Site icon Vistara News

Public Exam : 5,8,9ನೇ ತರಗತಿ ಪಬ್ಲಿಕ್‌ ಪರೀಕ್ಷೆ ಕಥೆಯೇನು?: ಇಂದು ಹೈಕೋರ್ಟ್‌ ತೀರ್ಪು

Public Exam Karnataka High Court

ಬೆಂಗಳೂರು: ರಾಜ್ಯದಲ್ಲಿ‌ ಮಾರ್ಚ್‌ 11ರಂದು ಆರಂಭವಾಗಿದ್ದು ಮಧ್ಯದಲ್ಲೇ ತಡೆಹಿಡಿಯಲ್ಪಟ್ಟ 5,8 ಮತ್ತು 9ನೇ ತರಗತಿ ಪಬ್ಲಿಕ್‌ ಪರೀಕ್ಷೆ (Public Exam) ಕುರಿತ ವಿವಾದಕ್ಕೆ ಸಂಬಂಧಿಸಿ ರಾಜ್ಯ ಹೈಕೋರ್ಟ್‌ ಇಂದು (ಮಾರ್ಚ್‌ 22)‌ ತನ್ನ ತೀರ್ಪನ್ನು ಪ್ರಕಟಿಸಲಿದೆ.

ಮಾರ್ಚ್‌ 13ರಂದು ಸುಪ್ರೀಂಕೋರ್ಟ್‌ (Stay from Supreme Court) ಈ ಪರೀಕ್ಷೆಗೆ ತಡೆಯಾಜ್ಞೆ ನೀಡಿ ಹೈಕೋರ್ಟ್‌ನಲ್ಲಿ (Karnataka High Court) ಮೇಲ್ಮನವಿ ಅರ್ಜಿಯ ವಿಚಾರಣೆ ನಡೆಸಿ ತೀರ್ಪು ನೀಡುವಂತೆ ಸೂಚಿಸಿತ್ತು. ಆದರೆ, ಹೈಕೋರ್ಟ್‌ನಲ್ಲಿ ಇನ್ನೂ ವಿವಾದ ಇತ್ಯರ್ಥವಾಗದೆ ಶಿಕ್ಷಣ ಸಂಸ್ಥೆಗಳು, ಮಕ್ಕಳು ಮತ್ತು ಪೋಷಕರು ಭಾರಿ ಆತಂಕಕ್ಕೆ ಒಳಗಾಗಿದ್ದರು. ಇದೀಗ ಹೈಕೋರ್ಟ್‌ ಮಾರ್ಚ್‌ 18ರಂದು ಕಾಯ್ದಿರಿಸಿದ್ದ ತೀರ್ಪನ್ನು ಶುಕ್ರವಾರ ಬೆಳಗ್ಗೆ 10.30ಕ್ಕೆ ಪ್ರಕಟಿಸಲಿದೆ ಎಂದು ತಿಳಿದುಬಂದಿದೆ.

ಕರ್ನಾಟಕ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ (Education Department) ನಡೆಸುತ್ತಿರುವ ಈ ಪರೀಕ್ಷೆ ಮಾರ್ಚ್‌ 11ರಂದು ಆರಂಭಗೊಂಡು ಮಾರ್ಚ್‌ 18ಕ್ಕೆ ಮುಗಿಯಬೇಕಾಗಿತ್ತು. ಮಾರ್ಚ್‌ 12ರಂದು ಸುಪ್ರೀಂಕೋರ್ಟ್‌ ತಡೆಯಾಜ್ಞೆ ನೀಡಿ ಹೈಕೋರ್ಟ್‌ಗೆ ಹೋಗುವಂತೆ ಸೂಚಿಸಿದಾಗ ಸರ್ಕಾರ ತಕ್ಷಣವೇ ಹೈಕೋರ್ಟ್‌ ಬಾಗಿಲು ತಟ್ಟುತ್ತದೆ ಎಂಬ ನಿರೀಕ್ಷೆ ಇತ್ತು. ಆದರೆ, ಈ ವಿಚಾರವನ್ನು ಹೇಗೆ ನಿಭಾಯಿಸಬೇಕು ಎಂದು ತಿಳಿಯದ ಶಿಕ್ಷಣ ಇಲಾಖೆ ಮತ್ತು ಅಧಿಕಾರಿಗಳು ಒಂದೆರಡು ದಿನ ತಡವಾಗಿ ಹೈಕೋರ್ಟ್‌ ಮೊರೆ ಹೊಕ್ಕಿದ್ದರು.

ಇದೀಗ ಹೈಕೋರ್ಟ್‌ನಲ್ಲಿ ಕಳೆದ ಕೆಲವು ದಿನಗಳಿಂದ ವಿಚಾರಣೆ ನಡೆಯುತ್ತಿದೆ. ಶಿಕ್ಷಣ ಇಲಾಖೆಗೆ ಪಬ್ಲಿಕ್‌ ಪರೀಕ್ಷೆ ನಡೆಸುವ ಅಧಿಕಾರವಿಲ್ಲ ಮತ್ತು ಅದು ಖಾಸಗಿ ಶಿಕ್ಷಣ ಸಂಸ್ಥೆಗಳಿಗೆ ಅನ್ವಯವಾಗುವುದಿಲ್ಲ ಎಂಬ ವಾದದೊಂದಿಗೆ ಖಾಸಗಿ ಶಾಲೆಗಳ ಸಂಘಟನೆ ರುಪ್ಸಾ ವಾದ ಮಂಡಿಸುತ್ತಿದೆ. ಈ ಬಗ್ಗೆ ಹೈಕೋರ್ಟ್‌ನಲ್ಲಿ ನಡೆದ ವಿಚಾರಣೆಯ ಸಂದರ್ಭ ಎರಡೂ ವಾದಗಳನ್ನು ಆಲಿಸಿದ ನ್ಯಾಯಮೂರ್ತಿ ಕೆ. ಸೋಮಶೇಖರ್‌, ನ್ಯಾಯಮೂರ್ತಿ ಕೆ. ರಾಜೇಶ್‌ ರೈ ಅವರನ್ನು ಒಳಗೊಂಡ ವಿಭಾಗೀಯ ಪೀಠ ತೀರ್ಪನ್ನು ಕಾಯ್ದಿರಿಸಿತ್ತು. ಇಂದು ಬೆಳಗ್ಗೆ 10.30ಕ್ಕೆ ಪ್ರಕಟವಾಗಲಿರುವ ತೀರ್ಪಿನ ಮೇಲೆ ಎಲ್ಲರ ಕಣ್ಣು ನೆಟ್ಟಿದೆ.

ಇದನ್ನು ಓದಿ : ವಿಸ್ತಾರ ಸಂಪಾದಕೀಯ: ನನೆಗುದಿಗೆ ಬಿದ್ದ ಪಬ್ಲಿಕ್‌ ಪರೀಕ್ಷೆಗೆ ಮೋಕ್ಷ ಕೊಡಿ, ವಿದ್ಯಾರ್ಥಿಗಳ ಸಂಕಟ ತಪ್ಪಿಸಿ

ಏನಿದು ಪಬ್ಲಿಕ್‌ ಪರೀಕ್ಷೆ ಮತ್ತು ಕಾನೂನು ಹೋರಾಟ?

ಹಂತ 1 : ಕರ್ನಾಟಕ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ (Education department) ಮತ್ತು ಸರ್ಕಾರ ಜಂಟಿಯಾಗಿ 5,8,9 ಮತ್ತು 11ನೇ ತರಗತಿಗೆ ಈ ಬಾರಿ ಪಬ್ಲಿಕ್‌ ಪರೀಕ್ಷೆ ನಡೆಸಲು 2023ರ ಡಿಸೆಂಬರ್‌ನಲ್ಲಿ ಸುತ್ತೋಲೆ ಹೊರಡಿಸಿದ್ದವು.

ಹಂತ 2 : ರಾಜ್ಯ ಸರ್ಕಾರ ಹೊರಡಿಸಿದ್ದ ಸುತ್ತೋಲೆಗಳನ್ನು ಪ್ರಶ್ನಿಸಿ ಕರ್ನಾಟಕ ನೋಂದಾಯಿತ ಅನುದಾನರಹಿತ ಖಾಸಗಿ ಶಾಲೆಗಳ ಸಂಘ (ರುಪ್ಸಾ) ಸಂಘಟನೆ ಕೋರ್ಟ್ ಮೆಟ್ಟಲೇರಿತ್ತು.

ಹಂತ 3 : ಖಾಸಗಿ ಶಾಲೆಗಳ ಸಂಘಟನೆಯ ವಾದವನ್ನು ಆಲಿಸಿದ ಹೈಕೋರ್ಟ್‌ನ ಏಕಸದಸ್ಯ ಪೀಠ 2024ರ ಮಾರ್ಚ್‌ 5ರಂದು ಸರ್ಕಾರ ಸುತ್ತೋಲೆ ರದ್ದುಗೊಳಿಸಿ ಆದೇಶಿಸಿತ್ತು. ಅಂದರೆ ಪಬ್ಲಿಕ್‌ ಪರೀಕ್ಷೆ ನಡೆಸದಂತೆ ಸೂಚನೆ ನೀಡಿತ್ತು.

ಹಂತ 4 : ಪಬ್ಲಿಕ್‌ ಪರೀಕ್ಷೆಗೆ ತಡೆ ನೀಡಿದ ಏಕ ಸದಸ್ಯ ಪೀಠದ ಆದೇಶ ಪ್ರಶ್ನಿಸಿ ರಾಜ್ಯ ಸರ್ಕಾರ ಮತ್ತು ಶಿಕ್ಷಣ ಇಲಾಖೆ ಹೈಕೋರ್ಟ್‌ನ ವಿಭಾಗೀಯ ಪೀಠಕ್ಕೆ ಮೇಲ್ಮನವಿ ಸಲ್ಲಿಸಿತು. ಮಾರ್ಚ್‌ 7ರಂದು ಮೇಲ್ಮನವಿಯ ವಿಚಾರಣೆ ನಡೆಸಿದ ವಿಭಾಗೀಯ ಪೀಠವು ಏಕಸದಸ್ಯ ಪೀಠವು ವಿಧಿಸಿದ್ದ ತಡೆಯಾಜ್ಞೆಯನ್ನು ತೆರವುಗೊಳಿಸಿತು. ಅಂದರೆ ಮಾರ್ಚ್‌ 11ರಂದು ಆರಂಭವಾಗುವ 5,8,9ನೇ ತರಗತಿಯ ಪರೀಕ್ಷೆಗಳು ಯಥಾವತ್ತಾಗಿ ನಡೆಯಲಿದೆ ಎಂದು ತಿಳಿಸಲಾಗಿತ್ತು.

ಹಂತ 5: 11ನೇ ತರಗತಿ ಪರೀಕ್ಷೆಗಳು ಆಗಲೇ ನಡೆದು ಮುಕ್ತಾಯವಾಗಿವೆ. 5,8,9ನೇ ತರಗತಿ ಪರೀಕ್ಷೆಗಳು ಮಾರ್ಚ್‌ 11ರಂದು ಆರಂಭವಾಗಿದ್ದವು.

ಹಂತ 6: ಖಾಸಗಿ ಶಿಕ್ಷಣ ಸಂಸ್ಥೆಗಳು ಯಥಾವತ್ತಾಗಿ ಪರೀಕ್ಷೆ ನಡೆಸಲು ಅವಕಾಶ ನೀಡಿದ ಹೈಕೋರ್ಟ್‌ ಆದೇಶವನ್ನು ಪ್ರಶ್ನಿಸಿ ಸುಪ್ರೀಂಕೋರ್ಟ್‌ ಮೆಟ್ಟಿಲು ಹತ್ತಿವೆ. ಅರ್ಜಿಯನ್ನು ತುರ್ತು ವಿಚಾರಣೆಗೆ ಪರಿಗಣಿಸಿದ ಸುಪ್ರೀಂಕೋರ್ಟ್‌ ಮಂಗಳವಾರ (ಮಾರ್ಚ್‌ 12) ಪರೀಕ್ಷೆಗಳಿಗೆ ತಡೆಯಾಜ್ಞೆ ನೀಡಿತು. ಮತ್ತು ಶಿಕ್ಷಣ ಇಲಾಖೆ ಕೂಡಾ ಎಲ್ಲಾ ಪರೀಕ್ಷೆಯನ್ನು ಮುಂದೂಡಿ ಆದೇಶ ಹೊರಡಿಸಿತು.

ಹಂತ 7: ಒಂದು ಕಡೆ ಸುಪ್ರೀಂಕೋರ್ಟ್‌ ಪರೀಕ್ಷೆಗೆ ತಡೆಯಾಜ್ಞೆ ನೀಡಿದ ಬೆನ್ನಿಗೇ, ಬೋರ್ಡ್‌ ಪರೀಕ್ಷೆಯನ್ನು ರದ್ದುಪಡಿಸಬೇಕು ಎಂದು ಕೋರಿ ರುಪ್ಸಾ ಬೆಂಬಲಿತ ಕೆಲವು ಪೋಷಕರು ಸಲ್ಲಿಸಿದ್ದ ಮೇಲ್ಮನವಿಯನ್ನು ವಿಸ್ತೃತ ಪೀಠಕ್ಕೆ ವರ್ಗಾಯಿಸಬೇಕು ಎಂಬ ಮನವಿಯನ್ನು ಹೈಕೋರ್ಟ್‌ ತಿರಸ್ಕರಿಸಿತು. ಆದರೆ, ಒಟ್ಟಾರೆ ಪ್ರಕರಣದ ವಿಚಾರಣೆಯನ್ನು ಮುಂದುವರಿಸಿತು. ಇದು‌ ಮಾರ್ಚ್‌ 14ರಂದು ನಡೆದಿತ್ತು.

ಹಂತ 8 : ಬೋರ್ಡ್ ಮಟ್ಟದ ಪರೀಕ್ಷೆಗಳನ್ನು ನಡೆಸುವುದಕ್ಕೆ ಅವಕಾಶ ಕಲ್ಪಿಸಬೇಕು ಮತ್ತು ಅವಕಾಶ ಕಲ್ಪಿಸಬಾರದು ಎಂದು ಕೋರಿ ಎರಡು ಪ್ರತ್ಯೇಕ ಮಧ್ಯಂತರ ಅರ್ಜಿಗಳ ವಿಚಾರಣೆಯನ್ನು ಹೈಕೋರ್ಟ್‌ ಪೀಠ ನಡೆಸಿತು.

ಹಂತ 9 : ಹೈಕೋರ್ಟ್‌ನ ವಿಭಾಗೀಯ ಪೀಠವು ಮಾರ್ಚ್‌ 18ರಂದು ವಿಚಾರಣೆಯನ್ನು ಪೂರ್ಣಗೊಳಿಸಿದ್ದು, ತೀರ್ಪನ್ನು ಕಾಯ್ದಿರಿಸಿತ್ತು.

Exit mobile version