Site icon Vistara News

KSET Exam-2023: ಡಿ. 31ರಂದು ಕೆ-ಸೆಟ್‌ ಪರೀಕ್ಷೆ ನಡೆಯಲ್ಲ; ಮುಂದಿನ ದಿನಾಂಕ ಯಾವುದು?

kset exam

kset exam

ಬೆಂಗಳೂರು: ಕರ್ನಾಟಕ ಪರೀಕ್ಷಾ ಪ್ರಾಧಿಕಾರವು (Karnataka Examinations Authority) ರಾಜ್ಯ ಸರ್ಕಾರದ ನಿರ್ದೇಶನದಂತೆ, ಕರ್ನಾಟಕ ರಾಜ್ಯ ಸಹಾಯಕ ಪ್ರಾಧ್ಯಾಪಕರ ಅರ್ಹತಾ ಪರೀಕ್ಷೆ (KSET Exam-2023)ಯನ್ನು ಮತ್ತೊಮ್ಮೆ ಮುಂದೂಡಿದೆ. ಡಿಸೆಂಬರ್‌ 31ರಂದು ನಿಗದಿಯಾಗಿದ್ದ ಪರೀಕ್ಷೆಯ ದಿನಾಂಕವನ್ನು ಬದಲಾಯಿಸಿ, 2024ರ ಜನವರಿ 13ಕ್ಕೆ ಮುಂದೂಡಿದೆ. ಜತೆಗೆ ಕೆಲವು ಪರೀಕ್ಷೆ ಕೇಂದ್ರಗಳನ್ನೂ ಬದಲಾವಣೆ ಮಾಡಲಾಗಿದೆ.

ಪರೀಕ್ಷೆ ಕೇಂದ್ರ ಬದಲು

ಕೆಸೆಟ್‌-2023ಕ್ಕೆ ಆನ್‌ಲೈನ್‌ನಲ್ಲಿ ರಿಜಿಸ್ಟ್ರೇಷನ್‌ ಪಡೆಯುವ ವೇಳೆ ಕಲಬುರಗಿ ಆಯ್ಕೆ ಮಾಡಿಕೊಂಡಿದ್ದವರು ಬೆಂಗಳೂರಿನಲ್ಲಿ ಪರೀಕ್ಷೆ ಬರೆಯಬೇಕು. ವಿಜಯಪುರದ ಬದಲು ತುಮಕೂರು ನಗರದಲ್ಲಿ ಪರೀಕ್ಷೆ ಬರೆಯಬೇಕು ಎಂದು ಕೆಇಎ ಪ್ರಕಟಣೆ ತಿಳಿಸಿದೆ. ಧಾರವಾಡ ಜಿಲ್ಲಾ ಪರೀಕ್ಷಾ ಕೇಂದ್ರಗಳಿಗೆ ಹಾವೇರಿ ಜಿಲ್ಲಾ ಪರೀಕ್ಷಾ ಕೇಂದ್ರಗಳನ್ನು ಮತ್ತು ಮೈಸೂರು ಜಿಲ್ಲಾ ಪರೀಕ್ಷಾ ಕೇಂದ್ರಗಳಿಗೆ ಮಂಡ್ಯ ಜಿಲ್ಲಾ ಪರೀಕ್ಷಾ ಕೇಂದ್ರಗಳನ್ನು ಸೇರಿಸಲಾಗುತ್ತದೆ. ಉಳಿದ ಜಿಲ್ಲಾ ಪರೀಕ್ಷಾ ಕೇಂದ್ರಗಳಲ್ಲಿ ಯಾವುದೇ ಬದಲಾವಣೆಗಳಿಲ್ಲ.

ಪರೀಕ್ಷಾ ಕೇಂದ್ರಗಳು

ಬೆಂಗಳೂರು, ಧಾರವಾಡ, ಮೈಸೂರು, ಶಿವಮೊಗ್ಗ, ಕಲಬುರಗಿ, ಮಂಗಳೂರು, ಬೆಳಗಾವಿ, ಬಳ್ಳಾರಿ, ವಿಜಯಪುರ, ದಾವಣಗೆರೆ, ತುಮಕೂರು.

ಕೆಸೆಟ್‌ ಪರೀಕ್ಷೆಯು ಪತ್ರಿಕೆ-1 ಪರೀಕ್ಷೆಯನ್ನು 100 ಅಂಕಗಳಿಗೆ, ಪತ್ರಿಕೆ-2 ಪರೀಕ್ಷೆಯನ್ನು 200 ಅಂಕಗಳಿಗೆ ನಡೆಸಲಾಗುತ್ತದೆ.

ಇದನ್ನೂ ಗಮನಿಸಿ

ಆನ್‌ಲೈನ್‌ ಅರ್ಜಿಯಲ್ಲಿ ವಿಶೇಷ ಚೇತನ ಮೀಸಲಾತಿಯನ್ನು ಕೋರಿರುವ ಅಭ್ಯರ್ಥಿಗಳು, ಪ್ರಾಧಿಕಾರದ ವೆಬ್‌ಸೈಟ್‌ನಲ್ಲಿ ಒದಗಿಸಲಾದ ಲಿಂಕ್‌ನಲ್ಲಿ ಅರ್ಜಿದಾರರ ವಿವರಗಳು ಮತ್ತು ಲಿಪಿಕಾರರ ವಿವರಗಳನ್ನು ಕಡ್ಡಾಯವಾಗಿ ಸಲ್ಲಿಸಬೇಕು. ಅರ್ಜಿದಾರರ ಮತ್ತು ಲಿಪಿಕಾರರ ವಿವರಗಳನ್ನು ಸಲ್ಲಿಸದ ವಿಶೇಷ ಚೇತನ ಅಭ್ಯರ್ಥಿಗಳು ಲಿಪಿಕಾರರ ಸೇವೆಯನ್ನು ಪಡೆಯಲು ಅರ್ಹರಿರುವುದಿಲ್ಲ ಎಂದು ಪ್ರಕಟಣೆ ತಿಳಿಸಿದೆ.

ಎರಡನೇ ಬಾರಿ ಮುಂದೂಡಿಕೆ

ನವೆಂಬರ್ 26ರಂದು ನಡೆಯಬೇಕಿದ್ದ ಸಹಾಯಕ ಪ್ರಾಧ್ಯಾಪಕರ ನೇಮಕಾತಿಯ ಕರ್ನಾಟಕ ರಾಜ್ಯ ಅರ್ಹತಾ ಪರೀಕ್ಷೆಯನ್ನು ಈ ಹಿಂದೆ ದಿಢೀರ್‌ ಆಗಿ ಮುಂದೂಡಲಾಗಿತ್ತು. ಇದನ್ನು ಡಿಸೆಂಬರ್‌ 31ಕ್ಕೆ ನಡೆಸಲು ತೀರ್ಮಾನಿಸಲಾಗಿತ್ತು. ಇದೀಗ ಮತ್ತೊಮ್ಮೆ ಪರೀಕ್ಷೆ ದಿನಾಂಕ ಪರಿಷ್ಕರಿಸಲಾಗಿದೆ.

ಕೆ-ಸೆಟ್‌ ಪರೀಕ್ಷೆ ಎದುರಿಸಲು ʼಅಕ್ಕʼನ ತರಬೇತಿ

ಪ್ರಾಧ್ಯಾಪಕ ಹುದ್ದೆಯನ್ನು ಪಡೆಯಲು ಅತ್ಯಗತ್ಯವಾಗಿರುವ ಕೆ-ಸೆಟ್‌ ಪರೀಕ್ಷೆಯಲ್ಲಿ ಅರ್ಹತೆ ಪಡೆಯುವ ನಿಟ್ಟಿನಲ್ಲಿ ಆಕಾಂಕ್ಷಿಗಳಿಗೆ ಸಹಾಯ ಮಾಡಲು ಈಗ ವಿಜಯಪುರದ ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾಲಯ ಮುಂದಾಗಿದೆ. ಪರೀಕ್ಷೆಗೆ ವಿದ್ಯಾರ್ಥಿನಿಯರನ್ನು ಸಜ್ಜುಗೊಳಿಸುವುದಕ್ಕಾಗಿ ಆನ್‌ ಮತ್ತು ಯೂಟ್ಯೂಬ್‌ ಮೂಲಕ ತರಬೇತಿ ನೀಡಲು ಅದು ನಿರ್ಧರಿಸಿದ್ದು, ಈಗಾಗಲೇ ಈ ಕಾರ್ಯಕ್ರಮ ಶುರುವಾಗಿದೆ.

ಸ್ನಾತಕೋತ್ತರ ಪರೀಕ್ಷೆಗಳಲ್ಲಿ ಬರುವ ಪ್ರಶ್ನೆಗಳಿಗಿಂತ ಭಿನ್ನವಾದ ರೀತಿಯಲ್ಲಿ ಕೆ-ಸೆಟ್ ಪರೀಕ್ಷೆಗಳಲ್ಲಿ ಪ್ರಶ್ನೆಗಳಿರುವುದರಿಂದ ಇವುಗಳನ್ನು ಅರ್ಥೈಸಿಕೊಂಡು ಉತ್ತರಿಸುವ ಜಾಣ್ಮೆಯನ್ನು ಕಲಿಸುವ ತರಬೇತಿ ಇದಾಗಿದೆ. ಕೆ-ಸೆಟ್ ಪರೀಕ್ಷೆಯ ಮೊದಲ ಪತ್ರಿಕೆಯ 10 ವಿಷಯಗಳ ಕುರಿತು ತರಬೇತಿ ಆಯೋಜಿಸಲಾಗಿದ್ದು 16ಕ್ಕೂ ಹೆಚ್ಚು ವಿವಿಧ ವಿಷಯಗಳ ತಜ್ಞರು ಉಪನ್ಯಾಸ ನೀಡಲಿದ್ದಾರೆ. ಈ ತರಬೇತಿ ಕಾರ್ಯಕ್ರಮದಲ್ಲಿ ವಿಜಯಪುರ, ರಾಯಚೂರು, ಶಿವಮೊಗ್ಗ, ಬೆಂಗಳೂರು, ಮೈಸೂರು ಮತ್ತಿತರ ಕಡೆಗಳಲ್ಲಿನ ತಜ್ಞರು ಭಾಗವಹಿಸಲಿದ್ದಾರೆ. ಆನ್‌ಲೈನ್‌ ತರಬೇತಿಗೆ ಈಗಾಗಲೇ ರಾಜ್ಯದ 30 ಜಿಲ್ಲೆಗಳ 2223 ಅಭ್ಯರ್ಥಿಗಳು ಹೆಸರು ನೋಂದಾಯಿಸಿಕೊಂಡಿದ್ದಾರೆ.

ಇದನ್ನೂ ಓದಿ: Job Alert: ಕರ್ನಾಟಕ ವಿದ್ಯುತ್‌ ನಿಗಮದಲ್ಲಿದೆ 622 ಉದ್ಯೋಗ; ಬಿಎಂಟಿಸಿಯಲ್ಲಿದೆ 2503 ಹುದ್ದೆ!

Exit mobile version