ನವದೆಹಲಿ: ಸ್ನಾತಕೋತ್ತರ ವೈದ್ಯಕೀಯ ಕೋರ್ಸ್‌ಗಳ ಪ್ರವೇಶಕ್ಕಾಗಿ ನಡೆಯುವ ರಾಷ್ಟ್ರೀಯ ಅರ್ಹತೆ ಮತ್ತು ಪ್ರವೇಶ ಪರೀಕ್ಷೆಯ (NEET PG 2024) ದಿನಾಂಕವನ್ನು ರಾಷ್ಟ್ರೀಯ ಪರೀಕ್ಷಾ ಮಂಡಳಿ (National Board of Examinations) ಪ್ರಕಟಿಸಿದೆ. ಆಗಸ್ಟ್ 11ರಂದು ಎರಡು ಪಾಳಿಗಳಲ್ಲಿ ಪರೀಕ್ಷೆ ನಡೆಯಲಿದೆ ಎಂದು ಪ್ರಕಟಣೆ ತಿಳಿಸಿದೆ. ಹೆಚ್ಚಿನ ವಿವರಗಳಿಗೆ ವೆಬ್‌ಸೈಟ್ natboard.edu.in ಇಲ್ಲಿಗೆ ಭೇಟಿ ನೀಡಿ.
NEET PG 2024 will be conducted on 11th August,2024 in Two Shifts. pic.twitter.com/gHjGUKInV5
— Dr.Meet Ghonia (@DrMeet_Ghonia) July 5, 2024
ಜೂನ್ 23ರಂದು ನಿಗದಿಯಾಗಿದ್ದ ನೀಟ್-ಪಿಜಿ ಪರೀಕ್ಷೆಯನ್ನು ಮುಂದೂಡಲಾಗಿತ್ತು. ಯುಜಿ ನೀಟ್ ಪರೀಕ್ಷೆಯ ಪ್ರಶ್ನೆ ಪತ್ರಿಕೆಗಳು ಸೋರಿಕೆ ಸೇರಿದಂತೆ ವಿವಿಧ ವಿವಾದ ಭುಗಿಲೆದ್ದ ಹಿನ್ನಲೆಯಲ್ಲಿ ಜೂನ್ 22ರಂದು ಪರೀಕ್ಷೆ ಮುಂದೂಡಿ ಪ್ರಕಟಣೆ ಹೊರಡಿಸಲಾಗಿತ್ತು. ವೈದ್ಯಕೀಯ ವಿದ್ಯಾರ್ಥಿಗಳಿಗೆ ಪರೀಕ್ಷೆ ನಡೆಸುವ ರಾಷ್ಟ್ರೀಯ ಪರೀಕ್ಷಾ ಮಂಡಳಿಗೆ ಹಲವು ದೂರುಗಳು ದಾಖಲಾಗಿದ್ದವು. ಸಾಮಾಜಿಕ ಮಾಧ್ಯಮಗಳ ಮೂಲಕ ಆಕಾಂಕ್ಷಿಗಳಿಗೆ ಹಣಕ್ಕಾಗಿ ಪ್ರಶ್ನೆ ಪತ್ರಿಕೆಯನ್ನು ನೀಡುವ ಆಮಿಷ ಒಡ್ಡಲಾಗಿದೆ ಎಂದು ದೂರಲಾಗಿತ್ತು. ಹೀಗಾಗಿ ಪರೀಕ್ಷೆಯನ್ನೇ ರದ್ದು ಮಾಡಲಾಗಿತ್ತು.
ನೀಟ್-ಪಿಜಿ ಪ್ರವೇಶ ಪರೀಕ್ಷೆಯ ಸಮಗ್ರತೆಯನ್ನು ಕಾಪಾಡಿಕೊಳ್ಳಲು ಈ ನಿರ್ಧಾರ ತೆಗೆದುಕೊಳ್ಳಲಾಗಿದೆ ಎಂದು ಆರೋಗ್ಯ ಸಚಿವಾಲಯ ತಿಳಿಸಿತ್ತು. ಪರೀಕ್ಷಾ ಪ್ರಕ್ರಿಯೆಗಳ ನ್ಯಾಯಸಮ್ಮತತೆಯನ್ನು ಖಚಿತಪಡಿಸಿಕೊಳ್ಳಲು ಸಮಗ್ರ ಮೌಲ್ಯಮಾಪನ ನಡೆಸಲು ನಿರ್ಧರಿಸಲಾಗಿದೆ ಎಂದು ಸಚಿವಾಲಯ ಸಮರ್ಥನೆ ನೀಡಿತ್ತು.
ಸಚಿವಾಲಯ ಹೇಳಿದ್ದೇನು?
ಕೊನೇ ಕ್ಷಣದಲ್ಲಿ ವಿದ್ಯಾರ್ಥಿಗಳಿಗೆ ಉಂಟಾದ ಅನಾನುಕೂಲತೆಗೆ ಆರೋಗ್ಯ ಸಚಿವಾಲಯವು ವಿಷಾದಿಸುತ್ತದೆ. ವಿದ್ಯಾರ್ಥಿಗಳ ಹಿತದೃಷ್ಟಿಯಿಂದ ಮತ್ತು ಪರೀಕ್ಷಾ ಪ್ರಕ್ರಿಯೆ ಪಾವಿತ್ರ್ಯವನ್ನು ಕಾಪಾಡಿಕೊಳ್ಳಲು ಈ ನಿರ್ಧಾರ ತೆಗೆದುಕೊಳ್ಳಲಾಗಿದೆ ಎಂದು ಸಚಿವಾಲ ಪ್ರಕಟಣೆ ಹೊರಡಿಸಿ ಶೀಘ್ರದಲ್ಲೇ ಹೊಸ ದಿನಾಂಕ ಪ್ರಕಟಿಸುವುದಾಗಿ ಹೇಳಿತ್ತು.
ಡಾರ್ಕ್ನೆಟ್ನಲ್ಲಿ ಪ್ರಶ್ನೆ ಪತ್ರಿಕೆ ಸೋರಿಕೆಯಾದ ಕಾರಣ ಯುಜಿಸಿ-ನೆಟ್ ರದ್ದುಗೊಳಿಸಿದ ನಂತರ ಮುಂದೂಡಲ್ಪಟ್ಟ ಎರಡನೇ ಸ್ಪರ್ಧಾತ್ಮಕ ಪರೀಕ್ಷೆ ಇದಾಗಿದೆ. ರಾಷ್ಟ್ರೀಯ ಅರ್ಹತಾ ಮತ್ತು ಪ್ರವೇಶ ಪರೀಕ್ಷೆಯಲ್ಲಿ (UG) ಅಕ್ರಮಗಳು ನಡೆದಿವೆ ಎಂಬ ಆರೋಪದ ಬಗ್ಗೆಯೂ ವಿವಾದವಿದೆ. ಜೂನ್ 21ರಂದು ರಾಷ್ಟ್ರೀಯ ಪರೀಕ್ಷಾ ಸಂಸ್ಥೆ (NTA) ಜೂನ್ 25ರಿಂದ ನಡೆಯಬೇಕಿದ್ದ ಸಿಎಸ್ಐಆರ್-ಯುಜಿಸಿ-ನೆಟ್ ಪರೀಕ್ಷೆಯನ್ನು ಮುಂದೂಡಲಾಗಿದೆ ಎಂದು ಘೋಷಿಸಿತ್ತು.
ನೀಟ್ ಪರೀಕ್ಷೆ ಅಕ್ರಮಗಳ ತನಿಖೆ ಹೊಣೆ ಸಿಬಿಐಗೆ ಒಪ್ಪಿಸಿದ ಕೇಂದ್ರ
ನವದೆಹಲಿ: ಪದವಿಪೂರ್ವ ವೈದ್ಯಕೀಯ ಕೋರ್ಸ್‌ಗಳ ಪ್ರವೇಶಕ್ಕಾಗಿ ನಡೆಸಲಾಗುವ ಸ್ಪರ್ಧಾತ್ಮಕ ನೀಟ್ ಪರೀಕ್ಷೆಯಲ್ಲಿ (NEET UG) ನಡೆದಿರುವ ಅಕ್ರಮಗಳು ಮತ್ತು ಪ್ರಶ್ನೆ ಪತ್ರಿಕೆ ಸೋರಿಕೆ ಆರೋಪದ ತನಿಖೆ ಹೊಣೆಯನ್ನು ಕೇಂದ್ರ ಸರ್ಕಾರ ಇತ್ತೀಚೆಗೆ ಸಿಬಿಐ ಒಪ್ಪಿಸಿದೆ. ನೀಟ್ ಪರೀಕ್ಷೆಗೆ ಸಂಬಂಧಿಸಿದಂತೆ “ಕೆಲವು ಅಕ್ರಮಗಳು, ವಂಚನೆ ಮತ್ತು ದುಷ್ಕೃತ್ಯಗಳ ಪ್ರಕರಣಗಳು ವರದಿಯಾಗಿವೆ ಮತ್ತು ಪರೀಕ್ಷಾ ಪ್ರಕ್ರಿಯೆಯ ನಿರ್ವಹಣೆಯಲ್ಲಿ ಪಾರದರ್ಶಕತೆಗಾಗಿ, ಶಿಕ್ಷಣ ಸಚಿವಾಲಯದ ಪರಿಶೀಲನೆಯ ನಂತರ ಈ ಬಗ್ಗೆ ಸಮಗ್ರ ತನಿಖೆಗಾಗಿ ಸಿಬಿಐಗೆ ವಹಿಸಲು ನಿರ್ಧರಿಸಲಾಗಿದೆ ಎಂದು ಕೇಂದ್ರ ಶಿಕ್ಷಣ ಸಚಿವಾಲಯ ತನ್ನ ಹೇಳಿಕೆಯಲ್ಲಿ ತಿಳಿಸಿದೆ.
ಪರೀಕ್ಷೆಗಳ ಪಾವಿತ್ರ್ಯವನ್ನು ಖಚಿತಪಡಿಸಿಕೊಳ್ಳಲು ಮತ್ತು ವಿದ್ಯಾರ್ಥಿಗಳ ಹಿತಾಸಕ್ತಿಯನ್ನು ರಕ್ಷಿಸಲು ಸರ್ಕಾರ ಬದ್ಧ. ಮೋಸದಲ್ಲಿ ಭಾಗಿಯಾಗಿರುವ ಯಾವುದೇ ವ್ಯಕ್ತಿ, ಸಂಸ್ಥೆ ಕಠಿಣ ಕ್ರಮವನ್ನು ಎದುರಿಸಬೇಕಾಗುತ್ತದೆ ಎಂದು ಎಂದು ಸಚಿವಾಲಯ ಹೇಳಿದೆ. ಮೇ 5 ರಂದು ದೇಶದ 4,750 ಕೇಂದ್ರಗಳಲ್ಲಿ ನೀಟ್-ಯುಜಿ ನಡೆದಿದ್ದು, ಸುಮಾರು 24 ಲಕ್ಷ ಅಭ್ಯರ್ಥಿಗಳು ಭಾಗವಹಿಸಿದ್ದರು. ನಿರೀಕ್ಷಿತ ದಿನಾಂಕಕ್ಕಿಂತ ಹತ್ತು ದಿನ ಮುಂಚಿತವಾಗಿ ಜೂನ್ 4 ರಂದು ಫಲಿತಾಂಶಗಳನ್ನು ಘೋಷಿಸಲಾಗಿತ್ತು. ಫಲಿತಾಂಶದ ನಂತರ ಪ್ರಶ್ನೆ ಪತ್ರಿಕೆ ಸೋರಿಕೆ ಮತ್ತು ದುಷ್ಕೃತ್ಯಗಳ ಆರೋಪಗಳು ಕೇಳಿಬಂದಿದ್ದವು.
ಇದನ್ನೂ ಓದಿ: NEET UG Row : ರಾಷ್ಟ್ರೀಯ ಪರೀಕ್ಷಾ ಸಂಸ್ಥೆ ಮುಖ್ಯಸ್ಥರನ್ನು ವಜಾಗೊಳಿಸಿದ ಕೇಂದ್ರ ಸರ್ಕಾರ