ಬೆಂಗಳೂರು: ಸಾಮಾನ್ಯವಾಗಿ ಮಕ್ಕಳನ್ನು ಯಾವ ವಿಷಯ ಕಷ್ಟ ಎಂದು ಕೇಳಿದರೆ ಗಣಿತ, ಇಂಗ್ಲಿಷ್ ಎನ್ನುತ್ತಾರೆ. ಆದರೆ ಈ ಬಾರಿಯ ಎಸ್‌ಎಸ್‌ಎಲ್‌ಸಿ ಫಲಿತಾಂಶ ಇದನ್ನು ಸುಳ್ಳಾಗಿಸಿದೆ. ಈ ವರ್ಷದ ಎಸ್‌ಎಸ್‌ಎಲ್‌ಸಿ ಫಲಿತಾಂಶದಲ್ಲಿ ನೂರಕ್ಕೆ ನೂರು ಅಂಕಗಳನ್ನು ಪಡೆದ ವಿದ್ಯಾರ್ಥಿಗಳಲ್ಲಿ ಅತ್ಯಂತ ಕಡಿಮೆ ವಿದ್ಯಾರ್ಥಿಗಳಿರುವುದು ವಿಜ್ಞಾನ ವಿಷಯದಲ್ಲಿ.
ರಾಜ್ಯಾದ್ಯಂತ ಎಸ್‌ಎಸ್‌ಎಲ್‌ಸಿ ಫಲಿತಾಂಶಗಳು ಗುರುವಾರ ಪ್ರಕಟಗೊಂಡಿವೆ. 145 ವಿದ್ಯಾರ್ಥಿಗಳು 625ಕ್ಕೆ 625 ಅಂಕಗಳನ್ನು ಪಡೆದಿದ್ದಾರೆ. ಅದೇ ರೀತಿ ವಿಷಯವಾರು ನೂರಕ್ಕೆ ನೂರು ಅಂಕಗಳನ್ನು ಸಾವಿರಾರು ವಿದ್ಯಾರ್ಥಿಗಳು ಪಡೆದಿದ್ದಾರೆ. ಅದರಂತೆ ಪ್ರಥಮ ಭಾಷೆಯಲ್ಲಿ 19,125 ವಿದ್ಯಾರ್ಥಿಗಳು 125ಕ್ಕೆ 125 ಅಂಕ ಪಡೆದಿದ್ದಾರೆ. ಕೆಲವರಿಗೆ ಇದು ಕನ್ನಡವಾಗಿದ್ದರೆ ಕೆಲವರಿಗೆ ಇಂಗ್ಲಿಷ್, ತೆಲುಗು, ಸಂಸ್ಕೃತ, ತಮಿಳು, ಉರ್ದು ಭಾಷೆಗಳಿರುತ್ತವೆ. ಅದೇ ರೀತಿ ದ್ವಿತೀಯ ಭಾಷೆಯಲ್ಲೂ ಇರಲಿದ್ದು, 13,458 ವಿದ್ಯಾರ್ಥಿಗಳು 100ಕ್ಕೆ 100 ಅಂಕ ಪಡೆದಿದ್ದಾರೆ.
ಇದನ್ನೂ ಓದಿ | ಎಸ್‌ಎಸ್‌ಎಲ್‌ಸಿ ನಂತರ ಮುಂದೇನು?
ತೃತೀಯ ಭಾಷೆಯಲ್ಲಿ 43126 ವಿದ್ಯಾರ್ಥಿಗಳು 100ಕ್ಕೆ 100 ಅಂಕ ಪಡೆದಿದ್ದಾರೆ. ಅಂದರೆ ಪ್ರಥಮ ಮತ್ತು ದ್ವಿತೀಐ ಭಾಷೆಗಿಂತ ತೃತೀಯ ಭಾಷೆಯಲ್ಲಿ ಹೆಚ್ಚು ವಿದ್ಯಾರ್ಥಿಗಳು ಸಂಪೂರ್ಣ ಅಂಕ ಗಳಿಸಿದ್ದಾರೆ. ಅಚ್ಚರಿಯೆಂದರೆ ವಿಜ್ಞಾನದಲ್ಲಿ ಕೇವಲ 6592 ವಿದ್ಯಾರ್ಥಿಗಳು ಪೂರ್ಣ ಅಂಕ ಗಳಿಸಿದ್ದರೆ ಗಣಿತದಲ್ಲಿ ಅದಕ್ಕಿಂತಲೂ ದುಪ್ಪಟ್ಟು ಅಂದರೆ 13683 ವಿದ್ಯಾರ್ಥಿಗಳು ನೂರರ ಸಾಧನೆ ತೋರಿದ್ದಾರೆ. ಎಲ್ಲಕ್ಕಿಂತಲೂ ಹೆಚ್ಚು ವಿದ್ಯಾರ್ಥಿಗಳು ಪೂರ್ಣ ಅಂಕ ಪಡೆದಿರುವುದು ಸಮಾಜ ವಿಜ್ಞಾನ ವಿಷಯದಲ್ಲಿ. ಸಮಾಜ ವಿಜ್ಞಾನದಲ್ಲಿ 50,782 ವಿದ್ಯಾರ್ಥಿಗಳು ನೂರಕ್ಕೆ ನೂರು ಅಂಕ ಗಳಿಸಿದ್ದಾರೆ.
ಫಲಿತಾಂಶದ ಕುರಿತು ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದ ಶಿಕ್ಷಣ ಸಚಿವ ಬಿ.ಸಿ. ನಾಗೇಶ್, ಈ ವರ್ಷ ಒಟ್ಟು 4,12,334 ಹೆಣ್ಣು ಮಕ್ಕಳು ಹಾಗೂ 4,41,099 ಗಂಡು ಮಕ್ಕಳೂ ಪರೀಕ್ಷೆ ಬರೆದಿದ್ದರು. ಒಟ್ಟು ಹಾಜರಾಗಿದ್ದ 8,53,436 ವಿದ್ಯಾರ್ಥಿಗಳ ಪೈಕಿ 90.29% ಹೆಣ್ಣು ಮಕ್ಕಳು ಹಾಗೂ 81.30% ಗಂಡು ಮಕ್ಕಳು ತೇರ್ಗಡೆ ಹೊಂದಿದ್ದಾರೆ. ಒಟ್ಟಾರೆ 7,30,881 ವಿದ್ಯಾರ್ಥಿಗಳು ತೇರಗಡೆಯಾಗಿ 85.63% ಫಲಿತಾಂಶ ಲಭಿಸಿದೆ ಎಂದು ನಾಗೇಶ್ ತಿಳಿಸಿದ್ದಾರೆ.
ಇದನ್ನೂ ಓದಿ | SSLC Results | ಎಸ್‌ಎಸ್‌ಎಲ್‌ಸಿಯಲ್ಲಿ ದಶಕದ ದಾಖಲೆ ಫಲಿತಾಂಶ: 85% ವಿದ್ಯಾರ್ಥಿಗಳು ಪಾಸ್