Site icon Vistara News

SSLC Grace Marks: ಯಾರನ್ನು ಕೇಳಿ ಶೇ. 20 ಗ್ರೇಸ್‌ ಮಾರ್ಕ್ಸ್‌ ಕೊಟ್ಟಿರಿ? ಶಿಕ್ಷಣ ಇಲಾಖೆ ವಿರುದ್ಧ ಹರಿಹಾಯ್ದ ಸಿದ್ದರಾಮಯ್ಯ!

SSLC Grace Marks 20 per cent grace marks CM Siddaramaiah slams education department

ಬೆಂಗಳೂರು: ಬರ ಪರಿಹಾರ, ಮುಂಗಾರು ಮಳೆ, ಬಿತ್ತನೆ ಬೀಜ, ರಸ ಗೊಬ್ಬರ ವಿತರಣೆ, ಶಿಕ್ಷಣ, ಕಾನೂನು ಸುವ್ಯವಸ್ಥೆ ಸೇರಿದಂತೆ ಇನ್ನಿತರ ವಿಷಯಗಳ ಬಗ್ಗೆ ಚರ್ಚೆ ನಡೆಸಲು ವಿವಿಧ ಇಲಾಖೆ ಅಧಿಕಾರಿಗಳ ಸಭೆ ನಡೆಸಿರುವ ಸಿಎಂ ಸಿದ್ದರಾಮಯ್ಯ (CM Siddaramaiah), ಈ ಬಾರಿಯ ಎಸ್‌ಎಸ್‌ಎಲ್‌ಸಿಯಲ್ಲಿ ಶೇ. 20 ಗ್ರೇಸ್‌ ಮಾರ್ಕ್ಸ್‌ (SSLC Grace Marks) ಕೊಟ್ಟಿದ್ದಕ್ಕೆ ಗರಂ ಆಗಿದ್ದಾರೆ. ಯಾರನ್ನು ಕೇಳಿ ಹೆಚ್ಚುವರಿ ಅಂಕವನ್ನು ಕೊಟ್ಟಿರಿ? ಶಿಕ್ಷಣ ಗುಣಮಟ್ಟ ಕುಸಿದಿದ್ದು ಏಕೆ? ಎಂದು ಶಿಕ್ಷಣ ಇಲಾಖೆ ಪ್ರಧಾನ ಕಾರ್ಯದರ್ಶಿಯನ್ನು ತರಾಟೆಗೆ ತೆಗೆದುಕೊಂಡರು.

ಶಿಕ್ಷಣ ಇಲಾಖೆಗೆ ಸಂಬಂಧಪಟ್ಟಂತೆ ಪ್ರಗತಿ ಪರಿಶೀಲನೆ ನಡೆಸಿದ ಸಿಎಂ ಸಿದ್ದರಾಮಯ್ಯ, ಎಸ್‌ಎಸ್‌ಎಲ್‌ಸಿಗೆ ಗ್ರೇಸ್‌ ಮಾರ್ಕ್ಸ್‌ ಕೊಟ್ಟಿರುವ ಬಗ್ಗೆ ತೀವ್ರ ಅಸಮಾಧಾನವನ್ನು ಹೊರಹಾಕಿದರು. ಎಸ್‌ಎಸ್‌ಎಲ್‌ಸಿಯಲ್ಲಿ ಶೇಕಡಾ 20 ಮಾರ್ಕ್ಸ್‌ ಅನ್ನು ಏಕೆ ಕೊಟ್ಟಿರಿ? ಯಾರನ್ನು ಕೇಳಿ ಹೆಚ್ಚುವರಿ ಅಂಕ ಕೊಟ್ಟಿರಿ? ಹೀಗೆ ಅಂಕ ಕೊಡುವ ಅಗತ್ಯತೆ ಏನಿತ್ತು? ಶಿಕ್ಷಣದ ಗುಣಮಟ್ಟ ಕುಸಿದಿದ್ದೇಕೆ? ಎಂದು ಶಿಕ್ಷಣ ಇಲಾಖೆ ಕಾರ್ಯದರ್ಶಿ ಮೇಲೆ ಗರಂ ಆಗಿದ್ದಲ್ಲದೆ, ಪ್ರಶ್ನೆ ಮೇಲೆ ಪ್ರಶ್ನೆ ಮಾಡಿದರು.

ಗ್ರೇಸ್‌ ಮಾರ್ಕ್ಸ್‌ ಮರು ಪರಿಶೀಲಿಸಿ

ಗ್ರೇಸ್ ಮಾರ್ಕ್ಸ್ ಹೆಚ್ಚಳಕ್ಕೆ ಸಂಬಂಧಪಟ್ಟಂತೆ ಶಿಕ್ಷಣ ತಜ್ಞರು ಸೇರಿ ಹಲವರಿಂದ ವಿರೋಧಗಳು ಕೇಳಿ ಬರುತ್ತಿವೆ. ಮೊದಲೇ ನಮ್ಮ ಸರ್ಕಾರದ ಮೇಲೆ ಇಲ್ಲಸಲ್ಲದ ಆರೋಪಗಳು ಬರುತ್ತಿವೆ. ಅದರ ಮಧ್ಯೆ ಇದೂ ಒಂದು ಸೇರಿಕೊಂಡಿದೆ. ಗ್ರೇಸ್ ಮಾರ್ಕ್ಸ್ ಕೊಡುವುದು ಅವೈಜ್ಞಾನಿಕ ಎಂಬ ಬಗ್ಗೆ ಅಭಿಪ್ರಾಯಗಳು ಬರುತ್ತಿವೆ. ಹಾಗಾಗಿ ಮುಂದಿನ ಶೈಕ್ಷಣಿಕ ವರ್ಷದಿಂದ ಗ್ರೇಸ್‌ ಮಾರ್ಕ್ಸ್ ಕೊಡುವ ಬಗ್ಗೆ ಮರುಪರಿಶೀಲನೆ ಮಾಡಿ ಎಂದು ಶಿಕ್ಷಣ ಸಚಿವ ಮಧು ಬಂಗಾರಪ್ಪ ಹಾಗೂ ಇಲಾಖೆ ಅಧಿಕಾರಿಗಳಿಗೆ ಸಿಎಂ ಸಿದ್ದರಾಮಯ್ಯ ಸೂಚನೆ ನೀಡಿದರು.

ಇದನ್ನೂ ಓದಿ: Prajwal Revanna Case: ವಕೀಲ ದೇವರಾಜೇಗೌಡರಿಗೆ ನ್ಯಾಯಾಂಗ ಬಂಧನ; ಪೊಲೀಸ್‌ ಕಸ್ಟಡಿ ಅಂತ್ಯ

ಮುಂದಿನ ವರ್ಷ ಹೀಗಿರುವುದಿಲ್ಲ

ಈ ವೇಳೆ ಸಚಿವ ಮಧು ಬಂಗಾರಪ್ಪ ಮಾತನಾಡಿ, ಎಸ್‌ಎಸ್‌ಎಲ್‌ಸಿಯಲ್ಲಿ ಯಾವಾಗಲೂ ಶೇಕಡಾ 5ರಷ್ಟು ಗ್ರೇಸ್‌ ಮಾರ್ಕ್ಸ್‌ ಇತ್ತು. ಕೋವಿಡ್ ವೇಳೆ ಅದನ್ನು ಶೇಕಡಾ 10ಕ್ಕೆ ಏರಿಕೆ ಮಾಡಲಾಗಿತ್ತು. ಈ ಬಾರಿ ವಿದ್ಯಾರ್ಥಿಗಳ ಆತ್ಮವಿಶ್ವಾಸ ಹೆಚ್ಚಳಕ್ಕಾಗಿ ಶೇಕಡಾ 20ರಷ್ಟು ಗ್ರೇಸ್‌ ಮಾರ್ಕ್ಸ್‌ ಕೊಟ್ಟು ಪಾಸ್‌ ಮಾಡಿದೆವು. ಇದು ಈ ವರ್ಷಕ್ಕೆ ಮಾತ್ರವಾಗಿದೆ. ಮುಂದಿನ ವರ್ಷದಿಂದ ಇದು ಮುಂದುವರಿಯುವುದಿಲ್ಲ. ಮಕ್ಕಳ ಹಿತದೃಷ್ಟಿಯಿಂದ ಈ ತೀರ್ಮಾನವನ್ನು ತೆಗೆದುಕೊಂಡಿದ್ದೇವೆ ಎಂದು ಸ್ಪಷ್ಟನೆ ನೀಡಿದರು. ಅಲ್ಲದೆ, ಇನ್ನು 15 ದಿನಗಳಲ್ಲಿ ಅಧಿಕೃತ ಮತ್ತು ಅನಧಿಕೃತ ಶಾಲೆಗಳ ಪಟ್ಟಿ ಬಿಡುಗಡೆ ಆಗಲಿದೆ ಎಂದು ತಿಳಿಸಿದರು.

ಗ್ರೇಸ್‌ ಮಾರ್ಕ್ಸ್‌ ಕೊಟ್ಟಿದ್ದರಿಂದ 1.70 ಲಕ್ಷ ವಿದ್ಯಾರ್ಥಿಗಳು ಪಾಸ್!

ಕಳೆದ ವರ್ಷಕ್ಕೆ ಹೋಲಿಸಿದರೆ ಈ ವರ್ಷ ಫಲಿತಾಂಶ ಕುಸಿತ (SSLC Result 2024) ಕಂಡಿದೆ. 2022-23ರಲ್ಲಿ 83.89% ಇದ್ದರೆ, ಈ ಬಾರಿ 73.40% ಮಂದಿ ಪಾಸ್, ಶೇಕಡಾ 10.49 ರಷ್ಟು ಫಲಿತಾಂಶ ಕುಸಿತವಾಗಿದೆ. ಇದು ಒಟ್ಟಾರೆ ಫಲಿತಾಂಶ ಕಳೆದ ವರ್ಷಕ್ಕಿಂತ ಶೇ. 30ರಷ್ಟು ಕಡಿಮೆಯಾಗಿತ್ತು. ಈ ಹಿನ್ನೆಲೆಯಲ್ಲಿ ಬರೋಬ್ಬರಿ 20 ಪರ್ಸೆಂಟ್ ಗ್ರೇಸ್ ಮಾರ್ಕ್ಸ್‌ ಅನ್ನು ಕೊಟ್ಟು ಒಟ್ಟಾರೆ 1 ಲಕ್ಷದ 70 ಸಾವಿರ ವಿದ್ಯಾರ್ಥಿಗಳನ್ನು ಪಾಸ್‌ ಮಾಡಲಾಗಿದೆ.

ಫಲಿತಾಂಶ ಹೆಚ್ಚಿಸಲು ಶಿಕ್ಷಣ ಇಲಾಖೆ ಸರ್ಕಸ್ ಮಾಡಿದ್ದು, ಶೇಕಡಾ 20 ಗ್ರೇಸ್ ಮಾರ್ಕ್ಸ್‌ ಕೊಟ್ಟರೂ ಕಡಿಮೆ ಫಲಿತಾಂಶ ದಾಖಲಾಗಿದೆ. ಈ ಬಾರಿ ಎಸ್‌ಎಸ್‌ಎಲ್‌ಸಿ ಫಲಿತಾಂಶವನ್ನು ಗಮನಿಸಿದಾಗ ಅಪಾರ ಸಂಖ್ಯೆಯಲ್ಲಿ ಅಂದರೆ ಕಳೆದ ಬಾರಿಗಿಂತ ಶೇಕಡಾ 30ರಷ್ಟು ಕುಸಿತವನ್ನು ಕಾಣಲಾಗಿತ್ತು. ಇದರಿಂದ ಚಿಂತೆಗೊಳಗಾದ ಶಿಕ್ಷಣ ಇಲಾಖೆಯು ಕೊನೆಗೆ ಪಾಸಿಂಗ್‌ ಮಾರ್ಕ್ಸ್‌ ಅನ್ನೇ ಕಡಿಮೆ ಮಾಡಿದೆ.

ಅಂದರೆ ಈ ವರೆಗೆ ಇದ್ದ ಪಾಸಿಂಗ್‌ ಮಾರ್ಕ್ಸ್‌ ಶೇಕಡಾ 35 ಅನ್ನು ಶೇಕಡಾ 25ಕ್ಕೆ ಇಳಿಸಿದೆ. ಅಂದರೆ 35 ಅಂಕಗಳ ಬದಲಿಗೆ 25 ಅಂಕವನ್ನು ಪಡೆದ ವಿದ್ಯಾರ್ಥಿಯೂ ಪಾಸ್‌ ಎಂದು ಮಾಡಲಾಗಿದೆ. ಅಲ್ಲದೆ, ಕೃಪಾಂಕದ ಪ್ರಮಾಣವನ್ನು ಶೇ. 10 ರಿಂದ ಶೇ. 20ಕ್ಕೆ ಹೆಚ್ಚಿಸಲಾಗಿದೆ. ಈ ಎರಡೂ ಕ್ರಮದಿಂದಾಗಿ ಒಟ್ಟಾರೆ 1 ಲಕ್ಷದ 70 ಸಾವಿರ ವಿದ್ಯಾರ್ಥಿಗಳು ಪಾಸ್‌ ಆಗಿದ್ದಾರೆ. ಈ ಕ್ರಮದ ನಂತರ ಒಟ್ಟಾರೆ ಫಲಿತಾಂಶವು ಶೇಕಡಾ 73.40ರಷ್ಟಾಗಿದೆ. ಇಲ್ಲದಿದ್ದರೆ ಭಾರಿ ಪ್ರಮಾಣದಲ್ಲಿ ಮಕ್ಕಳು ಅನುತ್ತೀರ್ಣರಾಗುತ್ತಿದ್ದರು.

ವೆಬ್‌ ಕಾಸ್ಟಿಂಗ್‌ನಲ್ಲಿ ನಡೆದ ಪರೀಕ್ಷೆ

ಪ್ರಪ್ರಥಮ ಬಾರಿಗೆ ಎಲ್ಲ ಪರೀಕ್ಷಾ ಕೇಂದ್ರಗಳಲ್ಲಿ ಸಿಸಿಟಿವಿಗಳ ಮೂಲಕ ವೆಬ್ ಕಾಸ್ಟಿಂಗ್ ಮಾಡುವ ಹೊಸ ಪದ್ಧತಿಯನ್ನು ಪರಿಚಯಿಸಲಾಗಿದೆ. ಪರೀಕ್ಷಾ ಕೊಠಡಿಗಳ ದೃಶ್ಯಾವಳಿಗಳನ್ನು ಮೇಲ್ವಿಚಾರಣೆ ಮಾಡಲು ಎಲ್ಲ ಜಿಲ್ಲೆಗಳಲ್ಲಿ ನಿಯಂತ್ರಣ ಕೊಠಡಿಗಳನ್ನು ಸ್ಥಾಪಿಸಲಾಗಿತ್ತು. ಆದರೆ, ಒಟ್ಟಾರೆ ಫಲಿತಾಂಶ ಕಳೆದ ವರ್ಷಕ್ಕಿಂತ ಶೇ. 30ರಷ್ಟು ಕಡಿಮೆಯಾಗಿದೆ. ಮೊದಲ ಬಾರಿಗೆ ವೆಬ್‌ ಕಾಸ್ಟಿಂಗ್ ವಿಧಾನವನ್ನು ಪರಿಚಯಿಸಿದ್ದರಿಂದ ವಿದ್ಯಾರ್ಥಿಗಳ ಹಿತದೃಷ್ಟಿಯಿಂದ ಕಡಿಮೆಯಾಗಿರುವ ಫಲಿತಾಂಶವನ್ನು ಉತ್ತಮ ಪಡಿಸಲು ಶಿಕ್ಷಣ ಇಲಾಖೆ ಗ್ರೇಸ್‌ ಮಾರ್ಕ್ಸ್‌ ಹೆಚ್ಚಳದ ತೀರ್ಮಾನವನ್ನು ಮಾಡಿತ್ತು.

ಇದನ್ನೂ ಓದಿ: CM Siddaramaiah: ಸಿದ್ದರಾಮಯ್ಯ ಸರ್ಕಾರಕ್ಕೆ 1 ವರ್ಷ; ಚಾರ್ಜ್‌ಶೀಟ್‌ ರೆಡಿ ಮಾಡಿದ ಬಿಜೆಪಿ; ಕೌಂಟರ್‌ಗೆ ಕಾಂಗ್ರೆಸ್‌ ತಯಾರಿ

ಈ ಹಿನ್ನೆಲೆಯಲ್ಲಿ, ಒಂದು ಬಾರಿಯ ಕ್ರಮವಾಗಿ, 2024ರ ಎಲ್ಲ 3 ಎಸ್ಎಸ್‌ಎಲ್‌ಸಿ ಪರೀಕ್ಷೆಗಳಿಗೆ ಎಲ್ಲ ವಿಷಯಗಳಲ್ಲಿ ನೀಡುವ ಕೃಪಾಂಕಗಳನ್ನು ಆಕರ್ಷಿಸಲು ಪಡೆಯಬೇಕಾದ ಅರ್ಹ ಅಂಕಗಳನ್ನು ಶೇ. 35 ರಿಂದ ಶೇ. 25ಕ್ಕೆ ಇಳಿಕೆ ಮಾಡಿದ್ದಲ್ಲದೆ, ಕೃಪಾಂಕದ ಪ್ರಮಾಣವನ್ನು ಶೇ. 10 ರಿಂದ ಶೇ. 20ಕ್ಕೆ ಹೆಚ್ಚಿಸಲಾಗಿತ್ತು. ಈ ಕ್ರಮದ ನಂತರ ಒಟ್ಟಾರೆ ಫಲಿತಾಂಶವು, ಮೇಲಿನ ಕೋಷ್ಟಕದಲ್ಲಿನಂತೆ, 73.40% ಆಗಿತ್ತು. ಮುಂಬರುವ ವರ್ಷಗಳಲ್ಲಿ ಶಿಕ್ಷಕರು ಮತ್ತು ವಿದ್ಯಾರ್ಥಿಗಳು ನೂತನ ವ್ಯವಸ್ಥೆಗೆ ಉತ್ತಮವಾಗಿ ಹೊಂದಿಕೊಳ್ಳುವುದರಿಂದ ಫಲಿತಾಂಶ ವೃದ್ಧಿಯ ಅಗತ್ಯವಿರುವುದಿಲ್ಲ ಎಂದು ಶಿಕ್ಷಣ ಇಲಾಖೆ ಅಭಿಪ್ರಾಯಪಟ್ಟಿತ್ತು. ಆದರೆ, ಇದಕ್ಕೆ ಈಗ ಸಿಎಂ ಸಿದ್ದರಾಮಯ್ಯ ಗರಂ ಆಗಿದ್ದಾರೆ.

Exit mobile version