ಬೆಂಗಳೂರು: ಕರ್ನಾಟಕ ಪರೀಕ್ಷಾ ಪ್ರಾಧಿಕಾರವು (KEA) ರಾಜ್ಯ ಸಹಾಯಕ ಪ್ರಾಧ್ಯಾಪಕರ ನೇಮಕಾತಿ ಸಲುವಾಗಿ ಅರ್ಹತಾ ಪರೀಕ್ಷೆಯನ್ನು (ಕೆ-ಸೆಟ್) ಜನವರಿ 13ರಂದು ನಡೆಸುತ್ತಿದೆ. ವಿವಿಧ ರೀತಿಯ 41 ವಿಷಯಗಳಿಗೆ (Subjects) ಪರೀಕ್ಷೆ ನಡೆಯುತ್ತಿದ್ದು ಒಟ್ಟು 1,17,302 ಅಭ್ಯರ್ಥಿಗಳು ಪರೀಕ್ಷೆ (KSET Exam 2024) ತೆಗೆದುಕೊಂಡಿದ್ದಾರೆ ಎಂದು ಕರ್ನಾಟಕ ಪರೀಕ್ಷಾ ಪ್ರಾಧಿಕಾರದ ಕಾರ್ಯನಿರ್ವಾಹಕ ನಿರ್ದೇಶಕಿ ಎಸ್.ರಮ್ಯಾ ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ. ಬೆಂಗಳೂರು ನಗರ ಸೇರಿದಂತೆ ಧಾರವಾಡ, ಹಾವೇರಿ, ಬಳ್ಳಾರಿ, ದಾವಣಗೆರೆ, ತುಮಕೂರು, ಮೈಸೂರು, ಮಂಡ್ಯ ಹಾಗೂ ದಕ್ಷಿಣ ಕನ್ನಡ ಜಿಲ್ಲೆಗಳಲ್ಲಿ ಪರೀಕ್ಷಾ ಕೇಂದ್ರಗಳಿದ್ದು, ಕ್ರಮ ತಡೆಗೆ ಕಟ್ಟುನಿಟ್ಟಿನ ಬಿಗಿ ಕ್ರಮಗಳನ್ನು ಕೈಗೊಳ್ಳಲಾಗಿದೆ.
ಕೇಂದ್ರಕ್ಕೆ ಒಳ ಹೋದರೆ ಹೊರಗಿಲ್ಲ ಎಂಟ್ರಿ
ಶನಿವಾರ ಬೆಳಗ್ಗೆ 10ರಿಂದ 11 ಗಂಟೆವರೆಗೆ ಎಲ್ಲ ವಿಷಯಗಳ ಅಭ್ಯರ್ಥಿಗಳಿಗೆ ಸಾಮಾನ್ಯ ಪರೀಕ್ಷೆ (ಪೇಪರ್-1) ಇರುತ್ತದೆ. ಅದಾದ ನಂತರ ಅದೇ ಪರೀಕ್ಷಾ ಕೇಂದ್ರಗಳಲ್ಲಿ ವಿವಿಧ ವಿಷಯಗಳಿಗೆ ಸಂಬಂಧಿಸಿದಂತೆ ಪ್ರತ್ಯೇಕ ಪರೀಕ್ಷೆ (ಪೇಪರ್-2) ನಡೆಯಲಿದೆ. ಅದು ಮಧ್ಯಾಹ್ನ 12ರಿಂದ 2.00ರವರೆಗೆ ಇರುತ್ತದೆ. ಒಮ್ಮೆ ಪರೀಕ್ಷಾ ಕೇಂದ್ರದೊಳಗೆ ಅಭ್ಯರ್ಥಿಗಳು ಹೋದ ಮೇಲೆ ಎರಡೂ ಪತ್ರಿಕೆಗಳ ಪರೀಕ್ಷೆ ಮುಗಿದ ನಂತರವೇ ಹೊರಹೋಗಲು ಬಿಡಲಾಗುತ್ತದೆ.
ಇನ್ನು ಕಟ್ಟುನಿಟ್ಟಿನ ತಪಾಸಣೆ ಇರುವ ಕಾರಣಕ್ಕೆ ಅಭ್ಯರ್ಥಿಗಳು ಪರೀಕ್ಷಾ ಕೇಂದ್ರಕ್ಕೆ ಎರಡು ಗಂಟೆ ಮೊದಲೇ ಬಂದಿದ್ದರು. ಪರೀಕ್ಷೆ ನಡೆಯುವ 41 ವಿಷಯಗಳಲ್ಲಿ ವಾಣಿಜ್ಯ ಶಾಸ್ತ್ರದ ಪರೀಕ್ಷೆಯನ್ನು ಅತಿ ಹೆಚ್ವು ಅಂದರೆ 16,000 ಮಂದಿ ತೆಗೆದುಕೊಂಡಿದ್ದಾರೆ. ಕನ್ನಡ ವಿಷಯವನ್ನು 11 ಸಾವಿರ ಮಂದಿ ತೆಗೆದುಕೊಂಡಿದ್ದಾರೆ. ಅತಿ ಕಡಿಮೆ ಅಂದರೆ 25 ಮಂದಿ ಭಾಷಾಶಾಸ್ತ್ರದ ವಿಷಯದಲ್ಲಿ ಪರೀಕ್ಷೆ ಬರೆಯುತ್ತಿದ್ದಾರೆ.
ಪರೀಕ್ಷೆ ಬರೆಯುವ ಒಟ್ಟು ಅಭ್ಯರ್ಥಿಗಳ ಪೈಕಿ ಅತಿ ಹೆಚ್ಚು ಅಂಕ ಪಡೆದ ಶೇ 6ರಷ್ಟು ಮಂದಿ ಅಂತಿಮವಾಗಿ ಕೆ-ಸೆಟ್ ಪರೀಕ್ಷೆ ಯಲ್ಲಿ ಅರ್ಹತೆ ಪಡೆಯಲಿದ್ದಾರೆ. ಇದರಲ್ಲಿ ರೋಸ್ಟರ್ ನಿಯಮಗಳನ್ನು ಪಾಲಿಸಲಾಗುತ್ತದೆ ಎಂದು ಪ್ರಾಧಿಕಾರ ತಿಳಿಸಿದೆ. ಇನ್ನು ನೋಂದಣಿ ಸಂಖ್ಯೆ ಕಳೆದುಕೊಂಡ 800ಕ್ಕೂ ಹೆಚ್ಚು ಮಂದಿ ಕೆ-ಸೆಟ್ ಪರೀಕ್ಷೆಯ ಪ್ರವೇಶ ಪತ್ರ ಡೌನ್‌ಲೋಡ್ ಮಾಡಿಕೊಳ್ಳದ ಕಾರಣ ಅವರ ಎಲ್ಲ ಇ-ಮೇಲ್ ಗಳಿಗೆ ನೋಂದಣಿ ಸಂಖ್ಯೆ ರವಾನಿಸುವ ಕೆಲಸವನ್ನು ಕೆಇಎ ಮಾಡಿದ್ದು ಎಲ್ಲರೂ ಪರೀಕ್ಷೆ ತೆಗೆದುಕೊಳ್ಳಲು ಇದು ನೆರವಾಗಿದೆ.
ಇದನ್ನೂ ಓದಿ: Murder Case : ಪ್ರಿಯಕರನ ಜತೆ ಸರಸದಲ್ಲಿದ್ದಾಗ ಗಂಡನ ಎಂಟ್ರಿ; ಕೆಲವೇ ಸೆಕೆಂಡಲ್ಲಿ ಫಿನಿಷ್!
ಗುರುತಿನ ಪತ್ರ ಕಡ್ಡಾಯ
ಅಭ್ಯರ್ಥಿಗಳು ಪರೀಕ್ಷಾ ಕೇಂದ್ರವನ್ನು ಪ್ರವೇಶಿಸುವ ಮುನ್ನ ಪ್ರವೇಶಪತ್ರ ಮತ್ತು ಸರಕಾರದಿಂದ ಮಾನ್ಯವಾಗಿರುವ ನಿಗದಿತ ಬಗೆಯ ಗುರುತಿನ ಪತ್ರವನ್ನು ತೋರಿಸುವುದು ಕಡ್ಡಾಯವಾಗಿತ್ತು. ಜತೆಗೆ ಪ್ರವೇಶಪತ್ರದಲ್ಲಿ ನಮೂದಿಸಿರುವ ಪರೀಕ್ಷಾ ಕೇಂದ್ರದಲ್ಲಷ್ಟೆ ಅಭ್ಯರ್ಥಿಗಳು ಪರೀಕ್ಷೆಗೆ ಹಾಜರಾಗಬೇಕು. ಅಲ್ಲದೆ, ಇತ್ತೀಚಿನ ಎರಡು ಭಾವಚಿತ್ರಗಳನ್ನು ತರಬೇಕಿತ್ತು.
ಓಎಂಆರ್ ಶೀಟ್ ಮೇಲೆ ಅಭ್ಯರ್ಥಿಗಳೇನಾದರೂ ತಮ್ಮ ನೋಂದಣಿ ಸಂಖ್ಯೆ, ವಿಷಯದ ಕೋಡ್ ಮತ್ತು ಪರೀಕ್ಷಾ ಕೇಂದ್ರದ ಕೋಡ್ ಅನ್ನು ತಪ್ಪಾಗಿ ನಮೂದಿಸಿದಲ್ಲಿ ಅಂಥವರ ಉತ್ತರ ಪತ್ರಿಕೆಗಳನ್ನು ಮೌಲ್ಯಮಾಪನ ಮಾಡಲಾಗುವುದಿಲ್ಲ ಎಂದು ಕೂಡ ಪ್ರಾಧಿಕಾರ ಸ್ಪಷ್ಟಪಡಿಸಿದೆ.
ವಸ್ತ್ರಸಂಹಿತೆ ಕಡ್ಡಾಯ
ಕೆ-ಸೆಟ್ ಪರೀಕ್ಷೆಗೆ ಹಾಜರಾಗುವ ಅಭ್ಯರ್ಥಿಗಳಿಗೆ ಪರೀಕ್ಷಾ ಪ್ರಾಧಿಕಾರವು ಕಟ್ಟುನಿಟ್ಟಿನ ವಸ್ತ್ರ ಸಂಹಿತೆಯನ್ನು ಜಾರಿಗೊಳಿಸಿದೆ. ಯಾವುದೇ ಅಕ್ರಮಗಳಿಗೆ ಅವಕಾಶ ನೀಡದಿರಲು ಈ ಕ್ರಮ ಅನುಸರಿಸಲಾಗುತ್ತಿದೆ. ಇದರಂತೆ, ಪುರುಷ ಅಭ್ಯರ್ಥಿಗಳು ಅರೆತೋಳಿನ ಅಂಗಿ, ಹೆಚ್ಚಿನ ಜೇಬುಗಳಿಲ್ಲದ ಸರಳ ಪ್ಯಾಂಟ್ ಕಡ್ಡಾಯವಾಗಿತ್ತು. ಇದರ ಭಾಗವಾಗಿ ಜಿಪ್ ಪಾಕೆಟ್, ದೊಡ್ಡ ಬಟನ್ಸ್ ಮತ್ತು ವಿಸ್ತಾರ ಕಸೂತಿ ಇರುವ ಉಡುಪು ಮತ್ತು ಶೂಗಳನ್ನು ನಿಷೇಧಿಸಲಾಗಿತ್ತು. ಜೊತೆಗೆ, ಅಭ್ಯರ್ಥಿಗಳು ಯಾವುದೇ ಕಂಠಾಭರಣ, ಕಿವಿಯೋಲೆ, ಉಂಗುರ ಮತ್ತು ಕಡಗಗಳನ್ನು ಧರಿಸಿಕೊಂಡು ಬರಬಾರದು ಎಂದು ಪ್ರಾಧಿಕಾರ ಮಾಹಿತಿ ನೀಡಿತ್ತು.
ಮಹಿಳಾ ಅಭ್ಯರ್ಥಿಗಳಿಗೆ ವಿಪರೀತ ಕಸೂತಿ, ಹೂಗಳು, ಬ್ರೂಚ್, ಬಟನ್, ಪೂರ್ಣ ತೋಳಿನ ರವಿಕೆ/ವಸ್ತ್ರ ಇರುವ ಉಡುಪು ಮತ್ತು ಜೀನ್ಸ್ ಪ್ಯಾಂಟ್ ಹಾಗೂ ದಪ್ಪನೆ ಅಡಿಭಾಗವಿರುವ ಚಪ್ಪಲಿ/ಶೂಗಳನ್ನು ಧರಿಸಿಕೊಂಡು ಬರುವುದನ್ನು ಕಡ್ಡಾಯವಾಗಿ ನಿಷೇಧಿಸಲಾಗಿತ್ತು.ಜತೆಗೆ, ಮಂಗಳಸೂತ್ರ ಮತ್ತು ಕಾಲುಂಗುರ ಹೊರತುಪಡಿಸಿ, ಬೇರಾವುದೇ ಆಭರಣಗಳನ್ನು ಹಾಕಿಕೊಂಡು ಪರೀಕ್ಷಾ ಕೇಂದ್ರಕ್ಕೆ ಬರುವಂತಿಲ್ಲ ಎಂದು ಸೂಚಿಸಿತ್ತು.
ಇತ್ತ ಪರೀಕ್ಷಾ ಸಿಬ್ಬಂದಿ ಸಣ್ಣ ಸಣ್ಣ ಕಿವಿಯೋಲೆಯನ್ನು ತೆಗೆಸಿದ ಕಾರಣಕ್ಕೆ ಕೆಲ ಅಭ್ಯರ್ಥಿಗಳು ಕಿಡಿಕಾರಿದರು. ಸಣ್ಣ ಕಿವಿಯೊಲೆಯಲ್ಲಿ ಏನು ಇರುತ್ತೆ? ಪರೀಕ್ಷಾ ಅಕ್ರಮದಲ್ಲಿ ತೊಡಗಿದವರ ಪರಿಶೀಲಿಸಿ ಶಿಕ್ಷಿಸಿ. ಆದರೆ ಧರಿಸಿರುವ ಸಣ್ಣ ಕಿವಿಯೋಲೆ ತೆಗೆದು ಇಟ್ಟಾಗ ಕಳ್ಳತನವಾದರೆ ಏನು ಮಾಡಬೇಕೆಂದು ಮಹಿಳಾ ಅಭ್ಯರ್ಥಿ ಪ್ರಶ್ನೆ ಮಾಡಿದರು. ಅಭ್ಯರ್ಥಿಗಳ ಯಾವ ಮಾತಿಗೂ ಸ್ಪಂದಿಸದೇ ತೆರವು ಮಾಡಿಸಿದರು.
ಪರೀಕ್ಷೆಯಲ್ಲಿ ಇವೆಲ್ಲ ವಸ್ತುಗಳು ನಿಷೇಧ
ಪರೀಕ್ಷೆಯನ್ನು ಪಾರದರ್ಶಕವಾಗಿ ನಡೆಸಲು ಪಣ ತೊಟ್ಟಿರುವ ಪರೀಕ್ಷಾ ಪ್ರಾಧಿಕಾರವು, ಯಾವುದೇ ಅಭ್ಯರ್ಥಿಗಳು ಪರೀಕ್ಷಾ ಕೇಂದ್ರಕ್ಕೆ ಬ್ಲೂ ಟೂತ್, ಮೊಬೈಲ್ ಫೋನ್, ಎಲೆಕ್ಟ್ರಾನಿಕ್ ವಸ್ತುಗಳು, ಪೆನ್ ಡ್ರೈವ್, ಇಯರ್ ಫೋನ್, ಕೈ ಗಡಿಯಾರ, ಮೈಕ್ರೋಫೋನ್, ಪೆನ್ಸಿಲ್, ಎರೇಸರ್, ಜಾಮಿಟ್ರಿ ಪೆಟ್ಟಿಗೆ ಮತ್ತು ಲಾಗ್ ಟೇಬಲ್ ಇತ್ಯಾದಿಗಳನ್ನು ಪರೀಕ್ಷಾ ಕೇಂದ್ರಕ್ಕೆ ತರುವುದು ನಿಷೇಧಿಸಿದೆ. ಜತೆಗೆ ಟೋಪಿ, ಮಾಸ್ಕ್ ಹಾಕಿಕೊಂಡು ಬರುವಂತಿಲ್ಲ ಎಂದು ಸೂಚನೆ ನೀಡಿದೆ.
ಪರೀಕ್ಷೆಯಿಂದ ಹಿಂದೆ ಸರಿದ್ರಾ ಉತ್ತರ ಕರ್ನಾಟಕದ ಮಂದಿ?
ಇನ್ನೂ ಈ ಬಾರಿ ಕಲ್ಬುರ್ಗಿ ಮತ್ತು ವಿಜಯಪುರ ಜಿಲ್ಲೆಗಳನ್ನು ಪರೀಕ್ಷಾ ಕೇಂದ್ರಗಳಾಗಿ ಆಯ್ಕೆ ಮಾಡಿಕೊಂಡಿದ್ದ ಅಭ್ಯರ್ಥಿಗಳು ಕ್ರಮವಾಗಿ ಬೆಂಗಳೂರು ಮತ್ತು ತುಮಕೂರು ಜಿಲ್ಲೆಗಳ ಪರೀಕ್ಷಾ ಕೇಂದ್ರಗಳಲ್ಲಿ ಪರೀಕ್ಷೆ ಬರೆಯಬೇಕೆಂದು ಪ್ರಾಧಿಕಾರ ಸೂಚಿಸುತ್ತು. ಇದರಿಂದಾಗಿ ಕೆಲ ಪರಿಕ್ಷಾರ್ಥಿಗಳು ಪ್ರಯಾಣದ ವೆಚ್ಚ ಭರಿಸಲು ಆಗದೆ ಪರೀಕ್ಷೆಗೆ ಗೈರಾಗಿದ್ದಾರೆ ಎನ್ನಲಾಗಿದೆ. ಧಾರವಾಡ ಜಿಲ್ಲಾ ಪರೀಕ್ಷಾ ಕೇಂದ್ರಗಳಿಗೆ ಹೆಚ್ಚುವರಿಯಾಗಿ ಹಾವೇರಿ ಮತ್ತು ಮೈಸೂರು ಜಿಲ್ಲಾ ಕೇಂದ್ರಗಳಿಗೆ ಮಂಡ್ಯ ಪರೀಕ್ಷಾ ಕೇಂದ್ರಗಳನ್ನು ಸೇರಿಸಲಾಗಿದೆ. ಇವು ಬಿಟ್ಟು ಉಳಿದ ಜಿಲ್ಲಾ ಪರೀಕ್ಷಾ ಕೇಂದ್ರಗಳಲ್ಲಿ ಯಾವ ಬದಲಾವಣೆಯೂ ಇರಲಿಲ್ಲ.
ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ