Site icon Vistara News

Education Policy : ರಾಜ್ಯದಲ್ಲಿ NEP ಇನ್ನಿಲ್ಲ, SEP ಜಾರಿ ಎಂದ ಸರ್ಕಾರ; ಸಿಡಿದೆದ್ದ ಬಿಜೆಪಿಯಿಂದ ಪ್ರತಿತಂತ್ರ

DK Shivakumar CM Siddaramaiah and NEP

ಬೆಂಗಳೂರು: ಕರ್ನಾಟಕದಲ್ಲಿ ರಾಷ್ಟ್ರೀಯ ಶಿಕ್ಷಣ ನೀತಿಯನ್ನು (NEP) ರಾಜ್ಯ ಸರ್ಕಾರ ರದ್ದು ಮಾಡುತ್ತಿರುವುದಾಗಿ ಅಧಿಕೃತವಾಗಿ ಘೋಷಣೆ ಮಾಡಿದೆ. ಸಿಎಂ ಸಿದ್ದರಾಮಯ್ಯ (CM Siddaramaiah) ನೇತೃತ್ವದಲ್ಲಿ ವಿಶ್ವವಿದ್ಯಾಲಯಗಳ ಕುಲಪತಿಗಳೊಂದಿಗೆ ಸಭೆ ನಡೆದಿದ್ದು, ಈ ಕುರಿತು ಅಂತಿಮ ನಿರ್ಧಾರವನ್ನು ತೆಗೆದುಕೊಳ್ಳಲಾಯಿತು. ಅಲ್ಲದೆ, ಈ ವರ್ಷ ಯಥಾಸ್ಥಿತಿ ಮುಂದುವರಿಯಲಿದ್ದು, ಮುಂದಿನ ವರ್ಷದಿಂದ ರಾಜ್ಯದಲ್ಲಿ ರಾಜ್ಯ ಶಿಕ್ಷಣ ನೀತಿ (SEP) ಜಾರಿಗೆ ಬರಲಿದೆ. ಅದಕ್ಕೆ ಈಗಲೇ ಸಮಿತಿ ರಚಿಸಿ ಪಠ್ಯಕ್ರಮ ಯಾವ ರೀತಿಯಾಗಿರಬೇಕೆಂಬ ಬಗ್ಗೆ ಕ್ರಮ ಕೈಗೊಳ್ಳುವ ತೀರ್ಮಾನಕ್ಕೆ ಬರಲಾಗಿದೆ. ಈಗ ಇದಕ್ಕೆ ಎದುರೇಟು ಕೊಡಲು ಬಿಜೆಪಿ ಸಿದ್ಧಗೊಂಡಿದೆ. ಶೈಕ್ಷಣಿಕ ನೀತಿಯನ್ನು (Education Policy) ಬದಲಾಯಿಸುವುದರ ವಿರುದ್ಧ ರಾಜ್ಯಾದ್ಯಂತ ಪ್ರತಿಭಟನೆ ನಡೆಸುವ ಎಚ್ಚರಿಕೆಯನ್ನು ನೀಡಿದೆ.

ಸಿಎಂ ಸಿದ್ದರಾಮಯ್ಯ ನೇತೃತ್ವದಲ್ಲಿ ನಡೆದ ಎನ್‌ಇಪಿ ಕುರಿತಾದ ಸಾಧಕಬಾಧಕ ಸಭೆಯಲ್ಲಿ ಡಿಸಿಎಂ ಡಿ.ಕೆ.ಶಿವಕುಮಾರ್, ಉನ್ನತ ಶಿಕ್ಷಣ ಸಚಿವ ಡಾ. ಎಂ. ಸಿ. ಸುಧಾಕರ್, ಪ್ರಾಥಮಿಕ ಶಿಕ್ಷಣ ಸಚಿವ ಮಧು ಬಂಗಾರಪ್ಪ, ಸಾಹಿತಿ ಬರಗೂರು ರಾಮಚಂದ್ರಪ್ಪ ಹಾಗೂ ವಿವಿಗಳ ಕುಲಪತಿಗಳು ಭಾಗಿಯಾಗಿದ್ದರು. ಈ ವೇಳೆ ಎನ್‌ಇಪಿ ಜಾರಿಯಿಂದ ಆಗುವ ಪರಿಣಾಮದ ಬಗ್ಗೆ ಗಂಭೀರವಾಗಿ ಚರ್ಚೆ ನಡೆಸಿದ್ದಾರೆ.

ಇದನ್ನೂ ಓದಿ: Operation Hasta : ಸಸ್ಪೆಂಡ್‌ ಮಾಡಿದಾಕ್ಷಣ ಎಲ್ಲವೂ ಬದಲಾಗಲ್ಲ: ಎಸ್‌.ಟಿ. ಸೋಮಶೇಖರ್‌ ಖಡಕ್‌ ರಿಯಾಕ್ಷನ್

ಇದು ಕೇಂದ್ರ ಸರ್ಕಾರದ ಹುನ್ನಾರ

ರಾಜ್ಯ ಸರ್ಕಾರಗಳನ್ನು ವಿಶ್ವಾಸಕ್ಕೆ ತೆಗೆದುಕೊಳ್ಳದೆ ರಾಷ್ಟ್ರೀಯ ಶಿಕ್ಷಣ ನೀತಿ ರೂಪಿಸಲಾಗಿದೆ. ಶಿಕ್ಷಣ ನೀತಿಯನ್ನು ಕೇಂದ್ರ ಹೇರಲಾಗದು. ಹೇರಲು ಹೊರಟಿರುವುದು ಒಂದು ಹುನ್ನಾರ. ಬಹು ಸಂಸ್ಕೃತಿ, ಬಹುತ್ವ ಇರುವ ದೇಶದಲ್ಲಿ ಏಕರೂಪದ ಶಿಕ್ಷಣ ವ್ಯವಸ್ಥೆ ಮಾಡಲಾಗದು. ಆದ್ದರಿಂದ ಹಳೆ ಶಿಕ್ಷಣ ಪದ್ಧತಿ ಮುಂದುವರೆಸಿ, ಹೊಸ ಶಿಕ್ಷಣ ನೀತಿ ರೂಪಿಸಲು ಒಂದು ಸಮಿತಿ ರಚಿಸಲಾಗುವುದು. ಈ ಶಿಕ್ಷಣ ನೀತಿ ಜಾರಿಗೊಳಿಸಲು ಅಗತ್ಯ ಮೂಲಸೌಲಭ್ಯಗಳು ಶಿಕ್ಷಣ ಸಂಸ್ಥೆಗಳಲ್ಲಿ ಇಲ್ಲ. ಇದರಿಂದ ಅನಗತ್ಯ ಗೊಂದಲಗಳು ಸೃಷ್ಟಿಯಾಗಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅಭಿಪ್ರಾಯಪಟ್ಟಿದ್ದಾರೆ.

ಎಲ್ಲೆಲ್ಲಿ ಜಾರಿಯಾಗಿಲ್ಲ ಎಂಬ ಮಾಹಿತಿ ಚರ್ಚೆ

ಬಿಜೆಪಿ ಆಳ್ವಿಕೆಯ ಇತರ ರಾಜ್ಯಗಳೂ ರಾಷ್ಟ್ರೀಯ ಶಿಕ್ಷಣ ನೀತಿಯನ್ನು ಜಾರಿಗೊಳಿಸಲು ಹಿಂದೇಟಾಕುತ್ತಿವೆ. ಕೇರಳ, ತಮಿಳು ನಾಡು ರಾಜ್ಯಗಳು ರಾಷ್ಟ್ರೀಯ ಶಿಕ್ಷಣ ನೀತಿ ಜಾರಿಗೊಳಿಸುವುದಿಲ್ಲ ಎಂದು ಕೇಂದ್ರಕ್ಕೆ ಸ್ಪಷ್ಟಪಡಿಸಿವೆ ಎಂದು ಸಭೆಯಲ್ಲಿ ಪ್ರಸ್ತಾಪಿಸಲಾಯಿತು. ಬಡವರು, ಪರಿಶಿಷ್ಟ ಜಾತಿ, ಪಂಗಡದವರು, ಹಿಂದುಳಿದವರು, ಗ್ರಾಮೀಣ ಪ್ರದೇಶದವರಿಗೆ ತೊಂದರೆಯಾಗುತ್ತದೆ. ಉನ್ನತ ಶಿಕ್ಷಣದಲ್ಲಿ ಪ್ರತಿ ವರ್ಷ ಪ್ರಮಾಣ ಪತ್ರ ನೀಡಿದರೂ, ಒಂದು ವರ್ಷ, ಎರಡು ವರ್ಷ ಓದಿದವರಿಗೆ ಎಷ್ಟು ಉದ್ಯೋಗಾವಕಾಶ ದೊರೆಯಲು ಸಾಧ್ಯ? ಉದ್ಯೋಗವಕಾಶ ದೊರೆತು ಹೋದ ಬಡವರ ಮಕ್ಕಳು ಮತ್ತೆ ಓದಲು ಎಷ್ಟು ಅವಕಾಶ ದೊರೆಯುವುದು? ಎಂಬ ಅನುಮಾನ ಸಭೆಯಲ್ಲಿ ವ್ಯಕ್ತವಾಗಿದೆ.

ಸರ್ಕಾರದ ತೀರ್ಮಾನ ಪ್ರಕಟಿಸಿದ ಡಿ.ಕೆ. ಶಿವಕುಮಾರ್‌

ಸಭೆ ಬಳಿಕ ಮಾಧ್ಯಮದವರೊಂದಿಗೆ ಮಾತನಾಡಿದ ಡಿ.ಕೆ. ಶಿವಕುಮಾರ್‌ (DCM DK Shivakumar), ರಾಜ್ಯದಲ್ಲಿ ಎನ್‌ಇಪಿಯನ್ನು ಯಾವುದೇ ಪೂರ್ವ ಸಿದ್ಧತೆ ಇಲ್ಲದೆ ಅನುಷ್ಠಾನ ಮಾಡಲಾಗಿದೆ. ಇದು ಮಕ್ಕಳ ಭವಿಷ್ಯಕ್ಕೆ ಮಾರಕವಾಗಿದೆ ಎಂಬ ಬಗ್ಗೆ ಇಂದಿನ ಸಭೆಯಲ್ಲಿ ಚರ್ಚೆಯಾಗಿದೆ. ಹೀಗಾಗಿ ಎಸ್‌ಇಪಿಯನ್ನು ನಾವು ರದ್ದು ಮಾಡುತ್ತಿದ್ದೇವೆ. ಮುಂದಿನ ವರ್ಷದಿಂದಲೇ ಎನ್‌ಇಪಿ ಜಾರಿಗೆ ಬರಲಿದ್ದು, ಇದಕ್ಕೆ ಅಗತ್ಯ ಕ್ರಮವನ್ನು ಕೈಗೊಳ್ಳುತ್ತೇವೆ ಎಂದು ಹೇಳಿದರು.

ಸಮಸ್ಯೆಗಳನ್ನು ಚರ್ಚೆ ಮಾಡಲಾಗಿದೆ. ಎನ್‌ಇಪಿ ಬಗ್ಗೆಯೂ ಚರ್ಚೆ ಮಾಡಲಾಗಿದೆ. ನಮ್ಮ ರಾಜ್ಯದ ಶಿಕ್ಷಣ ಮಟ್ಟ ಇಡೀ ರಾಷ್ಟ್ರದಲ್ಲಿ ಉತ್ತಮವಾಗಿದೆ. ಅನೇಕ ಸಮಸ್ಯೆಗಳನ್ನು ನಮ್ಮ ಮುಂದೆ ಇಡಲಾಗಿದೆ. ಕೇಂದ್ರ ಸರ್ಕಾರದ ಹಣ ಬೇರೆ ರಾಜ್ಯಕ್ಕೆ ಹೋಲಿಕೆ ಮಾಡಿದರೆ ಕಡಿಮೆ ಇದೆ ಎಂದು ತಿಳಿದುಬಂದಿದೆ. ನಮ್ಮ ಶಿಕ್ಷಣ ನೀತಿ ಗುಣಮಟ್ಟ ಹೆಚ್ಚಿಸಲು ಸರ್ಕಾರ ಬದ್ಧವಾಗಿದೆ ಎಂದು ಡಿ.ಕೆ. ಶಿವಕುಮಾರ್‌ ಹೇಳಿದರು.

ತರಾತುರಿಯಲ್ಲಿ ಎನ್ಇಪಿ ಜಾರಿ

ಬಿಜೆಪಿಯವರು ತರಾತುರಿಯಲ್ಲಿ ಎನ್ಇಪಿ ಜಾರಿ ಮಾಡಲು ಹೊರಟರು. ಮಹಾರಾಷ್ಟ್ರ, ಸೇರಿ ಬಿಜೆಪಿ ಇರುವ ಯಾವ ರಾಜ್ಯದಲ್ಲಿಯೂ ಈ ಶಿಕ್ಷಣ ನೀತಿ ಇಲ್ಲ. ಯಾವುದೇ ಪಾಲಿಸಿಯನ್ನು ಬೇಸಿಕ್‌ನಿಂದ ಜಾರಿಗೆ ತರಬೇಕು. ಮೂಲಭೂತ ಸೌಲಭ್ಯಗಳ ಸಮಸ್ಯೆ ಕೂಡ ಇದೆ. ಇವರು ತಂದ ಎನ್‌ಇಪಿ ಬಗ್ಗೆ ನಮಗೆ ಸಮಾಧಾನ ಇಲ್ಲ. ನಾವು ಹೆಲ್ತ್ ಸೆಕ್ಟರ್‌ನಲ್ಲೂ ಮುಂದೆ ಇದ್ದೇವೆ. ಎಲ್ಲರ ಬಳಿ ಚರ್ಚೆ ಮಾಡಲಾಗಿದೆ. ಹಾಗಾಗಿ ಎನ್‌ಇಪಿ ಅಳವಡಿಕೆ ಇಲ್ಲ ಎಂದು ಡಿ.ಕೆ. ಶಿವಕುಮಾರ್ ಹೇಳಿದರು.

ಸಮಿತಿ ರಚನೆ

ಕೂಡಲೇ ಸಮಿತಿಯೊಂದನ್ನು ರಚನೆ ಮಾಡಲಾಗುತ್ತದೆ. ಮುಂದೆ ಏನು ಮಾಡಬೇಕು? ಯಾವ ರೀತಿ ಇರಬೇಕು? ಹೊಸ ಪೀಳಿಗೆಗೆ ಅನುಗುಣವಾಗಿ ತೀರ್ಮಾನ ಮಾಡಲಾಗುತ್ತದೆ. ಸದ್ಯಕ್ಕೆ ನಾವು ಹಳೆಯ ಶಿಕ್ಷಣ ನೀತಿಯನ್ನೇ ಮುಂದುವರಿಸುತ್ತೇವೆ. ನಾಗಪುರ ಎಜುಕೇಷನ್ ಸಿಸ್ಟಮ್ ಅನ್ನು ನಮ್ಮಲ್ಲಿ ತರಲ್ಲ ಎಂದು ಡಿಸಿಎಂ ಡಿ.ಕೆ. ಶಿವಕುಮಾರ್‌ ವಾಗ್ದಾಳಿ ನಡೆಸಿದರು.

ನಮ್ಮ ಶಿಕ್ಷಣ ನೀತಿಯ ಉನ್ನತೀಕರಣ

ಹೊಸ ಪಾಲಿಸಿ ತರುವ ತನಕ ಹಳೆಯದನ್ನು ಮುಂದುವರಿಸುತ್ತೇವೆ. ನಮ್ಮ ಶಿಕ್ಷಣ ನೀತಿಯನ್ನು ಉನ್ನತೀಕರಣ ಮಾಡಲು ತೀರ್ಮಾನ ಮಾಡಲಾಗಿದೆ. 2021ರಲ್ಲಿ ತಂದಿದ್ದ ಎನ್‌ಇಪಿ ಸಮರ್ಪಕವಾಗಿಲ್ಲ. ಕರ್ನಾಟಕದಲ್ಲಿನ ಶಿಕ್ಷಣ ರಾಷ್ಟ್ರದಲ್ಲೇ ಉತ್ತಮವಾಗಿದೆ. ವಿವಿ ಕುಲಪತಿಗಳು ಕೂಡ ಕೆಲವು ಸಮಸ್ಯೆಗಳನ್ನು ಹೇಳಿದ್ದಾರೆ. ನಮ್ಮ ಶಿಕ್ಷಣ ನೀತಿ ಗುಣ ಮಟ್ಟವನ್ನು ಹೆಚ್ಚಿಸಲು ಚಿಂತನೆ ಮಾಡಿದ್ದೇವೆ ಎಂದು ಡಿ.ಕೆ. ಶಿವಕುಮಾರ್‌ ಹೇಳಿದರು.

ಬಿಜೆಪಿಯಿಂದ ತರಾತುರಿಯ ನಿರ್ಧಾರ

ಬಿಜೆಪಿಯವರು ತರಾತುರಿಯಲ್ಲಿ (ಎನ್‌ಇಪಿ) ಜಾರಿಗೆ ತಂದಿದ್ದಾರೆ. ಯಾವುದೇ ಬಿಜೆಪಿ ಸರ್ಕಾರ ಇರುವ ರಾಜ್ಯಗಳಲ್ಲಿ ಎನ್‌ಇಪಿ ಇಲ್ಲ. ಮೊದಲಿಗೆ ಕರ್ನಾಟಕದಲ್ಲೇ ಜಾರಿಗೆ ತಂದಿದ್ದಾರೆ. ಈ ಹಿಂದೆ ಸಿದ್ದರಾಮಯ್ಯ ಸರ್ಕಾರದಲ್ಲಿ ಕರ್ನಾಟಕ ಶಿಕ್ಷಣ ನೀತಿ ಬಗ್ಗೆ ಚರ್ಚೆ ನಡೆದಿತ್ತು. ಅದರ ರಿಪೋರ್ಟ್ ಕೂಡ ಇದೆ. ಅದರ ಬಗ್ಗೆಯೂ ಸಭೆಯಲ್ಲಿ ಚರ್ಚೆ ಆಗಿದೆ. ಎನ್‌ಇಪಿಯ ಅನೇಕ ವಿಚಾರಗಳಲ್ಲಿ ನಮಗೆ ಸಮಾಧಾನ ಇಲ್ಲ ಎಂದು ಡಿ.ಕೆ. ಶಿವಕುಮಾರ್‌ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಒಂದು ವಾರದಲ್ಲಿ ಕಮಿಟಿ ಅಸ್ತಿತ್ವಕ್ಕೆ

ಈಗ ಹಳೇ ಪದ್ಧತಿಯನ್ನು ಅನುಸರಿಸಲಾಗಿದೆ. ಅದಕ್ಕಾಗಿ ನೂತನ ಶಿಕ್ಷಣಕ್ಕೆ ಒತ್ತು ಕೊಡಬೇಕು. ಸಂಶೋಧನೆ, ತಂತ್ರಜ್ಞಾನ ಶಿಕ್ಷಣಕ್ಕೆ ಒತ್ತು ಸಿಗಬೇಕಿದೆ. ಇದಕ್ಕಾಗಿ ಇನ್ನೊಂದೇ ವಾರದೊಳಗೆ ಒಂದು ಸಮಿತಿಯನ್ನು ರಚನೆ ಮಾಡುತ್ತೇವೆ. ಉನ್ನತ ಶಿಕ್ಷಣ ಸಚಿವರು ಮತ್ತು ಪ್ರಾಥಮಿಕ ಶಿಕ್ಷಣ ಸಚಿವರ ನೇತೃತ್ವದಲ್ಲಿ ಈ ಕಮಿಟಿ ಇರುತ್ತದೆ. ಹೊಸ ಪೀಳಿಗೆಗೆ ಅನುಗುಣವಾಗಿ ನಮ್ಮ ರಾಜ್ಯಕ್ಕೆ ಸಂಬಂಧಿಸಿದಂತೆ ಶಿಕ್ಷಣ ನೀತಿ ಇರಲಿದೆ. ಆದಷ್ಟು ಬೇಗ ವರದಿಯನ್ನು ಪಡೆಯುತ್ತೇವೆ. ಹೊಸ ನೀತಿ ಮುಂದಿನ ವರ್ಷದಿಂದ ಜಾರಿಯಾಗಲಿದೆ ಎಂದು ಡಿ.ಕೆ. ಶಿವಕುಮಾರ್‌ ಹೇಳಿದರು.

ಎದುರೇಟು ಕೊಡಲು ಬಿಜೆಪಿ ಸಿದ್ಧತೆ

ರಾಜ್ಯದಲ್ಲಿ ಎನ್‌ಇಪಿಯನ್ನು ಅಧಿಕೃತವಾಗಿ ರದ್ದುಗೊಳಿಸುವುದಾಗಿ ರಾಜ್ಯ ಸರ್ಕಾರ ಘೋಷಣೆ ಮಾಡಿದ ಬೆನ್ನಲ್ಲೇ ಎದುರೇಟು ಕೊಡಲು ಬಿಜೆಪಿ ಸಿದ್ಧತೆ ನಡೆಸಿದೆ. ಇದಕ್ಕೆ ವಿರುದ್ಧವಾಗಿ ಶಿಕ್ಷಣ ತಜ್ಞರ ಮತ್ತೊಂದು ಸಭೆಯನ್ನು ಮಂಗಳವಾರ (ಆಗಸ್ಟ್‌ 22) ಸ್ಕೌಟ್ಸ್ & ಗೈಡ್ಸ್ ಭವನದಲ್ಲಿ ಕರೆಯಲಾಗಿದೆ. ಪೀಪಲ್ಸ್ ಫೋರಮ್ ಫಾರ್ ಕರ್ನಾಟಕ ಎಜುಕೇಷನ್‌ನಿಂದ ಈ ಸಭೆಯನ್ನು ಆಯೋಜನೆ ಮಾಡಲಾಗಿದ್ದು, ಎನ್‌ಇಪಿ ಪರವಾಗಿರುವ ವಿಶ್ರಾಂತ ಕುಲಪತಿಗಳು, ಕುಲಸಚಿವರು, ಮಾಜಿ ಸಿಎಂ, ಮಾಜಿ ಶಿಕ್ಷಣ ಸಚಿವರು, ಸಿಂಡಿಕೇಟ್ ಸದಸ್ಯರು ಇದರಲ್ಲಿ ಪಾಲ್ಗೊಳ್ಳಲಿದ್ದಾರೆ.

ವಿಶ್ರಾಂತ ಕುಲಪತಿಗಳಾದ ಪ್ರೊ. ಬಿ.‌ತಿಮ್ಮೇಗೌಡ, ಪ್ರೊ.‌ ಸತೀಶ ಜಿಗಜಿನ್ನಿ, ಪ್ರೊ. ಶಿವಾನಂದ ಹೊಸಮನಿ, ಪ್ರೊ. ಸಿದ್ದು ಆಲ್ದೂರ್, ಡಾ. ಪಿ. ಸುಬ್ರಹ್ಮಣ್ಯ, ಪ್ರೊ. ಕೆ. ಆರ್. ವೇಣುಗೋಪಾಲ್, ಮಾಜಿ ಸಿಎಂ ಬಸವರಾಜ ಬೊಮ್ಮಾಯಿ‌, ಎಸ್. ಸುರೇಶ್ ಕುಮಾರ್, ಡಾ. ಸಿ.ಎನ್. ಅಶ್ವತ್ಥನಾರಾಯಣ, ವಿಶ್ವೇಶ್ವರ ಹೆಗಡೆ ಕಾಗೇರಿ, ಅರವಿಂದ ಲಿಂಬಾವಳಿ, ಸಿ.ಟಿ. ರವಿ, ಎನ್. ಮಹೇಶ್, ಬಿ.ಸಿ.‌ ನಾಗೇಶ್, ಪ್ರೊ. ಮಲ್ಲೇಪುರಂ ಜಿ. ವೆಂಕಟೇಶ್, ಪ್ರೊ. ಮೀನಾ ಚಂದಾವರ್ಕರ್ ಸೇರಿ ಅನೇಕರು ಭಾಗಿಯಾಗಲಿದ್ದಾರೆ.

ಇದನ್ನೂ ಓದಿ: BJP Politics : ಮೈಚಳಿ ಬಿಡಿ, ಸರ್ಕಾರಕ್ಕೆ ಬಿಸಿ ಮುಟ್ಟಿಸಲು 224 ಕ್ಷೇತ್ರದಲ್ಲಿ ಪ್ರತಿಭಟಿಸಿ; ಕೋರ್‌ ಕಮಿಟಿಯಲ್ಲಿ ಬಿಎಸ್‌ವೈ ಗುಡುಗು

ಶಿಕ್ಷಣಕ್ಕೆ ಎನ್‌ಇಪಿ ಎಷ್ಟು ಮುಖ್ಯ ಎಂಬುದರ ಕುರಿತು ಈ ಸಭೆಯಲ್ಲಿ ಚರ್ಚೆ ನಡೆಯಲಿದೆ. ಅಲ್ಲದೆ, ಸರ್ಕಾರದ ಈ ನಿರ್ಧಾರವನ್ನು ಖಂಡಿಸುವ ಸಾಧ್ಯತೆ ಇದೆ. ಈ ಮೂಲಕ ಎನ್‌ಇಪಿಯನ್ನು ಜನರ ವಿಷಯವಾಗಿಸುವತ್ತ ಹೆಜ್ಜೆಯನ್ನಿಡಲಾಗುತ್ತಿದೆ. ರಾಜಕೀಯವಾಗಿಯೂ ಸರ್ಕಾರದ ವಿರುದ್ಧ ಜನಾಭಿಪ್ರಾಯ ನಡೆಸಿ, ಬಿಸಿ ಮುಟ್ಟಿಸಲು ತೀರ್ಮಾನ ಕೈಗೊಳ್ಳಲಾಗಿದೆ.

Exit mobile version