Site icon Vistara News

Residential Schools: ಜ್ಞಾನ ದೇಗುಲವಿದು ಧೈರ್ಯವಾಗಿ ಪ್ರಶ್ನಿಸಿ! ಇದು ಸರ್ಕಾರದ ಟೆಲಿಗ್ರಾಂ ಆದೇಶ?

Jnana Degula Education News Telegram order

ಬೆಂಗಳೂರು: ರಾಜ್ಯದ ಎಲ್ಲ ವಸತಿ ಶಾಲೆಗಳ (Residential Schools) ಪ್ರವೇಶ ದ್ವಾರದಲ್ಲಿ ಇದ್ದ ಘೋಷ ವಾಕ್ಯವನ್ನು ಬದಲಾಯಿಸಿರುವ ಸಮಾಜ ಕಲ್ಯಾಣ ಇಲಾಖೆ (Department of Social Welfare) ಕ್ರಮಕ್ಕೆ ರಾಜ್ಯಾದ್ಯಂತ ವ್ಯಾಪಕ ಟೀಕೆಗಳು ವ್ಯಕ್ತವಾಗುತ್ತಿವೆ. ಆದರೆ, ಈ ಬಗ್ಗೆ ಸರ್ಕಾರ ಅಧಿಕೃತ ಆದೇಶವನ್ನೇ ಹೊರಡಿಸಿಲ್ಲವೇ? ಎಂಬ ಪ್ರಶ್ನೆ ಈಗ ಕಾಡುತ್ತಿದೆ. ಈ ಸಂಬಂಧ ಟೆಲಿಗ್ರಾಂಗಳಲ್ಲಿ ಮಾತ್ರ ಆಯಾ ಜಿಲ್ಲೆಗಳ ಸಮಾಜ ಕಲ್ಯಾಣ ಅಧಿಕಾರಿಗಳು ಸೂಚಿಸುತ್ತಿರುವುದು ಬೆಳಕಿಗೆ ಬರುತ್ತಿದೆ. ಈ ಹಿನ್ನೆಲೆಯಲ್ಲಿ ಕೆಲವು ಶಾಲೆಯ ಮುಖ್ಯಸ್ಥರು, ಈ ಬಗ್ಗೆ ಅಧಿಕೃತ ಆದೇಶವನ್ನಾದರೂ ಕೊಡಿ ಎಂದು ಚಾಟ್‌ ಮೂಲಕ ಕೇಳಿರುವುದು ಗೊತ್ತಾಗಿದೆ. ಆದರೆ, ಈ ಬಗ್ಗೆ ಸಚಿವ ಡಾ. ಎಚ್‌.ಸಿ. ಮಹದೇವಪ್ಪ, ಇಲಾಖೆಯ ಕ್ರಮವನ್ನು ಸಮರ್ಥನೆ ಮಾಡಿಕೊಂಡಿದ್ದಾರೆ. ಹೀಗಾಗಿ ಅಧಿಕೃತ ಆದೇಶ ಆಗಿದೆಯೋ ಇಲ್ಲವೋ ಎಂಬುದು ಮಾತ್ರ ಇನ್ನೂ ಗೊತ್ತಾಗಿಲ್ಲ.

ಅಧಿಕೃತ ಆದೇಶವನ್ನು ಮಾಡದೆ ಕೇವಲ ಟೆಲಿಗ್ರಾಂ ಗ್ರೂಪ್‌ಗಳಲ್ಲಿ ಮಾತ್ರ ಈ ಬಗ್ಗೆ ಆದೇಶವನ್ನು ಮಾಡಲಾಗಿದೆಯೇ? ಅಲ್ಲಿ ಮಾಡಿರುವ ಕಟ್ಟುನಿಟ್ಟಿನ ಸೂಚನೆಯಿಂದಾಗಿ ಹಲವು ಕಡೆ ಬದಲಾವಣೆ ಮಾಡಲಾಗಿದೆ ಎಂದು ಹೇಳಲಾಗಿದೆ. ಆದರೆ, ಹೆಚ್ಚಿನ ಕಡೆ ತುರ್ತಾಗಿ ಹಾಕಬೇಕಾದ್ದರಿಂದ ಬಣ್ಣ ಹೊಡಿಸಲು ಆಗದೆ, ಪೇಪರ್‌ಗಳಲ್ಲಿ ಹಾಕಲಾಗಿತ್ತು. ಈ ಕಾರಣದಿಂದ ವ್ಯಾಪಕ ಟೀಕೆಗಳು ವ್ಯಕ್ತವಾಗುತ್ತಿದ್ದಂತೆ ಪೇಪರ್‌ಗಳಲ್ಲಿ ಹಾಕಲಾಗಿರುವ ಘೋಷವಾಕ್ಯವನ್ನು ಬದಲಾವಣೆ ಮಾಡಲಾಗಿದೆ.

ಅನುಮಾನ ಹುಟ್ಟುಹಾಕುವ ಟೆಲಿಗ್ರಾಂ ಚಾಟ್‌

ಈ ಮೊದಲಿದ್ದು ಇದ್ದ “ಜ್ಞಾನ ದೇಗುಲವಿದು ಕೈ ಮುಗಿದು ಒಳಗೆ ಬಾ” ಎಂಬ ಕುವೆಂಪು ವಿರಚಿತ ಸಾಲುಗಳನ್ನು ಬದಲಾಯಿಸಿ, “ಜ್ಞಾನ ದೇಗುಲವಿದು ಧೈರ್ಯವಾಗಿ ಪ್ರಶ್ನಿಸಿ” ಎಂಬ ಸಾಲನ್ನು ವಸತಿ ಶಾಲೆಗಳ ಪ್ರವೇಶದ್ವಾರದಲ್ಲಿ ಹಾಕುವ ಬಗ್ಗೆ ಸರ್ಕಾರದಿಂದ ಅಧಿಕೃತ ಆದೇಶ ಹೊರಬಿದ್ದಿಲ್ಲ ಎಂಬ ಸಂಗತಿ ಸಮಾಜ ಕಲ್ಯಾಣ ಇಲಾಖೆಯ ಟೆಲಿಗ್ರಾಂ ಚಾಟ್‌ ಮೂಲಕ ಗೊತ್ತಾಗಿದೆ.

ಟೆಲಿಗ್ರಾಂ ಸಂಭಾಷಣೆಯಲ್ಲಿ ಏನಿದೆ?

ಸಮಾಜ ಕಲ್ಯಾಣ ಇಲಾಖೆಯ ಹಿರಿಯ ಅಧಿಕಾರಿಯೊಬ್ಬರು ಗೋಡೆ ಬರಹ ಬದಲಾವಣೆಗೆ ಟೆಲಿಗ್ರಾಂನಲ್ಲಿ ಸೂಚಿಸುತ್ತಾರೆ. ಆದರೆ, ಈ ಬಗ್ಗೆ ಅಧಿಕೃತ ಸುತ್ತೂಲೆ ನೀಡುವಂತೆ ಆಯಾ ವಸತಿ ಶಾಲೆಯ ಕೆಲವು ಮುಖ್ಯಸ್ಥರು ಮನವಿ ಮಾಡಿದ್ದಾರೆ. ಕನ್ನಡ ನಾಮಫಲ ಕಡ್ಡಾಯ ಸಂಬಂಧ ಕಳೆದ ಮೂರ್ನಾಲ್ಕು ತಿಂಗಳು ಹಿಂದೆ ಆಗಿದ್ದ ವಿವಾದ ಆಗಿತ್ತು. ಹೀಗಾಗಿ ಈ ಬಗ್ಗೆ ಅಧಿಕೃತ ಸಂದೇಶ ಇದ್ದರೆ ಒಳ್ಳೆಯದು. ಅಥವಾ ಈ ರೀತಿಯಾಗಿ ಬದಲಾವಣೆ ಮಾಡುವುದರಿಂದ ಯಾವುದೇ ತಪ್ಪಿಲ್ಲ ಎಂದಾದರೂ ಒಂದು ಆದೇಶವನ್ನು ಹೊರಡಿಸಿ ಎಂದು ಕೇಳಿಕೊಂಡಿದ್ದರು. ಇದರರ್ಥ ಸರ್ಕಾರದಿಂದ ಯಾವುದೇ ರೀತಿಯಾದಂತಹ ಅಧಿಕೃತ ಆದೇಶ ಹೊರಬಿದ್ದಿಲ್ಲ.

ಐಎಎಸ್‌ ಅಧಿಕಾರಿ ಮಣಿವಣ್ಣನ್‌ ಟಲಿಗ್ರಾಂ ಸಂದೇಶ

ಈ ಬಗ್ಗೆ ಸಮಾಜ ಕಲ್ಯಾಣ ಇಲಾಖೆಯ ಮುಖ್ಯ ಕಾರ್ಯದರ್ಶಿಯಾಗಿರುವ ಐಎಎಸ್‌ ಅಧಿಕಾರಿ ಕೆ. ಮಣಿವಣ್ಣನ್‌ ಟಲಿಗ್ರಾಂ ಸಂದೇಶ ನೀಡಿದ್ದಾರೆ ಎಂಬ ಬಗ್ಗೆ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಅವರು ಮಾಡಿರುವ ಟ್ವೀಟ್‌ನಲ್ಲಿ ಗೊತ್ತಾಗುತ್ತದೆ. ಅಲ್ಲಿ ಅವರು “ಜ್ಞಾನ ದೇಗುಲವಿದು ಧೈರ್ಯವಾಗಿ ಪ್ರಶ್ನಿಸಿ” ಎಂಬ ಸಾಲು ಅಂತಿಮವಾಗಿದೆ. ಇದನ್ನೇ ಎಲ್ಲರೂ ಬಳಕೆ ಮಾಡಿ ಎಂದು ಹೇಳಿರುವ ಬಗ್ಗೆ ಚಾಟ್‌ನಲ್ಲಿ ಉಲ್ಲೇಖಿಸಲಾಗಿದೆ.

ದಯವಿಟ್ಟು ಕಾಂಟ್ರವರ್ಸಿ ಮಾಡಬೇಡಿ: ಎಚ್.ಸಿ. ಮಹದೇವಪ್ಪ

ಈ ಬಗ್ಗೆ ಸಮಾಜ ಕಲ್ಯಾಣ ಇಲಾಖೆ ಸಚಿವ ಡಾ. ಎಚ್.ಸಿ. ಮಹದೇವಪ್ಪ ಪ್ರತಿಕ್ರಿಯೆ ನೀಡಿ, ದಯವಿಟ್ಟು ಈ ವಾಕ್ಯವನ್ನು ಕಾಂಟ್ರವರ್ಸಿ ಮಾಡಬೇಡಿ. ಅನ್ಯಾಯವಾದಾಗ ಧ್ವನಿ ಎತ್ತಬೇಕು, ಪ್ರಶ್ನೆ ಮಾಡಬೇಕು. ಕುವೆಂಪು ಅವರು ಸಹ ಅದನ್ನೇ ಹೇಳಿದ್ದಾರೆ. ಮಾಧ್ಯಮಗಳಿಗೆ ಈಗ ಇದು ಮುಖ್ಯವಾ? ನಾವು ಕುವೆಂಪು ಅವರ ಪರ ಇದ್ದೇವೆ. ಸಂವಿಧಾನ ನಮಗೆ ಹಕ್ಕು ಅಧಿಕಾರ ಕೊಟ್ಟಿದೆ. ನಮ್ಮ ಆದೇಶದಲ್ಲಿ ತಪ್ಪಿಲ್ಲ ಎಂದು ಸಮರ್ಥನೆ ಮಾಡಿಕೊಂಡಿದ್ದಾರೆ.

ಕುವೆಂಪು ಅವರ ವಾಕ್ಯವನ್ನು ನಾವು ಬದಲಾವಣೆ ಮಾಡಿಲ್ಲ. ನಾವು ಶಿಕ್ಷಣ ಸಂಸ್ಥೆಗಳನ್ನು ಸೈದ್ಧಾಂತಿಕವಾಗಿ ಕಟ್ಟಲು ಹೊರಟಿದ್ದೇವೆ. ಮಕ್ಕಳಿಗೆ ಇದು ಸಮಸ್ಯೆ ಆಗಲ್ಲ. ಬಿಜೆಪಿ ಎಲ್ಲವನ್ನೂ ಕಾಂಟ್ರವರ್ಸಿ ಮಾಡುತ್ತಿದೆ. ಸಂವಿಧಾನ ವಿರೋಧಿ, ಬಸವನ ವಿರೋಧಿಯಾಗಿ ವರ್ತನೆ ಮಾಡುತ್ತದೆ. ಪುನಃ ಪುನಃ ಇದನ್ನೇ ಕೇಳಬೇಡಿ. ಕುವೆಂಪು ನಮ್ಮ ಐಕಾನ್ .. ಸಂವಿಧಾನ ನಮ್ಮ ದೊಡ್ಡ ಗ್ರಂಥ. ಕೆಲಸಕ್ಕೆ ಬಾರದ ವಿಚಾರಗಳನ್ನು ಹೆಚ್ಚು ತೆಗೆದುಕೊಳ್ಳಬೇಡಿ. ಕುವೆಂಪು ಹೇಳಿದ್ದನ್ನು ನಾವು ತೆಗಿಸಿಲ್ಲ. ಕುವೆಂಪು ವಿಚಾರದ ಮೇಲೆ ಸಮಾಜವನ್ನು ಕಟ್ಟುತ್ತೇವೆ ಎಂದು ಡಾ. ಎಚ್.ಸಿ. ಮಹದೇವಪ್ಪ ಮಾಧ್ಯಮಗಳ ಮೇಲೆ ಹರಿಹಾಯ್ದರು.

ಇದನ್ನೂ ಓದಿ: Residential Schools: ಮತ್ತೆ ಬದಲಾಯಿತು ಜ್ಞಾನ ದೇಗುಲವಿದು ಧೈರ್ಯವಾಗಿ ಪ್ರಶ್ನಿಸಿ! ಆಕ್ರೋಶಕ್ಕೆ ಮಣಿದ ಸರ್ಕಾರ

ಪ್ರತಿಪಕ್ಷಗಳಿಗೆ ಡಾ. ಎಚ್.ಸಿ. ಮಹದೇವಪ್ಪ ಸವಾಲು

ಈ ವಿಚಾರವಾಗಿ ವಿಪಕ್ಷಗಳು ಸದನದಲ್ಲಿ ಪ್ರಶ್ನೆ ಮಾಡಲಿ. ಅಲ್ಲಿಯೇ ಉತ್ತರ ಕೊಡುತ್ತೇವೆ. ಕುವೆಂಪು, ಅಂಬೇಡ್ಕರ್, ನಾರಾಯಣ ಗುರು ಅವರ ವೈಚಾರಿಕತೆ ನಿಲುವುಗಳನ್ನು ನಾವು ಮಕ್ಕಳಿಗೆ ತುಂಬುತ್ತೇವೆ. ಈ ಆದೇಶದಲ್ಲಿ ಏನಾಗಿದೆ ಅಂತ ಗೊತ್ತಿಲ್ಲ. ಆದರೆ, ಐಡಿಯಾಲಾಜಿಕಲ್ ಮೇಲೆ ಹೇಳುತ್ತಿದ್ದೇನೆ. ಕುವೆಂಪು ವಿಚಾರದ ಮೇಲೆ ಸಮಾಜ ಕಟ್ಟಬೇಕು. ಸಂವಿಧಾನದ ಮೇಲೆ ಸಮೃದ್ಧ ಭಾರತ ಕಟ್ಟಬೇಕು. ಈ ವಿಚಾರವನ್ನ ಕಾಂಟ್ರವರ್ಸಿ ಮಾಡಬೇಡಿ ಎಂದು ಹೇಳಿದ್ದರು.

Exit mobile version