ಬೆಂಗಳೂರು: ರಾಜ್ಯ ಸರ್ಕಾರದ ಶಿಕ್ಷಣ ಇಲಾಖೆ ನಡೆಸುತ್ತಿರುವ 5,8 ಮತ್ತು 9ನೇ ತರಗತಿ ಪಬ್ಲಿಕ್ ಪರೀಕ್ಷೆಗೆ (Public Exam) ಮತ್ತೆ ಕಂಟಕ ಎದುರಾಗುವ ಅಪಾಯ ಕಂಡುಬಂದಿದೆ. ಹಲವು ಸುತ್ತಿನ ಕಾನೂನು ಸಮರದ ಬಳಿಕ ಪಬ್ಲಿಕ್ ಪರೀಕ್ಷೆ ಮುಂದುವರಿಸಲು ರಾಜ್ಯ ಹೈಕೋರ್ಟ್ (Karnataka High Court) ಶುಕ್ರವಾರ ಬೆಳಗ್ಗೆ ಗ್ರೀನ್ ಸಿಗ್ನಲ್ (Karnataka High Court Green Signal) ನೀಡಿತ್ತು. ಇದೀಗ ಖಾಸಗಿ ಶಿಕ್ಷಣ ಸಂಸ್ಥೆಗಳ ಒಕ್ಕೂಟ ರುಪ್ಸಾ ಇದನ್ನು ಪ್ರಶ್ನಿಸಿ ಮತ್ತೆ ಸುಪ್ರೀಂಕೋರ್ಟ್ ಮೊರೆ ಹೋಗಲು ನಿರ್ಧರಿಸಿದೆ. ಕಳೆದ ಬಾರಿ ವಿಚಾರಣೆ ನಡೆದಾಗ ಪರೀಕ್ಷೆಗೆ ತಡೆಯಾಜ್ಞೆ ನೀಡಿದ್ದ ಸುಪ್ರೀಂಕೋರ್ಟ್ ಏನು ಮಾಡಲಿದೆ ಎನ್ನುವುದರ ಆಧಾರದಲ್ಲಿ ಪರೀಕ್ಷೆ ಭವಿಷ್ಯ ನಿಂತಿದೆ.
ಶುಕ್ರವಾರ ಬೆಳಗ್ಗೆಯಷ್ಟೇ ಪಬ್ಲಿಕ್ ಪರೀಕ್ಷೆ ನಡೆಸುವ ಶಿಕ್ಷಣ ಇಲಾಖೆಯ (Education Department) ಸುತ್ತೋಲೆಯನ್ನು ರದ್ದುಗೊಳಿಸಿದ್ದ ವಿಭಾಗೀಯ ಪೀಠದ ಆದೇಶವನ್ನು ನ್ಯಾ. ಸೋಮಶೇಖರ್ ಹಾಗೂ ನ್ಯಾ.ರಾಜೇಶ್ ರೈ ಅವರನ್ನು ಒಳಗೊಂಡ ಹೈಕೋರ್ಟ್ ವಿಭಾಗೀಯ ಪೀಠ ತಡೆ ಹಿಡಿದು ಬೋರ್ಡ್ ಎಕ್ಸಾಂಗೆ ಅಸ್ತು ಎಂದಿತ್ತು. ಸೋಮವಾರದಿಂದ ಪರೀಕ್ಷೆ ಮರು ಆರಂಭಕ್ಕೆ ಕ್ರಮ ತೆಗೆದುಕೊಳ್ಳುವುದಾಗಿ ಸರ್ಕಾರ ಕೋರ್ಟ್‌ಗೆ ಹೇಳಿತ್ತು.
5, 8 ಮತ್ತು 9ನೇ ತರಗತಿಯ ಉಳಿದ ಪರೀಕ್ಷೆಗಳನ್ನು ಸೋಮವಾರದಿಂದಲೇ ನಡೆಸುವ ಬಗ್ಗೆ ಕೋರ್ಟ್ ಗೆ ಸರ್ಕಾರ ಮಾಹಿತಿ ನೀಡಿದೆ. ಈಗಾಗಲೇ ಐದನೇ ತರಗತಿ ನಾಲ್ಕು ವಿಷಯಗಳ ಪರೀಕ್ಷೆ ಮುಗಿದಿವೆ. 8 ಹಾಗೂ 9 ತಗರತಿಗಳ ಎರಡೆರಡು ವಿಷಯಗಳ ಪರೀಕ್ಷೆ ನಡೆದಿವೆ. 11ನೇ ತರಗತಿ ಎಲ್ಲಾ ವಿಷಯಗಳ ಪರೀಕ್ಷೆ ಮುಕ್ತಾಯವಾಗಿದೆ.
ಸುಪ್ರೀಂಕೋರ್ಟ್ ಮೊರೆ ಹೋಗಲು ರುಪ್ಸಾ ನಿರ್ಧಾರ
ಈ ನಡುವೆ, ಹೈಕೋರ್ಟ್ ವಿಭಾಗೀಯ ಪೀಠದ ಆದೇಶದ ವಿರುದ್ಧ ಸುಪ್ರೀಮ್ ಕೋರ್ಟ್ ಮೆಟ್ಟಿಲೇರಲು ಮಾನ್ಯತೆ ಪಡೆದ ಅನುದಾನರಹಿತ ಖಾಸಗಿ ಶಾಲೆಗಳ (RUPSA) ನಿರ್ಧರಿಸಿದೆ.
ಹೈಕೋರ್ಟ್ ವಿಭಾಗೀಯ ಪೀಠದ ಆದೇಶವನ್ನು ನಾವು ಗೌರವಿಸುತ್ತೇವೆ. ಆದರೆ ತೃಪ್ತಿ ತಂದಿಲ್ಲ. ಎಂದು ಹೇಳಿರುವ RUPSA ಅಧ್ಯಕ್ಷ ಲೋಕೇಶ್ ತಾಳಿಕಟ್ಟಿ ಅವರು, ಈ ಬಾರಿ ನಡೆಯುತ್ತಿರುವ ಬೋರ್ಡ್ ಪರೀಕ್ಷೆಗಳನ್ನ ಮುಗಿಸಿ, ಮುಂದಿನ ವರ್ಷದಿಂದ ಸೂಕ್ತ ತೀರ್ಮಾನ ತೆಗೆದುಕೊಳ್ಳಿ ಎಂದು ವಿಭಾಗೀಯ ಪೀಠ ಹೇಳಿದೆ. ಆದರೆ ಈ ಬಾರಿ ಬೋರ್ಡ್ ಪರೀಕ್ಷೆ ಬರೆಯುತ್ತಿರುವ ವಿದ್ಯಾರ್ಥಿಗಳಿಗೆ ಅನ್ಯಾಯ ಆಗುತ್ತಿದೆ. ಹೀಗಾಗಿ ನಾವು ಸುಪ್ರೀಮ್ ಕೋರ್ಟ್ ಮೆಟ್ಟಿಲೇರಲು ನಿರ್ಧಾರ ಮಾಡಿದ್ದೇವೆ. ಸಾಕಷ್ಟು ಮಂದಿ ಪೋಷಕರು ಸಹ ಈ ಬಗ್ಗೆ ನಮಗೆ ಒತ್ತಾಯ ಮಾಡಿದ್ದಾರೆ ಎಂದು ಹೇಳಿದರು.
ಸುಪ್ರೀಂಕೋರ್ಟ್ ಏನು ಮಾಡಬಹುದು?
ರುಪ್ಸಾ ಈ ಹಿಂದೆ ಸುಪ್ರೀಂಕೋರ್ಟ್ ಮೆಟ್ಟಿಲು ಹತ್ತಿದಾಗ ತಕ್ಷಣಕ್ಕೆ ತಡೆಯಾಜ್ಞೆ ಸಿಕ್ಕಿತ್ತು. ಆದರೆ, ಹೈಕೋರ್ಟ್‌ನಲ್ಲೇ ಮುಂದಿನ ವಿಚಾರಣೆ ನಡೆಯಬೇಕು ಎಂದು ಸೂಚಿಸಿತ್ತು. ಈಗ ಹೈಕೋರ್ಟ್‌ನ ತೀರ್ಮಾನವನ್ನು ಮತ್ತೆ ಪ್ರಶ್ನಿಸಿದಾಗ ಸುಪ್ರೀಂಕೋರ್ಟ್ ಏನು ಮಾಡುತ್ತದೆ ಎಂದು ಕಾದು ನೋಡಬೇಕಾಗಿದೆ.
ಇದನ್ನೂ ಓದಿ : Public Exam : 5,8, 9ನೇ ತರಗತಿ ಪಬ್ಲಿಕ್ ಪರೀಕ್ಷೆಗೆ ಹೈಕೋರ್ಟ್ ಗ್ರೀನ್ ಸಿಗ್ನಲ್; ಸೋಮವಾರದಿಂದ ಎಕ್ಸಾಂ
ಇದನ್ನು ಓದಿ : ವಿಸ್ತಾರ ಸಂಪಾದಕೀಯ: ನನೆಗುದಿಗೆ ಬಿದ್ದ ಪಬ್ಲಿಕ್ ಪರೀಕ್ಷೆಗೆ ಮೋಕ್ಷ ಕೊಡಿ, ವಿದ್ಯಾರ್ಥಿಗಳ ಸಂಕಟ ತಪ್ಪಿಸಿ
ಏನಿದು ಪಬ್ಲಿಕ್ ಪರೀಕ್ಷೆ ಮತ್ತು ಕಾನೂನು ಹೋರಾಟ?
ಹಂತ 1 : ಕರ್ನಾಟಕ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ (Education department) ಮತ್ತು ಸರ್ಕಾರ ಜಂಟಿಯಾಗಿ 5,8,9 ಮತ್ತು 11ನೇ ತರಗತಿಗೆ ಈ ಬಾರಿ ಪಬ್ಲಿಕ್ ಪರೀಕ್ಷೆ ನಡೆಸಲು 2023ರ ಡಿಸೆಂಬರ್‌ನಲ್ಲಿ ಸುತ್ತೋಲೆ ಹೊರಡಿಸಿದ್ದವು.
ಹಂತ 2 : ರಾಜ್ಯ ಸರ್ಕಾರ ಹೊರಡಿಸಿದ್ದ ಸುತ್ತೋಲೆಗಳನ್ನು ಪ್ರಶ್ನಿಸಿ ಕರ್ನಾಟಕ ನೋಂದಾಯಿತ ಅನುದಾನರಹಿತ ಖಾಸಗಿ ಶಾಲೆಗಳ ಸಂಘ (ರುಪ್ಸಾ) ಸಂಘಟನೆ ಕೋರ್ಟ್ ಮೆಟ್ಟಲೇರಿತ್ತು.
ಹಂತ 3 : ಖಾಸಗಿ ಶಾಲೆಗಳ ಸಂಘಟನೆಯ ವಾದವನ್ನು ಆಲಿಸಿದ ಹೈಕೋರ್ಟ್‌ನ ಏಕಸದಸ್ಯ ಪೀಠ 2024ರ ಮಾರ್ಚ್ 5ರಂದು ಸರ್ಕಾರ ಸುತ್ತೋಲೆ ರದ್ದುಗೊಳಿಸಿ ಆದೇಶಿಸಿತ್ತು. ಅಂದರೆ ಪಬ್ಲಿಕ್ ಪರೀಕ್ಷೆ ನಡೆಸದಂತೆ ಸೂಚನೆ ನೀಡಿತ್ತು.
ಹಂತ 4 : ಪಬ್ಲಿಕ್ ಪರೀಕ್ಷೆಗೆ ತಡೆ ನೀಡಿದ ಏಕ ಸದಸ್ಯ ಪೀಠದ ಆದೇಶ ಪ್ರಶ್ನಿಸಿ ರಾಜ್ಯ ಸರ್ಕಾರ ಮತ್ತು ಶಿಕ್ಷಣ ಇಲಾಖೆ ಹೈಕೋರ್ಟ್‌ನ ವಿಭಾಗೀಯ ಪೀಠಕ್ಕೆ ಮೇಲ್ಮನವಿ ಸಲ್ಲಿಸಿತು. ಮಾರ್ಚ್ 7ರಂದು ಮೇಲ್ಮನವಿಯ ವಿಚಾರಣೆ ನಡೆಸಿದ ವಿಭಾಗೀಯ ಪೀಠವು ಏಕಸದಸ್ಯ ಪೀಠವು ವಿಧಿಸಿದ್ದ ತಡೆಯಾಜ್ಞೆಯನ್ನು ತೆರವುಗೊಳಿಸಿತು. ಅಂದರೆ ಮಾರ್ಚ್ 11ರಂದು ಆರಂಭವಾಗುವ 5,8,9ನೇ ತರಗತಿಯ ಪರೀಕ್ಷೆಗಳು ಯಥಾವತ್ತಾಗಿ ನಡೆಯಲಿದೆ ಎಂದು ತಿಳಿಸಲಾಗಿತ್ತು.
ಹಂತ 5: 11ನೇ ತರಗತಿ ಪರೀಕ್ಷೆಗಳು ಆಗಲೇ ನಡೆದು ಮುಕ್ತಾಯವಾಗಿವೆ. 5,8,9ನೇ ತರಗತಿ ಪರೀಕ್ಷೆಗಳು ಮಾರ್ಚ್ 11ರಂದು ಆರಂಭವಾಗಿದ್ದವು.
ಹಂತ 6: ಖಾಸಗಿ ಶಿಕ್ಷಣ ಸಂಸ್ಥೆಗಳು ಯಥಾವತ್ತಾಗಿ ಪರೀಕ್ಷೆ ನಡೆಸಲು ಅವಕಾಶ ನೀಡಿದ ಹೈಕೋರ್ಟ್ ಆದೇಶವನ್ನು ಪ್ರಶ್ನಿಸಿ ಸುಪ್ರೀಂಕೋರ್ಟ್ ಮೆಟ್ಟಿಲು ಹತ್ತಿವೆ. ಅರ್ಜಿಯನ್ನು ತುರ್ತು ವಿಚಾರಣೆಗೆ ಪರಿಗಣಿಸಿದ ಸುಪ್ರೀಂಕೋರ್ಟ್ ಮಂಗಳವಾರ (ಮಾರ್ಚ್ 12) ಪರೀಕ್ಷೆಗಳಿಗೆ ತಡೆಯಾಜ್ಞೆ ನೀಡಿತು. ಮತ್ತು ಶಿಕ್ಷಣ ಇಲಾಖೆ ಕೂಡಾ ಎಲ್ಲಾ ಪರೀಕ್ಷೆಯನ್ನು ಮುಂದೂಡಿ ಆದೇಶ ಹೊರಡಿಸಿತು.
ಹಂತ 7: ಒಂದು ಕಡೆ ಸುಪ್ರೀಂಕೋರ್ಟ್ ಪರೀಕ್ಷೆಗೆ ತಡೆಯಾಜ್ಞೆ ನೀಡಿದ ಬೆನ್ನಿಗೇ, ಬೋರ್ಡ್ ಪರೀಕ್ಷೆಯನ್ನು ರದ್ದುಪಡಿಸಬೇಕು ಎಂದು ಕೋರಿ ರುಪ್ಸಾ ಬೆಂಬಲಿತ ಕೆಲವು ಪೋಷಕರು ಸಲ್ಲಿಸಿದ್ದ ಮೇಲ್ಮನವಿಯನ್ನು ವಿಸ್ತೃತ ಪೀಠಕ್ಕೆ ವರ್ಗಾಯಿಸಬೇಕು ಎಂಬ ಮನವಿಯನ್ನು ಹೈಕೋರ್ಟ್ ತಿರಸ್ಕರಿಸಿತು. ಆದರೆ, ಒಟ್ಟಾರೆ ಪ್ರಕರಣದ ವಿಚಾರಣೆಯನ್ನು ಮುಂದುವರಿಸಿತು. ಇದು ಮಾರ್ಚ್ 14ರಂದು ನಡೆದಿತ್ತು.
ಹಂತ 8 : ಬೋರ್ಡ್ ಮಟ್ಟದ ಪರೀಕ್ಷೆಗಳನ್ನು ನಡೆಸುವುದಕ್ಕೆ ಅವಕಾಶ ಕಲ್ಪಿಸಬೇಕು ಮತ್ತು ಅವಕಾಶ ಕಲ್ಪಿಸಬಾರದು ಎಂದು ಕೋರಿ ಎರಡು ಪ್ರತ್ಯೇಕ ಮಧ್ಯಂತರ ಅರ್ಜಿಗಳ ವಿಚಾರಣೆಯನ್ನು ಹೈಕೋರ್ಟ್ ಪೀಠ ನಡೆಸಿತು.
ಹಂತ 9 : ಹೈಕೋರ್ಟ್‌ನ ವಿಭಾಗೀಯ ಪೀಠವು ಮಾರ್ಚ್ 18ರಂದು ವಿಚಾರಣೆಯನ್ನು ಪೂರ್ಣಗೊಳಿಸಿದ್ದು, ತೀರ್ಪನ್ನು ಕಾಯ್ದಿರಿಸಿತ್ತು.
ಹಂತ 10: ಶಿಕ್ಷಣ ಇಲಾಖೆ ನಿಗದಿಪಡಿಸಿದಂತೆ ಬೋರ್ಡ್ ಎಕ್ಸಾಂ ನಡೆಸಲು ಮಾರ್ಚ್ 22ರಂದು ಹೈಕೋರ್ಟ್ ಗ್ರೀನ್ ಸಿಗ್ನಲ್ ನೀಡಿದೆ. ಸೋಮವಾರ (ಮಾರ್ಚ್ 25ರಿಂದ) ಪರೀಕ್ಷೆ ಮರು ಆರಂಭವಾಗಲಿದೆ.
ಹಂತ 11 : ಹೈಕೋರ್ಟ್‌ನ ವಿಭಾಗೀಯ ಪೀಠವು ಬೋರ್ಡ್ ಪರೀಕ್ಷೆಗೆ ಅವಕಾಶ ನೀಡಿರುವುದನ್ನು ಪ್ರಶ್ನಿಸಿ ಸುಪ್ರೀಂಕೋರ್ಟ್‌ಗೆ ಮೇಲ್ಮನವಿ ಸಲ್ಲಿಸಲು ರುಪ್ಸಾ ನಿರ್ಧರಿಸಿದೆ.