- ರಾಧಿಕಾ ವಿಟ್ಲ
ಇದೊಂದು ಅಪರೂಪದ ಸ್ಫೂರ್ತಿಕತೆ. ೧೦ನೇ ತರಗತಿಯ ನಂತರ ಒಂದು ವರ್ಷದ ಬ್ರೇಕ್ ತೆಗೆದುಕೊಂಡು ತನಗೆ ಮಾಡಬೇಕಾದ್ದನ್ನು ಮಾಡಿ ಕಲಿತು, ಪುಸ್ತಕವೊಂದನ್ನೂ ಬರೆದು ಹಲವಾರು ಹೆತ್ತವರಿಗೆ, ಮಕ್ಕಳಿಗೆ ಸ್ಫೂರ್ತಿಯಾದ ಸಾಮಾನ್ಯ ಹುಡುಗಿಯ ಕತೆ.
೧೦ನೇ ತರಗತಿಯಾಯ್ತು. ಮುಂದೇನು? ಇದು ಎಲ್ಲರನ್ನೂ ಒಂದು ಹಂತದಲ್ಲಿ ಕಾಡುವ ಪ್ರಶ್ನೆ. ಶಿಕ್ಷಣದ ಒಂದು ಘಟ್ಟ ಮುಗಿದು ಮತ್ತೊಂದಕ್ಕೆ ಹೊರಳಲು ನಮ್ಮ ಆಸಕ್ತಿಗಳ ಅನ್ವಯ ನಿರ್ಧಾರ ಮಾಡಬೇಕಾದ ಸಮಯ. ಬಹಳ ಮಂದಿ ಇಲ್ಲಿಯೇ ಎಡವಿ ಬಿಡುತ್ತಾರೆ. ಇನ್ನೂ ಕೆಲವರು ದ್ವಂದ್ವದಲ್ಲಿ ಆರಿಸಿದ ವಿಷಯದಿಂದಾಗಿ ಪಾಸು ಮಾಡಿಕೊಳ್ಳಲಾಗದೆ, ಜೀವವನ್ನೂ ಬಲಿಕೊಡುತ್ತಾರೆ. ಇನ್ನೂ ಬಹುತೇಕರು, ತಮ್ಮ ನಿಜವಾದ ಆಸಕ್ತಿಗಳನ್ನು ಗುರುತಿಸಲು ಅಸಮರ್ಥರಾಗುವುದರಿಂದಲೋ, ಹೆತ್ತವರ, ಸುತ್ತಮುತ್ತಲ ಪರಿಸರ ಒತ್ತಡವೋ ಮಕ್ಕಳು ಮುಂದಿನ ಹಾದಿಯನ್ನು ಆಯ್ಕೆ ಮಾಡಿಕೊಂಡು ಮುಂದೊಂದು ದಿನ ನಾನು ತಪ್ಪು ಮಾಡಿಬಿಟ್ಟೆ ಎಂದು ಸಂಕಟ ಪಡುತ್ತಾರೆ.
ಆದರೆ, ಎಲ್ಲೋ ಸಾವಿರದಲ್ಲೋ, ಲಕ್ಷದಲ್ಲೋ ಒಬ್ಬರು ಸಾಗರಿಕಾಳಂತೆ ಯೋಚಿಸುತ್ತಾರೆ. ತನ್ನ ಯೋಚನೆಯನ್ನು ಹೆತ್ತವರ ಮುಂದಿಡುತ್ತಾರೆ. ಅದಕ್ಕೇ ಸೂಕ್ತ ಮಾರ್ಗದರ್ಶನ, ಪ್ರೋತ್ಸಾಹ ಸಿಕ್ಕಿದರೆ ಈಕೆಯಂತೆಯೇ ಆತ್ಮವಿಶ್ವಾಸಿ ಪ್ರಜೆಯಾಗಿ ರೂಪುಗೊಳ್ಳುತ್ತಾರೆ. ಯಶಸ್ಸಿನ ಹಾದಿಯಲ್ಲಿ ಧೈರ್ಯದಿಂದ ಮುನ್ನುಗ್ಗುತ್ತಾರೆ.
ತಮಿಳುನಾಡಿನ ಸಾಗರಿಕಾ ಶಿವಕುಮಾರ್‌ಗೂ ಕೂಡಾ ೨೦೧೬ರಲ್ಲಿ ೧೦ನೇ ತರಗತಿ ಮುಗಿಸಿದ ಮೇಲೆ ಎಲ್ಲ ಮಕ್ಕಳಂತೆ ಮುಂದೇನು ಎಂಬ ಪ್ರಶ್ನೆ ಕಾಡಿತ್ತು. ಆಕೆ ಹೇಳುತ್ತಾಳೆ, “ನಾನು ಸಣ್ಣವಳಿದ್ದಾಗಿಂದ ತರಗತಿಯಲ್ಲಿ ಕೂತು ಪಾಠ ಕೇಳಿದ್ದಕ್ಕಿಂತ ಹೆಚ್ಚು ಮೈದಾನದಲ್ಲಿ ಆಟವಾಡುತ್ತಾ, ಇತರ ಚಟುವಟಿಕೆಗಳಲ್ಲಿ ಸ್ಪರ್ಧೆಗಳಲ್ಲಿ ಭಾಗಿಯಾಗುತ್ತಾ ಕಳೆದಿದ್ದೇ ಹೆಚ್ಚು. ಹಾಗಾಗಿ ನಾನು ಸಾಧಾರಣ ಮಾರ್ಕ್ಸ್ ಪಡೆದೆ. ಈ ಸಂದರ್ಭ ನನಗೊಂದು ಬ್ರೇಕ್ ಬೇಕು ಎನಿಸಿತು. ಬೇರೆ ಕಲಿಯುವುದು ಬಹಳಷ್ಟಿದೆ ಅನಿಸಿತು. ನನ್ನ ಯೋಜನೆಗಳ ಬಗ್ಗೆ ನನ್ನ ಹೆತ್ತವರೊಂದಿಗೆ ಮಾತನಾಡಿದೆ. ಅವರು ಈ ಕುರಿತು ಮಾರ್ಗದರ್ಶನದೊಂದಿಗೆ ಪ್ರೋತ್ಸಾಹವನ್ನೂ ನೀಡಿದರು. ಅದರ ಫಲವೇ ಇದು” ಎನ್ನುತ್ತಾಳೆ ಆತ್ಮವಿಶ್ವಾಸದಿಂದ.
“ನನಗೆ ಬಹಳ ಸಾರಿ ಅನ್ನಿಸುತ್ತದೆ, ೧೦ನೇ ತರಗತಿಯ ನಂತರ ನಮ್ಮ ಶಿಕ್ಷಣ ವ್ಯವಸ್ಥೆ ನಮಗೆ ಬದುಕಿನ ನಿಜವಾದ ಸವಾಲುಗಳನ್ನು ಎದುರಿಸುವ ಶಿಕ್ಷಣ ನೀಡುವುದಕ್ಕಿಂತ ಹೆಚ್ಚು ಪ್ರಾಕ್ಟಿಕಲ್ ಅಲ್ಲದ ವಿಷಯಗಳಿಗೆ ಹೆಚ್ಚು ಗಮನ ನೀಡುತ್ತದೆ ಎಂದು. ನನಗೆ ಬದುಕಿಗೆ ಬೇಕಾದ ಬೇರೇನನ್ನೋ ಕಲಿಯಬೇಕಿದೆ ಅನಿಸಿ ತೆಗೆದುಕೊಂಡ ಈ ಬ್ರೇಕ್ ಅವಧಿಯಲ್ಲಿ ನನ್ನನ್ನು ನಾನು ಸಾಕಷ್ಟು ವಿಷಯಗಳಲ್ಲಿ ತೊಡಗಿಸಿಕೊಂಡೆ. ಮುಖ್ಯವಾಗಿ ದಿನವೂ ಎದ್ದು ಪೇಪರ್ ಓದೋದು, ಪುಸ್ತಕಗಳನ್ನು ಓದುವುದುದ, ಹೊಸ ಹೊಸ ಶಬ್ದಗಳು, ಅವುಗಳ ಬಳಕೆಯ ಕಲಿಕೆ… ಹೀಗೆ ನನ್ನ ಮೇಲೆ ಸ್ವಲ್ಪ ವರ್ಕ್ ಮಾಡಿದೆ. ನೂರಾರು ಮಂದಿಯನ್ನು ಭೇಟಿಯಾದೆ. ಕೆಲವೊಂದು ಸಮ್ಮೇಳನಗಳಲ್ಲಿ ಭಾಗಿಯಾದೆ, ಕಲಿಯಬೇಕೆನಿಸಿದ ಕೆಲವೊಂದಕ್ಕೆ ಸ್ವಲ್ಪ ಹೆಚ್ಚು ಸಮಯ ಹಾಕಿ ಕಲಿತೆ. ನನ್ನದೇ ವೆಬ್ಸೈಟ್ ಆರಂಭಿಸಿದೆ. ಹಲವಾರು ಜಾಗಗಳಲ್ಲಿ ಸುತ್ತಾಡಿದೆ. ೧೫ನೇ ವಯಸ್ಸಿನಲ್ಲಿ ನನ್ನದೇ ವಿಸಿಟಿಂಗ್ ಕಾರ್ಡ್ ಕೂಡಾ ಮಾಡಿಸುವಂತಾಯಿತು” ಎಂದಿದ್ದಾಳೆ.
ಇದನ್ನೂ ಓದಿ: Kargil Vijay Divas | ನಾನು ಶಕುಂತಲಾ ಅಜಿತ್ ಭಂಡಾರ್ಕರ್: ಸೈನಿಕನ ಪತ್ನಿ ಮತ್ತು ಸೈನಿಕರ ಅಮ್ಮ!
“ಮೋಟಾರು ಕಂಪನಿಗಳಿಂದ ಹಿಡಿದು ಆಸ್ಪತ್ರೆಗಳವರೆಗೆ ಹಲವೆಡೆ ಇಂಟರ್ನ್ ಆಗಿ ಕೆಲಸ ಮಾಡಿದೆ. ಪುಟ್ಟ ಮಕ್ಕಳ ನರ್ಸರಿ ಕ್ಲಾಸುಗಳಲ್ಲಿ ಪಾಠ ಮಾಡಿದೆ. ಇದರ ನಡುವೆ ಶಾಲೆಯ ವಿಷಯಗಳ ಹಿಡಿತ ತಪ್ಪದಂತೆ ಅಪ್ಪ ಅವುಗಳ ಬಗ್ಗೆಯೂ ಗಮನ ಹರಿಸುತ್ತಿದ್ದರು. ಒಟ್ಟಿನಲ್ಲಿ, ನೂರಾರು ಜನರ ಭೇಟಿ, ಹಲವು ಕ್ಷೇತ್ರಗಳಲ್ಲಿ ಕೆಲಸ, ಓದು, ಭಾಷಾ ಕಲಿಕೆ, ಕೋಡಿಂಗ್, ಬ್ಯಾಡ್ಮಿಂಟನ್ ಆಟ ಹೀಗೆ ಆಸಕ್ತಿಯಿರುವ ಎಲ್ಲದರಲ್ಲೂ ಕೈಯಾಡಿಸಿದೆ. ಇದು ನನ್ನ ಸರ್ವತೋಮುಖ ಅಭಿವೃದ್ಧಿಯಲ್ಲಿ ನಿಜಕ್ಕೂ ಪ್ರಮುಖ ಪಾತ್ರ ವಹಿಸಿತು. ಬದುಕಿಗೊಂದು ದಿಕ್ಕು ಸಿಕ್ಕಿತು” ಎನ್ನುತ್ತಾಳೆ.
“ಆ ಒಂದು ವರ್ಷದ ಅವಧಿಯಲ್ಲಿ ನಾನು ಎಲ್ಲ ಮಾದರಿಯ ಕೆಲಸವನ್ನೂ ಮಾಡಿದೆ. ಮಲ್ಟಿ ಲೆವೆಲ್ ಮಾರ್ಕೆಟಿಂಗ್ ಸಂಸ್ಥೆಯಲ್ಲೂ ಒಂದೆರಡು ವಾರ ಕೆಲಸ ಮಾಡಿ ವಸ್ತುಗಳನ್ನು ಮಾರಾಟ ಮಾಡಿದೆ. ಆಗ ನಾನು ಕಲಿತದ್ದು ಬಹಳ. ಬಹಳಷ್ಟು ಮಕ್ಕಳಿಗೆ ಇಂತಹ ಬ್ರೇಕ್ ಬೇಕಿದ್ದರೂ ತೆಗೆದುಕೊಳ್ಳಲು ಅವಕಾಶವಿರುವುದಿಲ್ಲ. ಆದರೆ ನನಗದು ಸಿಕ್ಕಿದ್ದಕ್ಕೆ ಖುಷಿಯಿದೆ” ಎನ್ನುತ್ತಾಳೆ.
ಈ ಸಂದರ್ಭ ಹಲವೆಡೆ ಪ್ರವಾಸವನ್ನೂ ಮಾಡಿದ್ದು, ಮೌಂಟ್ ಕೈಲಾಶ್‌ಗೆ ಚಾರಣವನ್ನೂ ಮಾಡಿದ್ದಾಳೆ. ಈ ಕುರಿತು ತಾನೇ ಡಾಕ್ಯುಮೆಂಟರಿಯನ್ನೂ ಮಾಡಿದ್ದಾಳೆ ಈ ಸಾಗರಿಕಾ. ಈ ನಡುವೆ ೨೦೧೬ರಲ್ಲಿ ಹಿಂದು ಲಿಟರರಿ ಫೆಸ್ಟಿವಲ್‌ನಲ್ಲೂ ಭಾಗವಹಿಸಿದ್ದ ಈಕೆ, ಖ್ಯಾತ ಲೇಖಕ ಅಲೆಕ್ಸಾಂಡರ್ ಮೆಕ್‌ಕಾಲ್ ಸ್ಮಿತ್ ಅವರ ಭಾಷಣದಿಂದ ಸ್ಪೂರ್ತಿ ಪಡೆದು ಪ್ರತಿದಿನವೂ ಸ್ವಲ್ಪ ಹೊತ್ತು ಬರವಣಿಗೆಗೂ ಮೀಸಲಿಡಲು ಆರಂಭಿಸಿದಳು. ಇದರ ಫಲವೇ ʻಮೈ ಅನ್‌ಸ್ಕೂಲ್ಡ್ ಈಯರ್ʼ ಎಂಬ ಹೆಸರಿನ ಪುಸ್ತಕ.
“೨೦೦ ಪುಟಗಳಲ್ಲಿ ನನ್ನ ಒಂದು ವರ್ಷದ ಬ್ರೇಕ್‌ನಲ್ಲಿ ನನ್ನಲ್ಲಾದ ಬದಲಾವಣೆಯ ಅನುಭವವನ್ನು ಈ ಪುಸ್ತಕದಲ್ಲಿ ಬರೆದಿದ್ದೇನೆ. ಈವರೆಗೆ ಈ ಪುಸ್ತಕದ ಆರು ಸಾವಿರಕ್ಕೂ ಹೆಚ್ಚು ಪ್ರತಿಗಳು ಮಾರಾಟವಾಗಿವೆ. ಇದು ಹಲವಾರು ಹೆತ್ತವರಿಗೂ, ನನ್ನಂತ ಮಕ್ಕಳಿಗೂ ಸ್ಪೂರ್ತಿಯಾಗಿರುವ, ಆಗುತ್ತಿರುವ ಬಗ್ಗೆ ನನಗೆ ಹೆಮ್ಮೆಯೆನಿಸುತ್ತದೆ ಎಂದು ಆಕೆ ಹೇಳಿದ್ದಾಳೆ.
ಈಕೆ ಹೇಳುವಂತೆ ಈಕೆಯ ಈ ಎಲ್ಲ ಸಾಧನೆಯ ಹಿಂದಿರುವ ಶಕ್ತಿ ಈಕೆಯ ಹೆತ್ತವರು. “ನನ್ನ ಹೆತ್ತವರು ನನ್ನ ಮೇಲೆ ಯಾವುದನ್ನೂ ಹೇರಲಿಲ್ಲ. ನನ್ನ ಇಷ್ಟವನ್ನು ನಾನು ಮಾಡಲು ಸಂಪೂರ್ಣ ಮನಸ್ಸಿನಿಂದ ಒಪ್ಪಿಗೆ ಕೊಟ್ಟರು. ಕಲಿಕೆಯ ಸಮಯದಲ್ಲಿ ಕೇವಲ ಅಂಕಗಳು ಮಾತ್ರ ಬೇಕು ಎಂದು ಅಂಕಗಳ ಹಿಂದೆ ಬಿದ್ದು ನನ್ನ ಮೇಲೆ ಒತ್ತಡ ಯಾವತ್ತೂ ತಂದಿಲ್ಲ. ಅವರಿಗೆ ನನ್ನ ಸರ್ವತೋಮುಖ ಅಭಿವೃದ್ಧಿ ಮುಖ್ಯ. ನನ್ನ ಈ ನಿಲುವಿನಿಂದ ಸಂಬಂಧಿಕರು, ಹಿತೈಷಿಗಳು, ಗೆಳೆಯರಿಂದ ಅವರು ಸಾಕಷ್ಟು ಮಾತುಗಳನ್ನು ಕೇಳುವಂತಾಗಿದೆ. ಬಹುತೇಕರು ನನ್ನ ಹೆತ್ತವರು ನನ್ನನ್ನು ಹಾಳು ಮಾಡಿದರು ಎಂದು ನಗೆಯಾಡಿದರು. ಆದರೂ ಇವೆಲ್ಲ ಮಾತುಗಳಿಗೆ ಕಿವಿಕೊಡದೆ, ನೋವಾದರೂ ಸಹಿಸಿಕೊಂಡು ನನ್ನ ಆಸಕ್ತಿಗೆ ಬೆಂಬಲವಾಗಿ ನಿಂತರು. ಅವರಿಗೆ ಈಗ ನಾನು ಆ ಇಡೀ ಒಂದು ವರ್ಷವನ್ನು ಅದ್ಭುತವಾಗಿ ಬಳಸಿಕೊಂಡದ್ದರ ಬಗ್ಗೆ ತೃಪ್ತಿಯಿದೆ ಎನ್ನುತ್ತಾಳೆ.
“೧೦ನೇ ತರಗತಿಯಲ್ಲಿ ಸಾಧಾರಣ ಅಂಕ ತೆಗೆದ ನಾನು ಆ ಒಂದು ವರ್ಷದ ಬ್ರೇಕ್‌ನ ನಂತರ ಮತ್ತೆ ಕಾಲೇಜು ಸೇರಿದೆ. ನನ್ನ ಜೊತೆ ಓದಿದ ಮಕ್ಕಳೆಲ್ಲ ಮುಂದಿನ ತರಗತಿಗೆ ಹೋಗಿದ್ದರು, ಪ್ರಸಿದ್ಧ ಕೋರ್ಸುಗಳನ್ನು ಆಯ್ಕೆ ಮಾಡಿದ್ದರು. ನಾನು ಮುಂದೆ ನನ್ನ ಆಯ್ಕೆಯ ವಿಷಯವಾದ ಬಿಬಿಎ ಕಡೆಗೆ ಹೊರಳಿದೆ. ಕಾಲೇಜಿನಲ್ಲಿ ಟಾಪರ್ ಆದೆ” ಎನ್ನುತ್ತಾಳೆ.
ಇದನ್ನೂ ಓದಿ: ರಾಜಮಾರ್ಗ ಅಂಕಣ | ಆ ಕನ್ನಡಿಗ ನ್ಯಾಯಮೂರ್ತಿ ಸಿಡಿದರೆ ಕೋರ್ಟು ಕಟ್ಟಡವೇ ನಡುಗುತ್ತಿತ್ತು!
“ಈವರೆಗೆ ಹಲವು ಸಂಸ್ಥೆಗಳಲ್ಲಿ, ರಾಷ್ಟ್ರ ಹಾಗೂ ಅಂತಾರಾಷ್ಟ್ರೀಯ ಮಟ್ಟದಲ್ಲಿ ಭಾಷಣಗಳನ್ನು ಮಾಡಿದ್ದೇನೆ. ಹಲವು ಶಾಲೆ ಕಾಲೇಜುಗಳ ಕಾರ್ಯಾಗಾರಗಳಲ್ಲಿ, ಸಮಾವೇಶಗಳಲ್ಲಿ ನನ್ನ ಪ್ರಬಂಧಗಳನ್ನು ಮಂಡಿಸಿದ್ದೇನೆ. ಸುಮಾರು ೨೦,೦೦೦ ಮಂದಿ ಸೇರಿದ್ದ ಕಾರ್ಯಕ್ರಮಗಳಲ್ಲಿ ವೇದಿಕೆ ಹಂಚಿಕೊಂಡಿದ್ದೇನೆ. ಮಕ್ಕಳಿಗೆ ಜಂಕ್ ಫುಡ್ ತಿನ್ನಿಸುವುದರಿಂದಾಗುವ ಹಾನಿಯ ಬಗೆಗೆ ಡಾಕ್ಯುಮೆಂಟರಿಯನ್ನೂ ಮಾಡಿದ್ದೇನೆ. ಸದ್ಯ ಇನ್ನೊಂದು ಪುಸ್ತಕ ಬರೆಯುವ ಯೋಚನೆಯಲ್ಲಿದ್ದೇನೆ. ಮಕ್ಕಳಿಗೆ, ಹದಿಹರೆಯದ ಮಂದಿಗೆ, ಮುಖ್ಯವಾಗಿ ಹೆತ್ತವರಿಗೆ ಮಾರ್ಗದರ್ಶಿಯಾಗುವ, ಸ್ಪೂರ್ತಿಯಾಗುವ ಪುಸ್ತಕದ ನಿಟ್ಟಿನಲ್ಲಿ ನನ್ನ ಕೆಲಸ ಸಾಗಿದೆ. ಮುಂದೊಂದು ದಿನ ನಾನೊಬ್ಬ ಯಶಸ್ವೀ ಬ್ಯುಸಿನೆಸ್ ವುಮನ್ ಆಗಿ ಹಲವರಿಗೆ ಸ್ಪೂರ್ತಿಯಾಗುವ ಗುರಿಯನ್ನು ಹೊಂದಿದ್ದೇನೆ” ಎಂದು ತನ್ನ ಆಶಾವಾದವನ್ನು ವ್ಯಕ್ತಪಡಿಸುತ್ತಾರೆ ಈ ದಿಟ್ಟೆ.
“ಸೋಲಿನಿಂದ ಅಧೀರರಾಗಬಾರದು. ಅದನ್ನೇ ಮೆಟ್ಟಿಲಾಗಿ ಬಳಸಬೇಕು. ಜನರು ನಮ್ಮ ಮೇಲೆ ಟೊಮೇಟೋ ಬಿಸಾಕಿದರೆ, ನಾವು ಕೆಚಪ್ ಮಾಡಿಬಿಡಬೇಕು, ಅಷ್ಟೇ. ಇದು ನಾನು ಜೀವನದಲ್ಲಿ ಕಲಿತ ಪಾಠ” ಎಂದು ಹೇಳಿ, ಸ್ವತಃ ಅದನ್ನು ಸಾಧಿಸಿ ತೋರಿಸಿರುವ ಈ ಸಾಗರಿಕಾ ಸದ್ಯ ೨೨ನೇ ವಯಸ್ಸಿನಲ್ಲಿದ್ದು, ತಮಿಳುನಾಡಿನ ತ್ರಿಚಿಯಲ್ಲಿ ಡೇಟಾ ಸೈನ್ಸ್ ಓದುತ್ತಿದ್ದಾರೆ.