ಬೆಂಗಳೂರು: 2024ರ ದ್ವಿತೀಯ ಪಿಯುಸಿ ಹಾಗೂ ಎಸ್‌ಎಸ್‌ಎಲ್‌ಸಿ ವಾರ್ಷಿಕ ಪರೀಕ್ಷೆಯ (SSLC And PUC Exam) ದಿನಾಂಕವನ್ನು ಶಾಲಾ ಶಿಕ್ಷಣ ಇಲಾಖೆ (Karnataka Exam 2024) ಪ್ರಕಟಿಸಿದೆ. ಮಾರ್ಚ್ 1ರಿಂದ 22ರವರೆಗೆ ದ್ವಿತೀಯ ಪಿಯುಸಿ ಪರೀಕ್ಷೆ ಹಾಗೂ ಮಾರ್ಚ್ 25ರಿಂದ ಏಪ್ರಿಲ್ 6ರವರೆಗೆ ಎಸ್‌ಎಸ್‌ಎಲ್‌ಸಿ ಪರೀಕ್ಷೆ ನಡೆಯಲಿದೆ. ಈ ಸಂಬಂಧ ವಿಕಾಸಸೌಧದಲ್ಲಿ ಫೆ.20ರಂದು ಶಾಲಾ ಶಿಕ್ಷಣ ಹಾಗೂ ಸಾಕ್ಷರತಾ ಸಚಿವ ಮಧು ಬಂಗಾರಪ್ಪ ಸುದ್ದಿಗೋಷ್ಠಿ ನಡೆಸಿ ಮಾಹಿತಿ ನೀಡಿದರು. ವಿದ್ಯಾರ್ಥಿಗಳು ಪರೀಕ್ಷಾ ಕೇಂದ್ರಕ್ಕೆ ಬರುವಾಗ ಐಡಿ ಕಾರ್ಡ್ ಕಡ್ಡಾಯಗೊಳಿಸಲಾಗಿದೆ. ನಿಯಮಾನುಸಾರ ಹಾಗು ಕೋರ್ಟ್ ಆದೇಶದ ಅನ್ವಯವೇ ಉಡುಪು ಧರಿಸಿಬೇಕು. ಹಿಜಾಬ್ ಧರಿಸಿ ಬರುವ ವಿಚಾರವಾಗಿ ಸಚಿವರು ಯಾವುದೇ ಸಮರ್ಪಕ ಉತ್ತರ ನೀಡಿಲ್ಲ.
2024ರ ದ್ವಿತೀಯ ಪಿಯುಸಿಗೆ 6,98,627 ವಿದ್ಯಾರ್ಥಿಗಳು ನೋಂದಣಿ ಮಾಡಿಕೊಂಡಿದ್ದಾರೆ. ಈ ಪೈಕಿ 3,30,644 ಬಾಲಕರು, 3,67,980 ಬಾಲಕಿಯರು ಪರೀಕ್ಷೆಯನ್ನು ಬರೆಯಲಿದ್ದಾರೆ. ರಾಜ್ಯಾದ್ಯಂತ ಪಿಯುಸಿ ಪರೀಕ್ಷೆಯು 1,124 ಕೇಂದ್ರಗಳಲ್ಲಿ ನಡೆಯಲಿದೆ. 2023-24ನೇ ಸಾಲಿನಿಂದ ದ್ವಿತೀಯ ಪಿ.ಯು.ಸಿ. ಪರೀಕ್ಷಾ ಕ್ರಮದಲ್ಲಿ 80+20 patternನ್ನು (80 ಅಂಕಗಳಿಗೆ ಲಿಖಿತ ಪರೀಕ್ಷೆ ಮತ್ತು 20 ಅಂಕಗಳಿಗೆ ಆಂತರಿಕ ಮೌಲ್ಯಮಾಪನ) ಅಳವಡಿಸಲಾಗಿದೆ.
ಇನ್ನೂ 2024ರ ಎಸ್‌ಎಸ್‌ಎಲ್‌ಸಿ ಪರೀಕ್ಷೆಯು ಮಾರ್ಚ್ 25ರಿಂದ ಏಪ್ರಿಲ್ 6ರವರೆಗೆ ನಡೆಯಲಿದೆ. ಎಸ್‌ಎಸ್‌ಎಲ್‌ಸಿ ಪರೀಕ್ಷೆಗೆ ಒಟ್ಟು 8,96,271 ವಿದ್ಯಾರ್ಥಿಗಳು ನೋಂದಾಯಿಸಿಕೊಂಡಿದ್ದಾರೆ. ಅದರಲ್ಲಿ ಬಾಲಕರು 4,58,427 ಹಾಗೂ ಬಾಲಕಿಯರು 4, 37,844 ವಿದ್ಯಾರ್ಥಿನಿಯರು ಪರೀಕ್ಷೆಯನ್ನು ಬರೆಯಲಿದ್ದಾರೆ. ಎಸ್‌ಎಸ್‌ಎಲ್‌ಸಿ ಪರೀಕ್ಷೆಗೆ ಒಟ್ಟು 2747 ಪರೀಕ್ಷಾ ಕೇಂದ್ರಗಳನ್ನು ನಿಯೋಜಿಸಲಾಗಿದೆ.
ದ್ವೀತಿಯ ಪಿಯುಸಿ ಪರೀಕ್ಷೆ ವೇಳಾಪಟ್ಟಿ ಹೀಗಿದೆ..
01-03-2024: ಕನ್ನಡ ಹಾಗೂ ಅರೇಬಿಕ್ ಪರೀಕ್ಷೆ
04-03-2024: ಗಣಿತ, ಶಿಕ್ಷಣ ಶಾಸ್ತ್ರ
05-03-2024: ರಾಜ್ಯ ಶಾಸ್ತ್ರ, ಸಂಖ್ಯಾಶಾಸ್ತ್ರ
06-03-2024: ಮಾಹಿತಿ ತಂತ್ರಜ್ಞಾನ, ರೀಟೈಲ್, ಆಟೋ ಮೊಬೈಲ್ಸ್
07-03-2024: ಇತಿಹಾಸ ಹಾಗೂ ಭೌತಶಾಸ್ತ್ರ
09-03-2024: ಐಚ್ಛಿಕ ಕನ್ನಡ, ಲೆಕ್ಕಶಾಸ್ತ್ರ, ಭೂಗರ್ಭ ಶಾಸ್ತ್ರ, ಗೃಹ ವಿಜ್ಞಾನ ಪರೀಕ್ಷೆ
11-03-2024: ತರ್ಕಶಾಸ್ತ್ರ, ವ್ಯವಹಾರ ಅಧ್ಯಯನ ಪರೀಕ್ಷೆ
13-03-2024: ಇಂಗ್ಲಿಷ್
15-03-2024: ಹಿಂದೂಸ್ತಾನಿ ಸಂಗೀತ, ಮನಃಶಾಸ್ತ್ರ, ರಸಾಯನ ಶಾಸ್ತ್ರ, ಮೂಲಗಣಿತ
16-03-2024: ಅರ್ಥಶಾಸ್ತ್ರ ಪರೀಕ್ಷೆ
18-03-2024: ಭೂಗೋಳ ಶಾಸ್ತ್ರ, ಜೀವಶಾಸ್ತ್ರ
20-03-2024: ಸಮಾಜಶಾಸ್ತ್ರ, ವಿದ್ಯುನ್ಮಾನ ಶಾಸ್ತ್ರ, ಗಣಕ ವಿಜ್ಞಾನ
21-03-2024: ತಮಿಳು, ತೆಲುಗು, ಮಲಯಾಳಂ, ಮರಾಠಿ, ಉರ್ದು, ಸಂಸ್ಕೃತ, ಫ್ರೆಂಚ್
22-03-2024: ಹಿಂದಿ ಪರೀಕ್ಷೆ
(ದ್ವಿತೀಯ ಪಿಯುಸಿಯ ಎಲ್ಲಾ ವಿಷಯಗಳ ಪರೀಕ್ಷೆಗಳು ಬೆಳಗ್ಗೆ 10.15 ರಿಂದ ಮಧ್ಯಾಹ್ನ 1.30ರ ವರೆಗೆ ನಡೆಯಲಿವೆ.)
ಎಸ್‌ಎಸ್‌ಎಲ್‌ಸಿ ಪರೀಕ್ಷೆ ವೇಳಾಪಟ್ಟಿ ಹೀಗಿದೆ..
25-03-2024: ಪ್ರಥಮ ಭಾಷೆ ಪರೀಕ್ಷೆ (ಕನ್ನಡ, ತೆಲುಗು, ಹಿಂದಿ, ಮರಾಠಿ, ತಮಿಳು, ಉರ್ದು, ಇಂಗ್ಲಿಷ್ + ಇಂಗ್ಲಿಷ್ NCERT, ಸಂಸ್ಕೃತ)
27-03-2024: ಸಮಾಜ ವಿಜ್ಞಾನ (ಕೋರ್ ಸಬ್ಜೆಕ್ಟ್)
30-03-2024: ವಿಜ್ಞಾನ, ರಾಜ್ಯಶಾಸ್ತ್ರ
02-04-2024: ಗಣಿತ, ಸಮಾಜ ಶಾಸ್ತ್ರ
03-04-2024: ಅರ್ಥಶಾಸ್ತ್ರ
04-04-2024: ತೃತೀಯ ಭಾಷೆ ಪರೀಕ್ಷೆ (ಹಿಂದಿ, ಕನ್ನಡ, ಇಂಗ್ಲಿಷ್, ಅರೇಬಿಕ್, ಪರ್ಷಿಯನ್, ಉರ್ದು, ಸಂಸ್ಕೃತ, ಕೊಂಕಣಿ, ತುಳು)
06-04-2024: ದ್ವಿತೀಯ ಭಾಷೆ ಪರೀಕ್ಷೆ (ಇಂಗ್ಲಿಷ್, ಕನ್ನಡ)
ಎಸ್‌ಎಸ್‌ಎಲ್‌ಸಿಯ ಎಲ್ಲಾ ವಿಷಯಗಳ ಪರೀಕ್ಷೆಗಳು ಬೆಳಗ್ಗೆ 10.15 ರಿಂದ ಮಧ್ಯಾಹ್ನ 1.30ರ ವರೆಗೆ ನಡೆಯಲಿವೆ.
ಇದನ್ನೂ ಓದಿ: Bike Accident : ಆಯತಪ್ಪಿ ಬೈಕ್ ಸಮೇತ 100 ಅಡಿ ಪ್ರಪಾತಕ್ಕೆ ಬಿದ್ದ ಸವಾರ!
ಫೆ.26ರಿಂದ ಎಸ್‌ಎಸ್‌ಎಲ್‌ಸಿ ಪೂರ್ವಸಿದ್ಧತಾ ಪರೀಕ್ಷೆ
ಇನ್ನೂ ರಾಜ್ಯಮಟ್ಟದ ಎಸ್.ಎಸ್.ಎಲ್.ಸಿ. ಪೂರ್ವಸಿದ್ಧತಾ ಪರೀಕ್ಷೆಯನ್ನು (Preparatory Exam) ಫೆ. 26 ರಿಂದ ಮಾ. 02 ರವರೆಗೆ ನಡೆಸಲು ವೇಳಾಪಟ್ಟಿಯನ್ನು ಪ್ರಕಟಿಸಲಾಗಿದೆ. ಪರೀಕ್ಷೆ-1ಕ್ಕೆ ವಿದ್ಯಾರ್ಥಿಗಳು ನೋಂದಣಿ ಮಾಡಿಕೊಳ್ಳುವುದು ಕಡ್ಡಾಯವಾಗಿದೆ. ಮೂರು ಪರೀಕ್ಷೆಗಳಲ್ಲಿ ಯಾವುದಾದರೂ ಪರೀಕ್ಷೆಗೆ ಹಾಜರಾಗಬಹುದು. ಇನ್ನೂ ಇಲಾಖೆಯು ಎಸ್‌ಎಸ್‌ಎಲ್‌ಸಿ ಮತ್ತು ದ್ವಿತೀಯ ಪಿ.ಯು.ಸಿ. ತೇರ್ಗಡೆ ಹೊಂದಿದ ವಿದ್ಯಾರ್ಥಿಗಳು ಫಲಿತಾಂಶವನ್ನು ಉತ್ತಮಪಡಿಸಿಕೊಳ್ಳಲು ಅವಕಾಶ ಕಲ್ಪಿಸಲಾಗಿದೆ. ವಿದ್ಯಾರ್ಥಿಗಳು ಹಾಜರಾದ ಮೂರು ಪರೀಕ್ಷೆಗಳಲ್ಲಿ ಗಳಿಸಿದ ಅತಿ ಹೆಚ್ಚು ಅಂಕಗಳನ್ನು (best among 3 exams) ಫಲಿತಾಂಶಕ್ಕೆ ಪರಿಗಣಿಸಲಾಗುತ್ತದೆ.
2022-23ರಲ್ಲಿ ಪಿ.ಯು.ಸಿ. ವಿದ್ಯಾರ್ಥಿಗಳಿಗೆ ಎರಡನೇ ಪೂರಕ ಪರೀಕ್ಷೆಯನ್ನು ನಡೆಸಲಾಗಿತ್ತು. ಈ ಪರೀಕ್ಷೆಗೆ ಹಾಜರಾದ ಒಟ್ಟು 1,19,183 ವಿದ್ಯಾರ್ಥಿಗಳಲ್ಲಿ, 41,961 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ. ಈ ಹಿನ್ನೆಲೆಯಲ್ಲಿ 2023-24ನೇ ಸಾಲಿನಿಂದ ಎಸ್.ಎಸ್.ಎಲ್.ಸಿ ಮತ್ತು ದ್ವಿತೀಯ ಪಿ.ಯು.ಸಿ. ವಿದ್ಯಾರ್ಥಿಗಳಿಗೆ ಸರ್ಕಾರಿ ಆದೇಶದಂತೆ ಪರೀಕ್ಷೆ 1, 2, ಮತ್ತು 3ನ್ನು ನಡೆಸಲಾಗುತ್ತಿದೆ.
ಎಸ್.ಎಸ್.ಎಲ್.ಸಿ. ಹಾಗೂ ದ್ವಿತೀಯ ಪಿ.ಯು.ಸಿ. ವಿದ್ಯಾರ್ಥಿಗಳಿಗೆ 80 ಅಂಕಗಳಿಗೆ ಲಿಖಿತ ಪರೀಕ್ಷೆಯನ್ನು ಮತ್ತು 20 ಅಂಕಗಳಿಗೆ ಆಂತರಿಕ ಅಥವಾ ಪ್ರಾಯೋಗಿಕ ಪರೀಕ್ಷೆಯನ್ನು ನಡೆಸಲಾಗುತ್ತಿದೆ. 2023-24ನೇ ಸಾಲಿನಿಂದ ರೆಗ್ಯುಲರ್ ವಿದ್ಯಾರ್ಥಿಗಳಿಗೆ ವಿತರಿಸುವ 80 ಅಂಕಗಳ ಪ್ರಶ್ನೆಪತ್ರಿಕೆಗಳನ್ನೇ ಖಾಸಗಿ ಅಭ್ಯರ್ಥಿಗಳಿಗೂ ವಿತರಿಸಲಾಗುತ್ತಿದೆ. ಖಾಸಗಿ ಅಭ್ಯರ್ಥಿಗಳು 80 ಅಂಕಗಳಿಗೆ ಗಳಿಸುವ ಅಂಕಗಳನ್ನು 100 ಅಂಕಗಳಿಗೆ SCALE UP ಮಾಡಿ ಫಲಿತಾಂಶವನ್ನು ಪ್ರಕಟಿಸಲಾಗುತ್ತಿದೆ.
ವಿದ್ಯಾರ್ಥಿಗಳ ಗೊಂದಲ ನಿವಾರಣೆಗೆ FAQ’s
ಇನ್ನೂ ಈ ಬಾರಿ ಎಸ್.ಎಸ್.ಎಲ್.ಸಿ. ಮತ್ತು ದ್ವಿತೀಯ ಪಿ.ಯು.ಸಿ ವಿದ್ಯಾರ್ಥಿಗಳಿಗೆ ಇರಬಹುದಾದ ಗೊಂದಲಗಳಿಗೆ ಸಂಬಂಧಿಸಿದಂತೆ, ಮಾಹಿತಿ ನೀಡುವುದಕ್ಕಾಗಿ “ಸಾಮಾನ್ಯವಾಗಿ ಕೇಳಲ್ಪಡುವ ಪ್ರಶ್ನೆಗಳು” (FAQ’s) ಸಿದ್ಧಪಡಿಸಿ ಮಂಡಲಿಯ ಜಾಲತಾಣದಲ್ಲಿ ಪ್ರಕಟಿಸಲಾಗಿದೆ. 2023-24 ಸಾಲಿನ ದ್ವಿತೀಯ ಪಿಯುಸಿ ಪರೀಕ್ಷೆ ಮತ್ತು ಎಸ್‌ಎಸ್‌ಎಲ್‌ಸಿ ಪರೀಕ್ಷೆಯ ಮಾಹಿತಿಯನ್ನೊಳಗೊಂಡ ಪೋಸ್ಟರ್‌ಗಳನ್ನು ಸಿದ್ಧಪಡಿಸಲಾಗಿದೆ.
ಡಿಜಿಲಾಕರ್‌ನಲ್ಲಿ ಅಂಕಪಟ್ಟಿ ಲಭ್ಯ
ಆಯಾ ಪರೀಕ್ಷೆಗಳಲ್ಲಿ ತೇರ್ಗಡೆ ಹೊಂದಿದ ವಿದ್ಯಾರ್ಥಿಗಳಿಗೆ ತುರ್ತಾಗಿ ಅಂಕಪಟ್ಟಿ ಅಗತ್ಯವಿದ್ದಲ್ಲಿ (Marks Card) ಡಿಜಿಲಾಕರ್‌ನಿಂದ ಪಡೆಯುವ ಸೌಲಭ್ಯವನ್ನು ಕಲ್ಪಿಸಲಾಗಿದೆ. ಎಸ್.ಎಸ್.ಎಲ್.ಸಿ. ಮತ್ತು ದ್ವಿತೀಯ ಪಿ.ಯು.ಸಿ. ಪರೀಕ್ಷೆ-1ಕ್ಕೆ ಸಂಬಂಧಿಸಿದಂತೆ ಜಿಲ್ಲಾ ಹಂತದ ಅಧಿಕಾರಿಗಳ ಸಭೆಗಳನ್ನು ನಡೆಸಲಾಗಿದ್ದು, ಎಲ್ಲಾ ರೀತಿಯ ಪೂರ್ವಸಿದ್ಧತೆಗಳನ್ನು ಮಂಡಲಿಯ ಹಂತದಲ್ಲಿ ಮಾಡಿಕೊಳ್ಳಲಾಗಿದೆ ಎಂದು ಸಚಿವ ಮಧು ಬಂಗಾರಪ್ಪ ಮಾಹಿತಿ ನೀಡಿದ್ದಾರೆ. ದ್ವಿತೀಯ ಪಿಯುಸಿ ಪರೀಕ್ಷೆ-2 ಅನ್ನು ಏಪ್ರಿಲ್ ಕೊನೆಯ ವಾರದಲ್ಲಿ ಹಾಗೂ ಎಸ್.ಎಸ್.ಎಲ್.ಸಿ. ಪರೀಕ್ಷೆ-2ನ್ನು 2024ರ ಮೇ ಮೂರನೇ ವಾರದಲ್ಲಿ ನಡೆಸಲಾಗುತ್ತದೆ.
ಫೆ.22ರಿಂದ ಮಕ್ಕಳಿಗೆ ರಾಗಿ ಮಾಲ್ಟ್
ರಾಜ್ಯದ 60 ಲಕ್ಷ ಮಕ್ಕಳಿಗೆ ರಾಗಿ ಮಾಲ್ಟ್ ನೀಡಲು ನಿರ್ಧರಿಸಲಾಗಿದೆ ಎಂದು ಸಚಿವ ಮಧುಬಂಗಾರಪ್ಪ ತಿಳಿಸಿದರು. ಈಗಾಗಲೇ ವಾರದಲ್ಲಿ ಎರಡು ದಿನ ಮಕ್ಕಳಿಗೆ ಮೊಟ್ಟೆ ನೀಡಲಾಗುತ್ತಿದೆ. ಇದೇ ತಿಂಗಳ ಫೆ. 22ರಂದು ಸಿಎಂ ಸಿದ್ದರಾಮಯ್ಯನವರು ರಾಗಿ ಮಾಲ್ಟ್ ಕಾರ್ಯಕ್ರಮವನ್ನು ಉದ್ಘಾಟಿಸಲಿದ್ದಾರೆ. ಹಾಲಿಗೆ ರಾಗಿ ಮಾಲ್ಟ್ ಪೌಡರ್ ಮಿಕ್ಸ್ ಮಾಡಿ ಮಕ್ಕಳಿಗೆ ನೀಡಲಾಗುತ್ತದೆ ಎಂದರು.
ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ