ಬೆಂಗಳೂರು: ಕೋವಿಡ್ ಸಂಕಷ್ಟ ಎದುರಾದ ನಂತರದಲ್ಲಿ ಯಾವುದೇ ಆತಂಕಗಳಿಲ್ಲದೆ ನಡೆದ ಮೊದಲ ಎಸ್‌ಎಸ್‌ಎಲ್‌ಸಿ ಫಲಿತಾಂಶದಲ್ಲಿ ಒಟ್ಟು 85% ಫಲಿತಾಂಶ ದಾಖಲಾಗಿದ್ದು, ದಶಕದಲ್ಲೇ ಅತಿ ಹೆಚ್ಚು ವಿದ್ಯಾರ್ಥಿಗಳು ತೇರ್ಗಡೆ ಹೊಂದಿದ್ದಾರೆ.
ಫಲಿತಾಂಶದ ಕುರಿತು ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದ ಶಿಕ್ಷಣ ಸಚಿವ ಬಿ.ಸಿ. ನಾಗೇಶ್, ಈ ವರ್ಷ ಒಟ್ಟು 41,2334 ಹೆಣ್ಣು ಮಕ್ಕಳು ಹಾಗೂ 44,1099 ಗಂಡು ಮಕ್ಕಳೂ ಪರೀಕ್ಷೆ ಬರೆದಿದ್ದರು. ಒಟ್ಟು ಹಾಜರಾಗಿದ್ದ 8,53,436 ವಿದ್ಯಾರ್ಥಿಗಳ ಪೈಕಿ 90.29% ಹೆಣ್ಣು ಮಕ್ಕಳು ಹಾಗೂ 81.30% ಗಂಡು ಮಕ್ಕಳು ತೇರ್ಗಡೆ ಹೊಂದಿದ್ದಾರೆ. ಒಟ್ಟಾರೆ 7,30,881 ವಿದ್ಯಾರ್ಥಿಗಳು ತೇರಗಡೆಯಾಗಿ 85.63% ಫಲಿತಾಂಶ ಲಭಿಸಿದೆ ಎಂದು ನಾಗೇಶ್ ತಿಳಿಸಿದ್ದಾರೆ.
ಎಂದಿನಂತೆ ಈ ವರ್ಷವೂ ಹೆಣ್ಣು ಮಕ್ಕಳೇ ಒಟ್ಟಾರೆ ಫಲಿತಾಂಶದಲ್ಲಿ ಮೇಲುಗೈ ಸಾಧಿಸಿದ್ದಾರೆ. ರಾಜ್ಯದ 34 ಶೈಕ್ಷಣಿಕ ಜಿಲ್ಲೆಗಳ 3,444 ಕೇಂದ್ರಗಳಲ್ಲಿ ಮಾರ್ಚ್ 28 ರಿಂದ ಏಪ್ರಿಲ್ 11ರವರೆಗೆ ಎಸ್.ಎಸ್.ಎಲ್.ಸಿ ಪರೀಕ್ಷೆ ನಡೆದಿತ್ತು. ಶೈಕ್ಷಣಿಕ ಜಿಲ್ಲೆಗಳಲ್ಲಿ 234 ಕೇಂದ್ರಗಳಲ್ಲಿ ಮೌಲ್ಯಮಾಪನ ನಡೆದಿತ್ತು. 2019-20ರಲ್ಲಿ 71.42%, 2020-21ರಲ್ಲಿ 99.99% ವಿದ್ಯಾರ್ಥಿಗಳು ತೇರ್ಗಡೆ ಹೊಂದಿದ್ದರು. ಆದರೆ ಕೊರೊನಾ ಕಾರಣಕ್ಕೆ ಪರೀಕ್ಷೆಗಳು ನಡೆಯದ ಕಾರಣಕ್ಕೆ, ಹಾಜರಾಗಿದ್ದ ಎಲ್ಲ ವಿದ್ಯಾರ್ಥಿಗಳನ್ನೂ ಪಾಸ್ ಮಾಡಿದ್ದರಿಂದ 99.99% ಫಲಿತಾಂಶ ಲಭಿಸಿತ್ತು.
ಈ ವರ್ಷ ಒಟ್ಟು 3,920 ಶಾಲೆಗಳಲ್ಲಿ 100% ಫಲಿತಾಂಶ ಲಭಿಸಿದೆ. ಇದರಲ್ಲಿ 1,462 ಸರ್ಕಾರಿ ಶಾಲೆಗಳು, 467 ಅನುದಾನಿತ ಶಾಲೆಗಳು, 1,991 ಅನುದಾನ ರಹಿತ ಶಾಲೆಗಳಿವೆ. ಕ್ರಮವಾಗಿ 2, 3 ಹಾಗೂ 15 ಸೇರಿ ಒಟ್ಟು 20 ಶಾಲೆಗಳಲ್ಲಿ ಶೂನ್ಯ ಫಲಿತಾಂಶ ಲಭಿಸಿದೆ.
625ಕ್ಕೆ 625 ಅಂಕಗಳನ್ನು 145 ವಿದ್ಯಾರ್ಥಿಗಳು ಪಡೆದಿದ್ದು, ಮೊದಲ ಹತ್ತು ವಿದ್ಯಾರ್ಥಿಗಳಲ್ಲಿ ಬೆಂಗಳೂರಿನ ಯಾವ ವಿದ್ಯಾರ್ಥಿಯೂ ಇಲ್ಲ. ಈ ಬಾರಿಯೂ ಗ್ರಾಮೀಣ ವಿದ್ಯಾರ್ಥಿಗಳೇ ಮೇಲುಗೈ ಸಾಧಿಸಿದ್ದಾರೆ. ಗ್ರಾಮೀಣ ಪ್ರದೇಶದ 91.32% ವಿದ್ಯಾರ್ಥಿಗಳು ಹಾಗೂ ನಗರ ಪ್ರದೇಶದ 86.64% ವಿದ್ಯಾರ್ಥಿಗಳು ತೇರ್ಗಡೆ ಹೊಂದಿದ್ದಾರೆ.