Site icon Vistara News

2nd PU Exam: ಪಿಯುಸಿ ಪರೀಕ್ಷೆಗೂ ಹಿಜಾಬ್‌ ಧರಿಸುವಂತಿಲ್ಲ: ಶಿಕ್ಷಣ ಸಚಿವರ ಸ್ಪಷ್ಟನೆ

ಬೆಂಗಳೂರು: ಎಸ್‌ಎಸ್‌ಎಲ್‌ಸಿ ಪರೀಕ್ಷೆಯ ರೀತಿಯಲ್ಲೆ ದ್ವಿತೀಯ ಪಿಯು ಪರೀಕ್ಷೆಯಲ್ಲೂ (2nd PU Exam) ಹಿಜಾಬ್‌ (Hijab) ಧರಿಸಲು ಅವಕಾಶ ಇರುವುದಿಲ್ಲ ಎಂದು ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಬಿ.ಸಿ. ನಾಗೇಶ್‌ (B.C. Nagesh) ಸುದ್ದಿಗೋಷ್ಠಿಯಲ್ಲಿ ತಿಳಿಸಿದ್ದಾರೆ.

ದ್ವಿತೀಯ ಪಿಯುಸಿ ಪರೀಕ್ಷಾ ಸಿದ್ಧತೆ ಕುರಿತು ತಿಳಿಸಲು ವಿಧಾನಸೌಧದಲ್ಲಿ ಮಂಗಳವಾರ ನಡೆಸಿದ ಸುದ್ದಿಗೋಷ್ಠಿಯಲ್ಲಿ ಪ್ರಶ್ನೆಯೊಂದಕ್ಕೆ ನಾಗೇಶ್‌ ಉತ್ತರಿಸಿದರು. ಯಾವ ಶಿಕ್ಷಣ ಸಂಸ್ಥೆಗಳಲ್ಲಿ ಸಮವಸ್ತ್ರವನ್ನು ಕಡ್ಡಾಯ ಮಾಡಲಾಗಿದೆಯೋ ಅಲ್ಲೆಲ್ಲ ವಿದ್ಯಾರ್ಥಿಗಳು ಸಮವಸ್ತ್ರ ಧರಿಸಿ ಪರೀಕ್ಷೆಗೆ ಹಾಜರಾಗಬೇಕು. ಯಾವ ಶಿಕ್ಷಣ ಸಂಸ್ಥೆಗಳಲ್ಲಿ ಸಮವಸ್ತ್ರವಿಲ್ಲವೋ ಆ ಸಂಸ್ಥೆಯ ವಿದ್ಯಾರ್ಥಿಗಳು ಯಾವುದೇ ವಸ್ತ್ರ ಧರಿಸಿ ಪರೀಕ್ಷೆಗೆ ಹಾಜರಾಗಬಹುದು. ಉಳಿದಂತೆ ಪುನರಾವರ್ತಿತ ಖಾಸಗಿ (External) ವಿದ್ಯಾರ್ಥಿಗಳಿಗೆ ಸಮವಸ್ತ್ರದ ಅವಶ್ಯಕತೆ ಇರುವುದಿಲ್ಲ.

ಆದರೆ ಯಾವುದೇ ರೀತಿಯ ವಿದ್ಯಾರ್ಥಿಗಳಾದರೂ ಯಾವುದೇ ಧಾರ್ಮಿಕ ಹಿನ್ನೆಲಯ ವಸ್ತ್ರಗಳನ್ನು ಧರಿಸಿ ಪರೀಕ್ಷೆಗೆ ಆಗಮಿಸುವಂತಿಲ್ಲ. ಇದು ಹಿಜಾಬ್‌ ಸೇರಿ ಎಲ್ಲ ರೀತಿಯ ಧಾರ್ಮಿಕ ವಸ್ತ್ರಗಳಿಗೂ ಅನ್ವಯವಾಗುತ್ತದೆ ಎಂದರು.

ಹಿಜಾಬ್‌ ಕಾರಣಕ್ಕೆ ಪರೀಕ್ಷೆಗೆ ಗೈರಾದರೆ ಮತ್ತೆ ಪರೀಕ್ಷೆ ನೀಡಲಾಗುತ್ತದೆಯೇ ಎಂಬ ಪ್ರಶ್ನೆಗೆ ಉತ್ತರಿಸಿದ ನಾಗೇಶ್‌, ಗೈರು ಹಾಜರು ಎಂದರೆ ಗೈರು ಹಾಜರು ಅಷ್ಟೆ. ಅದರಲ್ಲಿ ಹಿಜಾಬ್‌ಗಾಗಿ ಗೈರು, ಮತ್ತೊಂದಕ್ಕೆ ಗೈರು ಎನ್ನುವಂತಿಲ್ಲ. ಸಾಮಾನ್ಯ ನಿಯಮಗಳ ಪ್ರಕಾರ, ಗೈರು ಹಾಜರಾದ ವಿದ್ಯಾರ್ಥಿಗಳು ಪುನಃ ಪರೀಕ್ಷೆ ತೆಗೆದುಕೊಳ್ಳಬೇಕು, ಇಲ್ಲಿಯೂ ಅದು ಅನ್ವಯವಾಗುತ್ತದೆ ಎಂದು ಸ್ಪಷ್ಟಪಡಿಸಿದರು.

ಹೆಚ್ಚಿನ ಓದಿಗಾಗಿ: CET 2022 | ಸಿಇಟಿ ಅರ್ಜಿ ಸಲ್ಲಿಕೆಗೆ ಹೊಸ ಲಿಂಕ್‌

ಪರೀಕ್ಷೆಗಳು ಸುಲಭವಾಗಿರಲಿವೆ

ಪರೀಕ್ಷೆಗಳ ಕುರಿತು ಮಾಹಿತಿ ನೀಡಿದ ನಾಗೇಶ್‌, ಈಗಾಗಲೆ ಘೋಷಣೆ ಆಗಿರುವಂತೆ ಏಪ್ರಿಲ್‌ 22ರಿಂದ ಮೇ 18ರವರೆಗೆ ವೇಳಾಪಟ್ಟಿಯ ಪ್ರಕಾರ ಪರೀಕ್ಷೆಗಳು ನಡೆಯುತ್ತವೆ. ಎಲ್ಲ ಪರೀಕ್ಷೆಗಳೂ ಬೆಳಗ್ಗೆ 10.15ರಿಂದ ಮದ್ಯಾಹ್ನ 1.30ರವೆಗೆ ನಡೆಯಲಿವೆ. ಪೂರ್ವಸಿದ್ಧತಾ ಪರೀಕ್ಷೆಗಳಲ್ಲಿ ಇದ್ದಂತೆಯೇ ಮುಖ್ಯ ಪರೀಕ್ಷೆಯಲ್ಲೂ ಅದೇ ಸ್ವರೂಪದಲ್ಲಿ ಪ್ರಶ್ನೆಪತ್ರಿಕೆ ಇರುತ್ತದೆ. ಎಸ್‌ಎಸ್‌ಎಲ್‌ಸಿಯಂತೆಯೇ ವಿದ್ಯಾರ್ಥಿ ಸ್ನೇಹಿಯಾಗಿ ಪ್ರಶ್ನೆಪತ್ರಿಕೆ ರೂಪಿಸಲಾಗಿದೆ. ವಿದ್ಯಾರ್ಥಿಗಳು ಯಾರೂ ಆತಂಕಕ್ಕೆ ಒಳಗಾಗುವ ಅಗತ್ಯವಿಲ್ಲ. ಪೋಷಕರೂ, ಮಕ್ಕಳನ್ನು ಭಯ ಪಡಿಸುವ ಬದಲಿಗೆ ಅವರ ಬೆನ್ನುತಟ್ಟಿ ಪ್ರೋತ್ಸಾಹಿಸಿ ಎಂದು ಕರೆ ನೀಡಿದರು.

ಅಂಕಿ ಅಂಶಗಳು

ಹೆಚ್ಚಿನ ಓದಿಗಾಗಿ: ಶಿಕ್ಷಣ ತಜ್ಞರೊಂದಿಗೆ ಚರ್ಚಿಸಿ ಎನ್.ಇ.ಪಿ ಜಾರಿ ಮಾಡಲಿ: ಗಣೇಶ್

Exit mobile version