುಗಳು:
ಸ್ನಾತಕೋತ್ತರ- 3,540
ಸೂಪರ್ ಸ್ಪೆಷಾಲಿಟಿ- 445
ಸೀನಿಯರ್ ರೆಸಿಡೆಂಟ್- 527
ಒಟ್ಟು ಸೀಟುಗಳು- 4,312

ಮಹಿಳಾ ವೈದ್ಯರ ಸುರಕ್ಷತೆಗಾಗಿ ಮಾರ್ಗಸೂಚಿ

ಕೊಲ್ಕತ್ತಾದಲ್ಲಿ ಮಹಿಳಾ ವೈದ್ಯೆ ಮೇಲೆ ನಡೆದ ಅತ್ಯಾಚಾರ ಹಾಗೂ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ದೇಶವ್ಯಾಪಿ ನಡೆದ ಪ್ರತಿಭಟನೆಗಳ ಹಿನ್ನೆಲೆಯಲ್ಲಿ ಕರ್ನಾಟಕ ಸರ್ಕಾರ ಮಹಿಳಾ ವೈದ್ಯಕೀಯ ಸಿಬ್ಬಂದಿ ಹಾಗೂ ಮಹಿಳಾ ವೈದ್ಯರ ಸುರಕ್ಷತೆಗಾಗಿ ಸ್ವಯಂಪ್ರೇರಿತವಾಗಿ ಮಾರ್ಗಸೂಚಿಯನ್ನು ಬಿಡುಗಡೆ ಮಾಡಲು ಚಿಂತನೆ ನಡೆಸಿದೆ. ವೈದ್ಯಕೀಯ ಶಿಕ್ಷಣ ಸಚಿವ ಡಾ.ಶರಣ ಪ್ರಕಾಶ್ ಪಾಟೀಲ್ ಅವರು ವೈದ್ಯಕೀಯ ಶಿಕ್ಷಣ ನಿರ್ದೇಶಕರ ಡಾ. ಸುಜಾತ ರಾಥೋಡ್ ಅವರಿಗೆ ಮಹಿಳಾ ವೈದ್ಯರ ಸುರಕ್ಷತೆಯ ಬಗ್ಗೆ ಸಂಬಂಧಿಸಿದ ಎಲ್ಲಾ ಸಂಸ್ಥೆಗಳನ್ನು ಸಂಪರ್ಕಿಸಿ ಸಮಗ್ರವಾದ ಮಾರ್ಗಸೂಚಿಯನ್ನು ರಚಿಸುವಂತೆ ಸೂಚಿಸಿದರು.

ಡಾ. ರಾಥೋಡ್ ಅವರಿಗೆ ಸರ್ಕಾರಿ ವೈದ್ಯಕೀಯ ಕಾಲೇಜುಗಳ ಎಲ್ಲಾ ನಿರ್ದೇಶಕರುಗಳು, ಸರ್ಕಾರಿ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಗಳು, ವೈದ್ಯರ ಸಂಘ ಸಂಸ್ಥೆಗಳೊಂದಿಗೆ ಸಮಾಲೋಚಿಸಲು ಸಚಿವರು ನಿರ್ದೇಶನ ನೀಡಿದರು. ಇದರೊಂದಿಗೆ ಖಾಸಗಿ ಆಸ್ಪತ್ರೆಗಳು, ಮಹಿಳಾ ವೈದ್ಯರು ಇನ್ನಿತರೆ ಪಾಲುದಾರರೊಂದಿಗೆ ಸಮಾಲೋಚಿಸಿ ಕಾಲೇಜುಗಳು ಮತ್ತು ಆಸ್ಪತ್ರೆಗಳಲ್ಲಿ ವೈದ್ಯಕೀಯ ಸಿಬ್ಬಂದಿ ವಿಶೇಷವಾಗಿ ಮಹಿಳಾ ವೈದ್ಯರ ಸುರಕ್ಷತೆಗೆ ಕಟ್ಟುನಿಟ್ಟಿನ ಮಾರ್ಗಸೂಚಿಗಳನ್ನು ರೂಪಿಸುವಂತೆ ಒತ್ತಿಹೇಳಿದರು.

ಈ ಹಿನ್ನೆಲೆಯಲ್ಲಿ ಮಹಿಳಾ ವೈದ್ಯರ ಸುರಕ್ಷತೆಗಾಗಿ ವೈದ್ಯಕೀಯ ಸಮುದಾಯದ ಸಲಹೆ ಸೂಚನೆಗಳಂತೆ ರಾಜ್ಯ ಸರ್ಕಾರವು ಶೀಘ್ರವೇ ಮಾರ್ಗಸೂಚಿಗಳನ್ನು ಬಿಡುಗಡೆ ಮಾಡಲಿದೆ. ಈ ಮಾರ್ಗಸೂಚಿಗಳು ಸರ್ಕಾರಿ ಹಾಗೂ ಖಾಸಗಿ ವೈದ್ಯಕೀಯ ಸಂಸ್ಥೆಗಳಿಗೆ ಅನ್ವಯವಾಗುತ್ತವೆ ಎಂದು ಸಚಿವರು ತಿಳಿಸಿದರು. “ವೃತ್ತಿಪರ ಮಹಿಳೆಯರ ಮೇಲಾಗುವ ದೌರ್ಜನ್ಯವನ್ನು ಸರ್ಕಾರ ಸಹಿಸುವುದಿಲ್ಲ. ಮತ್ತು ಮಹಿಳಾ ವೈದ್ಯರ ಸುರಕ್ಷತೆಗೆ ಅಗತ್ಯವಿರುವ ಎಲ್ಲಾ ಕ್ರಮಗಳನ್ನು ತೆಗೆದುಕೊಳ್ಳುತ್ತೇವೆ” ಎಂದು ಸಚಿವರು ಹೇಳಿದರು.

ಇದನ್ನೂ ಓದಿ: Kolkata Doctor Murder Case: ಕೋಲ್ಕತಾ ವೈದ್ಯೆಯ ಹಂತಕನಲ್ಲಿ ಕ್ರೂರ ಮೃಗದ ಲಕ್ಷಣ! ಪಶ್ಚಾತ್ತಾಪವೇ ಇಲ್ಲ

Exit mobile version