Site icon Vistara News

Residential Schools: ಶಾಲೆಯಲ್ಲಿ ಕುವೆಂಪು ಸಾಲನ್ನೇ ಬದಲಿಸಿದ ಸರ್ಕಾರ! ವಿಪಕ್ಷ ಕೆಂಡ

Residential Schools Govt changes kuvempu line in school Opposition

ಬೆಂಗಳೂರು: ರಾಜ್ಯದ ಶಿಕ್ಷಣ ನೀತಿ ಸೇರಿದಂತೆ ಶೈಕ್ಷಣಿಕವಾಗಿ ಕೈಗೊಳ್ಳುತ್ತಿರುವ ನಿರ್ಧಾರಗಳು ಆಗಾಗ ವಿವಾದಕ್ಕೀಡಾಗುತ್ತಲೇ ಇರುತ್ತವೆ. ಈಗ ಸಮಾಜ ಕಲ್ಯಾಣ ಇಲಾಖೆ (Department of Social Welfare) ರಾಜ್ಯದ ಎಲ್ಲ ವಸತಿ ಶಾಲೆಗಳಲ್ಲಿ (Residential Schools) ಕೈಗೊಂಡಿರುವ ನಿರ್ಧಾರ ವ್ಯಾಪಕ ಟೀಕೆಗೆ ಗುರಿಯಾಗಿದೆ. ಕಾರಣ, ವಸತಿ ಶಾಲೆಗಳ ಪ್ರವೇಶ ದ್ವಾರದಲ್ಲಿ ಈಗ ರಾಷ್ಟ್ರಕವಿ ಕುವೆಂಪು (Rashtrakavi Kuvempu) ಅವರ ಕವಿತೆಯ ಸಾಲುಗಳನ್ನು ಬದಲಾಯಿಸಲಾಗಿದೆ. “ಜ್ಞಾನ ದೇಗುಲವಿದು ಧೈರ್ಯವಾಗಿ ಪ್ರಶ್ನಿಸಿ” ಎಂಬ ಸಾಲು ವಿವಾದಕ್ಕೆ ಕಾರಣವಾಗಿದೆ. ಇದಕ್ಕೆ ಈಗ ಬಿಜೆಪಿ ಸೇರಿದಂತೆ ಹಲವರಿಂದ ವ್ಯಾಪಕ ಟೀಕೆಗಳು ವ್ಯಕ್ತವಾಗಿವೆ.

ಸರ್ಕಾರಿ ವಸತಿ ಶಾಲೆಗಳ ದ್ವಾರದಲ್ಲಿ ಈವರೆಗೆ “ಜ್ಞಾನ ದೇಗುಲವಿದು ಕೈ ಮುಗಿದು ಒಳಗೆ ಬಾ” ಎಂಬ ಘೋಷವಾಕ್ಯವನ್ನು ಹಾಕಲಾಗಿತ್ತು. ಇದು ರಾಷ್ಟ್ರಕವಿ ಕುವೆಂಪು ಅವರ ವಿರಚಿತ ಸಾಲು ಆಗಿತ್ತು. ಆದರೆ, ಈಗ ಈ ಘೋಷವಾಕ್ಯದಲ್ಲಿ ಅಲ್ಪಪ್ರಮಾಣದ ಬದಲಾವಣೆಯನ್ನು ಮಾಡಲಾಗಿದ್ದು, “ಜ್ಞಾನ ದೇಗುಲವಿದು ಧೈರ್ಯವಾಗಿ ಪ್ರಶ್ನಿಸಿ” ಎಂದು ಹಾಕಲಾಗಿದೆ. ಈ ಬದಲಾವಣೆಗೆ ಬಿಜೆಪಿ ಕೆಂಡವಾಗಿದೆ. ಸದನದಲ್ಲಿ ಸಹ ಈ ಕ್ರಮವನ್ನು ಪ್ರಶ್ನಿಸುವುದಲ್ಲದೆ, ಖಂಡಿಸುವುದಾಗಿ ಹೇಳಿಕೊಂಡಿದೆ.

ಈ ಬಗ್ಗೆ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಅವರು ಟ್ವೀಟ್‌ ಮಾಡಿದ್ದು, ರಾಜ್ಯ ಸರ್ಕಾರದ ನಿರ್ಧಾರದ ವಿರುದ್ಧ ಕಿಡಿಕಾರಿದ್ದಾರೆ. ಹಿರಿಯ ಐಎಎಸ್‌ ಅಧಿಕಾರಿ ಮಣಿವಣ್ಣನ್‌ ಅವರ ಹೆಸರು ಇರುವ ಟೆಲಿಗ್ರಾಂ ಚಾಟ್‌ ಅನ್ನು ಸಹ ತಮ್ಮ ಟ್ವಿಟರ್‌ ಖಾತೆ ಮೂಲಕ ಪೋಸ್ಟ್‌ ಮಾಡಿದ್ದು, ಸರ್ಕಾರದ ಕ್ರಮವನ್ನು ಖಂಡಿಸಿದ್ದಾರೆ. ಐಎಎಸ್‌ ಅಧಿಕಾರಿಗಳ ಮೂಲಕ ಈ ಕಾಂಗ್ರೆಸ್ ಸರ್ಕಾರ ಹಿಂದು ವಿರೋಧಿ ಧೋರಣೆಯನ್ನು ತಾಳುತ್ತಿದೆ ಎಂದು ಖಂಡಿಸಿದ್ದಾರೆ.

ಟ್ವೀಟ್‌ ಮೂಲಕ ಕಿಡಿಕಾರಿರುವ ಬಿ.ವೈ. ವಿಜಯೇಂದ್ರ

“ಶಾಲೆಗಳೆಂದರೆ ಪವಿತ್ರ ತಾಣ
ಇದನ್ನು ಅರ್ಥೈಸಿಕೊಳ್ಳದ ಕಾಂಗ್ರೆಸ್ ಸರ್ಕಾರದ ಹಿಂದೂ ವಿರೋಧಿ ಮನಸ್ಥಿತಿ. ಇಲಾಖೆಯ ಹಿರಿಯ IAS ಅಧಿಕಾರಿಯ ಮೂಲಕ ಸರ್ಕಾರಿ ವಸತಿ ಶಾಲೆಗಳ ದ್ವಾರದಲ್ಲಿ ಬರೆಸಲಾಗಿದ್ದ “ಜ್ಞಾನ ದೇಗುಲವಿದು ಕೈ ಮುಗಿದು ಒಳಗೆ ಬಾ” ಎಂಬ ಘೋಷವಾಕ್ಯವನ್ನು ಬದಲಿಸಿ “ಜ್ಞಾನ ದೇಗುಲವಿದು ಧೈರ್ಯವಾಗಿ ಪ್ರಶ್ನಿಸಿ” ಎಂದು ಬರೆಸಲು ಪ್ರಾರಂಭಿಸಿದೆ.

ಮೊನ್ನೆಯಷ್ಟೇ ಇದೇ ಶಾಲೆಗಳಲ್ಲಿ ಧಾರ್ಮಿಕ ಹಬ್ಬ , ಪೂಜೆಗಳಿಗೆ ನಿಷೇಧ ಹೇರಿ ಆದೇಶ ಹೊರಡಿಸಿ ಇದರಿಂದ ‘ಕೈ’ಸುಡಲು ಆರಂಭವಾದ ಬೆನ್ನಲ್ಲೇ ಆದೇಶ ಹಿಂಪಡೆದು ತನ್ನ ಹಿಂದೂ ವಿರೋಧಿ ಮನಸ್ಥಿತಿಯನ್ನು ಅದುಮಿಟ್ಟುಕೊಂಡಿದ್ದ ಸರ್ಕಾರ ಇದೀಗ ಮತ್ತೊಂದು ಮತಿಗೇಡಿತನಕ್ಕೆ ‘ಕೈ’ಹಾಕಿ ವಿಕೃತಿ ಮೆರೆದಿದೆ, ಜತೆಗೆ ವಿದ್ಯಾರ್ಥಿಗಳನ್ನು ಶಿಕ್ಷಕರ ವಿರುದ್ಧ ಎತ್ತಿಕಟ್ಟಲು ಈ ಸಾಲುಗಳು ಪ್ರಚೋದನೆ ನೀಡುವಂತಿದೆ.

ಕೈ ಮುಗಿದು ಒಳೆಗೆ ಬಾ …. ಎಂಬ ರಾಷ್ಟ್ರಕವಿ ಕುವೆಂಪು ಅವರ ಪದ್ಯದ ಸಾಲುಗಳಿಂದ ಪ್ರೇರಣೆ ಪಡೆದು ನಾಡಿನ ಅನೇಕ ಶಿಕ್ಷಣ ಸಂಸ್ಥೆಗಳು ‘”ಜ್ಞಾನ ದೇಗುಲವಿದು ಕೈ ಮುಗಿದು ಒಳಗೆ ಬನ್ನಿ” ಎಂದು ಘೋಷವಾಕ್ಯವನ್ನು ಬರೆಸಿವೆ. ಇದನ್ನೇ ಸರ್ಕಾರಿ ಶಾಲೆಗಳಲ್ಲೂ ಅನುಸರಿಸಲಾಗಿದೆ.

ಜನರಿಗೆ ಕಾಂಗ್ರೆಸ್‌ ಸರ್ಕಾರ ಸ್ಪಷ್ಟನೆ ಕೊಡಲಿ

‘ವಿದ್ಯಾ ದದಾತಿ ವಿನಯಂ…. ವಿದ್ಯೆ ಎಂದರೆ ವಿನಯ, ವಿನಯವಿದ್ದೆಡೆ ಮಾತ್ರ ವಿದ್ಯೆ ಒಲಿಯುವುದು, ವಿದ್ಯಾಲಯವನ್ನು ದೇಗುಲದಂತೆ ಭಾವಿಸಿ “ಕೈ ಮುಗಿದು ಒಳಗೆ ಬನ್ನಿ’’ ಎಂಬ ಸದ್ವಿನಯ, ಸಂಸ್ಕಾರ, ಶ್ರದ್ಧಾಗುಣಗಳನ್ನು ನೆನಪಿಸುವ ಈ ಸಾಲು ಯಾವ ಧರ್ಮದವರನ್ನು ನೋಯಿಸುತ್ತದೋ ತಿಳಿಯದಾಗಿದೆ? ಇದಕ್ಕೆ ಕಾಂಗ್ರೆಸ್ ಸರ್ಕಾರವೇ ಜನರಿಗೆ ಸ್ಪಷ್ಟನೆ ನೀಡಬೇಕಿದೆ.

ದೇಶದ ಆರನೇ ಹಾಗೂ ಕರ್ನಾಟಕ ರಾಜ್ಯದ ಮೊದಲನೇ ವಿಶ್ವವಿದ್ಯಾಲಯವಾಗಿರುವ ಶ್ರೀಮನ್ ಮಹಾರಾಜ ನಾಲ್ವಡಿ ಕೃಷ್ಣರಾಜ ಒಡೆಯರ್ ಅವರು ಸ್ಥಾಪಿಸಿದ ಮೈಸೂರು ವಿಶ್ವವಿದ್ಯಾಲಯದ ಧ್ಯೇಯ ವಾಕ್ಯ ‘ನಹಿ ಜ್ಞಾನೇನ ಸದೃಶಂ’ ಅಂದರೆ ‘ಜ್ಞಾನಕ್ಕೆ ಸಮನಾದುದು ಯಾವುದೂ ಇಲ್ಲ’ ಎಂಬುದಾಗಿದೆ. ಈ ಘೋಷವಾಕ್ಯ ವಿಶ್ವವಿದ್ಯಾಲಯದ ಕಾರ್ಯಸೌಧವನ್ನು ಅಲಂಕರಿಸಿದೆ. ಜತೆಗೇ ವಿದ್ಯೆಯ ಅಧಿದೇವತೆ ಸರಸ್ವತಿಯನ್ನೂ ಪಡಿಮೂಡಿಸಲಾಗಿದೆ. ತನ್ನ ಅಧೀನದಲ್ಲಿದೆ ಎಂಬ ಅಹಂನಿಂದ , ಭಗವದ್ಗೀತೆಯ ಈ ಶ್ಲೋಕ ಹಾಗೂ ಸರಸ್ವತಿಯನ್ನು ತೆಗೆಸುವ
ಐತಿಹಾಸಿಕ ಪ್ರಮಾದವೆಸಗಲೂ ಈ ಕಾಂಗ್ರೆಸ್ ಸರ್ಕಾರ ಹಿಂದೇಟು ಹಾಕುವುದಿಲ್ಲ ಎನಿಸುತ್ತಿದೆ.

ವಸತಿ ಶಾಲೆಗಳ ಮೇಲೆ ಬರೆಸಲಾಗಿದ್ದ ಈ ಹಿಂದಿನ “ಜ್ಞಾನ ದೇಗುಲವಿದು ಕೈ ಮುಗಿದು ಒಳಗೆ ಬನ್ನಿ” ಘೋಷ ವಾಕ್ಯ ಮತ್ತೆ ಬರೆಸದೇ ಹೋದರೆ ಹಾಗೂ ಈ ಆದೇಶದ ಹಿಂದಿರುವ ಅಧಿಕಾರಿಗಳ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳದೇ ಹೋದರೆ ಮುಂದಾಗುವ ಪರಿಣಾಮಗಳನ್ನು ಸರ್ಕಾರ ಎದುರಿಸಬೇಕಿದೆ” ಎಂದು ಬಿ.ವೈ. ವಿಜಯೇMದ್ರ ಎಚ್ಚರಿಕೆಯನ್ನು ನೀಡಿದ್ದಾರೆ.

ಧಾರ್ಮಿಕ ಹಬ್ಬಗಳ ಆಚರಣೆ ಬೇಡವೆಂದಿದ್ದ ಸರ್ಕಾರ!

ಸರ್ಕಾರಿ ವಸತಿ ಶಾಲೆ ಮತ್ತು ಕಾಲೇಜುಗಳಲ್ಲಿ ಧಾರ್ಮಿಕ ಹಬ್ಬಗಳನ್ನು ಆಚರಣೆ ಮಾಡಬಾರದು ಎಂದು ಕರ್ನಾಟಕ ವಸತಿ ಶಿಕ್ಷಣ ಸಂಸ್ಥೆಗಳ ಸಂಘ ಈಚೆಗೆ ಸುತ್ತೋಲೆಯನ್ನು ಹೊರಡಿಸಿತ್ತು. ನಿಗದಿತ ರಾಷ್ಟ್ರೀಯ ಹಬ್ಬ, ನಾಡಹಬ್ಬ ಮತ್ತು ಜಯಂತಿಗಳನ್ನು ಹೊರತುಪಡಸಿ ಇನ್ನಾವುದೇ ರೀತಿಯಾದಂತಹ ಧಾರ್ಮಿಕ ಹಬ್ಬಗಳನ್ನು ಆಚರಿಸಕೂಡದು ಎಂದು ಆದೇಶಿಸಲಾಗಿತ್ತು. ಇದಕ್ಕೆ ವ್ಯಾಪಕ ಟೀಕೆಗಳು ವ್ಯಕ್ತವಾಗುತ್ತಿದ್ದಂತೆ ಕೂಡಲೇ ಸರ್ಕಾರ ಈ ಸುತ್ತೋಲೆಯನ್ನು ಹಿಂಪಡೆಯಿತು.

ಇದು ವಿಕೃತಕಾರಿ, ಸದನದಲ್ಲಿ ಪ್ರಶ್ನಿಸುತ್ತೇವೆ: ಕೋಟ

ಈ ಬಗ್ಗೆ ಪ್ರತಿಕ್ರಿಯೆ ನೀಡಿದ ವಿಧಾನ ಪರಿಷತ್ ವಿಪಕ್ಷ ನಾಯಕ ಕೋಟ ಶ್ರೀನಿವಾಸ್ ಪೂಜಾರಿ, ಇದು ವಿಕೃತಕಾರಿ ಮನಸ್ಥಿತಿಯಾಗಿದೆ. ಬಿಜೆಪಿ ಇದನ್ನು ಖಂಡಿಸುತ್ತದೆ/ ಈ ವಿಚಾರವನ್ನು ಸದನದಲ್ಲಿ ಪ್ರಸ್ತಾಪಿಸುತ್ತೇವೆ ಎಂದು ಹೇಳಿದರು.

Exit mobile version